ಕಲಬುರಗಿ: ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಮುಂದಿನ ಶೈಕ್ಷಣಿಕ ಸಾಲಿನಿಂದ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಈ ಕುರಿತು ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಲೆಗಳಿಗೆ ಶಿಕ್ಷಕರ ನೇಮಕಾತಿ ಹಾಗೂ ಕಟ್ಟಡ ನಿರ್ಮಾಣ ಮಾಡುವ ಮೂಲಕ ಅಗತ್ಯ ಮೂಲಸೌಕರ್ಯ ಒದಗಿಸಿ, ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆ ತರಲಾಗುವುದು. ಮುಂದಿನ ಆಗಸ್ಟ್ 15ರೊಳಗೆ ಎಲ್ಲ ಸರ್ಕಾರಿ ಶಾಲೆಗಳಲ್ಲೂ ಶೌಚಾಲಯ ನಿರ್ಮಾಣ ಮಾಡಲು ತಕ್ಷಣವೇ 250 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗುವುದು ಎಂದರು.
ರಾಜ್ಯದ 6 ಸಾವಿರ ಶಾಲೆಗಳ ಕಟ್ಟಡ ನಿರ್ಮಾಣ ಮಾಡಲಾಗುತ್ತಿದ್ದು, ಕಲ್ಯಾಣ ಕರ್ನಾಟಕದಲ್ಲೇ 2 ಸಾವಿರ ಕಟ್ಟಡಗಳು ನಿರ್ಮಾಣವಾಗಲಿವೆ. ಈಗಾಗಲೇ 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಮುಂದಿನ ವಾರ 2ನೇ ಹಂತದಲ್ಲಿ ನೇಮಕಾತಿಗೆ ಆದೇಶ ಹೊರಬೀಳಲಿದೆ ಎಂದು ಮಾಹಿತಿ ನೀಡಿದರು.
ಇತ್ತೀಚಿನ ದಿನಗಳಲ್ಲಿ ಪಠ್ಯ ಕೇಸರಿಕರಣವಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕೆಲವು ದಿನಗಳಿಂದ ಸರ್ಕಾರ ಏನೇ ಪ್ರಗತಿಪರ ಕೆಸಗಳನ್ನು ಮಾಡಿದರು ಕೂಡ, ಅದರಲ್ಲಿ ವಿವಾದ ಸೃಷ್ಠಿಮಾಡುವಂತಹ ಅವ್ಯಾಸ ಬೆಳದು ಬಿಟ್ಟಿದೆ. ಏಕೆಂದರೆ ಅವರಿಗೆ ರಾಜ್ಯ ಮತ್ತು ರಾಜ್ಯದಲ್ಲಿನ ಜನರು ಪ್ರಗತಿಯಾಗುವುದು ಇಷ್ಟವಿಲ್ಲ, ಸರ್ಕಾರ ಇಂತಹ ಪ್ರಗತಿಪರ ಯೋಜನೆಗಳನ್ನು ಜಾರಿಗೆ ತರುವುದರಿಂದ ಜನರಿಗೆ ಸರ್ಕಾರದ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡುತ್ತದೆ ಎಂಬ ಕಾರಣಕ್ಕೆ, ಇದರಲ್ಲೂ ರಾಜಕಾರಣ ಮಾಡಬೇಕು ಎನ್ನುವುದು ಹಲವರ ಉದ್ದೇಶವಾಗಿದೆ ಎಂದು ದೂರಿದರು.