Home ರಾಜಕೀಯ ಮಳೆಗಾಲದ ಅಧಿವೇಶನದಲ್ಲೇ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗೊಳಿಸಲು ಆಗ್ರಹಿಸಿ ಅಹೋರಾತ್ರಿ ಅನಿರ್ಧಿಷ್ಟಾವಧಿ ಸತ್ಯಾಗ್ರಹ

ಮಳೆಗಾಲದ ಅಧಿವೇಶನದಲ್ಲೇ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗೊಳಿಸಲು ಆಗ್ರಹಿಸಿ ಅಹೋರಾತ್ರಿ ಅನಿರ್ಧಿಷ್ಟಾವಧಿ ಸತ್ಯಾಗ್ರಹ

0

35 ವರ್ಷಗಳ ಒಳ ಮೀಸಲಾತಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮುಖಂಡರುಗಳ ಸಾಮೂಹಿಕ ನಾಯಕತ್ವದಲ್ಲಿ ಅಂತಿಮ ಹೋರಾಟ, ಸರ್ಕಾರಕ್ಕೆ ಎಚ್ಚರಿಕೆ

ಸಾಮಾಜಿಕ ನ್ಯಾಯಕ್ಕಾಗಿ ಒಳ ಮೀಸಲಾತಿ ಜಾರಿಯಾಗಬೇಕೆಂದು 30 ವರ್ಷಗಳಿಗೂ ಅಧಿಕ ಕಾಲದಿಂದ ಪರಿಶಿಷ್ಟ ಜಾತಿಯಲ್ಲಿನ ತಳ ಸಮುದಾಯಗಳು ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿರುವ ಹಿನ್ನೆಲೆಯಲ್ಲಿ ಈ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ನಾಯಕರನ್ನೆಲ್ಲಾ ಒಳಗೊಂಡಂತೆ ಸಾಮೂಹಿಕ ಅನಿರ್ದಿಷ್ಟಾವಧಿ ಸತ್ಯಾಗ್ರಹಕ್ಕೆ ಕರೆ ನೀಡಿ, ಸರ್ಕಾರಕ್ಕೆ ಎಚ್ಚರಿಕೆ ನೀಡಲು ಮುಂದಾಗಿದ್ದಾರೆ.

ಅದರಂತೆ ಮುಖ್ಯಮಂತ್ರಿಗಳಿಗೆ ಬಹಿರಂಗ ಪತ್ರ ಬರೆದಿರುವ ಹೋರಾಟ ಸಮಿತಿ ಈ ರೀತಿಯಾಗಿ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಒಳ ಮೀಸಲಾತಿ ಹೋರಾಟವು ಕೇವಲ ಒಂದು ಜಾತಿಗೆ ಸೀಮಿತವಾದ ಹೋರಾಟವೆಂಬ ಅಪವಾದ ಹುಸಿಯಾಗಿದೆ. 101 ಜಾತಿಗಳು ಹಂಚಿ ತಿನ್ನುವ ಹೋರಾಟವೆಂಬುದು ಜಗಜ್ಜಾಹಿರಾಗಿದೆ. ಅಲ್ಲದೇ ಸಾಮಾಜಿಕ ನ್ಯಾಯವು ಈ ನೆಲದ ಹಕ್ಕಾಗಿದೆ. ಸುಪ್ರೀಂ ಕೋರ್ಟ್‌ ಸಹ 2024ರ ಆಗಸ್ಟ್‌ 1ರಂದು ತೀರ್ಪಿತ್ತು ಒಳ ಮೀಸಲಾತಿ ಜಾರಿ ಮಾಡುವ ಅಧಿಕಾರ ರಾಜ್ಯ ಸರ್ಕಾರಗಳಿಗಿದೆ ಎಂದು ಘೋಷಿಸಿದೆ. 35 ವರ್ಷಗಳ ಒಳಮೀಸಲಾತಿಗಾಗಿ ನಡೆಸಿದ ಹೋರಾಟಕ್ಕೆ ನಾನಾ ಕಾರಣ ಹೇಳುತ್ತಾ ಬಂದ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳು ನೊಂದ ಜನರಿಗೆ ಅನ್ಯಾಯವೆಸಗುತ್ತಾ ಬಂದಿದ್ದಾರೆ. ಈಗ ಕರ್ನಾಟಕ ಸರ್ಕಾರ ನೇಮಿಸಿದ್ದ ಜಸ್ಟಿಸ್‌ ನಾಗಮೋಹನ್‌ ದಾಸ್‌ರವರ ಆಯೋಗವು ವೈಜ್ಞಾನಿಕ ಸಮೀಕ್ಷೆ ನಡೆಸಿ, ಸರ್ವ ದತ್ತಾಂಶಗಳನ್ನು ಒಳಗೊಂಡ ವರದಿಯನ್ನು ಸಲ್ಲಿಸಿದೆ..

ತಮ್ಮ ಸರ್ಕಾರದ ಮಳೆಗಾಲದ ಅಧಿವೇಶನ ಆರಂಭವಾಗಲಿದೆ. ಸದರಿ ಅಧಿವೇಶನದಲ್ಲಿಯೇ ಒಳಮೀಸಲಾತಿ ವಿಚಾರವು ಸರ್ವಪಕ್ಷಗಳ ಸರ್ವಾನುಮತದೊಂದಿಗೆ ಅನುಮೋದನೆಯಾಗಿ ಗೌರವಾನ್ವಿತ ರಾಜ್ಯಪಾಲರ ಅಂಕಿತವಾಗಬಹುದಾದ ಎಲ್ಲಾ ಸಾಧ್ಯತೆಗಳು ಬೆಟ್ಟದಷ್ಟಿವೆ. ಇದರ ಬದಲಿಗೆ ಮತ್ತೊಂದು ಸಂಪುಟ ಉಪಸಮಿತಿಯ ರಚನೆ ಅಥವಾ ತಜ್ಞರ ಸಲಹೆಯ ನೆಪದಲ್ಲಿ ಮತ್ತಷ್ಟು ತಿಂಗಳುಗಳ ಕಾಲ ಮುಂದೂಡುವುದನ್ನು ನಾವು ಒಪ್ಪುವುದಿಲ್ಲ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿವೆ.

ಈಗಾಗಲೇ ಒಳ ಮೀಸಲಾತಿ ಕಾರಣಕ್ಕೆ ನೇಮಕಾತಿಗಳನ್ನು ತಡೆಹಿಡಿದಿರುವುದರಿಂದ ಎಲ್ಲಾ ಸಮುದಾಯದ ಯುವಜನರು ಕಾಯುತ್ತಿದ್ದಾರೆ. ಹಾಗಾಗಿ ಒಳಮೀಸಲಾತಿಯ ತುರ್ತು ಅನುಷ್ಠಾನಕ್ಕೆ ಆಗ್ರಹಿಸಿ ಆಗಸ್ಟ್ 11ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ಧಿಷ್ಟಾವಧಿ ಅಹೋರಾತ್ರಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲು ತೀರ್ಮಾನಿಸಿದ್ದೇವೆ. ಈ ಬಾರಿ ಒಳಮೀಸಲಾತಿ ಜಾರಿಯ ಆದೇಶ ಪ್ರತಿ ಪಡೆದು ನಮ್ಮ ಮನೆಗಳಿಗೆ ಊರುಗಳಿಗೆ ಹಿಂತಿರುಗುವುದಾಗಿ ನಿರ್ಧರಿಸಿದ್ದೇವೆ. ನೀವು ಕೂಡ ಸುಪ್ರೀಂ ಕೋರ್ಟ್‌ ತೀರ್ಪಿನ ಹಿನ್ನಲೆಯಲ್ಲಿ ಒಳ ಮೀಸಲಾತಿ ಜಾರಿ ಮಾಡಿಯೇ ಮಾಡುತ್ತೇನೆ ಎಂದು ಒಳಮೀಸಲಾತಿ ಗ್ಯಾರಂಟಿ ನೀಡಿದ್ದೀರಿ ಮತ್ತು  ಹಲವಾರು ಬಾರಿ ಹೇಳಿದ್ದೀರಿ. ಆಗಸ್ಟ್‌ 16ರಂದು ವಿಶೇಷ ಸಚಿವ ಸಂಪುಟ ಸಭೆ ಕೂಡ ಕರೆದಿದ್ದೀರಿ. ಅಲ್ಲಿಯೇ ಎಲ್ಲ ಅಡ್ಡಿ ಆತಂಕಗಳನ್ನು ನಿವಾರಿಸಿ ಒಳ ಮೀಸಲಾತಿ ಜಾರಿ ತೀರ್ಮಾನ ಘೋಷಿಸುತ್ತೀರಿ ಎಂದು ನಂಬಿದ್ದೇವೆ. ನಿರೀಕ್ಷೆ ಹುಸಿಗೊಳಿಸುವುದಿಲ್ಲ ಎಂಬ ಭರವಸೆಯೊಂದಿಗೆ ಕೆಳಗಿನ ಹಕ್ಕೊತ್ತಾಯಗಳನ್ನು ಮುಂದಿಡುತ್ತಿದ್ದೇವೆ ಎಂದು ಹೋರಾಟ ಸಮಿತಿ ಹೇಳಿದೆ.

ನಿರ್ಣಯಗಳು ಈ ಕೆಳಗಿನಂತಿದೆ
• ಆಗಸ್ಟ್‌ 15 ರ ಸ್ವಾತಂತ್ರ್ಯ ದಿನಾಚರಣೆಯಂದು ಶೋಷಿತ ಸಮುದಾಯಗಳಿಗೆ ಅದರಲ್ಲೂ ಒಳಮೀಸಲಾತಿ ವಿಷಯದಲ್ಲಿ ಇನ್ನೂ ನ್ಯಾಯ ಸಿಗದ ಕಾರಣ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು.
• ಆಗಸ್ಟ್‌ 15ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಒಳಮೀಸಲಾತಿ ಜಾರಿಯಾಗದ ಕಾರಣ ಸ್ವಾತಂತ್ರ್ಯ ಇನ್ನೂ ದಕ್ಕಿಲ್ಲ ಎಂಬ ಪ್ರತಿಭಟನೆಯನ್ನು ನಡೆಸಲಲು ತೀರ್ಮಾನಿಸಲಾಗಿದೆ.
• ಆಗಸ್ಟ್‌ 16ರ ಸಚಿವ ಸಂಪುಟ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಗಳಿಂದ ಒಳಮೀಸಲಾತಿ ಹೋರಾಟಗಾರರೆಲ್ಲರೂ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವುದು.

ಸರ್ಕಾರಕ್ಕೆ ಹಕ್ಕೊತ್ತಾಯಗಳು
• ಜಸ್ಟಿಸ್ ನಾಗಮೋಹನ್ ದಾಸ್‌ರವರ ವರದಿಯನ್ನು ಅಧಿವೇಶನದಲ್ಲಿ ಅಂಗೀಕರಿಸಿ, ಒಳಮೀಸಲಾತಿ ಜಾರಿಗೊಳಿಸಬೇಕು,
• ಮತ್ತೊಂದು ಉಪ ಸಮಿತಿ ರಚಿಸದೇ, ಸಚಿವ ಸಂಪುಟದಲ್ಲಿ ಜಾರಿಗೆ ಒಮ್ಮತದ ನಿರ್ಧಾರ ಕೈಗೊಳ್ಳಬೇಕು.
• ಮುಖ್ಯಮಂತ್ರಿಗಳು ತಾವೇ ನೀಡಿದ್ದ ಒಳಮೀಸಲಾತಿ ಗ್ಯಾರಂಟಿಯನ್ನು ತಮ್ಮ ಪರಮಾಧಿಕಾರ ಬಳಸಿ ಜಾರಿಮಾಡಬೇಕು.
• ಒಳ ಮೀಸಲಾತಿ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಕೈಬಿಡಬೇಕು ಎಂದು ಸಮಿತಿ ಆಗ್ರಹಿಸಿದೆ.

You cannot copy content of this page

Exit mobile version