Tuesday, October 8, 2024

ಸತ್ಯ | ನ್ಯಾಯ |ಧರ್ಮ

ಪ್ರಕೃತಿ ವಿಕೋಪಗಳ ಹೆಚ್ಚಳ: ಗಾಂಧೀಜಿಯ ಪರಿಸರ ಚಿಂತನೆಗಳ ಮದ್ದು (ಮ.ಶ್ರೀ.ಮುರಳಿ ಕೃಷ್ಣರವರ ಅಂಕಣ)

ಇತ್ತೀಚಿನ ವರ್ಷಗಳಲ್ಲಿ ಪ್ರಪಂಚದಾದ್ಯಂತ ಪ್ರಕೃತಿ ವಿಕೋಪಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಎಲ್ಲರ ಗಮನಕ್ಕೆ ಬಂದಿರುವ ಸಂಗತಿಯೇ ಸರಿ.  ಅವಗಳಿಂದ ಜರಗುತ್ತಿರುವ ಆಸ್ತಿ, ಪ್ರಾಣ ಹಾನಿ ಆತಂಕವನ್ನು ಹುಟ್ಟಿಸುತ್ತಿವೆ.  ಋತುಮಾನಗಳು ಆಗಮಿಸುವ ಕಾಲದಲ್ಲೂ ವ್ಯತ್ಯಯ ಕಂಡುಬರುತ್ತಿದೆ.  ಬೇಸಿಗೆಯ ಪ್ರಖರತೆ ವರ್ಷಗಳು ಉರುಳುತ್ತಿರುವಂತೆ ಜಾಸ್ತಿಯಾಗುತ್ತ ಸಾಗುತ್ತಿದೆ.  ಹಲವೆಡೆ ಒಂದು ತಿಂಗಳ ಪ್ರಮಾಣದ ಮಳೆ ಒಂದೇ ದಿನ ಬಂದು ಅನೇಕ ತೆರನಾದ ಲುಕ್ಸಾನುಗಳು ಸಂಭವಿಸುತ್ತಿವೆ.  ಪ್ರಾಣಿಗಳು-ಮಾನವರ ಸಂಘರ್ಷ ಕೂಡ ವೃದ್ಧಿಸುತ್ತಿವೆ. ಈ ಪರಿಯ ಬೆಳವಣಿಗೆಗಳು ಹವಮಾನ ಬದಲಾವಣೆ(ಕ್ಲೈಮೆಟ್‌ ಚೇಂಜ್)‌, ಜಾಗತಿಕ ತಾಪಮಾನದಲ್ಲಿ ಹೆಚ್ಚಳ(ಗ್ಲೋಬಲ್‌ ವಾರ್ಮಿಂಗ್)‌ ಮುಂತಾದ ಪ್ರಕ್ರಿಯೆಗಳಿಂದ ಜರಗುತ್ತಿವೆ ಎಂದು ವಿಶೇಷಜ್ಞರು ಎಚ್ಚರಿಕೆಯ ಗಂಟೆಗಳನ್ನು ಮೊಳಗಿಸುತ್ತ ಬಂದಿದ್ದಾರೆ.  ಇವುಗಳಿಂದ ಅನಾಹುತಗಳು ಸಂಭವಿಸುತ್ತಿವೆ, ಆದರೆ ಅವುಗಳನ್ನು ಸ್ವಹಿತಾಸಕ್ತಿಯಿಂದ ಮುಂದುವರೆದ ರಾಷ್ಟ್ರಗಳು ತುಂಬ ದೊಡ್ಡ ಮಟ್ಟದಲ್ಲಿ ಬಿಂಬಿಸುತ್ತಿವೆ.  ಇಂತಹ ರಾಷ್ಟ್ರಗಳು ಅಭವೃದ್ಧಿಯನ್ನು ಹೊಂದುವ ನಿಟ್ಟಿನಲ್ಲಿ ನಿಸರ್ಗವನ್ನು ಬೇಕಾಬಿಟ್ಟಿ ಬಳಸಿಕೊಂಡು ಪ್ರಸ್ತುತ ಅಭಿವೃದ್ಧಿಶೀಲ ಮತ್ತು ಬಡ ರಾಷ್ಟಗಳಿಗೆ ನೀತಿ-ಉಪದೇಶಗಳನ್ನು ನೀಡುವುದು ಎಷ್ಟು ಸರಿ?  ಮೊದಲು ಅವುಗಳು ತಮ್ಮ ಮನೆಗಳನ್ನು ಸರಿ ಮಾಡಿಕೊಳ್ಳಲಿ ಎಂಬ ಅಭಿಪ್ರಾಯಗಳನ್ನು ಇನ್ನು ಕೆಲವು ಪರಿಣಿತರು ಮಂಡಿಸುತ್ತಾರೆ.  ಇರಲಿ…..

ಗಾಂಧೀಜಿಯವರು ತಮ್ಮ ಇತರ ಅಸ್ಮಿತೆಗಳ ಜೊತೆ ಪರಿಸರ ಪ್ರೇಮಿಯೂ ಅಗಿದ್ದರು.  ಅವರ ಸಾಮಾಜಿಕ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ, ಆರೋಗ್ಯ, ಅಭಿವೃದ್ಧಿ ಮುಂತಾದ ಚಿಂತನೆಗಳ ಜೊತೆ ಪರಿಸರದ್ದು ಕೂಡ ಸೇರಿತ್ತು ಎಂಬುದು ಗಮನೀಯ ಅಂಶ.  ಪರಿಸರ ಮತ್ತು ಮಾನವರ ನಡುವಿನ ಸಂಬಂಧಗಳ ಬಗೆಗೆ ಮಾತ್ರವಲ್ಲದೆ ಎಲ್ಲ ಜೀವಿಗಳು ಪರಸ್ಪರ ಸಹಬಾಳ್ವೆಯನ್ನು ಹೇಗೆ ನಡೆಸಬೇಕು ಎಂಬ ವಿಚಾರ ಕುರಿತು ಆಳವಾಗಿ ಯೋಚಿಸುತ್ತಿದ್ದರು.  ಅವರ ಅಹಿಂಸೆಯ ತತ್ವದಲ್ಲಿ, ಒಂದರ್ಥದಲ್ಲಿ, ಪರಿಸರ ಮೇಲಣ ಅಕ್ರಮಣಗಳೂ ಹಿಂಸೆಯಡಿ ಸೇರಲ್ಪಟ್ಟು, ಅವು ಅವರ ಚಿಂತನೆ-ಮಂಥನ-ವ್ಯಾಖ್ಯಾನಗಳಿಗೆ ಗ್ರಾಸವಾಗಿದ್ದವುಎಂದರೆ ತಪ್ಪಾಗುವುದಿಲ್ಲ.“ ಭೂಮಿ ಪ್ರತಿಯೊಬ್ಬ ಮಾನವನ ಅವಶ್ಯಕತೆಗಳಿಗೆ ಸಾಕಾಗುವಷ್ಟು ನೀಡುತ್ತದೆ ಆದರೆ ಪ್ರತಿಯೊಬ್ಬನ ದುರಾಸೆಗಲ್ಲ” ಎಂಬ ಅವರ ಹೇಳಿಕೆ ಜನಜನಿತವಾಗಿದೆ. ಗಾಂಧೀಜಿ 1909ರಲ್ಲಿ ಬರೆದ ಹಿಂದ್‌ ಸ್ವರಾಜ್‌ನಲ್ಲಿ ಇತರ ವಿಚಾರಗಳ ಜೊತೆ ಆಧುನಿಕ ಕೈಗಾರಿಕ ಸಮಾಜದಲ್ಲಿ ಮಾನವನಿಂದ ಮಾನವನಿಗೆ ಹಾಗೂ ಮಾನವನಿಂದ ಪ್ರಕೃತಿಗೆ ಹೇಗೆ ಶೋಷಣಾ ಪ್ರಹಾರಗಳು ಜರಗುತ್ತವೆ ಎಂಬ ವಿಷಯದ ಬಗೆಗೆ ಅವರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದರು.  ಅವರ ಪರಿಸರವಾದ ಹೆಚ್ಚಾಗಿ ರೈತ, ಬುಡಕಟ್ಟು ಸಮುದಾಯಗಳ ಪರಿಸರಪದ್ಧತಿಗಳನ್ನು ಅವಲಂಬಿಸಿದ್ದವು ಎಂದು ವಿಶೇಷಜ್ಞರು ಗುರುತಿಸುತ್ತಾರೆ.

ಗಾಂಧೀಜಿಯವರು ಪರಿಸರವಾದ, ಅಭಿವೃದ್ಧಿ ಮುಂತಾದ ಪದಗಳನ್ನು ಬಳಸಲಿಲ್ಲ.  ಅವರು ಜೀವನವನ್ನು ನಡೆಸಿದ ಕಾಲದಲ್ಲಿ ಪರಿಸರವಾದ ಎಂಬುದು ಅಷ್ಟಾಗಿ ಜನತೆಯ ಸಂಕಥನದ ಭಾಗವಾಗಿರಲಿಲ್ಲ.  ಆಧುನಿಕ ಕೈಗಾರಿಕಾ ನಾಗರಿಕತೆಯನ್ನು ಅವರು “ ಏಳು ದಿನಗಳ ಬೆರಗು “ ಎಂದು ಬಣ್ಣಿಸಿದ್ದರು! ಈ ವರ್ಣನೆಯಲ್ಲಿ ಒಂದು ಮುನ್ನೋಟ ಹಾಗೂ ಎಚ್ಚರಿಕೆಯಿತ್ತು.  ಅಂದರೆ ನಾವು ಪ್ರಸ್ತುತ ಎದುರಿಸುತ್ತಿರುವ ಪರಿಸರ ಸಂಬಂಧಿತ ಜ್ಚಲಂತ ಸಮಸ್ಯೆಗಳು ಅವರ ಮುಂಗಾಣ್ಕೆಯ ಭಾಗವಾಗಿತ್ತು ಎಂದು ಗುರುತಿಸಬಹುದು.  ಅವರು ಪ್ರತಿಪಾದಿಸಿದ, ಒತ್ತುನೀಡಿದ ಮತ್ತು ಸಾರಿದ, ಬಾಳಿನಲ್ಲಿ ಬೇಕುಗಳ ಮಿತಿ ಮಾದರಿಯನ್ನು ಅಳವಡಿಸುಕೊಳ್ಳುವುದರ ಹಿನ್ನೆಲೆಯಲ್ಲಿ ಪರಿಸರಪ್ರಜ್ಞೆ ಕೂಡ ಕೆಲಸ ಮಾಡಿತ್ತು.  ಪ್ರಸ್ತುತ ಕಾಲಘಟ್ಟದ ಪರಿಭಾಷೆಯಲ್ಲಿ ಹೇಳುವುದಾದರೆ, ಸರಳ ಬಾಳ್ವೆಯಿಂದ ಕಡಿಮೆ Carbon Footprintsಗಳು ಮೂಡುತ್ತವೆ ಎನ್ನಬಹುದು.  ಗಾಂಧೀಜಿಯವರ ಈ ವಾದ ಆಧುನಿಕ ನಾಗರಿಕತೆ ಒತ್ತಾಸೆ ನೀಡುವ ಭೌತಿಕ ಕಲ್ಯಾಣ(Material Welfare) ಮತ್ತು ಲಾಭ/ಅತಿಲಾಭದ ಉದ್ದೇಶದ ವಿರುದ್ಧವಾಗಿತ್ತು.  ಹೀಗೆಂದಾಕ್ಷಣ ಅವರು ಜನತೆಯ ಕಲ್ಯಾಣ ಅಥವಾ ಪ್ರಗತಿಯ ನೀತಿ-ಪ್ರಕ್ರಿಯೆಗಳ ವಿರುದ್ಧವಿದ್ದರು ಎಂದು ಭಾವಿಸಬೇಕಿಲ್ಲ. 

ನಮ್ಮ ದೇಶದ ಪರಿಸರ ಚಳವಳಿಗಳ ಮೇಲೆ ಗಾಂಧೀಜಿಯವರ ಅಲೋಚನೆಗಳು ಹಾಗೂ ವಿಚಾರಧಾರೆ ಪ್ರಭಾವವನ್ನು ಬೀರಿದೆ.  1970ರ ದಶಕದಲ್ಲಿ ಜರುಗಿದ,  ಏಷ್ಯಾದಲ್ಲೇ ದೊಡ್ಡ ಪರಿಸರ ಚಳವಳಿ ಎನ್ನಲಾಗುವ ಚಿಪ್ಕೊ, ನರ್ಮದಾ ಬಚಾವ್‌ ಆಂದೋಲನ, ಕರ್ನಾಟಕದ ಅಪ್ಪಿಕೊ ಮುಂತಾದ ಅನೇಕ ಚಳವಳಿಗಳಿಗೆ ಗಾಂಧೀವಾದ ದೊಡ್ಡ ಪ್ರೇರಕ ಶಕ್ತಿಯಾಗಿತ್ತು.  ಭಾರತದ ಪರಿಸರವಾದಿಗಳು ಮತ್ತು ಪರಿಸರವಾದದ ಇತಿಹಾಸಜ್ಞರಾದ ಮಾಧವ್‌ ಗಾಡ್ಗಿಲ್‌, ವಂದನಾ ಶಿವಾ, ಅನಿಲ್‌ ಅಗರ್‌ವಾಲ್, ರಾಮಚಂದ್ರ ಗುಹಾ, ಮೇಧಾ ಪಾಟ್ಕರ್‌, ದಿವಂಗತ ಸುಂದರಲಾಲ್‌ ಬಹುಗುಣ ಮುಂತಾದವರು ತಮ್ಮ ಮೇಲೆ ಗಾಂದೀಜಿಯವರ ಚಿಂತನೆಗಳು ಪ್ರಭಾವವನ್ನು ಬೀರಿರುವುದಾಗಿ ಹೇಳಿದ್ದಾರೆ. ಹಾಗೆಯೇ ಜರ್ಮನಿಯಲ್ಲಿ ಜನಿಸಿದ, ಇಂಗ್ಲೆಂಡಿನ ಅರ್ಥಶಾಸ್ತ್ರಜ್ಞರಾಗಿದ್ದ ಇ ಎಫ್‌ ಶುಮೇಕರ್(ಇವರ ಸಣ್ಣ ಪುಸ್ತಕ Small is beautiful ತುಂಬ ಹೆಸರುವಾಸಿಯಾಗಿದೆ), ನಾರ್ವೆ ದೇಶದ ತತ್ವಶಾಸ್ತ್ರಜ್ಞರಾಗಿದ್ದ ಆರ್ನಿ ನ್ಯಾಸ್(ಇವರು Biospherical Egalitarianism ಎಂಬ ಪರಿಸರವಾದಿ ತತ್ವವನ್ನು ಪ್ರತಿಪಾದಿಸಿದ್ದರು) ಮತ್ತು  ಅನೇಕ ದೇಶಗಳ ವಿಶೇಷಜ್ಞರು  ಗಾಂಧೀಜಿಯವರ ವಿಚಾರಲಹರಿಗಳಿಂದ ಪ್ರೇರೇಪಿತಗೊಂಡಿದ್ದರು.

ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಗಾತ್ರದ ಮೂಲಭೂತ ವ್ಯವಸ್ಥೆಯನ್ನು ನಿರ್ಮಿಸಲಾಗುತ್ತದೆ ಎಂಬ ಗ್ರೇಟ್‌ ನಿಕೋಬಾರ್‌ ದ್ವೀಪ ಅಭಿವೃದ್ಧಿ ಯೋಜನೆ ಸುದ್ದಿ ಮಾಡುತ್ತಿದೆ.  ನೀತಿ ಆಯೋಗ ಮಾರ್ಚ್‌ 2021ರಲ್ಲಿ ಈ ಯೋಜನೆಯನ್ನು ಮಂಡಿಸಿತು.  ಇದನ್ನು Holistic Devolopment ಎಂದು ಅಧಿಕೃತವಾಗಿ ಕರೆಯಲಾಗಿದೆ.  ಒಂದು ಅಂದಾಜಿನಂತೆ ಅಲ್ಲಿ ರೂ 72000 ಕೋಟಿ ವೆಚ್ಚ ಮಾಡಿ ಒಂದು ಅಂತಾರಾಷ್ಟ್ರೀಯ ಟ್ರ್ಯಾನ್ಸ್‌ಶಿಪ್‌ಮೆಂಟ್ ಟರ್ಮಿನಲ್‌, ಒಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ( ಮಿಲಿಟರಿ ಮತ್ತು ನಾಗರಿಕರು ಬಳಸಬಹುದಾದ), ಒಂದು ಪವರ್‌ ಪ್ಲ್ಯಾಂಟ್‌ ಮತ್ತು 3,00,000 ಜನ ವಾಸಮಾಡಬಹುದಾದ(ಪ್ರಸ್ತುತ ಅಲ್ಲಿ ಸುಮಾರು 8000 ಮಂದಿ ಇದ್ದಾರೆ) ಒಂದು ಟೌನ್‌ಶಿಪ್ ಅಸ್ತಿತ್ವಕ್ಕೆ ಬರಲಿವೆ.. ಒಂದು ಅಂದಾಜಿನಂತೆ ಸುಮಾರು 9.6 ಲಕ್ಷ ಮರಗಳು ನಾಶವಾಗಲಿವೆ.  ಸುಮಾರು 244 ಚದುರ ಕಿಮಿ ಕಾಡನ್ನು ಕ್ಲಿಯರ್‌ ಮಾಡಬೇಕಾಗುತ್ತದೆ. ಈ ಯೋಜನೆಗೆ ಸಂಬಂಧಿಸಿದಂತೆ ಪರಿಸರವಾದಿಗಳು ಅನೇಕ ಗಂಭೀರ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.  ಇಂತಹ ಅನೇಕ ದೊಡ್ಡ ಯೋಜನೆಗಳಿಂದ ಪರಿಸರ ಎಷ್ಟು ನಾಶವಾಗುತ್ತಿದೆ ಎಂಬುದು ನಮ್ಮ ಮುಂದಿರುವ ಯಕ್ಷ ಪ್ರಶ್ನೆ.

-ಮ ಶ್ರೀ ಮುರಳಿ ಕೃಷ್ಣ

Related Articles

ಇತ್ತೀಚಿನ ಸುದ್ದಿಗಳು

You cannot copy content of this page