Friday, August 1, 2025

ಸತ್ಯ | ನ್ಯಾಯ |ಧರ್ಮ

IND vs ENG ಟೆಸ್ಟ್: ಬ್ಯಾಟಿಂಗಿನಲ್ಲಿ ತಡವರಿಸಿದ ಭಾರತ, ಕರುಣ್ ನಾಯರ್ ಆಸರೆ

ಲಂಡನ್: ಇಂಗ್ಲೆಂಡ್ ವಿರುದ್ಧ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಬ್ಯಾಟಿಂಗ್ ಮುಗ್ಗರಿಸಿದೆ. ಮೊದಲ ದಿನದ ಆಟ ಮುಕ್ತಾಯಕ್ಕೆ ಟೀಮ್ ಇಂಡಿಯಾ 6 ವಿಕೆಟ್ ಕಳೆದುಕೊಂಡು ಕೇವಲ 204 ರನ್ ಗಳಿಸಿದೆ.

ಸರಣಿ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಮಧ್ಯಮ ಕ್ರಮಾಂಕದ ಬ್ಯಾಟರ್ ಕರುಣ್ ನಾಯರ್ ಅರ್ಧಶತಕ ಗಳಿಸಿ ಆಸರೆಯಾದರು. ಕರುಣ್ 98 ಎಸೆತಗಳಲ್ಲಿ 52 ರನ್ ಗಳಿಸಿ ಬ್ಯಾಟಿಂಗ್ ಮುಂದುವರೆಸುತ್ತಿದ್ದಾರೆ. ಅವರ ಜೊತೆಗೆ ವಾಷಿಂಗ್ಟನ್ ಸುಂದರ್ (19) ಕ್ರೀಸ್‌ನಲ್ಲಿದ್ದಾರೆ. ಭಾರತದ ಬ್ಯಾಟರ್‌ಗಳಲ್ಲಿ ಆರಂಭಿಕರಾದ ಯಶಸ್ವಿ ಜೈಸ್ವಾಲ್ (2), ಕೆ.ಎಲ್. ರಾಹುಲ್ (14), ರವೀಂದ್ರ ಜಡೇಜಾ (9) ಮತ್ತು ನಾಯಕ ಶುಭ್ಮನ್ ಗಿಲ್ (21) ಸಂಪೂರ್ಣವಾಗಿ ನಿರಾಶೆಗೊಳಿಸಿದರು. ಆದರೆ, ಸಾಯಿ ಸುದರ್ಶನ್ (38) ಉತ್ತಮ ಪ್ರದರ್ಶನ ನೀಡಿದರು. ಇಂಗ್ಲೆಂಡ್ ಬೌಲರ್‌ಗಳಲ್ಲಿ ಜೋಶ್ ಟಂಗ್ ಮತ್ತು ಅಟ್ಕಿನ್ಸನ್ ತಲಾ ಎರಡು ವಿಕೆಟ್ ಪಡೆದರೆ, ಕ್ರಿಸ್ ವೋಕ್ಸ್ ಒಂದು ವಿಕೆಟ್ ಕಿತ್ತರು.

ಟೀಮ್ ಇಂಡಿಯಾದ ಬ್ಯಾಟಿಂಗ್ ವೈಫಲ್ಯಕ್ಕೆ ಪ್ರಮುಖ ಕಾರಣ ಓವಲ್‌ನಲ್ಲಿ ಸುರಿದ ಮಳೆ ಎಂದು ಹೇಳಬಹುದು. ಆಗಾಗ ಮಳೆ ಸುರಿದಿದ್ದರಿಂದ ಮೈದಾನ ತೇವಗೊಂಡಿತ್ತು. ಇದು ಇಂಗ್ಲೆಂಡ್ ಬೌಲರ್‌ಗಳಿಗೆ ವಾತಾವರಣ ಅನುಕೂಲಕರವಾಗಿ ಮಾರ್ಪಟ್ಟಿತು. ಇದರಿಂದಾಗಿ ಇಂಗ್ಲೆಂಡ್ ತಂಡ ಭಾರತದ ಮೇಲೆ ಒತ್ತಡ ಹೇರಿ ಸತತವಾಗಿ ವಿಕೆಟ್ ಪಡೆಯಲು ಸಾಧ್ಯವಾಯಿತು. ಮತ್ತೊಂದೆಡೆ, ನಾಯಕ ಶುಭ್ಮನ್ ಗಿಲ್ ಸತತ ಐದನೇ ಟೆಸ್ಟ್ ಪಂದ್ಯದಲ್ಲೂ ಟಾಸ್ ಸೋತಿದ್ದು, ತಂಡದ ತಂತ್ರಗಳ ಮೇಲೆ ಗಂಭೀರ ಪರಿಣಾಮ ಬೀರಿದೆ. ಎರಡನೇ ದಿನದ ಆಟದಲ್ಲಿ ಭಾರತ ಬ್ಯಾಟಿಂಗ್ ಬಲಪಡಿಸಿದರೆ ಮಾತ್ರ ಪಂದ್ಯದಲ್ಲಿ ಮತ್ತೆ ನಿಲ್ಲಲು ಸಾಧ್ಯ, ಇಲ್ಲದಿದ್ದರೆ ಸರಣಿಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.

ಪಂದ್ಯದ ಇನ್ನಿಂಗ್ಸ್‌ನಲ್ಲಿ ಅನಿರೀಕ್ಷಿತ ಘಟನೆಯೂ ನಡೆಯಿತು. ಮೈದಾನದಲ್ಲಿದ್ದ ಅಂಪೈರ್ ಕುಮಾರ ಧರ್ಮಸೇನ ವರ್ತನೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ. 13ನೇ ಓವರ್‌ನಲ್ಲಿ ಬೌಲರ್ ಜೋಶ್ ಟಂಗ್, ಭಾರತದ ಬ್ಯಾಟರ್ ಸಾಯಿ ಸುದರ್ಶನ್ ಅವರಿಗೆ ಯಾರ್ಕರ್ ಬೌಲ್ ಮಾಡಿದರು. ಅದನ್ನು ಆಡಲು ವಿಫಲರಾದ ಸಾಯಿ ಕೆಳಗೆ ಬಿದ್ದಾಗ, ಚೆಂಡು ಪ್ಯಾಡ್‌ಗೆ ಬಡಿದಿದ್ದರಿಂದ ಟಂಗ್ ಎಲ್‌ಬಿಡಬ್ಲ್ಯೂಗೆ ಮನವಿ ಮಾಡಿದರು. ಇದನ್ನು ಧರ್ಮಸೇನ ತಿರಸ್ಕರಿಸಿದರು, ಆದರೆ ಚೆಂಡು ಬ್ಯಾಟ್‌ಗೆ ತಾಗಿಲ್ಲ ಎಂದು ತಮ್ಮ ಬೆರಳುಗಳಿಂದ ಇಂಗ್ಲೆಂಡ್ ತಂಡಕ್ಕೆ ಸನ್ನೆ ಮಾಡಿದರು. ನಿಯಮಗಳ ಪ್ರಕಾರ, ಡಿಆರ್‌ಎಸ್ ಗಾಗಿ ನೀಡುವ 15 ಸೆಕೆಂಡುಗಳ ಅವಧಿಯಲ್ಲಿ ಅಂಪೈರ್‌ಗಳು ಆಟಗಾರರಿಗೆ ಯಾವುದೇ ರೀತಿಯ ಸುಳಿವು ನೀಡಬಾರದು. ಆದರೆ ಧರ್ಮಸೇನ ಈ ವರ್ತನೆಯಿಂದ ಇಂಗ್ಲೆಂಡ್ ತಂಡಕ್ಕೆ ಪರೋಕ್ಷವಾಗಿ ನೆರವಾದಂತಾಗಿದೆ. ಹೀಗಾಗಿ, ಅಂಪೈರ್ ವರ್ತನೆಗೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page