ಇಂದು ಮಧ್ಯ ರಾತ್ರಿಯಿಂದಲೇ ರಾಜ್ಯದಲ್ಲಿ ಅನಿರ್ದಿಷ್ಟಾವಧಿ ಲಾರಿ ಮುಷ್ಕರ

ಡೀಸೆಲ್, ಟೋಲ್, ಎಫ್.ಸಿ. ಶುಲ್ಕ ಹೆಚ್ಚಳ ಮಾಡಿರುವುದನ್ನು ವಿರೋಧಿಸಿ ಫೆಡರೇಶನ್ ಆಫ್ ಕರ್ನಾಟಕ ಸ್ಟೇಟ್ ಲಾರಿ ಓನರ್ ಅಂಡ್ ಏಜೆಂಟ್ಸ್ ಅಸೋಸಿಯೇಷನ್ ಸೋಮವಾರ ಮಧ್ಯರಾತ್ರಿಯಿಂದ ಮುಷ್ಕರಕ್ಕೆ ಕರೆ ನೀಡಿದೆ. ಜಲ್ಲಿ, ಮರಳು ಸಾಗಣೆ ವಾಹನಗಳು, ಗ್ಯಾಸ್‌ ಟ್ಯಾಂಕ್‌ ಮಾಲೀಕರ ಸಂಘ ಸಹಿತ 69 ಸಂಘಟನೆಗಳು ಮುಷ್ಕರಕ್ಕೆ ಬೆಂಬಲಿಸಿವೆ.

2024ರ ಜೂನ್ ನಲ್ಲಿ ರಾಜ್ಯ ಸರ್ಕಾರ ಪ್ರತಿ ಲೀಟರ್ ಡೀಸೆಲ್ ದರವನ್ನು ಮೂರು ರೂಪಾಯಿ ಹೆಚ್ಚಳ ಮಾಡಿದ್ದು, ಈಗ ಯಾವುದೇ ಮುನ್ಸೂಚನೆ ನೀಡದೆ ಏಪ್ರಿಲ್ 1ರಿಂದ ಏಕಾಏಕಿ ಎರಡು ರೂಪಾಯಿ ದರ ಹೆಚ್ಚಳ ಮಾಡಿ ಲಾರಿ ಉದ್ಯಮದ ಮೇಲೆ ಬರೆ ಎಳೆದಿದೆ ಎಂದು ದೂರಲಾಗಿದೆ.

ರಾಜ್ಯದಲ್ಲಿ ಸುಮಾರು 700 ಗೂಡ್ಸ್‌ ಕಚೇರಿಗಳಿದ್ದು, ಬಂದ್‌ ಆಗಲಿವೆ. ಈ ಬಗ್ಗೆ ಕೈಗಾರಿಕೆ, ಕಾರ್ಖಾನೆ, ಕಂಪನಿಗಳಿಗೆ ಮುಷ್ಕರದ ಬಗ್ಗೆ ಪತ್ರ ಬರೆಯಲಾಗಿದೆ ಎಂದು ಸಂಘದ ಅಧ್ಯಕ್ಷ ಜಿ.ಆರ್‌.ಷಣ್ಮುಖಪ್ಪ ತಿಳಿಸಿದ್ದಾರೆ.

‘ರಾಜ್ಯದಲ್ಲಿ 18 ರಾಜ್ಯ ಹೆದ್ದಾರಿಗಳಲ್ಲಿ ಟೋಲ್‌ ಸಂಗ್ರಹಿಸಲಾಗುತ್ತಿದೆ. ಬೇರೆ ಯಾವ ರಾಜ್ಯದಲ್ಲಿಯೂ ರಾಜ್ಯ ಹೆದ್ದಾರಿಗೆ ಟೋಲ್‌ ಇಲ್ಲ. ರಾಜ್ಯದಲ್ಲಿ ಟೋಲ್‌ ಸಂಗ್ರಹ ಕೈಬಿಡಬೇಕು. ಗಡಿ ಚೆಕ್‌ಪೋಸ್ಟ್‌ಗಳನ್ನು ರದ್ದುಮಾಡಬೇಕು. ವಾಹನಗಳ ಸಾಮರ್ಥ್ಯ ಅರ್ಹತಾ ಪತ್ರ (ಫಿಟ್‌ನೆಸ್‌ ಸರ್ಟಿಫಿಕೆಟ್‌) ನವೀಕರಣಕ್ಕೆ ಶುಲ್ಕವನ್ನು ಹೆಚ್ಚು ಮಾಡಿ ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಅದನ್ನು ರಾಜ್ಯ ಸರ್ಕಾರ ಜಾರಿ ಮಾಡಬಾರದು. ಬೆಂಗಳೂರು ಸೇರಿದಂತೆ ರಾಜ್ಯದ ‍ಪ್ರಮುಖ ನಗರಗಳಿಗೆ ಸರಕು ಸಾಗಣೆ ವಾಹನಗಳ ಪ್ರವೇಶವನ್ನು ನಿಷೇಧಿಸಿರುವುದು, ಕೇವಲ ಐದು ಗಂಟೆ ಅವಕಾಶ ನೀಡಿರುವುದನ್ನು ತೆಗೆದುಹಾಕಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಗಳಾಗಿವೆ’ ಎಂದು ತಿಳಿಸಿದರು.

Related Articles

ಇತ್ತೀಚಿನ ಸುದ್ದಿಗಳು