Home ದೇಶ ಮಕ್ಕಳ ಕೈಗೆ ಫೋನ್‌ ಕೊಡಬೇಡಿ | ಹೆಚ್ಚಿನ ಬಳಕೆಯಿಂದ ಮಾನಸಿಕ ಅನಾರೋಗ್ಯ, ಬೊಜ್ಜು, ನಿರಾಶೆ ಮತ್ತು...

ಮಕ್ಕಳ ಕೈಗೆ ಫೋನ್‌ ಕೊಡಬೇಡಿ | ಹೆಚ್ಚಿನ ಬಳಕೆಯಿಂದ ಮಾನಸಿಕ ಅನಾರೋಗ್ಯ, ಬೊಜ್ಜು, ನಿರಾಶೆ ಮತ್ತು ನಿದ್ರಾಹೀನತೆಯ ಅಪಾಯ: ಸ್ಕ್ರೀನ್ ಬಳಕೆ ಕಡಿಮೆಗೊಳಿಸಲು ತಜ್ಞರ ಸಲಹೆ

0

ಅನ್ನ, ನೀರು, ಬಟ್ಟೆ ಇವು ಮನುಷ್ಯನ ಪ್ರಾಥಮಿಕ ಅಗತ್ಯಗಳು. ಈಗ ಇವುಗಳ ಸಾಲಿಗೆ ಸ್ಮಾರ್ಟ್‌ಫೋನ್ ಕೂಡ ಸೇರಿಕೊಂಡಿದೆ. ಈ ಉಪಕರಣವಿಲ್ಲದೆ ಜೀವನವೇ ಇಲ್ಲ ಎನ್ನುವಷ್ಟು ಪರಿಸ್ಥಿತಿ ಬಂದಿದೆ. ಹದಿಹರೆಯಕ್ಕೆ ಬರುವ ಮೊದಲೇ ಮಕ್ಕಳ ಬಳಿ ಸ್ಮಾರ್ಟ್‌ಫೋನ್‌ಗಳು ಇರುವುದು ಇಂದಿಗೆ ಉತ್ಪ್ರೇಕ್ಷೆಯಲ್ಲ.

12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸ್ಮಾರ್ಟ್‌ಫೋನ್ ಹೊಂದುವುದು ಹಾನಿಕರ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಸಣ್ಣ ಮಕ್ಕಳು ಅಳುವುದನ್ನು ತಡೆಯಲು ಪೋಷಕರು ಅವರಿಗೆ ಸ್ಮಾರ್ಟ್‌ಫೋನ್‌ಗಳಲ್ಲಿ ವಿಡಿಯೋಗಳನ್ನು ತೋರಿಸುತ್ತಿದ್ದಾರೆ. ಮಕ್ಕಳು ನಡೆಯಲು ಪ್ರಾರಂಭಿಸಿದಾಗಿನಿಂದಲೇ ಅವರಿಗೆ ಮೊಬೈಲ್ ಫೋನ್‌ಗಳನ್ನು ಅಭ್ಯಾಸ ಮಾಡಿಸುತ್ತಿದ್ದಾರೆ.

“ಫೋನ್ ಕೊಟ್ಟರೆ ಸಾಕು, ಸ್ಕ್ರೀನ್ ಸ್ಕ್ರೋಲ್ ಮಾಡುತ್ತಾ ಒಂದು ಮೂಲೆಯಲ್ಲಿ ಕೂರುತ್ತಾರೆ. ಅವರಿಂದ ಯಾವುದೇ ತೊಂದರೆ ಇರುವುದಿಲ್ಲ” ಎಂದುಕೊಂಡು ಪೋಷಕರೇ ಮಕ್ಕಳನ್ನು ಫೋನಿಗೆ ದಾಸರನ್ನಾಗಿ ಮಾಡುತ್ತಿದ್ದಾರೆ. ಮಕ್ಕಳು ಶಿಕ್ಷಣ ಮತ್ತು ಜ್ಞಾನಕ್ಕಾಗಿ ಸ್ಮಾರ್ಟ್‌ಫೋನ್‌ಗಳಲ್ಲಿ ಕಳೆಯುವ ಸಮಯ ಅತ್ಯಲ್ಪವಾಗಿದ್ದರೆ, ವಿಡಿಯೋ ಗೇಮ್ಸ್, ರೀಲ್ಸ್ ಮತ್ತು ಚಾಟಿಂಗ್‌ಗಾಗಿ ಕಳೆಯುವ ಸಮಯ ದೊಡ್ಡದು.

ಆದರೆ ಮಕ್ಕಳಿಗೆ ಸ್ಮಾರ್ಟ್‌ಫೋನ್‌ಗಳನ್ನು ನೀಡುವುದು ನೇರವಾಗಿ ಅನಾರೋಗ್ಯವನ್ನು ಆಹ್ವಾನಿಸಿದಂತೆ ಎಂದು ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ. ‘ಪೀಡಿಯಾಟ್ರಿಕ್ಸ್ ಜರ್ನಲ್’ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, 12 ವರ್ಷದೊಳಗಿನ ಮಕ್ಕಳು ಸ್ಮಾರ್ಟ್‌ಫೋನ್ ಹೊಂದುವುದರಿಂದ ಮಾನಸಿಕ ಅನಾರೋಗ್ಯ ಸಮಸ್ಯೆಗಳು ಮತ್ತು ಬೊಜ್ಜು ಬರುವ ಅಪಾಯ ಹೆಚ್ಚಾಗಿರುತ್ತದೆ ಎಂದು ತಿಳಿದುಬಂದಿದೆ. ಅಲ್ಲದೆ, ಇತರ ಮಕ್ಕಳೊಂದಿಗೆ ಹೋಲಿಸಿದರೆ ಸ್ಮಾರ್ಟ್‌ಫೋನ್‌ಗಳನ್ನು ಹೊಂದಿರುವ ಮಕ್ಕಳಲ್ಲಿ ನಿರಾಶೆ ಮತ್ತು ನಿದ್ರಾಹೀನತೆಯಂತಹ ಸಮಸ್ಯೆಗಳು ಹೆಚ್ಚಾಗಿ ಕಂಡುಬಂದಿವೆ.

ಈ ವಿಶ್ಲೇಷಣೆಯನ್ನು ಚಿಲ್ಡ್ರನ್ಸ್ ಹಾಸ್ಪಿಟಲ್ ಆಫ್ ಫಿಲಡೆಲ್ಫಿಯಾ, ಬರ್ಕ್ಲಿಯ ಕ್ಯಾನಿಫೋರ್ನಿಯಾ ವಿಶ್ವವಿದ್ಯಾಲಯ ಮತ್ತು ಕೊಲಂಬಿಯಾ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ್ದಾರೆ. ಯುಎಸ್‌ನಲ್ಲಿ 2018 ರಿಂದ 2020 ರ ನಡುವೆ ನಡೆದ ‘ಅಡಾಲೆಸೆಂಟ್ ಬ್ರೈನ್ ಕಾಗ್ನಿಟಿವ್ ಡೆವಲಪ್‌ಮೆಂಟ್’ (ABCD) ಅಧ್ಯಯನದ ದತ್ತಾಂಶವನ್ನು ಇದಕ್ಕಾಗಿ ಬಳಸಿಕೊಳ್ಳಲಾಗಿದೆ. ಈ ಅಧ್ಯಯನದಲ್ಲಿ 10,588 ಕೌಮಾರದ ಮಕ್ಕಳು ಭಾಗವಹಿಸಿದ್ದರು.

ABCD ಅಧ್ಯಯನದಲ್ಲಿ ಭಾಗವಹಿಸಿದವರಲ್ಲಿ 63.6% ಜನರು ಸ್ಮಾರ್ಟ್‌ಫೋನ್‌ಗಳನ್ನು ಹೊಂದಿದ್ದರು ಮತ್ತು ಅವರು ಸರಾಸರಿ 11ನೇ ವಯಸ್ಸಿನಲ್ಲಿ ಈ ಉಪಕರಣವನ್ನು ಪಡೆದಿದ್ದರು. ಸ್ಮಾರ್ಟ್‌ಫೋನ್ ಹೊಂದಿರುವ ಚಿಕ್ಕ ಮಕ್ಕಳಲ್ಲಿ ನಿದ್ರಾಹೀನತೆ ಮತ್ತು ಬೊಜ್ಜಿನಂತಹ ಅಪಾಯಗಳು ವಯಸ್ಕರಿಗಿಂತ ಹೆಚ್ಚಾಗಿರುತ್ತವೆ ಎಂದು ಸಂಶೋಧಕರು ನಿರ್ಧರಿಸಿದ್ದಾರೆ.

12 ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿ ಸ್ಮಾರ್ಟ್‌ಫೋನ್ ಪಡೆದ ಮಕ್ಕಳಲ್ಲಿ, ಆರೋಗ್ಯದ ಫಲಿತಾಂಶಗಳು ಇನ್ನಷ್ಟು ಹದಗೆಡುತ್ತವೆ ಎಂದು ತಿಳಿದುಬಂದಿದೆ. ಸ್ಮಾರ್ಟ್‌ಫೋನ್‌ಗಳು ಇಲ್ಲದ ಮಕ್ಕಳನ್ನು ಮತ್ತು ಅವುಗಳನ್ನು ಹೊಂದಿರುವ ಮಕ್ಕಳನ್ನು ಈ ಅಧ್ಯಯನವು ಹೋಲಿಸಿದೆ.

ಒಂದು ವರ್ಷದ ನಂತರ ಸ್ಮಾರ್ಟ್‌ಫೋನ್‌ ಇಲ್ಲದವರು, ಅವುಗಳನ್ನು ಹೊಂದಿರುವವರಿಗಿಂತ ಉತ್ತಮ ಮಾನಸಿಕ ಆರೋಗ್ಯವನ್ನು ಹೊಂದಿದ್ದಾರೆ ಎಂದು ಸಂಶೋಧಕರು ಹೇಳಿದ್ದಾರೆ. ಟ್ಯಾಬ್ಲೆಟ್ ಪಿಸಿ ಅಥವಾ ಐಪ್ಯಾಡ್‌ ರೀತಿಯ ಇತರ ಸಾಧನಗಳನ್ನು ಬಳಸಿದರೂ ಸಹ ಇದೇ ರೀತಿಯ ಫಲಿತಾಂಶಗಳು ಕಂಡುಬರುತ್ತವೆ ಎಂದು ಅವರು ತಿಳಿಸಿದ್ದಾರೆ.

ಸ್ಮಾರ್ಟ್‌ಫೋನ್‌ಗಳು ಎಲ್ಲಾ ಕೌಮಾರ್ಯದ ವಯಸ್ಸಿನ ಮಕ್ಕಳ ಆರೋಗ್ಯಕ್ಕೆ ಹಾನಿಕರ ಎಂದು ನಾವು ಹೇಳುತ್ತಿಲ್ಲ ಎಂದು ಸಂಶೋಧಕರು ಸ್ಪಷ್ಟಪಡಿಸಿದ್ದಾರೆ. ಆದರೆ ಅಧಿಕ ಸ್ಕ್ರೀನ್ ಬಳಕೆಯಿಂದ ತಲೆದೂರುವ ಅನಾರೋಗ್ಯ ಸಮಸ್ಯೆಗಳನ್ನು ಎಚ್ಚರಿಕೆಯಿಂದ ಗಮನಿಸುವಂತೆ ಅವರು ಸಲಹೆ ನೀಡಿದ್ದಾರೆ.

ಮಕ್ಕಳಿಗೆ ಫೋನ್ ನೀಡುವ ಮೊದಲು ಎಷ್ಟು ಸಮಯ ಬಳಸಬೇಕು ಎಂಬ ಬಗ್ಗೆ ಸ್ಪಷ್ಟವಾಗಿ ವಿವರಿಸಬೇಕು. ಬೆಡ್‌ರೂಂ, ಊಟ ಮತ್ತು ಹೋಮ್‌ವರ್ಕ್ ಸಮಯದಲ್ಲಿ ಹೇಗೆ ಬಳಸಬೇಕು ಎಂದು ತಿಳಿಸಬೇಕು.

ಪೋಷಕರು ಮಕ್ಕಳ ಫೋನ್‌ಗಳಲ್ಲಿ ಗೌಪ್ಯತೆ (ಪ್ರೈವಸಿ), ವಿಷಯ (ಕಂಟೆಂಟ್) ಸೆಟ್ಟಿಂಗ್‌ಗಳನ್ನು ಮಾರ್ಪಡಿಸಬೇಕು. ಮಕ್ಕಳು ತಮ್ಮ ಫೋನ್‌ಗಳಲ್ಲಿ ಏನು ಮಾಡುತ್ತಿದ್ದಾರೆ ಎಂಬುದನ್ನು ಮೇಲ್ವಿಚಾರಣೆ ಮಾಡಬೇಕು ಮತ್ತು ಅನುಚಿತವಾದ ವಿಷಯಕ್ಕೆ ಅವರು ಒಡ್ಡಿಕೊಳ್ಳದಂತೆ ಹಾಗೂ ಸ್ಮಾರ್ಟ್‌ಫೋನ್‌ಗಳು ನಿದ್ರೆಗೆ ತೊಂದರೆ ನೀಡದಂತೆ ನೋಡಿಕೊಳ್ಳಬೇಕು ಎಂದು ತಜ್ಞರು ಹೇಳುತ್ತಾರೆ.

ಜಾಗತಿಕ ಅಂಕಿಅಂಶಗಳು

ಪ್ರಪಂಚದಾದ್ಯಂತ 12 ವರ್ಷದೊಳಗಿನ ಮಕ್ಕಳಲ್ಲಿ 71% ಮತ್ತು 10 ವರ್ಷದೊಳಗಿನ ಮಕ್ಕಳಲ್ಲಿ 42% ರಷ್ಟು ಮಕ್ಕಳ ಬಳಿ ಸ್ವಂತ ಸ್ಮಾರ್ಟ್‌ಫೋನ್ ಹೊಂದಿದ್ದಾರೆ.

ಪ್ಯೂ ರಿಸರ್ಚ್ ಪ್ರಕಾರ, 2024ರಲ್ಲಿ 13-17 ವರ್ಷದ ಹದಿಹರೆಯದವರಲ್ಲಿ 95% ಮಕ್ಕಳು ಸ್ಮಾರ್ಟ್‌ಫೋನ್ ಹೊಂದಿದ್ದಾರೆ.

12 ವರ್ಷದೊಳಗಿನವರಲ್ಲಿ 42% ಮಕ್ಕಳು ಪ್ರತಿದಿನ ಸರಾಸರಿ 2-4 ಗಂಟೆಗಳ ಸಮಯವನ್ನು ಡಿಜಿಟಲ್ ಪರದೆಯ ಮುಂದೆ ಕಳೆಯುತ್ತಾರೆ.

You cannot copy content of this page

Exit mobile version