ಕೊರೋನಾ ಕಾರಣದಿಂದ 2021 ರ ಮೈಸೂರು ದಸರಾವನ್ನು ಸರಳವಾಗಿ ಆಚರಿಸಲಾಗಿತ್ತು. ಆದರೆ ಈ ಬಾರಿಯ ದಸರಾವನ್ನು ಅದ್ಧೂರಿಯಾಗಿ ಆಚರಣೆ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಬಾರಿಯ ದಸರಾ ಮಹೋತ್ಸವವನ್ನು ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಉದ್ಘಾಟಿಸಲಿದ್ದಾರೆ ಎಂದು ರಾಜ್ಯ ಸರ್ಕಾರ ತೀರ್ಮಾನಿಸಿದೆ. ದಸರಾ ಉದ್ಘಾಟಕರ ಬಗ್ಗೆ ಹಲವು ದಿನಗಳಿಂದ ನಡೆಯುತ್ತಿದ್ದ ಚರ್ಚೆಗೆ ರಾಜ್ಯ ಸರ್ಕಾರ ಉದ್ಘಾಟಕರ ಹೆಸರನ್ನು ಬಿಡುಗಡೆ ಮಾಡಿದೆ.
‘ಉದ್ಘಾಟಕರ ಆಯ್ಕೆ ಬಗ್ಗೆ ಹಲವು ಸುತ್ತಿನ ಮಾತುಕತೆ ಬಳಿಕ ರಾಜ್ಯ ಸರ್ಕಾರದಿಂದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆಯಲಾಗಿತ್ತು. ಉದ್ಘಾಟನೆಗೆ ಸಮ್ಮತಿಸಿ ರಾಷ್ಟ್ರಪತಿ ಕಛೇರಿಯಿಂದ ಪತ್ರ ಬಂದಿದೆ. ಹಾಗಾಗಿ ಈ ಬಾರಿ ಮೈಸೂರು ದಸರಾವನ್ನು ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಉದ್ಘಾಟಿಸಲಿದ್ದಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಇದೇ ತಿಂಗಳ ಸೆಪ್ಟೆಂಬರ್ 25 ರಿಂದ ಶುರುವಾಗುವ ಮೈಸೂರು ದಸರಾ ಮಹೋತ್ಸವ ಅಕ್ಟೋಬರ್ 5 ರ ವರೆಗೆ ನಡೆಯಲಿದೆ. ಈಗಾಗಲೇ ಹಲವು ಸುತ್ತಿನ ಮಾತುಕತೆ ನಂತರ ದಸರಾದ ಬಹುತೇಕ ರೂಪುರೇಷೆಯನ್ನು ರಾಜ್ಯ ಸರ್ಕಾರ ಸಿದ್ಧಪಡಿಸಿದೆ.
ದಸರಾ ಸಂಭ್ರಮಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವ ಕಾರಣ ಮೈಸೂರು ಸಂಸದ ಪ್ರತಾಪ್ ಸಿಂಹ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅಧಿಕಾರಿಗಳ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ.