Home ವಿದೇಶ ವಿಶ್ವಸಂಸ್ಥೆಯ ʼಕದನ ವಿರಾಮʼ ಮತದಾನಕ್ಕೆ ಚಕ್ಕರ್ ಹೊಡೆದ‌ ಭಾರತ!

ವಿಶ್ವಸಂಸ್ಥೆಯ ʼಕದನ ವಿರಾಮʼ ಮತದಾನಕ್ಕೆ ಚಕ್ಕರ್ ಹೊಡೆದ‌ ಭಾರತ!

0

ಬೆಂಗಳೂರು, ಅಕ್ಟೋಬರ್.‌28: ಇಸ್ರೇಲ್‌ನ ಗಾಝಾ ಪಟ್ಟಿಯಲ್ಲಿ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ವಿಸ್ತರಿಸಿರುವ ಇಸ್ರೇಲ್‌ ಸತತವಾಗಿ ವೈಮಾನಿಕ ದಾಳಿಗಳನ್ನು ನಡೆಸುತ್ತಿದೆ. ಅಕ್ಟೋಬರ್ 7 ರಿಂದ ಇಲ್ಲಿಯವರೆಗೆ, ಇಸ್ರೇಲ್ ದಾಳಿಯಲ್ಲಿ 7,326 ಪ್ಯಾಲೆಸ್ಟೀನಿಯಾದವರು ಸಾವನ್ನಪ್ಪಿದ್ದಾರೆ. ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸಬೇಕೆಂಬ ಅಂತರಾಷ್ಟ್ರೀಯ ಸಮುದಾಯದ ಬೇಡಿಕೆಯ ಮಾನವೀಯ ಒಪ್ಪಂದಕ್ಕೆ ಕರೆ ನೀಡುವ ನಿರ್ಣಯಕ್ಕೆ ಭಾರತ ಗೈರುಹಾಜರಾಗಿದೆ.

ಈ ನಿರ್ಣಯವು 120 ಮತಗಳನ್ನು ಗಳಿಸಿದ್ದು, ಇಸ್ರೇಲ್, ಅಮೇರಿಕಾ, ಹಂಗೇರಿ ಮತ್ತು ಐದು ಪೆಸಿಫಿಕ್ ದ್ವೀಪ ರಾಜ್ಯಗಳು ಸೇರಿದಂತೆ ಕೇವಲ 14 ದೇಶಗಳು ವಿರುದ್ಧ ಮತ ಚಲಾಯಿಸಿವೆ. ಶುಕ್ರವಾರ (ಅ.27) ಮಧ್ಯಾಹ್ನ ನ್ಯೂಯಾರ್ಕ್‌ನಲ್ಲಿ ನಡೆದ ಯುಎನ್‌ಜಿಎಯ ತುರ್ತು ಅಧಿವೇಶನದಲ್ಲಿ ಮತದಾನದಿಂದ ದೂರ ಉಳಿದುಕೊಂಡಿರುವ 45 ದೇಶಗಳಲ್ಲಿ ಭಾರತವೂ ಸೇರಿದೆ.

ಎಲ್ಲಾ ಇತರ ಏಳು ರಾಷ್ಟ್ರಗಳು ನಿರ್ಣಯದ ಪರವಾಗಿ ಮತ ಚಲಾಯಿಸುವುದರೊಂದಿಗೆ ದಕ್ಷಿಣ ಏಷ್ಯಾದಲ್ಲಿ ಭಾರತ ಮಾತ್ರ ತನ್ನ ವಿಲಕ್ಷಣ ನಡೆಯನ್ನು ತೋರಿಸಿದೆ.  

ಜೋರ್ಡಾನ್ ಪ್ರಸ್ತಾಪಿಸಿರುವ ಈ ನಿರ್ಣಯವು ಮಾನವೀಯ “ಕದನ ವಿರಾಮ” ಕ್ಕೆ ಕರೆ ನೀಡಿದ್ದು, ಅಂತರರಾಷ್ಟ್ರೀಯ ಮಾನವೀಯ ಕಾನೂನಿಗೆ ಬದ್ಧವಾಗಿರಬೇಕಾದ ಅಗತ್ಯಗಳ ಬಗ್ಗೆ ಒತ್ತಿಹೇಳಿದೆ. ಇದು ಎಲ್ಲಾ ಬಂಧಿತ ನಾಗರಿಕರನ್ನು ಬೇಷರತ್ತಾಗಿ ಬಿಡುಗಡೆ ಮಾಡಲು ಮತ್ತು ಗಾಝಾಕ್ಕೆ ಬೇಕಾದ ಅಗತ್ಯಗಳನ್ನು ಅಡೆತಡೆಯಿಲ್ಲದ ಪೂರೈಸಲು ಒತ್ತಾಯಿಸಿದೆ.

ಈಜಿಪ್ಟ್, ಓಮನ್ ಮತ್ತು ಯುಎಇಯಂತಹ ಪ್ರಮುಖ ದೇಶಗಳು ಸೇರಿದಂತೆ ಅನೇಕ ಅರಬ್ ಮತ್ತು ಇಸ್ಲಾಮಿಕ್ ದೇಶಗಳು ಸೇರಿದಂತೆ, ರಷ್ಯಾ ಕೂಡ ನಿರ್ಣಯವನ್ನು ಅಂಗೀಕರಿಸಿದೆ.

ಹಮಾಸ್ ಅನ್ನು ಖಂಡಿಸುವ ಪಾಶ್ಚಿಮಾತ್ಯ ಪ್ರಣೀತ ಕರಡು ತಿದ್ದುಪಡಿಯ ಮಂಡನೆಯನ್ನು ಬೆಂಬಲಿಸಿ ವಿಫಲವಾದ ದೇಶಗಳಲ್ಲಿ ಭಾರತವೂ ಸೇರಿದೆ.

ಕೆನಡಾ ಪ್ರಸ್ತಾಪಿಸಿರುವ ಈ ತಿದ್ದುಪಡಿಯನ್ನು ಭಾರತ, ಅಮೇರಿಕಾ ದೇಶಗಳು ಬೆಂಬಲಿಸಿದ್ದವು.  ಹಮಾಸ್ ವಿರುದ್ಧ ಮತ್ತು ಅವರ ಒತ್ತೆಯಾಳುಗಳ ಪರವಾಗಿರುವ ಈ ಇಸ್ರೇಲ್‌ ಬೆಂಬಲಿತ ಈ ತಿದ್ದುಪಡಿಗೆ 88 ಬೆಂಬಲಿತ ಮತಗಳು, ವಿರುದ್ಧವಾಗಿ 55 ಮತಗಳು ಬಿದ್ದಿದ್ದವು. 23 ಮತಗಳು ಗೈರು ಹಾಜರಾಗಿದ್ದವು. ಆದರೆ, ಅಗತ್ಯವಾಗಿ ಬೇಕಾದ ಮೂರನೇ ಎರಡರಷ್ಟು ಮತಗಳನ್ನು ಪಡೆದುಕೊಳ್ಳದ ಕಾರಣ ಈ ಕರಡನ್ನು ಅಂಗೀಕರಿಸಲಾಗಿಲ್ಲ. ಮತದಾನದಿಂದ ದೂರವಿರುವ ರಾಷ್ಟ್ರಗಳನ್ನು ಮತದಾನ ಮಾಡದಿರುವಂತೆ ಪರಿಗಣಿಸಲಾಗಿದೆ. ಟುನೀಶಿಯಾ ಹೊರತುಪಡಿಸಿ ಎಲ್ಲಾ ಅರಬ್ ರಾಷ್ಟ್ರಗಳು ಇದನ್ನು ವಿರೋಧಿಸಿದವು.

ವಿಶ್ವಸಂಸ್ಥೆಯ ಭಾರತದ ಉಪ ಖಾಯಂ ಪ್ರತಿನಿಧಿ ಯೋಜನಾ ಪಟೇಲ್, “ಗಾಝಾದಲ್ಲಿ ನಡೆಯುತ್ತಿರುವ ಸಂಘರ್ಷದಲ್ಲಿ ನಡೆದಿರುವ ಸಾವುನೋವುಗಳ ಗಂಭೀರತೆ ಮತ್ತು ಕಾಳಜಿ ನಮಗಿದೆ. ನಾಗರಿಕರು, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು ತಮ್ಮ ಜೀವವನ್ನು ಬಲಿಕೊಡುತ್ತಿದ್ದಾರೆ. ಆದರೆ ಭಾರತವು ತಾನು ಏಕೆ ಇದರಿಂದ ದೂರವಿದೆ ಎಂಬುದನ್ನು ತಿಳಿಸಿಲ್ಲ. ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿ ಮತ್ತು ನಡೆಯುತ್ತಿರುವ ಸಂಘರ್ಷದಲ್ಲಿ ನಾಗರಿಕ ಜೀವಗಳ ನಷ್ಟದ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ ಮತ್ತು ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ದ್ವೇಷ ಮಾನವೀಯ ಬಿಕ್ಕಟ್ಟನ್ನು ಉಲ್ಬಣಗೊಳಿಸುತ್ತದೆ,” ಎಂದು ಹೇಳಿದ್ದಾರೆ.

ದಕ್ಷಿಣ ಏಷ್ಯಾದ ಅಫ್ಘಾನಿಸ್ತಾನ (ಗಣರಾಜ್ಯ), ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ, ಶ್ರೀಲಂಕಾ – ಈ ದೇಶಗಳು ಇಸ್ರೇಲ್-ಗಾಝಾ ಸಂಘರ್ಷದಲ್ಲಿ ನಾಗರಿಕರನ್ನು ರಕ್ಷಿಸಲು ಮತದಾನ ಮಾಡಿವೆ. ದೂರ ಉಳಿದಿರುವುದು ಇರುವುದು ಭಾರತ ಮಾತ್ರ – ಸುಹಾಸಿನಿ ಹೈದರ್‌, ಪತ್ರಕರ್ತೆ

ವಿಚಿತ್ರವೆಂದರೆ, ಹಮಾಸ್‌ ಖಂಡಿಸಿ ಪ್ರಸ್ತಾಪಿಸಿರುವ ತಿದ್ದುಪಡಿಗೆ ಭಾರತ ಬೆಂಬಲ ನೀಡಿದರೂ, ವಿಶ್ವಸಂಸ್ಥೆಯ ಭಾರತದ ಆ ಸಂಘಟನೆಯ ಹೆಸರು ಹೇಳದೆ ಇರಲು ನಿರ್ಧರಿಸಿದೆ.  

ಯೋಜನಾ ಪಟೇಲ್

“ಅಕ್ಟೋಬರ್ 7 ರಂದು ಇಸ್ರೇಲ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗಳು ಆಘಾತಕಾರಿ ಮತ್ತು ಖಂಡನಾರ್ಹ. ನಾವು ಒತ್ತೆಯಾಳುಗಳ ಜೊತೆಯಲ್ಲಿದ್ದೇವೆ. ಅವರನ್ನು ತಕ್ಷಣ ಬಿಡುಗಡೆ ಮಾಡಲು ಕರೆ ನೀಡುತ್ತೇವೆ. ಭಯೋತ್ಪಾದನೆಯು ಮಾರಣಾಂತಿಕ. ಅದಕ್ಕೆ ಯಾವುದೇ ಗಡಿ, ರಾಷ್ಟ್ರೀಯತೆ ಅಥವಾ ಜನಾಂಗವಿಲ್ಲ. ಭಯೋತ್ಪಾದಕ ಕೃತ್ಯಗಳನ್ನು ಯಾವುದೇ ರೀತಿಯಲ್ಲಿ ಸಮರ್ಥಿಸಬಾರದು. ನಾವು ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಂದಾಗೋಣ. ಭಯೋತ್ಪಾದನೆಯ ಬಗ್ಗೆ ಶೂನ್ಯ ಸಹಿಷ್ಣುತೆಯನ್ನು ತೋರಿಸೋಣ.”

UNGA ಗಾಝಾ ರೆಸಲ್ಯೂಷನ್‌ನ ಮತದಾನದ ಪಟ್ಟಿ: ಮತದಾನವೇ ಮಾಡದ ಭಾರತ!

“ಯುನೈಟಿಂಗ್ ಫಾರ್ ಪೀಸ್” ಆದೇಶದ ಅಡಿಯಲ್ಲಿ ಈ ತುರ್ತು ಅಧಿವೇಶನವನ್ನು ಕರೆಯಲಾಗಿತ್ತು. 193-ಸದಸ್ಯಬಲ ಇರುವ ಜನರಲ್ ಅಸೆಂಬ್ಲಿಯು ವಿಶ್ವಸಂಸ್ಥೆಯ ಸೆಕ್ಯುರಿಟಿ ಕೌನ್ಸಿಲ್ ತನ್ನ ಖಾಯಂ ಸದಸ್ಯರು ಚಲಾಯಿಸುವ ವೀಟೋ ಅಧಿಕಾರದಿಂದ ಸಮಸ್ಯೆಯಾದಾಗ ಕ್ರಮ ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ.

ಕಳೆದ ಎರಡು ವಾರಗಳಲ್ಲಿ ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಬಿಕ್ಕಟ್ಟನ್ನು ಪರಿಹರಿಸುವ ಯಾವುದೇ ನಿರ್ಣಯ ಅಂಗೀಕಾರವಾಗದಂತೆ ಮಾಡಲು ಅಮೇರಿಕಾ, ಚೀನಾ ಮತ್ತು ರಷ್ಯಾ ತಮ್ಮ ವೀಟೋ ಅಧಿಕಾರವನ್ನು ಬಳಸಿಕೊಂಡಿವೆ.

ಅಕ್ಟೋಬರ್ 18, ಭದ್ರತಾ ಮಂಡಳಿಯಲ್ಲಿ ಬ್ರೆಜಿಲ್ ಮತ್ತು ಯುಎಇ ಮಂಡಿಸಿದ ಕರಡು ನಿರ್ಣಯವನ್ನು ಅಮೇರಿಕಾ ವೀಟೋ ಮಾಡಿತು. ರಷ್ಯಾದ ಕರಡು ಕೂಡಾ ಅಂಗೀಕಾರವಾಗಲು ಬೇಕಾದ ಒಂಬತ್ತು ಮತಗಳನ್ನು ಪಡೆಯಲು ವಿಫಲವಾಗಿದೆ.

ಒಂದು ವಾರದ ನಂತರ ಅಕ್ಟೋಬರ್ 25 ರಂದು ಚೀನಾ ಮತ್ತು ರಷ್ಯಾ ಅಮೇರಿಕಾ ನೇತೃತ್ವದ ಕರಡು ನಿರ್ಣಯವನ್ನು ವೀಟೋ ಮಾಡಿದಾಗ ಇದೇ ರೀತಿಯ ಸನ್ನಿವೇಶವು ಸಂಭವಿಸಿತು. ತನ್ನ ನಿರ್ಣಯ ಅಂಗೀಕಾರವಾಗಲು ರಷ್ಯಾ ಮಾಡಿದ ಎರಡನೇ ಪ್ರಯತ್ನವೂ ಅಗತ್ಯವಾದ ಮತಗಳು ಬೀಳದೆ ವಿಫಲವಾಯಿತು.  

ಹಮಾಸ್ ಗಾಜಾದಿಂದ ದಕ್ಷಿಣ ಇಸ್ರೇಲ್‌ ಮೇಲೆ ಆಕ್ರಮಣ ಆರಂಭಿಸಿದಾಗ ಪಶ್ಚಿಮ ಏಷ್ಯಾದ ಪ್ರದೇಶದಲ್ಲಿನ ಬಿಕ್ಕಟ್ಟು ಉಲ್ಬಣಗೊಂಡಿತು. ಇದರಿಂದಾಗಿ, 1200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಅನೇಕ ಇಸ್ರೇಲಿ ಸೈನಿಕರನ್ನು ಸೆರೆಹಿಡಿದ ಹಮಾಸ್ 220 ಕ್ಕೂ ಹೆಚ್ಚು ಇಸ್ರೇಲಿ ಮತ್ತು ವಿದೇಶಿ ಪ್ರಜೆಗಳನ್ನು ಅಪಹರಿಸಿ ಗಾಝಾಕ್ಕೆ ಮರಳಿ ಕೊಂಡುಹೋಯಿತು. ಇದು ಅಂತರರಾಷ್ಟ್ರೀಯ ಮಾನವೀಯ ಕಾನೂನಿನ ಉಲ್ಲಂಘನೆಯಾಗಿದೆ.

ಇದಾದ ನಂತರ ಇಸ್ರೇಲ್‌ ಗಾಝಾದ ಮೇಲೆ ಅವ್ಯಾಹತ ವಾಯುದಾಳಿಯನ್ನು ನಡೆಸಲು ಆರಂಭಿಸಿ ನಿನ್ನೆಯ ವರೆಗೆ (ಅ.27) 7,326 ಸಾವು ಸಂಭವಿಸಿದೆ.

ಪ್ಯಾಲೇಸ್ಟಿನಿಯನ್ ಆರೋಗ್ಯ ಸಚಿವಾಲಯದ ಪ್ರಕಾರ, ಇಸ್ರೇಲ್ ಆಹಾರ, ಇಂಧನ, ವಿದ್ಯುತ್, ವೈದ್ಯಕೀಯ ಸರಬರಾಜು ಮತ್ತು ನೀರಿನ ಪೂರೈಕೆಯ ಮೇಲೆ ದಿಗ್ಬಂಧನವನ್ನು ವಿಧಿಸಿದೆ. ಈಜಿಪ್ಟ್‌ನ ಗಡಿಯಲ್ಲಿರುವ ರಫಾ ಕ್ರಾಸಿಂಗ್ ಮೂಲಕ ಬರುತ್ತಿರುವ ಕೆಲವೇ ಕೆಲವು ಟ್ರಕ್‌ಗಳ ಮೂಲಕ ಸಣ್ಣ ಪ್ರಮಾಣದ ಆಹಾರ ಮತ್ತು ವೈದ್ಯಕೀಯ ನೆರವು ಗಾಝಾಕ್ಕೆ ಸಿಗುತ್ತಿದೆ.

ಭಾರತದ ಕಥೆ ಏನು?

ಅಕ್ಟೋಬರ್‌ 7 ರಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಇಸ್ರೇಲ್‌ ಜೊತೆಗೆ ʼನಾವಿದ್ದೇವೆʼ ಎಂದು ಟ್ವೀಟ್‌ ಮಾಡಿದ್ದರು. ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ಫೋನ್ ಕರೆ ಕೂಡಾ ಮಾಡಿದ್ದರು.

ಒಂದು ವಾರದ ನಂತರ, ಪ್ರಧಾನಿ ಮೋದಿ ಗಾಝಾದ ಅಲ್-ಅಹ್ಲಿ ಬ್ಯಾಪ್ಟಿಸ್ಟ್ ಆಸ್ಪತ್ರೆಯ ಮೇಲೆ ಇಸ್ರೇಲ್‌ ನಡೆಸಿದೆ ಎನ್ನಲಾದ ಸ್ಫೋಟದ ನಂತರ ಪ್ಯಾಲೇಸ್ಟಿನಿಯನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರೊಂದಿಗೂ ಮಾತನಾಡಿದ್ದರು. ಸದ್ಯ ಇಬ್ಬುಗೆಯ ಗೊಂದಲ ನೀತಿಯಿಂದ ಬಳಲುತ್ತಿರುವ ಭಾರತ ಈಗ ʼದ್ವಿರಾಷ್ಟ್ರ ಸಿದ್ಧಾಂತʼದ ಮೊರೆ ಹೋಗಿದೆ.  

ಗಾಝಾದ ಅಲ್-ಅಹ್ಲಿ ಬ್ಯಾಪ್ಟಿಸ್ಟ್ ಆಸ್ಪತ್ರೆಯ ಮೇಲೆ ನಡೆದ ವೈಮಾನಿಕ ದಾಳಿಗೆ 400 ಅಧಿಕ ಜನ ಬಲಿಯಾಗಿದ್ದರು. ಈ ದಾಳಿಯನ್ನು ʼನಾವು ಮಾಡಿದ್ದಲ್ಲʼ ಎಂದು ಇಸ್ರೇಲ್‌ ನಿರಾಕರಿಸಿದೆ. ಇದರ ಜೊತೆಗೆ ಪ್ಯಾಲಿಸ್ತೇನಿನ ಹಮಾಸ್‌ ರಾಕೇಟ್‌ ತಪ್ಪಾಗಿ ಉಡಾವಣೆಯಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಿ ಇಸ್ರೇಲ್‌ ವಿಡಿಯೋವೊಂದನ್ನು ಹರಿಯಬಿಟ್ಟಿತ್ತು. ಆದರೆ ಈ ವಿಡಿಯೋವನ್ನು ಡಿಜಿಟಲ್ ಫೋರೆನ್ಸಿಕ್ಸ್ ಮತ್ತು ತಾಂತ್ರಿಕ ವಿಶ್ಲೇಷಣೆ ತಳ್ಳಿಹಾಕಿದೆ.

ಹನನ್ಯಾ ನಫ್ತಾಲಿ ಎಂಬ ಯೂಟ್ಯೂಬರ್‌, ಸೋಷಿಯಲ್‌ ಮಿಡಿಯಾ ಇನ್‌ಫ್ಲೂಯೆನ್ಸರ್‌ ತನ್ನ X ನಲ್ಲಿ (ಟ್ವಿಟರ್)‌ ಒಂದು ಪೋಸ್ಟ್‌ ಮಾಡುತ್ತಾನೆ.

“ಬ್ರೇಕಿಂಗ್: ಇಸ್ರೇಲಿ ವಾಯುಪಡೆಯು ಗಾಝಾದ ಆಸ್ಪತ್ರೆಯೊಳಗೆ ಇದ್ದ ಹಮಾಸ್ ಭಯೋತ್ಪಾದಕ ನೆಲೆಯನ್ನು ಹೊಡೆದು ಹಾಕಿದೆ. ಹಲವಾರು ಉಗ್ರರು ಸತ್ತಿದ್ದಾರೆ. ಹಮಾಸ್ ಆಸ್ಪತ್ರೆಗಳು, ಮಸೀದಿಗಳು, ಶಾಲೆಗಳಿಂದ ರಾಕೆಟ್‌ಗಳನ್ನು ಉಡಾಯಿಸುತ್ತಿದೆ ಮತ್ತು ನಾಗರಿಕರನ್ನು ಮಾನವ ಗುರಾಣಿಯಾಗಿ ಬಳಸುತ್ತಿರುವುದು ಹೃದಯ ವಿದ್ರಾವಕವಾಗಿದೆ.”

ಈ ಪೋಸ್ಟನ್ನು ಈತ ಕೆಲವೇ ನಿಮಿಷಗಳಲ್ಲಿ ಡಿಲಿಟ್‌ ಮಾಡುತ್ತಾನೆ. ಮಾತ್ರವಲ್ಲ, ಇದರ ಸಮರ್ಥನೆಗಾಗಿ ಮತ್ತೆ ಟ್ವೀಟ್‌ ಮಾಡುತ್ತಾನೆ.

 “ನಾನು ಡಿಲಿಟ್‌ ಮಾಡಿದ ಪೋಸ್ಟ್‌ನಲ್ಲಿ ಮಾಹಿತಿಯನ್ನು ತಪ್ಪಾಗಿ ಹಂಚಿಕೊಂಡಿದ್ದೇನೆ. ಈ ದೋಷಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. IDF ಆಸ್ಪತ್ರೆಗಳ ಮೇಲೆ ಬಾಂಬ್ ಹಾಕಿಲ್ಲ……. ಹಮಾಸ್ ನಾಗರಿಕರನ್ನು ಮಾನವ ಗುರಾಣಿಯಾಗಿ ಬಳಸುತ್ತಿದೆ ಎಂದು ತಿಳಿದಿದೆ, ಇದು ಯುದ್ಧ ಅಪರಾಧ ಮತ್ತು ಅಮಾನವೀಯ.”

ಹನನ್ಯಾ ನಫ್ತಾಲಿಯ ಜೊತೆಗೆ ಇಸ್ರೇಲ್‌ ಪ್ರಧಾನಿ ನೇತಾನ್ಯಾಹು ಸಂಬಂಧವನ್ನು ಹೊಂದಿದ್ದು, ಈತ ನೇತನ್ಯಾಹುವಿಗೆ ಐದು ವರ್ಷಗಳ ಕಾಲ ಕೆಲಸ ಮಾಡಿದ್ದ ಎಂದು ತನ್ನ ವೆಬ್‌ಸೈಟ್‌ನಲ್ಲಿ ಬರೆದುಕೊಂಡಿದ್ದಾನೆ. ಇಸ್ರೇಲ್‌ನ ಪ್ರಭಾವಿಯಾದ ಈತನ ಮೊದಲ ಟ್ವೀಟ್‌ ಸತ್ಯವೇ ಆಗಿದ್ದರೆ, ಆಸ್ಪತ್ರೆಯ ಮೇಲೆ ದಾಳಿ ಮಾಡಿದ್ದು ಇಸ್ರೇಲ್?‌

ಇಸ್ರೇಲ್‌ ವ್ಯವಸ್ಥಿತವಾಗಿ ತನ್ನ ಕೃತ್ಯಗಳನ್ನು ಸುಳ್ಳುಗಳ ಮೂಲಕ ಮುಚ್ಚಿಹಾಕಲು ಯತ್ನಿಸುತ್ತಿರುವುದು ಬಯಲಾಗುತ್ತಿದ್ದರೂ, ಭಾರತ ಇಸ್ರೇಲ್‌ ಸರ್ಕಾರದ ಜೊತೆಗೆ ನಡೆದುಕೊಳ್ಳುವ ರೀತಿ ಗೊಂದಲಮಯವಾಗಿದೆ.

ಮೋದಿಯವರು ಕೆಲವು ದಿನಗಳ ಹಿಂದೆ ಜೋರ್ಡಾನ್ ರಾಜ ಅಬ್ದುಲ್ಲಾ ಅವರೊಂದಿಗೆ ಮಾತುಕತೆ ನಡೆಸಿದ್ದರು. ಕದನ ವಿರಾಮಕ್ಕೆ ಕರೆ ನೀಡಿರುವ ಅತಿದೊಡ್ಡ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ. ಆದರೆ ಜೋರ್ಡಾನ್‌ ಪ್ರಸ್ತಾಪಿಸಿರುವ ನಿರ್ಣಯಗಳಿಗೆ ಮತದಾನ ನಡೆಯುವ ಸಂದರ್ಭದಲ್ಲಿ ಭಾರತ ದೂರ ಉಳಿದಿದೆ.

ವಿಶ್ವಸಂಸ್ಥೆಗೆ ಜೋರ್ಡಾನ್‌ನ ಖಾಯಂ ಪ್ರತಿನಿಧಿ ಮಹಮೂದ್ ಡೈಫಲ್ಲಾಹ್ ಹಮೂದ್  ಮಾನವೀಯ ಪರಿಸ್ಥಿತಿಯನ್ನು ತಿಳಿಸುವ ತಮ್ಮ ಕರಡು ನಿರ್ಣಯಕ್ಕೆ ವಿರುದ್ಧವಾಗಿ ಕೆನಡಾದ ತಿದ್ದುಪಡಿಯನ್ನು ತಂದು ಪ್ಯಾಲೇಸ್ಟಿನಿಯನ್ ಜನರ ಮೇಲೆ ಇಸ್ರೇಲ್‌ ನಡೆಸುತ್ತಿರುವ ದೌರ್ಜನ್ಯವನ್ನು ಸೋಪು ಹಾಕಿ ತೊಳೆಯಲು ನಡೆಸುತ್ತಿರುವ ಪಾಶ್ಚಿಮಾತ್ಯ ದೇಶಗಳ ಪ್ರಯತ್ನವನ್ನು ವಿವರಿಸಿದ್ದರು.  

ಕೆನಡಾ ಪ್ರಸ್ತಾಪಿಸಿರುವ ಕರಡು ತಿದ್ದುಪಡಿ

ವಿಶ್ವಸಂಸ್ಥೆಯ ಕೆನಡಾದ ಖಾಯಂ ಪ್ರತಿನಿಧಿ ಬಾಬ್ ರೇ ತನ್ನ ತಿದ್ದುಪಡಿಯಲ್ಲಿ ಹಮಾಸ್ ಅನ್ನು ಹೆಸರಿಸುವುದು “ನ್ಯಾಯಯುತ” ಮತ್ತು “ವಾಸ್ತವ” ಎಂದು ಹೇಳಿ, “ಹೆಸರಿಸಬೇಕಾದ ಹೆಸರನ್ನು ಹೆಸರಿಸಿದ್ದೇವೆ” ಎಂದು ಪ್ರತಿಪಾದಿಸಿದ್ದಾರೆ.

ಈ ಸಂದರ್ಭದಲ್ಲಿ ಈ ತಿದ್ದುಪಡಿಯಲ್ಲಿ ಪ್ರತಿಕಾರವಾಗಿ ನಡೆಸಿದ ವೈಮಾನಿಕ ದಾಳಿಗೆ ಇಸ್ರೇಲನ್ನು ಹೊಣೆ ಮಾಡಿ ಹೆಸರಿಸಬೇಕು ಎಂದು ಪಾಕಿಸ್ತಾನದ ರಾಯಭಾರಿ ಮುನೀರ್‌ ಅಕ್ರಮ್‌ ಸೂಚಿಸಿದರು. “ನೀವು ನ್ಯಾಯಯುತವಾಗಿ ಇರಬೇಕಾದರೆ ಇಸ್ರೇಲ್‌ ಹೆಸರನ್ನೂ ಪ್ರಸ್ತಾಪಿಸಿ” ಎಂದು ಹೇಳಿ, ಮಾನವೀಯ ಬಿಕ್ಕಟ್ಟಿನ ಬಗ್ಗೆ ತೆಗೆದುಕೊಳ್ಳುವ ಯಾವುದೇ ತೀರ್ಮಾಣಗಳಿಗೆ ಯಾವುದೇ ಹೆಸರು ಇಡದಿರುವುದು ಒಳ್ಳೆಯದು ಎಂದಿದ್ದಾರೆ.

ಇಸ್ರೇಲಿ ರಾಯಭಾರಿ ಗಿಲಾಡ್ ಎರ್ಡಾನ್ ವಿಶ್ವಸಂಸ್ಥೆ “ಸ್ವಲ್ಪವೇ ಸ್ವಲ್ಪ ಕಾನೂನುಬದ್ಧತೆಯನ್ನು ಹೊಂದಿಲ್ಲ” ಎಂದು ಹೇಳಿ, “ಹಮಾಸ್ ಅನ್ನು ನಾಶಮಾಡುವ ಏಕೈಕ ಮಾರ್ಗವೆಂದರೆ ಬೇರುಸಹಿತ ಕಿತ್ತೊಗೆಯುವುದು. ನೀವು ಹಮಾಸ್ ಅನ್ನು ಏಕೆ ಹೊಣೆಗಾರರನ್ನಾಗಿ ಮಾಡುತ್ತಿಲ್ಲ,” ಎಂದು ಪ್ರಶ್ನಿಸಿದರು. ಗಾಝಾದಲ್ಲಿ ಸಂಭವಿಸಿರುವ ಹಮಾಸ್‌ ನೀಡಿರುವ ಸಾವಿನ ಅಂಕಿ ಅಂಶಗಳ ಬಗ್ಗೆ ತಕರಾರು ವ್ಯಕ್ತಪಡಿಸಿ, ಅಂತರಾಷ್ಟ್ರೀಯ ಮಾನವೀಯ ಕಾನೂನಿನ ಅನುಸಾರವಾಗಿ ಅಲ್ಲಿ ಯಾವುದೇ ಮಾನವೀಯ ಬಿಕ್ಕಟ್ಟು ಸಂಭವಿಸಿಲ್ಲ ಎಂದು ಹೇಳಿದ್ದಾರೆ.

ಅಮೇರಿಕಾ ಅಧ್ಯಕ್ಷ ಜೋ ಬಿಡನ್‌ ಕೂಡಾ ಗಾಝಾದಲ್ಲಿ ನಡೆದಿರುವ ಸಾವಿನ ಪ್ರಮಾಣವನ್ನು ಅನುಮಾನಿಸಿದ್ದಾರೆ. ಗುರುವಾರ (ಅ.27) , ಪ್ಯಾಲೇಸ್ಟಿನಿಯನ್ ಆರೋಗ್ಯ ಸಚಿವಾಲಯವು ಅಕ್ಟೋಬರ್ 7 ರಂದು ಇಸ್ರೇಲಿ ವೈಮಾನಿಕ ದಾಳಿಗಳು ಪ್ರಾರಂಭವಾದಾಗಿನಿಂದ ಗಾಜಾದಲ್ಲಿ ಕೊಲ್ಲಲ್ಪಟ್ಟ 6,747 ಪ್ಯಾಲೆಸ್ಟೀನಿಯನ್ನರ ಹೆಸರು ಮತ್ತು ವಿವರಗಳನ್ನು ಪ್ರಕಟಿಸಿತು. ಒಟ್ಟು ಕೊಲ್ಲಲ್ಪಟ್ಟ ಮಕ್ಕಳ ಸಂಖ್ಯೆ 2,655!

‘ಭಯೋತ್ಪಾದನೆ ಮತ್ತು ವಿವೇಚನಾರಹಿತ ದಾಳಿಗಳನ್ನು’ ಖಂಡಿಸಿ UNGA ನಿರ್ಣಯ

Protection of civilians and upholding legal and humanitarian obligations” ಎಂಬ ಯುಎನ್‌ಜಿಎ ನಿರ್ಣಯವು “ಎಲ್ಲಾ ಭಯೋತ್ಪಾದನಾ ಕೃತ್ಯಗಳು ಮತ್ತು ವಿವೇಚನಾರಹಿತ ದಾಳಿಗಳು ಸೇರಿದಂತೆ ಪ್ಯಾಲೆಸ್ಟೀನಿಯನ್ ಮತ್ತು ಇಸ್ರೇಲಿ ನಾಗರಿಕರ ವಿರುದ್ಧದ ಎಲ್ಲಾ ಹಿಂಸಾಚಾರಗಳನ್ನು  ಖಂಡಿಸಿದೆ (all acts of violence against Palestinian and Israeli civilians including all acts of terrorism and indiscriminate attacks) ಮತ್ತು ಮಾನವೀಯ ಮತ್ತು ಮಾನವ ಹಕ್ಕುಗಳ ಕಾನೂನುಗಳು, ವಿಶೇಷವಾಗಿ ನಾಗರಿಕರು ಮತ್ತು ನಾಗರಿಕ ವಸ್ತುಗಳ ರಕ್ಷಣೆಗೆ ಸಂಬಂಧಿಸಿದಂತೆ ಎಲ್ಲಾ ಪಕ್ಷಗಳು ತಕ್ಷಣ ಮತ್ತು ಸಂಪೂರ್ಣವಾಗಿ ಅಂತಾರಾಷ್ಟ್ರೀಯ ಬಾಧ್ಯತೆಗಳನ್ನು ಅನುಸರಿಸುತ್ತವೆ,” ಎಂದು ತಿಳಿಸಿದೆ.

ಗಾಯಾಳುಗಳು, ಮಾನವೀಯ ಸೌಲಭ್ಯಗಳು, ಸ್ವತ್ತುಗಳ ರಕ್ಷಣೆ ಮತ್ತು ಗಾಜಾ ಪಟ್ಟಿಯ ಎಲ್ಲಾ ನಾಗರಿಕರಿಗೆ ಅಗತ್ಯವಾಗಿ ಬೇಕಾದ ಸೇವೆಗಳು ತಲುಪಲು ಮಾನವ ಪ್ರವೇಶವನ್ನು ಸಕ್ರಿಯಗೊಳಿಸಲು ಮತ್ತು ಸುಗಮಗೊಳಿಸಲು ಇದು ಒತ್ತಾಯಿಸಿದೆ.

ಇದಲ್ಲದೆ, ಪ್ಯಾಲೇಸ್ಟಿನಿಯನ್ ನಾಗರಿಕರು, ಯುಎನ್ ಸಿಬ್ಬಂದಿ ಮತ್ತು ಮಾನವಸೇವಾ ಸಿಬ್ಬಂದಿಗಳಿಗಾಗಿ ಗಾಜಾ ಪಟ್ಟಿಯಲ್ಲಿರುವ ಎಲ್ಲಾ ಪ್ರದೇಶಗಳನ್ನು ವಾಡಿ ಗಾಜಾದ ಉತ್ತರಕ್ಕೆ ಮತ್ತು ದಕ್ಷಿಣಕ್ಕೆ ಸ್ಥಳಾಂತರಿಸಲು ಇಸ್ರೇಲ್ “ಆಕ್ರಮಣದ” ಆದೇಶವನ್ನು ರದ್ದುಗೊಳಿಸುವಂತೆ ನಿರ್ಣಯವು ಕರೆ ನೀಡಿದೆ.

ಅಂತರಾಷ್ಟ್ರೀಯ ಕಾನೂನಿಗೆ ಅನುಸಾರವಾಗಿ ಅಕ್ರಮವಾಗಿ ಬಂಧಿತರಾಗಿರುವ ನಾಗರಿಕರನ್ನು “ತಕ್ಷಣ ಬಿಡುಗಡೆ” ಮಾಡಲು ಸಾಮಾನ್ಯ ಸಭೆ ತಿಳಿಸಿದೆ.

ವಿಶ್ವಸಂಸ್ಥೆಯ ನಿರ್ಣಯಗಳ ಆಧಾರದ ಮೇಲೆ ಮತ್ತು ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ ʼದ್ವಿರಾಷ್ಟ್ರʼ ಪರಿಹಾರದ ಆಧಾರದ ಮೇಲೆ ಶಾಂತಿಯುತ ವಿಧಾನಗಳಿಂದ ಮಾತ್ರ ಇಸ್ರೇಲಿ-ಪ್ಯಾಲೆಸ್ತೀನ್ ಸಂಘರ್ಷಕ್ಕೆ “ನ್ಯಾಯ ಮತ್ತು ಶಾಶ್ವತ ಪರಿಹಾರ” ವನ್ನು ಕಂಡುಕೊಳ್ಳಲು ಸಾಧ್ಯ ಎಂದು ಪುನರುಚ್ಚರಿಸಿತು.

ಸಭೆಯಲ್ಲಿ ಗೈರು ಹಾಜರಾಗಿದ್ದ ಭಾರತ  “ಭಾರತವು ಯಾವಾಗಲೂ ಇಸ್ರೇಲ್-ಪ್ಯಾಲೆಸ್ಟೈನ್ ಸಮಸ್ಯೆಗೆ ಸಂಧಾನದ ದ್ವಿರಾಷ್ಟ್ರ ಪರಿಹಾರವನ್ನು ಬೆಂಬಲಿಸುತ್ತದೆ, ಇದು ಸಾರ್ವಭೌಮ, ಸ್ವತಂತ್ರ ಪ್ಯಾಲೆಸ್ಟೈನ್ ರಾಜ್ಯವನ್ನು ಸ್ಥಾಪಿಸಲು ಕಾರಣವಾಗುತ್ತದೆ, ಸುರಕ್ಷಿತ ಮತ್ತು ಮಾನ್ಯತೆ ಪಡೆದ ಗಡಿಗಳಲ್ಲಿ ಇಸ್ರೇಲ್‌ನೊಂದಿಗೆ ಶಾಂತಿಯಿಂದ ಅಕ್ಕಪಕ್ಕದಲ್ಲಿಯೇ ವಾಸಿಸಲು ಸಾಧ್ಯವಾಗುತ್ತದೆ. ಇದಕ್ಕಾಗಿ, ಹಿಂಸಾಚಾರವನ್ನು ತ್ಯಜಿಸಿ, ನೇರ ಶಾಂತಿಯ ಮಾತುಕತೆಗಳನ್ನು ಪುನರಾರಂಭಿಸಲು ನಾವು ಒತ್ತಾಯಿಸುತ್ತೇವೆ,” ಎಂದಿದೆ.

UNGA Vote on Israel-Palestine – Explanation of Vote by India https://pminewyork.gov.in/IndiaatUNGA?id=NTA2Mw,,
 

You cannot copy content of this page

Exit mobile version