Thursday, June 20, 2024

ಸತ್ಯ | ನ್ಯಾಯ |ಧರ್ಮ

ಗುಜರಾತ್ ನಲ್ಲಿ ಅತ್ಯಾಚಾರಿಗಳನ್ನು ‘ಸಂಸ್ಕಾರಿ ಬ್ರಾಹ್ಮಣರು’ ಎಂದಿದ್ದ ಅಭ್ಯರ್ಥಿ ಗೆಲುವು

ದೇಶಾದ್ಯಂತ ಹೆಚ್ಚಿನ ಕುತೂಹಲ ಕೆರಳಿಸಿದ್ದ ಗುಜರಾತ್ ಚುನಾವಣೆ ಫಲಿತಾಂಶ ಬಹುತೇಕ ಹೊರಬಿದ್ದಿದ್ದು ಬಿಜೆಪಿ ಪಕ್ಷ ಮತ್ತೊಮ್ಮೆ ಸರ್ಕಾರ ರಚಿಸುವುದು ನಿಚ್ಚಳವಾಗಿದೆ. ಇದರ ನಡುವೆ ಕೆಲವು ಅಭ್ಯರ್ಥಿಗಳ ಫಲಿತಾಂಶ ಕೂಡಾ ಆಶ್ಚರ್ಯದಿಂದ ಕೂಡಿದೆ.

ಇತ್ತೀಚೆಗೆ ದೇಶಾದ್ಯಂತ ಗಮನ ಸೆಳೆದ ಗುಜರಾತ್ ನ ಬಿಲ್ಕೀಸ್ ಬಾನೋ ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿದ ಪ್ರಕರಣ ಎಲ್ಲೆಡೆ ಸುದ್ದಿಯಾಗಿತ್ತು. ಜೊತೆಗೆ ಅವರನ್ನು ಬಿಡುಗಡೆ ಮಾಡಿದ ವಿಚಾರವಾಗಿ ದೇಶಾದ್ಯಂತ ಹೆಚ್ಚಿನ ವಿರೋಧ ವ್ಯಕ್ತವಾಗಿತ್ತು‌. ಆ ಸಂದರ್ಭದಲ್ಲಿ ಬಿಲ್ಕೀಸ್ ಬಾನೋ ಅತ್ಯಾಚಾರ ಮಾಡಿದ ಅಪರಾಧಿಗಳನ್ನು ‘ಸಂಸ್ಕಾರಿ ಬ್ರಾಹ್ಮಣರು’ ಎಂದ ಬಿಜೆಪಿ ಅಭ್ಯರ್ಥಿ ಚಂದ್ರಸಿನ್ಹ ರೌಲ್ಜಿ ಮತ್ತೊಮ್ಮೆ ಪ್ರಚಂಡ ಗೆಲುವು ದಾಖಲಿಸಿದ್ದಾರೆ.

ಅತ್ಯಾಚಾರಿಗಳ ಬಿಡುಗಡೆ ಸಂದರ್ಭದಲ್ಲಿ ಚಂದ್ರಸಿನ್ಹ ರೌಲ್ಜಿ ಕೊಟ್ಟ ಹೇಳಿಕೆ ದೊಡ್ಡದಾಗಿ ಸುದ್ದಿ ಮಾಡಿತ್ತು. ಗುಜರಾತ್ ಸೇರಿದಂತೆ ದೇಶದ ಎಲ್ಲಾ ಕಡೆಗಳಲ್ಲೂ ಚಂದ್ರಸಿನ್ಹ ರೌಲ್ಜಿ ಹೇಳಿಕೆಗೆ ವಿರೋಧ ವ್ಯಕ್ತವಾಗಿತ್ತು. ಈ ಕಾರಣದಿಂದ ಈ ಬಾರಿಯ ಗುಜರಾತ್ ಚುನಾವಣೆಯಲ್ಲಿ ರೌಲ್ಜಿ ಫಲಿತಾಂಶ ಕೂಡಾ ಕುತೂಹಲ ಹುಟ್ಟಿಸಿತ್ತು. ಆದರೆ ಚಂದ್ರಸಿನ್ಹ ರೌಲ್ಜಿ ಈಗ ಗೋದ್ರಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಗೋದ್ರಾ ಕ್ಷೇತ್ರದಿಂದ ಸಿ.ಕೆ.ರೌಲ್ಜಿ ಅವರನ್ನು ಭಾರತೀಯ ಜನತಾ ಪಕ್ಷವು ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು ಇಂದು ಚುನಾವಣೆಯ ಫಲಿತಾಂಶ ಹೊರಬಿದಿದ್ದು, ಕಾಂಗ್ರೆಸ್ ಅಭ್ಯರ್ಥಿ ರಶ್ಮಿತಾಬೆನ್ ದುಷ್ಯಂತಸಿಂಹ ಚೌಹಾಣ್ ವಿರುದ್ಧ 35 ಸಾವಿರ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ಮಾರ್ಚ್ 3, 2002ರಂದು ಗುಜರಾತ್ ಗಲಭೆಯ ಸಂದರ್ಭದಲ್ಲಿ ಬಿಲ್ಕಿಸ್ ಬಾನೋ ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಯಿತು. ಆ ಸಮಯದಲ್ಲಿ 19 ವರ್ಷದವರಾಗಿದ್ದ ಬಿಲ್ಕಿಸ್‌ ಗರ್ಭಿಣಿಯಾಗಿದ್ದರು. ಬಿಲ್ಕಿಸ್‌ ಅವರ ಮೂರು ವರ್ಷದ ಮಗಳು ಸೇರಿದಂತೆ ಅವರ ಕುಟುಂಬದ ಹದಿನಾಲ್ಕು ಸದಸ್ಯರನ್ನು ಅಹಮದಾಬಾದ್ ಬಳಿ ಗಲಭೆಕೋರರು ಹತ್ಯೆ ಮಾಡಿದ್ದರು.ಇಂತಹ ಅಪರಾದಿಗಳನ್ನು ಬಿಡುಗಡೆ ಮಾಡಿದ್ದು ತಪ್ಪು ಎಂಬ ವಾದ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿದ್ದಂತೆ. ಇವರೆಲ್ಲರೂ ಸಂಸ್ಕಾರಿ ಬ್ರಾಹ್ಮಣರು ಎಂದು ಸಿ.ಕೆ.ರೌಲ್ಜಿ ಹೇಳಿಕೆ ನೀಡಿದ್ದರು.

ಬಿಲ್ಕಿಸ್ ಬಾನೋ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ಎಲ್ಲಾ 11 ಅಪರಾಧಿಗಳನ್ನು ಗುಜರಾತ್ ಸರ್ಕಾರವು ಆಗಸ್ಟ್ 15 ರಂದು ಬಿಡುಗಡೆ ಮಾಡಿತ್ತು. ಸನ್ನಡತೆಯ ನೀತಿಯ ಅಡಿಯಲ್ಲಿ ಅಪರಾಧಿಗಳ ಅರ್ಜಿಯನ್ನು ಅನುಮೋದಿಸಿದ ನಂತರ ಗೋಧ್ರಾ ಜೈಲಿನಿಂದ ಬಿಡುಗಡೆ ಮಾಡಲಾಯಿತ್ತು.

ಗುಜರಾತ್‌ನಲ್ಲಿ ತನ್ನನ್ನು ಬೆಂಬಲಿಸುವ ಮುಸ್ಲಿಂ ಮತದಾರರೊಂದಿಗೆ ಸಹಜವಾಗಿಯೇ ಉತ್ತಮ ಬಾಂಧವ್ಯ ಹೊಂದಿದ್ದ ಕಾಂಗ್ರೆಸ್ ಪಕ್ಷ ಕೆಲವು ಮುಸ್ಲಿಂ ಪ್ರಾಬಲ್ಯ ಇರುವ ಕ್ಷೇತ್ರಗಳಲ್ಲೇ ಸೋಲಿನ ರುಚಿ ಕಂಡಿದೆ. ಇದರಿಂದ ಕಾಂಗ್ರೆಸ್ ಸಾಂಪ್ರದಾಯಿಕವಾಗಿ ತನಗೆ ಬರಬೇಕಾದ ಮುಸ್ಲಿಂ ಮತಗಳನ್ನೂ ಹಿಡಿದಿಟ್ಟುಕೊಳ್ಳುವಲ್ಲಿ ವಿಫಲವಾಗಿದೆ ಎಂದೇ ಊಹಿಸಬಹುದು.

Related Articles

ಇತ್ತೀಚಿನ ಸುದ್ದಿಗಳು