Friday, October 17, 2025

ಸತ್ಯ | ನ್ಯಾಯ |ಧರ್ಮ

ಕನಕದಾಸರ ಆದರ್ಶಗಳನ್ನು ಕೇಳಿ ಮರೆಯಬಾರದು: ಜೀವನದಲ್ಲಿ ಅಳವಡಿಸಿಕೊಳ್ಳಿ: ಸಿ.ಎಂ.ಸಿದ್ದರಾಮಯ್ಯ ಕರೆ

ಕನಕದಾಸರು- ನಾರಾಯಣಗುರು ಆದರ್ಶಗಳನ್ನು ಕೇವಲ ಕೇಳಿ ಎದ್ದು ಹೋಗಬಾರದು. ಅವನ್ನು ಜೀವನದಲ್ಲಿ ಪಾಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಮಲ್ಲತ್ತಳ್ಳಿಯ ಕಲಾಗ್ರಾಮದಲ್ಲಿ ನಡೆದ “ಕನಕ‌ ಕಾವ್ಯ ದೀವಿಗೆ” ಮೂರು ದಿನಗಳ ಕನಕ ಸಂಭ್ರಮ, ಸಂಸ್ಕೃತಿಯನ್ನು ಉದ್ಘಾಟಿಸಿ ಮಾತನಾಡಿದರು.

16ನೇ ಶತಮಾನದಲ್ಲೇ ಕನಕದಾಸರು ಜನಿಸಿದ್ದರು. ಪಾಳೇಗಾರರ ಕುಟುಂಬದಲ್ಲಿ ಜನಿಸಿದರೂ ಸಂತರಾದರು ಮಾತ್ರವಲ್ಲ ಕವಿ, ದಾರ್ಶನಿಕರು, ಸಾಮಾಜಿಕ ಹೋರಾಟಗಾರರೂ ಆಗಿದ್ದರು. ಸಮಾಜದ ಅಸಮಾನತೆ ವಿರುದ್ಧ ಬಂಡಾಯ ಹೂಡಿದರು. ಬುದ್ದ, ಬಸವ, ನಾರಾಯಣಗುರು ಕನಕದಾಸರು ಜಾತಿ ವ್ಯವಸ್ಥೆ, ವರ್ಗ ವ್ಯವಸ್ಥೆ ಹೋಗಲಾಡಿಸಲು ಶ್ರಮಿಸಿದರು ಎಂದು ವಿವರಿಸಿದರು.

ಯಾವ ದೇವಸ್ಥಾನಕ್ಕೆ ನಿಮ್ಮನ್ನು ಬಿಡುವುದಿಲ್ಲವೂ ಆ ದೇವಸ್ಥಾನಕ್ಕೆ ಹೋಗಬೇಡಿ. ನಿಮ್ಮದೇ ದೇವರುಗಳಿಗೆ ನಿಮ್ಮದೇ ದೇವಸ್ಥಾನ ಕಟ್ಟಿಸಿ ಎಂದು ನಾರಾಯಣಗುರುಗಳು ಕರೆ ನೀಡಿದ್ದರು. ನಿಮ್ಮನ್ನು ಯಾವ ದೇವಸ್ಥಾನಕ್ಕೆ ಸೇರಿಸುವುದಿಲ್ಲವೋ ಆ ದೇವಸ್ಥಾನಕ್ಕೆ ಹೋಗಿ ಇಣುಕುವ ಅಗತ್ಯ ಏನಿದೆ? ಹೊರಗೇ ನಿಂತು ಕೈ ಮುಗಿಯುವುದಕ್ಕಿಂತ ನಿಮ್ಮದೇ ಗುಡಿ ನಿರ್ಮಿಸಿ ಎನ್ನುವ ನಾರಾಯಣಗುರುಗಳ ಆದರ್ಶ ಪಾಲನೆ ಆಗಬೇಕು ಎಂದರು.

16 ನೇ ಶತಮಾನದಲ್ಲಿ ಕನಕರು, ಕುಲ ಕುಲ ಕುಲ ಎಂದು ಬಡಿದಾಡದಿರಿ ಎಂದರು. 12 ನೇ ಶತಮಾನಲ್ಲಿ ಬಸವಣ್ಣನವರು ಇವನಾರವ, ಇವನಾರವ ಎನ್ನದಿರಿ. ಇವ ನಮ್ಮವ ಎಂದೆಣಿಸಯ್ಯಾ ಎಂದು ಹೇಳಿದರು. ಆದರೂ ಇವತ್ತಿಗೂ ಕುಲ ಮತ್ತು ಇವನಾರವ ಎನ್ನುವ ಜಾತಿ ತಾರತಮ್ಯ ಆಚರಣೆಯಲ್ಲಿದೆ ಎಂದರು.

ಜಾತಿ ವ್ಯವಸ್ಥೆಗೆ ಪಟ್ಟಭದ್ರರು ಇನ್ನೂ ನೀರೆರೆಯುತ್ತಲೇ ಇದ್ದಾರೆ. ಹೀಗಾಗಿ ಸಮಾಜದ ಬದಲಾವಣೆಗೆ ಧೈರ್ಯ ಬೇಕಾಗುತ್ತದೆ. ವೈಜ್ಞಾನಿಕತೆ, ವೈಚಾರಿಕತೆಯ ಶಕ್ತಿಯಿಂದ ಸಮಾಜದ ಅಸಮಾನತೆ ಅಳಿಸಬೇಕು ಎಂದರು.

ವಿಜ್ಞಾನ‌ ಓದಿದವರೂ ಕೂಡ ಮೂಢ ನಂಬಿಕೆ, ಕಂದಾಚಾರ, ಕರ್ಮ ಸಿದ್ಧಾಂತ, ಹಣೆಬರಹವನ್ನು ನಂಬುತ್ತಾರೆ. ಇವರು ವಿಜ್ಞಾನದ ಡಿಗ್ರಿ ತಗೊಂಡಿದ್ದೂ ದಂಡ ಆಗಲ್ವಾ ಎಂದು ಪ್ರಶ್ನಿಸಿದರು.

ಸ್ವರ್ಗ, ನರಕ, ಮುಂದಿನ ಜನ್ಮ ಎನ್ನುವುದೆಲ್ಲಾ ಯಾವುದೂ ಇಲ್ಲ. ಇದನ್ನೆಲ್ಲಾ ಬುದ್ದ, ಬಸವಣ್ಣನವರು ಒಪ್ಪಿರಲಿಲ್ಲ. ನಂಬಿರಲಿಲ್ಲ ಎಂದರು‌. ಜನ್ಮ, ಸ್ವರ್ಗ, ನರಕದ ಹೆಸರಲ್ಲಿ ಹೆದರಿಸುವುದನ್ನು ಬುದ್ದ, ಬಸವಣ್ಣ, ಅಂಬೇಡ್ಕರ್ ಒಪ್ಪುತ್ತಿರಲಿಲ್ಲ ಎಂದರು.

ಕನಕದಾಸರ ರಾಮಧಾನ್ಯ ಚರಿತೆ, ಬಸವಣ್ಣನವರ ದಾಸೋಹ ಎರಡೂ ಶ್ರಮಿಕ ಸಂಸ್ಕೃತಿಯನ್ನು, ಕಾಯಕ ಮಾಡಿ ಬದುಕುವುದನ್ನು ಸಾರುತ್ತದೆ. ಹೀಗಾಗಿ ಕನಕ, ಬಸವರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು ಮಾತ್ರವಲ್ಲ, ಜೀವನದಲ್ಲಿ ಇವರ ಆದರ್ಶಗಳನ್ನು ಪಾಲಿಸಬೇಕು ಎಂದರು.

ಚಾತುವರ್ಣ ವ್ಯವಸ್ಥೆಯನ್ನು ಪಟ್ಟಭದ್ರರು ಹುಟ್ಟು ಹಾಕದೇ ಹೋಗಿದ್ದರೆ ಜಾತಿ ತಾರತಮ್ಯ, ಅಸಮಾನತೆ ಸಮಾಜದಲ್ಲಿ ಇರುತ್ತಿರಲಿಲ್ಲ. ಕನಕದಾಸರ ಆದರ್ಶಗಳನ್ನು ಕೇಳಿ ಮರೆಯುವುದಲ್ಲ. ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಅಸಮಾನತೆ ಅಳಿಯದ ಹೊರತು ಅಸಮಾನತೆಯಿಂದ ನರಳಿದವರೇ ದೇಶದ ಸ್ವಾತಂತ್ರ್ಯವನ್ನು ದ್ವಂಸ ಮಾಡುತ್ತಾರೆ ಎನ್ನುವ ಅಂಬೇಡ್ಕರ್ ಅವರ ಎಚ್ಚರಿಕೆಯ ಮಾತುಗಳನ್ನು ನೆನಪಿಡಬೇಕು ಎಂದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page