Friday, January 23, 2026

ಸತ್ಯ | ನ್ಯಾಯ |ಧರ್ಮ

ಉತ್ತರ ಕರ್ನಾಟಕದ ಎರಡು ಜಿಲ್ಲೆಗಳಿಗೆ 10,500 ಕೋಟಿ ರೂ. ಹೂಡಿಕೆ : ದಾವೋಸ್‌ನಲ್ಲಿ ರಾಜ್ಯ ಸರ್ಕಾರ–ಖಾಸಗಿ ಸಂಸ್ಥೆಗಳ ಮಹತ್ವದ ಒಪ್ಪಂದ

ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಕರ್ನಾಟಕ ಸರ್ಕಾರವು ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಹತ್ವದ ಹೂಡಿಕೆ ಒಪ್ಪಂದಗಳನ್ನು ಮಾಡಿಕೊಂಡಿದೆ. ವಿಜಯಪುರ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಒಟ್ಟು 10,500 ಕೋಟಿ ರೂ. ಹೂಡಿಕೆ ಮಾಡುವುದಾಗಿ ಆರ್‌ಪಿ–ಸಂಜೀವ್ ಗೊಯೆಂಕಾ ಸಮೂಹ ಘೋಷಿಸಿದೆ.

ದಾವೋಸ್‌ನಲ್ಲಿ ಮಾತನಾಡಿದ ರಾಜ್ಯದ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ರಾಜ್ಯದಲ್ಲಿ ಹೂಡಿಕೆ ಆಕರ್ಷಿಸಲು ಸರ್ಕಾರ ಕೈಗೊಂಡಿರುವ ಪ್ರಯತ್ನಗಳಿಗೆ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ ಎಂದು ಹೇಳಿದರು. ಈಗಾಗಲೇ ಐನಾಕ್ಸ್ ಜಿಎಫ್‌ಎಲ್‌ ಕಂಪನಿ ಕರ್ನಾಟಕದಲ್ಲಿ 10 ಸಾವಿರ ಕೋಟಿ ರೂ. ಹೂಡಿಕೆ ಮಾಡಿದ್ದು, ಕುಷ್ಟಗಿಯಲ್ಲಿ ಪವನ ವಿದ್ಯುತ್‌ಗೆ ಅಗತ್ಯವಿರುವ ದೈತ್ಯ ಗೋಪುರಗಳ ತಯಾರಿಕಾ ಘಟಕವನ್ನು ಆರಂಭಿಸಲು ಮುಂದಾಗಿದೆ. ಇದೇ ಪ್ರದೇಶದಲ್ಲಿ ಟರ್ಬೈನ್ ಬ್ಲೇಡ್ ಉತ್ಪಾದನೆ ಈಗಾಗಲೇ ನಡೆಯುತ್ತಿದೆ ಎಂದು ಅವರು ತಿಳಿಸಿದರು.

ತ್ಯಾಜ್ಯ ನಿರ್ವಹಣೆಯಲ್ಲಿ ಪರಿಣತಿ ಹೊಂದಿರುವ ರಾಮ್ಕಿ ಗ್ರೂಪ್‌ ರಾಜ್ಯದ ಕೆಐಎಡಿಬಿ ಕೈಗಾರಿಕಾ ಪ್ರದೇಶಗಳಲ್ಲಿ ಸಾಮಾನ್ಯ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಆಸಕ್ತಿ ವ್ಯಕ್ತಪಡಿಸಿದ್ದು, ಫಾರ್ಮಾ ಪಾರ್ಕ್ ಸ್ಥಾಪನೆ ಕುರಿತೂ ಚರ್ಚೆ ನಡೆದಿದೆ. ಟೆಕ್ ಮಹೀಂದ್ರ ಕಂಪನಿಯು ರಾಜ್ಯದ ಎರಡನೇ ಹಂತದ ನಗರಗಳಲ್ಲಿ ಹೂಡಿಕೆ ವಿಸ್ತರಣೆ ಮಾಡುವುದಾಗಿ ಸೂಚಿಸಿದೆ.

ಸಿಂಗಾಪುರ ಮೂಲದ ಕಂಪನಿಗಳಿಂದ ಹೆಚ್ಚಿನ ಹೂಡಿಕೆ ಆಕರ್ಷಿಸುವ ಗುರಿಯೊಂದಿಗೆ ‘ಸಿಂಗಾಪುರ ಪಾರ್ಕ್’ ಸ್ಥಾಪನೆ ಕುರಿತು ಸಿಂಗಾಪುರ ಆರ್ಥಿಕ ಅಭಿವೃದ್ಧಿ ಮಂಡಳಿಯ ಪ್ರತಿನಿಧಿಗಳೊಂದಿಗೆ ಚರ್ಚಿಸಲಾಗಿದೆ. ಲೆನೋವೊ ಕಂಪನಿಯು ಸ್ಥಳೀಯ ಪೂರೈಕೆದಾರರು ಮತ್ತು ಉದ್ಯಮಿಗಳೊಂದಿಗೆ ಸಹಭಾಗಿತ್ವದ ಮೂಲಕ ಉತ್ಪಾದನೆ ವಿಸ್ತರಿಸಲು ಸಿದ್ಧತೆ ನಡೆಸಿದೆ.

ರಕ್ಷಣಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಎಕ್ಸಾನ್ ಕೇಬಲ್ಸ್ ಕಂಪನಿ ಭಾರತದಲ್ಲಿ ತನ್ನ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ನಿರ್ಧರಿಸಿದೆ. ಜೊತೆಗೆ, ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್‌ (BCG) ವ್ಯವಸ್ಥಾಪಕ ನಿರ್ದೇಶಕ ನಿಕೋಲಸ್ ಲ್ಯಾಂಗ್ ಅವರೊಂದಿಗೆ ಸುಂಕ ನೀತಿ, ಕೃತಕ ಬುದ್ಧಿಮತ್ತೆ (ಎಐ) ಹಾಗೂ ಹೊಸ ತಂತ್ರಜ್ಞಾನಗಳ ಕುರಿತು ರಾಜ್ಯದ ನಿಯೋಗವು ವಿಸ್ತೃತ ಚರ್ಚೆ ನಡೆಸಿದೆ.

ಸ್ನೈಡರ್ ಎಲೆಕ್ಟ್ರಿಕ್ ಕಂಪನಿಯು 20 ಹೆಚ್ಚುವರಿ ತರಬೇತಿ ಮೂಲಸೌಕರ್ಯ ಕೇಂದ್ರಗಳನ್ನು ಸ್ಥಾಪಿಸುವ ಯೋಜನೆ ಹೊಂದಿದ್ದು, ಭವಿಷ್ಯದಲ್ಲಿ ಇದನ್ನು 100 ಕೌಶಲ ಅಭಿವೃದ್ಧಿ ಕೇಂದ್ರಗಳವರೆಗೆ ವಿಸ್ತರಿಸುವ ಗುರಿ ಇಟ್ಟುಕೊಂಡಿದೆ. ಇದೇ ವೇಳೆ ಸ್ವಿಸ್ ಚೇಂಬರ್ಸ್ ಇಂಡಿಯಾದೊಂದಿಗೆ ರಾಜ್ಯ ಸರ್ಕಾರ ಒಡಂಬಡಿಕೆಗೆ ಸಹಿ ಹಾಕಿದ್ದು, ಸ್ವಿಟ್ಜರ್ಲೆಂಡ್‌ನ ಕಂಪನಿಗಳೊಂದಿಗೆ ಕೈಗಾರಿಕಾ ಸಂಬಂಧ ಬಲಪಡಿಸಲು ಕ್ರಮ ಕೈಗೊಳ್ಳಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page