Saturday, November 16, 2024

ಸತ್ಯ | ನ್ಯಾಯ |ಧರ್ಮ

Her Story – 10: ಹೀನ ಮನಸ್ಥಿತಿಗಳಿಗೂ ದೃಷ್ಟಿಯೆಲ್ಲಿ?

“..ಯಾರದೋ ಮನೆಯ ಹೆಣ್ಣುಮಗಳ ಚಿತ್ರವೊಂದನ್ನು ಹೀಗೆ ದುರುಪಯೋಗ ಪಡಿಸುವುದು, ಮತ್ತು ಅದನ್ನು ನೋಡಿಯೂ ನೋಡದ ಹಾಗೆ ವರ್ತಿಸುವುದು ಅಪಾಯಕಾರಿ. ದೃಷ್ಟಿಗೊಂಬೆಯ ಫೋಟೋ ಬದಲಾಗಿ ಈ ರೀತಿಯ ಫೋಟೋ ಬಳಸುವವರು, ತಮ್ಮದೇ ಮನೆಯ ಹೆಣ್ಣು ಮಕ್ಕಳ ಫೋಟೋ ಹೀಗೆ ಪ್ರದರ್ಶಿಸಿದರೆ ಸುಮ್ಮನಿರುವರೇ?..” ಓದಿ ಸಮುದ್ಯತಾ ಕಂಜರ್ಪಣೆ ಅವರ ಬರಹದಲ್ಲಿ


ಮಹಿಳೆಯೊಬ್ಬಳ ಫೋಟೋವೊಂದು ಇತ್ತೀಚೆಗೆ ದೃಷ್ಟಿ ಗೊಂಬೆಯ ರೀತಿಯಲ್ಲಿ ಎಲ್ಲೆಂದರಲ್ಲಿ ಬಳಕೆಯಾಗುತ್ತಿದೆ. ತೋಟಗಳಲ್ಲಿ, ಅಂಗಡಿಗಳಲ್ಲಿ, ಕಟ್ಟಡಗಳಲ್ಲಿ ಎಲ್ಲೆಂದರಲ್ಲಿ ಕಣ್ಣಿಗೆ ಬೀಳುತ್ತಿರುವ ಈ ಛಾಯಾಚಿತ್ರ ಆಶ್ಚರ್ಯದ ಜೊತೆಗೆ ಆತಂಕವನ್ನೂ ಹುಟ್ಟಿಸುತ್ತಿದೆ.

ಒಬ್ಬ ಮಹಿಳೆಯ ಛಾಯಾಚಿತ್ರವನ್ನು ಎಲ್ಲೆಂದರಲ್ಲಿ ಬಳಸುವುದು ಕಾನೂನಿನ ಪ್ರಕಾರ ಎಷ್ಟು ಸರಿ ಎನ್ನುವುದರ ಜೊತೆ, ನೈತಿಕವಾಗಿ ನಾವು ಯಾವ ಮಟ್ಟಿಗೆ ಇಳಿದಿದ್ದೇವೆ ಎನ್ನುವುದು ಕೂಡ ಪ್ರಶ್ನಾರ್ಹ. ಆ ಫೋಟೋದಲ್ಲಿರುವುದು ಯಾವುದೋ AI ಚಿತ್ರವಾಗಿದ್ದಲ್ಲಿ ಅದನ್ನು ಬಳಸಿಕೊಳ್ಳುವುದು ಬೇರೆ ಮಾತು. ಆದರೆ ಯಾರದೋ ಮನೆಯ ಹೆಣ್ಣುಮಗಳ ಚಿತ್ರವನ್ನು ಭಯಾನಕವಾಗಿಸಿ, ಹಾಸ್ಯಾಸ್ಪದವಾಗಿಸಿ ದೃಷ್ಟಿ ಬೊಂಬೆಯ ರೀತಿಯಲ್ಲಿ ಬಳಕೆ ಮಾಡುತ್ತಿರುವುದು ಅಪರಾಧ. 

ನಮ್ಮ ಮನೆಯಲ್ಲಿ ನಮ್ಮ ತಾಯಂದಿರು, ಅಜ್ಜಿ, ಅತ್ತೆ, ಚಿಕ್ಕಮ್ಮ ದೊಡ್ಡಮ್ಮಂದಿರು, ಅಕ್ಕ ತಂಗಿಯರು, ಮಕ್ಕಳು ಸಹ ಇರುತ್ತಾರೆ. ಅವರು ಕೂಡ ಅಲಂಕರಿಸಿಕೊಂಡ, ಅಲಂಕರಿಸಿಕೊಳ್ಳದ ಸಮಯಗಳಿರುತ್ತವೆ. ಅವರ ಫೋಟೋಗಳನ್ನು ಹೀಗೇ ಪ್ರದರ್ಶನಕ್ಕಿಡಲು ನಾವು ಮನಸ್ಸು ಮಾಡುತ್ತೇವಾ?

ಹೆಂಗಸರ ಚಿತ್ರ ಬಿಡಿ, ತಾವು ಧೈರ್ಯವಂತರು, ವೀರಾಧಿವೀರ ಶೂರಾಧಿಶೂರರು ಎಂದು ಮೀಸೆ ತಿರುವುವ ಎಷ್ಟು ಜನ ಗಂಡಸರು ತಮ್ಮ ಫೋಟೋಗಳನ್ನು ತಾವೇ ಪ್ರದರ್ಶನಕ್ಕಿಟ್ಟುಕೊಳ್ಳುತ್ತಾರೆ? 

ಯಾರದೋ ಮನೆಯ ಹೆಣ್ಣುಮಗಳ ಚಿತ್ರವೊಂದನ್ನು ಹೀಗೆ ದುರುಪಯೋಗ ಪಡಿಸುವುದು, ಮತ್ತು ಅದನ್ನು ನೋಡಿಯೂ ನೋಡದ ಹಾಗೆ ವರ್ತಿಸುವುದು ಅಪಾಯಕಾರಿ. ವೈಯಕ್ತಿಕ, ಖಾಸಗಿ ಚಿತ್ರಗಳನ್ನು ಒಬ್ಬ ವ್ಯಕ್ತಿಗೆ ತಿಳಿಯದ ಹಾಗೆ, ಅಥವಾ ಅವರ ಅನುಮತಿ ಇಲ್ಲದೆ ಈ ರೀತಿ ಪ್ರದರ್ಶನಕ್ಕೆ ಇಡುವುದಾದರೆ, ಇದು ಇನ್ನೆಂತಹಾ ಅಪಾಯಗಳಿಗೆ, ವಿಕೃತಿಗಳಿಗೆ ದಾರಿ ಮಾಡಿಕೊಡಬಹುದು ಎನ್ನುವ ಯೋಚನೆ‌ ನಿಜಕ್ಕೂ ಆತಂಕ ಹುಟ್ಟಿಸುತ್ತದೆ. 

ಇದು ಕೇವಲ ಈ ಒಬ್ಬ ಮಹಿಳೆ ಮಾತ್ರವಲ್ಲ. ಸಾಮಾಜಿಕ ಜಾಲತಾಣಗಳಂತಹ ವೇದಿಕೆಗಳನ್ನು ಅತ್ಯಂತ ಹೀನಾಯವಾಗಿ ಬಳಸಿಕೊಳ್ಳುವುದು  ಅದರಲ್ಲಿ ಮಹಿಳೆಯರನ್ನು ಕೀಳಾಗಿ ಹೋಲಿಸಿ ಕಮೆಂಟ್ ಮಾಡುವುದು, ಅದಕ್ಕೆ ಬೆಂಬಲಿಸಿ ವಿಕೃತಿ ಮೆರೆಯುವುದು ಹೆಚ್ಚುತ್ತಲೇ ಇದೆ. 

ಮೊನ್ನೆ ಮೊನ್ನೆಯಷ್ಟೇ ಬಿಗ್ ಬಾಸ್ ಸ್ಪರ್ಧಿಯೊಬ್ಬರನ್ನು ಟ್ರೋಲ್ ಮಾಡಿದ್ದು ಚರ್ಚೆಯಲ್ಲಿತ್ತು. ನಮ್ಮ ನಿಮ್ಮೆಲ್ಲರ ಹಾಗೇ ಕುಟುಂಬ, ಒಂದಿಷ್ಟು ಸ್ನೇಹಿತರು, ತಮ್ಮದೇ ಪುಟ್ಟ ಪ್ರಪಂಚ ಹೊಂದಿದ ವ್ಯಕ್ತಿಗೆ ಸಂಬಂಧವೇ ಇಲ್ಲದೆ ಆಕೆಯ ರೂಪದ ಕುರಿತ ಹೋಲಿಕೆ ನಡೆಸಲು ಸಾವಿರಾರು ಜನರು ಮುಗಿಬಿದ್ದಿದ್ದಾರೆ. ಆಕೆ ಮತ್ತು ಆಕೆಯ ಪತಿ ಕುಗ್ಗದೇ  ಅದನ್ನು ಜೊತೆಯಾಗಿ ಅದನ್ನು ಎದುರಿಸಿದ್ದು  ಧೈರ್ಯದ ನಡೆ. ಆದರೆ ಈ ಮನಸ್ಥಿತಿ ಎಲ್ಲರಿಗೂ ಇರುವುದಿಲ್ಲ, ಇರಲು ಸಾಧ್ಯವೂ ಇಲ್ಲ. ಜೊತೆಗೆ ನಾವು ಟ್ರೋಲ್ ಮಾಡೋದು ಮಾಡ್ತೀವಿ, ಎದುರಿಸೋದು ಬಿಡೋದು ನಿಮಗೆ‌ ಬಿಟ್ಟಿದ್ದು ಎನ್ನುವುದು ತೀರಾ ಕ್ರೂರ ನಡೆ.

ಮಹಿಳೆಯನ್ನು ವಸ್ತುಗಳಿಗೆ ಹೋಲಿಸಿ ಹೀನೋಪಮೆಗಳಾಗಿ ಬಳಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ತಾವು ಪೂಜಿಸಿ ಆರಾಧಿಸುವ ನಟ ನಟಿಯರ ಮಕ್ಕಳ ರೂಪದ ಬಗ್ಗೆಯೂ ಅಭಿಮಾನಿಗಳು ಎಂದು ತಮ್ಮನ್ನು ತಾವು ಕರೆದುಕೊಳ್ಳುವವರು ಇಷ್ಟೇ ಹೀನಾಯವಾಗಿ ಟ್ರೋಲ್ ಮಾಡುತ್ತಾರೆ.

ಭಾರತದ ಸಂವಿಧಾನದ 21ನೇ ವಿಧಿಯಡಿ ಗೌಪ್ಯತೆಯ ಹಕ್ಕು ಕೂಡ ಮೂಲಭೂತ ಹಕ್ಕುಗಳಲ್ಲಿ ಒಂದಾಗಿದೆ ಎಂದು ಸಂವಿಧಾನವು ಪ್ರತಿಪಾದಿಸುತ್ತದೆ. ಅದೇ ಕಾನೂನನ್ನು ಕಾಲ ಕಸವಾಗಿಸಿ ಸೋಷಿಯಲ್‌ ಮೀಡಿಯಾ ಎಂಬ ಹೆಸರಲ್ಲಿ ನಾವು ಯಾರ ಬದುಕು- ಭಾವನೆಗಳ ಜೊತೆ ಬೇಕಾದರೂ ಆಟವಾಡಬಹುದು ಉಢಾಫೆಯಿಂದ ಬದುಕುತ್ತೇವೆ. 

ಒಬ್ಬ ಮಹಿಳೆಯ ಇಡೀ ಅಸ್ತಿತ್ವವನ್ನು ಸಾರ್ವಜನಿಕವಾಗಿ ಪ್ರದರ್ಶನಕ್ಕಿಡುವುದು ಮತ್ತು ಹಾಸ್ಯಾಸ್ಪದವನ್ನಾಗಿಸುವುದು ಅಷ್ಟು ಸಾಮಾನ್ಯವಾಗಿದ್ದರೆ ನಮ್ಮಲ್ಲಿ ಮಾನವೀಯತೆ ಮತ್ತು ನೈತಿಕತೆ ಕೊಳೆತು ನಾರುತ್ತಿವೆ ಎನ್ನುವುದು ಸತ್ಯ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page