Thursday, June 13, 2024

ಸತ್ಯ | ನ್ಯಾಯ |ಧರ್ಮ

ಜೆಡಿಎಸ್ ರಾಜಕಾರಣದ ಪ್ರಮುಖ ಘಟ್ಟಗಳು

ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಸಿ ಎಂ ಇಬ್ರಾಹಿಂ, ನನಗೆ ಯಾವ ಮಾತು ಹೇಳದೆ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಜೆಡಿಎಸ್ ನಾಯಕರ ವಿರುದ್ಧ ಗುಡುಗುತ್ತಾರೆ. ಇಬ್ರಾಹಿಂ, ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲು ಹೊರಟಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಸುದ್ದಿ ತಿಳಿದ ಕೆಲವೇ ದಿನಗಳಲ್ಲಿ ಪಕ್ಷದ ಮುಖಂಡ ದೇವೇಗೌಡರು ಪತ್ರಿಕಾಗೋಷ್ಠಿ ಕರೆದು ಸಿ ಎಂ ಹಿಬ್ರಾಹಿಂ ರವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ.

ನಿನ್ನೆ ಜೆಡಿಎಸ್ ಪಕ್ಷದ ರಾಷ್ಟ್ರಾಧ್ಯಕ್ಷ  ಹೆಚ್ ಡಿ ದೇವೇಗೌಡರು ಪತ್ರಿಕಾ ಗೋಷ್ಠಿ ಕರೆದು, ಈ ಹಿಂದೆ ಪಕ್ಷದ ಅಧ್ಯಕ್ಷರಾಗಿದ್ದ ಸಿ ಎಂ ಇಬ್ರಾಹಿಂರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ. ಮತ್ತು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ತೆರವು ಮಾಡಿ, ಹೆಚ್ ಡಿ ಕುಮಾರಸ್ವಾಮಿಯವರನ್ನು ಹಂಗಾಮಿ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿದ್ದಾರೆ.

ಆದರೆ, ‘ಜೆಡಿಎಸ್ ಪಕ್ಷದ ಅಧ್ಯಕ್ಷ ಸ್ಥಾನದಿಂದ ನನ್ನನ್ನು ತೆಗೆಯಲು ಆಗಲ್ಲ. ಪಕ್ಷದ ಸದಸ್ಯರ ಸಭೆ ಕರೆದು ಸಭೆಯಲ್ಲಿ ಪಕ್ಷದ ಮೂರನೇ ಎರಡರಷ್ಟು ಸದಸ್ಯರು ಅವಿಶ್ವಾಸ ನಿರ್ಣಯ ಕೈಗೊಂಡರೆ ಮಾತ್ರ ನನ್ನನ್ನು ತೆಗೆಯಲು ಸಾಧ್ಯ’ ಎಂದು ಸಿ ಎಂ ಇಬ್ರಾಹಿಂ ಹೇಳ್ತಿದ್ದಾರೆ. ಇದರ ಚರ್ಚೆ ಒತ್ತಟ್ಟಿಗಿರಲಿ. 

ಈಗ ನಾವು, ಜೆಡಿಎಸ್ ಪಕ್ಷ, ಈ ಹಿಂದೆ ಯಾವ ಯಾವ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡಿತ್ತು ಮತ್ತು ಯಾವ ಮುಖ್ಯ ನಾಯಕರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ ಎಂಬುದನ್ನು ಸ್ವಲ್ಪ ಇತಿಹಾಸ ತೆಗೆದು ನೋಡೋಣ. 

ಕಾಂಗ್ರೆಸ್ ಪಕ್ಷವನ್ನು ವಿರೋಧಿಸಿಕೊಂಡು 1977 ರಲ್ಲಿ ಶುರುವಾಗಿದ್ದೆ ‘ಜನತಾ ಪಕ್ಷ’. ಇದೇ ಜನತಾ ಪಕ್ಷ ಹತ್ತು ವರ್ಷಗಳ ನಂತರ ಅಂದರೆ 1988 ರಲ್ಲಿ ಜನತಾ ದಳವಾಗಿ ಬದಲಾಯಿತು. ಇದೇ ಜನತಾ ದಳ ಮತ್ತು ಸಂಯುಕ್ತ ರಂಗದ ಸಹಯೋಗದಿಂದ ಹೆಚ್ ಡಿ ದೇವೇಗೌಡರು, 1  ಜೂನ್ 1996 ರಲ್ಲಿ ದೇಶದ ಪ್ರಧಾನ ಮಂತ್ರಿ‌ ಹುದ್ದೆಗೇರಿದರು. ಆ ಮೂಲಕ ಕರ್ನಾಟಕದಿಂದ ಆಯ್ಕೆಯಾದ ಮೊಟ್ಟಮೊದಲ ಪ್ರಧಾನಿ ಎಂಬ ಹೆಗ್ಗಳಿಕೆ ಪಡೆದರು.

ಮುಂದೆ 1999 ರಲ್ಲಿ ಜನತಾ ದಳ ವಿಭಜನೆಗೊಂಡು ದೇವೇಗೌಡರು ಮತ್ತು ಸಿದ್ದರಾಮಯ್ಯ ನೇತೃತ್ವದಲ್ಲಿ ಜನತಾ ದಳ (ಜಾತ್ಯತೀತ) ಹಾಗೂ ಮಧ್ಯಪ್ರದೇಶದ ಮುಖಂಡ ಶರದ್ ಯಾದವ್ ನೇತೃತ್ವದಲ್ಲಿ ಜನತಾ ದಳ (ಯುನೈಟೆಡ್) ಸೃಷ್ಟಿಯಾಯಿತು.

2004 ರಲ್ಲಿ ಜೆಡಿಎಸ್ ಒಂದು ಸ್ವತಂತ್ರ ರಾಜಕೀಯ ಪಕ್ಷವಾಗಿ ಕರ್ನಾಟಕ ವಿಧಾನಸಭೆ ಚುನಾವಣೆ ಎದುರಿಸಿತು. 2004 ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದ 75 ಅಭ್ಯರ್ಥಿಗಳಲ್ಲಿ 58 ಅಭ್ಯರ್ಥಿಗಳು ಗೆಲುವು ಸಾಧಿಸಿದರು. ಕಾಂಗ್ರೆಸ್ 65 ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ 79 ಸ್ಥಾನಗಳನ್ನು ಪಡೆದಿತ್ತು. ಅಂದಿನ ರಾಜ್ಯಪಾಲರಾಗಿದ್ದ ಟಿ ಎನ್ ಚರ್ತುವೇದಿ ಸಮ್ಮಿಶ್ರ ಸರ್ಕಾರ ರಚಿಸಲು ಆಹ್ವಾನ ನೀಡುತ್ತಾರೆ. ಆಗ 58 ಸೀಟು ಬಂದಿದ್ದ ಜೆಡಿಎಸ್ ಮತ್ತು 65 ಸೀಟು ಬಂದಿದ್ದ ಕಾಂಗ್ರೆಸ್ ಜೊತೆಗೂಡಿ ಸರಕಾರ ರಚಿಸಿ ಸರ್ವಾನುಮತದಿಂದ ಧರ್ಮಸಿಂಗ್ ಅವರನ್ನು ಮುಖ್ಯಮಂತ್ರಿ ಮಾಡುತ್ತಾರೆ.. ಉಪ ಮುಖ್ಯಮಂತ್ರಿ ಆಗಿ ಜೆಡಿಎಸ್ ಪಕ್ಷದಿಂದ ಸಿದ್ದರಾಮಯ್ಯ ನೇಮಕವಾಗುತ್ತಾರೆ.

ಈ ನಡುವೆ ಸಿನಿಮಾ ನಿರ್ಮಾಪಕರಾಗಿದ್ದ ಎಚ್‌ ಡಿ ಕುಮಾರಸ್ವಾಮಿ ರಾಜಕೀಯಕ್ಕೆ ಧುಮುಕುವ ಮೂಲಕ ರಾಜ್ಯ ರಾಜಕಾರಣ ಹೊಸ ತಿರುವು ಪಡೆಯಿತು ಎಂದೇ ಹೇಳಬೇಕು. ಯಾಕೆಂದರೆ ಜೆಡಿಎಸ್‌ ವರಿಷ್ಠರಾಗಿದ್ದ ದೇವೇಗೌಡರ ಸುಪುತ್ರ ಕುಮಾರಸ್ವಾಮಿ ಜೆಡಿಎಸ್‌ ಮೇಲೆ ಹಿಡಿತ ಸಾಧಿಸುತ್ತಿದ್ದಂತೆ ಸಿದ್ದರಾಮಯ್ಯ ಅವರ ಸ್ಥಾನಕ್ಕೆ ಅಲ್ಲಿ ಕುಂದುಂಟಾಯಿತು. ಮುಂದೆ ಜೆ ಡಿ ಎಸ್‌ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೂ ಮುಖ್ಯಮಂತ್ರಿ ಆಗುವುದು ಕುಮಾರಸ್ವಾಮಿಯೇ ಹೊರತು ಸಿದ್ದರಾಮಯ್ಯ ಅಲ್ಲ ಎನ್ನುವುದು ಸ್ಪಷ್ಟವಾಗಿತ್ತು. ಇದನ್ನು ಅರಿತ ಸಿದ್ದರಾಮಯ್ಯ ಕಾಂಗ್ರೆಸ್‌ ಗೆ ಹೊರಡುವ ತಯಾರಿ ನಡೆಸಿದರು. ಅವರು ಅಹಿಂದ ಸಮಾವೇಶಗಳನ್ನು ನಡೆಸಲು ಹೊರಟಿದ್ದು ದೇವೇಗೌಡರಿಗೆ ಇಷ್ಟವಾಗಲಿಲ್ಲ. ನಂತರ 2005 ರಲ್ಲಿ ಸಿದ್ದರಾಮಯ್ಯರವರನ್ನು ಪಕ್ಷದಿಂದ ಹೊರಹಾಕಲಾಯಿತು. 

18 ಜನವರಿ 2006ರಂದು  ಕುಮಾರಸ್ವಾಮಿಯವರ ನಾಯಕತ್ವದಲ್ಲಿ 40 ಜೆಡಿಎಸ್ ಎಂಎಲ್ಎ ಗಳನ್ನು ಸರ್ಕಾರದಿಂದ ಹೊರತಂದು ಧರ್ಮಸಿಂಗ್ ಸರ್ಕಾರವನ್ನು ಉರುಳಿಸಲಾಗುತ್ತದೆ. ರಾಜ್ಯಪಾಲರಾದ ಟಿ ಎನ್ ಚರ್ತುವೇದಿ ಕುಮಾರಸ್ವಾಮಿ ಅವರಿಗೆ ಸರ್ಕಾರವನ್ನು ರಚಿಸಲು ಬನ್ನಿ ಎಂದು ಕರೆಯುತ್ತಾರೆ. ಆದರೆ ಕುಮಾರಸ್ವಾಮಿ ಅವರು ಬಿ ಎಸ್ ಯಡಿಯೂರಪ್ಪ ಜೊತೆಗೂಡಿ ಬಿಜೆಪಿ ಪಕ್ಷದ ಜೊತೆಸೇರಿ ಹೊಸ ಸರ್ಕಾರವನ್ನು ರಚಿಸಿ 3 ಪೆಬ್ರವರಿ 2006 ರಂದು ಕರ್ನಾಟಕದ 12ನೇ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಾರೆ. 

ಆದರೆ 20 ತಿಂಗಳ ನಂತರ ಬಿಜೆಪಿಗೆ ಅಧಿಕಾರ ವಹಿಸಿಕೊಡದೇ ʼವಚನ ಭ್ರಷ್ಟʼ ಎಂಬ ಹಣೆಪಟ್ಟಿ ಪಡೆದು ಕೊಳ್ಳುತ್ತಾರೆ. ಇದೇ ಸಿಂಪತಿಯಲ್ಲಿ ಬಿಜೆಪಿ ಗೆದ್ದು ಬರುತ್ತದೆ. 

ಮುಂದೆ 2018 ರಲ್ಲಿ ನಡೆದ ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬಂದಿರುವುದಿಲ್ಲ. ಬಿಜೆಪಿ 104, ಕಾಂಗ್ರೆಸ್ 80, ಜೆಡಿಎಸ್ 37. ಈ ಎಲ್ಲಾ ಲೆಕ್ಕಾಚಾರದ ಮೇಲೆ ಕಾಂಗ್ರೆಸ್ ಪಕ್ಷ ಜೆಡಿಎಸ್ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಂಡು ಎರಡನೇ ಬಾರಿ ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಆಗುವ ಅವಕಾಶ ದೊರೆಯುತ್ತದೆ. ಸಿದ್ದರಾಮಯ್ಯ ಸಮ್ಮಿಶ್ರ ಸರ್ಕಾರದ ಅಧ್ಯಕ್ಷರಾಗುತ್ತಾರೆ. 23 ಮೇ 2018ರಲ್ಲಿ ಮುಖ್ಯಮಂತ್ರಿಯಾಗಿ 23 ಜುಲೈ 2019 ಕ್ಕೆ ರಾಜೀನಾಮೆ ಕೊಡಬೇಕಾದ ಪರಿಸ್ಥಿತಿ ಬರುತ್ತದೆ. ಮತ್ತು ಸಮ್ಮಿಶ್ರ ಸರ್ಕಾರ ಬಿದ್ದು ಹೋಗುತ್ತದೆ.  ಅಪರೇಷನ್‌ ಕಮಲದ ಸಹಾಯದಿಂದ ಬಹುಮತಗಳೊಂದಿಗೆ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ.

ಸಿ ಎಂ ಇಬ್ರಾಹಿಂ ಕಾಂಗ್ರೆಸ್ ಪಕ್ಷವನ್ನು ತೊರೆದ ನಂತರ 17 ಏಪ್ರಿಲ್ 2022 ಕ್ಕೆ ಜೆಡಿಎಸ್ ಪಕ್ಷಕ್ಕೆ ಸೇರಿಕೊಳ್ಳುತ್ತಾರೆ. ಅವರು ಪಕ್ಷಕ್ಕೆ ಸೇರಿಕೊಂಡ ಕೆಲವೇ ದಿನಗಳಲ್ಲಿ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗುತ್ತದೆ. ನಂತರ 2023 ಕ್ಕೆ ಮತ್ತೆ ಕರ್ನಾಟಕ ವಿಧಾನಸಭೆ ಚುನಾವಣೆ ಬರುತ್ತದೆ. 2023 ರಲ್ಲಿ ಜೆಡಿಎಸ್ ಕೇವಲ 19 ಸೀಟ್ ಪಡೆದು ಸಮಾಧಾನವಾಗುತ್ತದೆ. ಈ ಚುನಾವಣೆ ಆಗಿ ಕೆಲವೇ ದಿನಗಳಲ್ಲಿ ಜೆಡಿಎಸ್ ಪಕ್ಷದ ವರಿಷ್ಠರಾದ ಹೆಚ್ ಡಿ ಕುಮಾರಸ್ವಾಮಿ ಮತ್ತು ಅವರ ಮಗ ನಿಖಿಲ್ ಕುಮಾರಸ್ವಾಮಿ ಜತೆಯಾಗಿ ದೆಹಲಿಗೆ ಹೋಗಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಮತ್ತು ಗೃಹ ಮಂತ್ರಿ ಅಮಿತ್ ಶಾ ಅವರನ್ನು ಭೇಟಿ ಮಾಡಿ ಬರುವ ಲೋಕಸಭಾ ಚುನಾವಣೆಗೆ ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಂಡು ಬರುತ್ತಾರೆ.

ಇದರ ಬೆನ್ನಲ್ಲೇ, ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಸಿ ಎಂ ಇಬ್ರಾಹಿಂ, ನನಗೆ ಯಾವ ಮಾತು ಹೇಳದೆ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಜೆಡಿಎಸ್ ನಾಯಕರ ವಿರುದ್ಧ ಗುಡುಗುತ್ತಾರೆ. ಇಬ್ರಾಹಿಂ, ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲು ಹೊರಟಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಸುದ್ದಿ ತಿಳಿದ ಕೆಲವೇ ದಿನಗಳಲ್ಲಿ ಪಕ್ಷದ ಮುಖಂಡ ದೇವೇಗೌಡರು ಪತ್ರಿಕಾಗೋಷ್ಠಿ ಕರೆದು ಸಿ ಎಂ ಹಿಬ್ರಾಹಿಂ ರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ.

ಮನೋಜ್ ಆರ್ ಕಂಬಳಿ

ಪತ್ರಕರ್ತ

ಇದನ್ನೂ ಓದಿ- ದೈತ್ಯರೊಂದಿಗೆ ಮೈತ್ರಿ; ಪ್ರಾದೇಶಿಕ ಪಕ್ಷದ ವಿನಾಶ ಖಾತ್ರಿ

Related Articles

ಇತ್ತೀಚಿನ ಸುದ್ದಿಗಳು