Wednesday, September 3, 2025

ಸತ್ಯ | ನ್ಯಾಯ |ಧರ್ಮ

ಇಂದು ಜಿಎಸ್‌ಟಿ ಮಹತ್ವದ ಸಭೆ ತೆರಿಗೆ ಇಳಿಕೆ ಸಾದ್ಯತೆ ?

ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರ ಅಧ್ಯಕ್ಷತೆಯಲ್ಲಿ ಇಂದು ಹಾಗೂ ನಾಳೆ ಎರಡು ದಿನಗಳ ಕೇಂದ್ರ ಜಿಎಸ್‌ಟಿ (GST) ಮಂಡಳಿಯ ಮಹತ್ವದ ಸಭೆ ನಡೆಯಲಿದೆ. ಈ ಸಭೆಯಲ್ಲಿ ದಿನಬಳಕೆ ವಸ್ತುಗಳು, ಇವಿ ವಾಹನಗಳಿಗೆ 5% ರಷ್ಟು ತೆರಿಗೆ (Tax) ಇಳಿಕೆ ಪ್ರಸ್ತಾಪ ಪರಿಶೀಲನೆಯಾಗಲಿದೆ ಎನ್ನಲಾಗಿದೆ.ಹಾಲಿ 4 ಸ್ತರದಲ್ಲಿರುವ ಜಿಎಸ್‌ಟಿ ತೆರಿಗೆಯನ್ನು 5% ಮತ್ತು 18% ರ 2 ಸ್ತರಕ್ಕೆ ಇಳಿಸಲು ಕೇಂದ್ರ ಸರ್ಕಾರ ಪ್ರಸ್ತಾಪ ಮುಂದಿಟ್ಟಿದೆ. ಈ ಪ್ರಸ್ತಾಪಕ್ಕೆ ಈಗಾಗಲೇ ಜಿಎಸ್‌ಟಿ ಮಂಡಳಿಯ ಸಚಿವರ ಮಟ್ಟದ ಸಮಿತಿ ಒಪ್ಪಿಗೆ ಸೂಚಿಸಿದ್ದು, ಅದನ್ನು ಬುಧವಾರದ ಸಭೆಯಲ್ಲಿ ಪರಿಶೀಲಿಸಲಾಗುತ್ತಿದೆ.ಈ ಸಭೆಯಲ್ಲಿ ಯಾವ್ಯಾವ ವಸ್ತುಗಳನ್ನು ಯಾವ ಪಟ್ಟಿಗೆ ತರಬೇಕು ಎಂಬುದರ ಬಗ್ಗೆ ಕೇಂದ್ರ ಸರ್ಕಾರ ಪ್ರಸ್ತಾಪ ಮಾಡುವ ಸಾಧ್ಯತೆ ಇದೆ. ದಿನಬಳಕೆಯ ವಸ್ತುಗಳು, ಎಲೆಕ್ಟ್ರಾನಿಕ್ಸ್‌ ಉಪಕರಣಗಳು, ವಿದ್ಯುತ್‌ ಚಾಲಿತ ವಾಹನಗಳನ್ನು ಹಾಲಿ ಇರುವ 28% ಮತ್ತು 18% ರ ಸ್ತರದಿಂದ 5% ಕ್ಕೆ ಇಳಿಸುವ ಕುರಿತು ಪ್ರಸ್ತಾಪವನ್ನು ಸಚಿವರು ಎಲ್ಲಾ ರಾಜ್ಯಗಳ ಪ್ರತಿನಿಧಿಗಳ ಮುಂದೆ ಇಡಲಿದ್ದಾರೆ ಎನ್ನಲಾಗಿದೆ.

2017ರಲ್ಲಿ ದೇಶದಲ್ಲಿ ಜಿಎಸ್ಟಿ ನಿಯಮಗಳು ಜಾರಿ ಬಂದಾಗಿನಿಂದ 5%, 12%, 18% ಮತ್ತು 28%ರ ತೆರಿಗೆ ಸ್ತರ ಜಾರಿಯಲ್ಲಿದೆ. 8 ವರ್ಷಗಳ ಹಿಂದೆ ಏಕರೂಪದ ತೆರಿಗೆ ವ್ಯವಸ್ಥೆ ಆರಂಭವಾದಾಗಿನಿಂದ ಅದನ್ನು ಕಾಡುತ್ತಿರುವ ಹಲವು ಸಮಸ್ಯೆಗಳನ್ನು ಪರಿಗಣಿಸಲು ಮಂಡಳಿಗೆ ಸಮಯ ಮತ್ತು ಬ್ಯಾಂಡ್‌ವಿಡ್ತ್ ಇರುತ್ತದೆಯೇ ಅಥವಾ ವಿರೋಧ ಪಕ್ಷಗಳ ರಾಜ್ಯಗಳು ಆದಾಯ ನಷ್ಟ ಪರಿಹಾರವನ್ನು ಕೇಳುವ ಸಾಧ್ಯತೆಯಿದೆಯೇ ಕಾದು ನೋಡಬೇಕಿದೆ.ಅಕ್ಟೋಬರ್ ಆರಂಭದ ವೇಳೆಗೆ ಸರಕು ಮತ್ತು ಸೇವಾ ತೆರಿಗೆ (GST) ಆಡಳಿತದ ಅಡಿಯಲ್ಲಿ ಮುಂದಿನ ಹಂತದ ಸುಧಾರಣೆಗಳನ್ನು ಜಾರಿಗೆ ತರುವ ಗಡುವು ಕೇಂದ್ರ ಸರ್ಕಾರಕ್ಕೆ ಸಮೀಪಿಸುತ್ತಿರುವ ಹಿನ್ನೆಲೆ ಈ ಸಭೆಯನ್ನು ನಡೆಸಲಾಗುತ್ತಿದೆ. ಕೌನ್ಸಿಲ್‌ನ ಎಕ್ಸ್-ಆಫಿಸಿಯೊ ಕಾರ್ಯದರ್ಶಿಯಾಗಿರುವ ಕಂದಾಯ ಕಾರ್ಯದರ್ಶಿ ಅರವಿಂದ್ ಶ್ರೀವಾಸ್ತವ ಅವರು ಕಳೆದ ತಿಂಗಳು ಸಭೆಯ ಕುರಿತು ಸೂಚನೆ ನೀಡಿದ್ದು, ಜಿಎಸ್‌ಟಿ ಕೌನ್ಸಿಲ್‌ನ 56ನೇ ಸಭೆಗೆ ಒಂದು ದಿನ ಮೊದಲು ರಾಜ್ಯಗಳು ಮತ್ತು ಕೇಂದ್ರದ ಅಧಿಕಾರಿಗಳ ಸಭೆ ನಡೆಯಲಿದೆ ಎಂದು ತಿಳಿಸಿದ್ದರು.

ಆಗಸ್ಟ್ ಕೊನೆಯ ವಾರದಲ್ಲಿ ಮುಖ್ಯಮಂತ್ರಿಗಳು, ಹಣಕಾಸು ಸಚಿವರು ಮತ್ತು ರಾಜ್ಯಗಳ ಇತರ ಸಚಿವರು ಸಚಿವರ ಗುಂಪುಗಳ ಸಭೆಗಳಲ್ಲಿ ಭಾಗವಹಿಸಲು ರಾಜಧಾನಿಗೆ ಬಂದ ನಂತರ ಮಂಡಳಿಯ ಸಭೆ ನಡೆಯಲಿದೆ ಎಂದು ಅರವಿಂದ್ ಶ್ರೀವಾಸ್ತವ ಹೇಳಿದ್ದರು. ಹಣಕಾಸು ಸಚಿವೆ ಸೀತಾರಾಮನ್ ನೇತೃತ್ವದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದು, ಸಾಮಾನ್ಯ ಬಳಕೆಯ ವಸ್ತುಗಳ ಮೇಲಿನ ತೆರಿಗೆ ಕಡಿತ ಮತ್ತು ಸಾರ್ವಜನಿಕ ಕಲ್ಯಾಣ ಸೇವೆಗಳ ಕುರಿತು ಚರ್ಚಿಸಲಿದ್ದಾರೆ ಎಂದು ಅವರು ತಿಳಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪು ಕೋಟೆಯಿಂದ ಮಾಡಿದ ತಮ್ಮ ಭಾಷಣದಲ್ಲಿ, ಈ ವರ್ಷದ ದೀಪಾವಳಿಯ ವೇಳೆಗೆ ಸಾಮಾನ್ಯ ಜನರಿಗೆ ಉಡುಗೊರೆಯಾಗಿ ಜಿಎಸ್‌ಟಿ ಯಲ್ಲಿ ದೊಡ್ಡ ಹಂತದ ಸುಧಾರಣೆಗಳನ್ನು ಘೋಷಿಸಿದ್ದರು. ಇದಾದ ಎರಡು ವಾರಗಳ ನಂತರ ಜಿಎಸ್‌ಟಿ ಮಂಡಳಿಯ ಸಭೆ ಈಗ ನಡೆಯುತ್ತಿದೆ

Related Articles

ಇತ್ತೀಚಿನ ಸುದ್ದಿಗಳು

You cannot copy content of this page