ಬೆಂಗಳೂರು ಸುರಂಗ ಮಾರ್ಗ ಯೋಜನೆ ವಿವಾದದ ನಡುವೆ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮಂಗಳವಾರ ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಕೆಲ ಹೊತ್ತು ಸಂವಾದ ನಡೆಸಿದರು. ಆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ತೇಜಸ್ವಿ ಸೂರ್ಯ ಇದೊಂದು ಸೌಹಾರ್ದಯುತ ಭೇಟಿ ಎಂದಿದ್ದಾರೆ.
ಬೆಂಗಳೂರಿನ ದಟ್ಟಣೆಯನ್ನು ಕಡಿಮೆ ಮಾಡುವ ವಿಚಾರಗಳು ಮತ್ತು ಹಲವು ಅಭಿವೃದ್ಧಿ ಪ್ರಸ್ತಾಪಗಳ ಜೊತೆಗೆ ಸುಸ್ಥಿರ ಸಾರಿಗೆ ಸೌಕರ್ಯ ವ್ಯವಸ್ಥೆ ಮತ್ತು ಸುರಂಗ ರಸ್ತೆ ಯೋಜನೆಯ ಬಗ್ಗೆಯೂ ಇಬ್ಬರೂ ಚರ್ಚಿಸಿರುವುದಾಗಿರುವುದಾಗಿ ತೇಜಸ್ವಿ ಸೂರ್ಯ ಹೇಳಿದ್ದಾರೆ.
“ನಗರದಲ್ಲಿ ಪರಿಣಾಮಕಾರಿ ಪ್ರಯಾಣ ಮತ್ತು ಚಲನಶೀಲತೆಗೆ ಸಾರ್ವಜನಿಕ ಸಾರಿಗೆ ಮತ್ತು ಬೆಂಗಳೂರಿನಲ್ಲಿ ಸಾರ್ವಜನಿಕ ಸಾರಿಗೆ ಹೆಜ್ಜೆಗುರುತನ್ನು ಹೆಚ್ಚಿಸುವುದು ಹೇಗೆ ಸುಸ್ಥಿರ ಮಾರ್ಗವಾಗಿದೆ ಎಂಬುದನ್ನು ನಾವು ವಿವರವಾಗಿ ಚರ್ಚಿಸಿದ್ದೇವೆ” ಎಂದು ತೇಜಸ್ವಿ ಸೂರ್ಯ ಹೇಳಿದರು.
ಕಾರುಗಳಿಗೆ ಮಾತ್ರ ಸೀಮಿತವಾದ ಸುರಂಗ ಮಾರ್ಗ ಯೋಜನೆಗೆ ಖರ್ಚು ಮಾಡಲು ಪ್ರಸ್ತಾಪಿಸಲಾದ ಹಣವನ್ನು ಮೆಟ್ರೋ ಸೇರಿದಂತೆ ಸಾಮೂಹಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆಗಳಿಗೆ ಬಳಸಬೇಕೆಂದು ತೇಜಸ್ವಿ ಸೂರ್ಯ, ಡಿಸಿಎಂ ಡಿಕೆ ಶಿವಕುಮಾರ್‌ಗೆ ಮನವಿ ಮಾಡಿರುವುದಾಗಿ ತಿಳಿಸಿದರು.
ಶಿವಕುಮಾರ್ ಅವರು ಮುಂಬರುವ ವಾರದಲ್ಲಿ ಹೊರ ವರ್ತುಲ ರಸ್ತೆಯ ಕೈಗಾರಿಕೆಗಳು ಮತ್ತು ಸಿಇಒಗಳು ಹಾಗೂ ಅಧಿಕಾರಿಗಳೊಂದಿಗೆ ಮತ್ತೊಂದು ಸಭೆ ನಡೆಸಲು ಪ್ರಸ್ತಾಪಿಸಿದ್ದಾರೆ. ಆ ಸಭೆಯಲ್ಲಿ ಹಾಜರಿರುವಂತೆ ಮತ್ತು ನಾನು ಪ್ರಸ್ತುತಪಡಿಸಿದ ಪರಿಹಾರಗಳನ್ನು ನೀಡುವಂತೆ ಅವರು ನನ್ನನ್ನು ಕೇಳಿಕೊಂಡಿದ್ದಾರೆ” ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹೇಳಿದರು. ಶಿವಕುಮಾರ್ ಬೆಂಗಳೂರಿಗೆ ಸುಸ್ಥಿರ ಪರಿಹಾರಗಳ ಕುರಿತು ತಮ್ಮೊಂದಿಗೆ ಒಂದು ಗಂಟೆ ಚರ್ಚಿಸಿದ್ದರು ಎಂದು ತೇಜಸ್ವಿ ಸೂರ್ಯ ಹೇಳಿದರು.
