ದೆಹಲಿ: ಕೆನಡಾ ವಿಶ್ವವಿದ್ಯಾಲಯಗಳಿಗೆ ಅರ್ಜಿ ಸಲ್ಲಿಸುವ ಭಾರತೀಯ ವಿದ್ಯಾರ್ಥಿಗಳ (Indian Students) ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಇದಕ್ಕೆ ಪ್ರಮುಖ ಕಾರಣ, ಈ ವರ್ಷದ ಚಳಿಗಾಲದಲ್ಲಿ ಸಲ್ಲಿಕೆಯಾದ ಒಟ್ಟು ಅರ್ಜಿಗಳಲ್ಲಿ ಅರ್ಧದಷ್ಟು ವೀಸಾ ತಿರಸ್ಕಾರಕ್ಕೆ ಒಳಗಾಗಿರುವುದು ಎಂದು ತಿಳಿದುಬಂದಿದೆ.
ಈ ಪ್ರವೃತ್ತಿಗೆ ಕೆನಡಾದಲ್ಲಿ ಕಟ್ಟುನಿಟ್ಟಾಗಿ ಜಾರಿಯಾಗುತ್ತಿರುವ ಅಧ್ಯಯನ ಪರವಾನಗಿ (Study Permit) ನೀತಿಯೇ ಕಾರಣ ಎಂದು ಹೇಳಬಹುದು. ಕಡಿಮೆ ಶ್ರೇಯಾಂಕ (Ranking) ಹೊಂದಿರುವ ಕಾಲೇಜುಗಳು ಮತ್ತು ಕಡಿಮೆ ಅವಧಿಯ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸುವ ವಿದೇಶಿ ವಿದ್ಯಾರ್ಥಿಗಳ (ಭಾರತ ಸೇರಿದಂತೆ) ವೀಸಾ ಅರ್ಜಿಗಳಲ್ಲಿ ಶೇಕಡಾ 80 ರಷ್ಟು ತಿರಸ್ಕರಿಸಲ್ಪಡುತ್ತಿವೆ.
ಇದರಿಂದಾಗಿ ಆಯಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ಕಡಿಮೆಯಾಗಿದ್ದು, ಆ ಕಾಲೇಜುಗಳು ಶುಲ್ಕವನ್ನು ಹಿಂದಿರುಗಿಸುವುದು ಅಥವಾ ಮುಂದೂಡಲು ಅವಕಾಶ ನೀಡುತ್ತಿವೆ. ಕೆನಡಾದಲ್ಲಿ ಅಧ್ಯಯನ ಮುಗಿದ ನಂತರ ಉದ್ಯೋಗ ಪಡೆಯುವಲ್ಲಿ ಕಷ್ಟಗಳು ಹೆಚ್ಚಾಗುತ್ತಿವೆ. ಇದು ಕೂಡ ಭಾರತೀಯ ವಿದ್ಯಾರ್ಥಿಗಳ ಅರ್ಜಿಗಳು ಕಡಿಮೆಯಾಗಲು ಒಂದು ಕಾರಣ ಎಂದು ತಜ್ಞರು ಹೇಳುತ್ತಿದ್ದಾರೆ.
