ಬೆಂಗಳೂರು: ರಾಜ್ಯ ಸರ್ಕಾರ ಎನ್‌ಪಿಎಸ್(NPS) ರದ್ದು ಮಾಡಿ ಹಳೇ ಪಿಂಚಣಿ ಯೋಜನೆ (OPS) ಜಾರಿಗೊಳಿಸದಿದ್ದರೆ ಕರ್ನಾಟಕ ಬಂದ್(karnataka bandh) ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ(cs shadakshari) ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಖಿಲ ಕರ್ನಾಟಕ ಎನ್‌ಪಿಎಸ್ ನೌಕರರ ಸಂಘದ 2ನೇ ರಾಜ್ಯ ಕರ‍್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿ, ” ಒಪಿಎಸ್ ಜಾರಿಗೊಳಿಸುವಂತೆ ನಾವು ಹೋರಾಟ ಮಾಡುತ್ತಲೇ ಬಂದಿದ್ದೇವೆ. ಆದರೆ, ಪ್ರಯೋಜನ ಆಗಿಲ್ಲ. ಕಾರಣ, ಕರ್ನಾಟಕವನ್ನು ಬಂದ್ ಮಾಡಿಯಾದರೂ ಒಪಿಎಸ್ ಪಡೆದೇ ತೀರುತ್ತೇವೆ ” ಎಂದು ಸ್ಪಷ್ಟಪಡಿಸಿದರು.
‘ಹೋರಾಟದ ಕಾರಣಕ್ಕೆ ನನ್ನ ಅಮಾನತು ಮಾಡಿದರೂ, ಬಂಧಿಸಿದರೂ ಹೆದರುವುದಿಲ್ಲ. ದೇವರು ಬದುಕು ನೀಡಿದ್ದಾನೆ. ಸಾಮರ್ಥ್ಯದ ಮೇಲೆ ಸರ್ಕಾರಿ ಉದ್ಯೋಗ ದೊರೆತಿದೆ. ನನ್ನ ಜೀವ ತೆಗೆಯುವ, ಸರ್ಕಾರಿ ಉದ್ಯೋಗ ಕಸಿಯುವ ಅಧಿಕಾರ ಯಾರಿಗೂ ಇಲ್ಲ. ಯಾರ ಬೆದರಿಕೆಗಳಿಗೂ ಬಗ್ಗುವುದಿಲ್ಲ’ ಎಂದು ಹೇಳಿದರು.‘ರಾಜಸ್ಥಾನ, ಛತ್ತೀಸಗಡ, ಹಿಮಾಚಲ ಪ್ರದೇಶ, ಪಂಜಾಬ್, ಜಾರ್ಖಂಡ್ ರಾಜ್ಯಗಳಲ್ಲಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ತೆಲಂಗಾಣ ಮತ್ತು ಆಂಧ್ರಪ್ರದೇಶಗಳಲ್ಲಿ ಗ್ಯಾರಂಟಿ ಪೆನ್ಸನ್ ಸ್ಕಿಮ್ ಜಾರಿಗೊಳಿಸಲಾಗಿದೆ. ನಮ್ಮಲ್ಲೂ ಒಪಿಎಸ್ ಜಾರಿಯಾಗಲೇಬೇಕು’ ಎಂದು ಹೇಳಿದರು.“ಈ ನಿಟ್ಟಿನಲ್ಲಿ ನಮ್ಮ ಹೋರಾಟದ ತೀವ್ರತೆ ಚಂಡಮಾರುತದ ರೀತಿ ಇರಬೇಕು. ಕರ್ನಾಟಕ ಬಂದ್ ಹೇಗಿರಬೇಕು ಅಂದರೆ, `ಸರ್ ಇಡೀ ಕರ್ನಾಟಕ ಬಂದ್ ಆಗಿದೆ, ಸರಕಾರಿ ನೌಕರರು ಯಾರೂ ಕೆಲಸಕ್ಕೆ ಬರುತ್ತಿಲ್ಲ’ ಎಂದು ಗುಪ್ತಚರ ಇಲಾಖೆಯವರು ಮುಖ್ಯಮಂತ್ರಿಗಳಿಗೆ ವರದಿ ನೀಡಬೇಕು. “ಬಂದ್ ವೇಳೆ ಯಾರಾದರೂ ಕೆಲಸ ಮಾಡುತ್ತಿದ್ದರೆ, ಜಿಲ್ಲಾಧ್ಯಕ್ಷರು, ತಾಲೂಕು ಅಧ್ಯಕ್ಷರು ಕಚೇರಿ ಒಳಗೆ ಹೋಗಿ ಅವರನ್ನು ಎಳೆದು ಹೊರಗೆ ಕರೆತರಬೇಕು. ನಮ್ಮ ಜೀವನ, ನಮ್ಮ ಭವಿಷ್ಯ ಮುಖ್ಯವೇ ಹೊರತು ನಿನ್ನ ಕೆಲಸವಲ್ಲ ಎಂದು ಅವರಿಗೆ ತಿಳಿಸಬೇಕು,’ ಎಂದರು.
