ಹರ್ಮನ್ಪ್ರೀತ್ ಸಿಂಗ್ ನಾಯಕತ್ವದ ಭಾರತ ಹಾಕಿ ತಂಡವು, ದಕ್ಷಿಣ ಕೊರಿಯಾ ತಂಡವನ್ನು ಭರ್ಜರಿ 4-1 ಗೋಲುಗಳಿಂದ ಸೋಲಿಸಿ ಏಷ್ಯಾ ಕಪ್ ಪ್ರಶಸ್ತಿ ಗೆದ್ದುಕೊಂಡಿದೆ. ಫೈನಲ್ ಪ್ರವೇಶಿಸಿದ್ದ ಭಾರತ ತಂಡ ನಾಲ್ಕನೇ ಬಾರಿಗೆ ಏಷ್ಯಾಕಪ್ ಗೆದ್ದಂತಾಗಿದೆ.
ಸೂಪರ್ 4 ಸುತ್ತಿನಲ್ಲಿ ಇದೇ ದಕ್ಷಿಣ ಕೊರಿಯಾ ವಿರುದ್ಧದ ಪಂದ್ಯವನ್ನು 2-2 ರಿಂದ ಡ್ರಾ ಮಾಡಿಕೊಂಡಿದ್ದ ಭಾರತ ಹಾಕಿ ತಂಡ ಫೈನಲ್ ಪಂದ್ಯದಲ್ಲಿ ದಕ್ಷಿಣ ಕೊರಿಯಾಕ್ಕೆ ಯಾವುದೇ ಅವಕಾಶ ನೀಡದೆ ಏಕಪಕ್ಷೀಯವಾಗಿ ಪಂದ್ಯವನ್ನು ಗೆದ್ದುಕೊಂಡಿತು . ಈ ಗೆಲುವಿನೊಂದಿಗೆ , ಟೀಂ ಇಂಡಿಯಾ ನೆದರ್ಲ್ಯಾಂಡ್ಸ್ ಮತ್ತು ಬೆಲ್ಜಿಯಂನಲ್ಲಿ ನಡೆಯಲಿರುವ 2026 ರ FIH ಪುರುಷರ ವಿಶ್ವಕಪ್‌ಗೆ ಅರ್ಹತೆ ಪಡೆದುಕೊಂಡಿದೆ.
ಪಂದ್ಯದಲ್ಲಿ ಭಾರತ ತಂಡ ಪ್ರಾಬಲ್ಯ ಮೆರೆಯುತ್ತಲೇ ಇತ್ತು ಆದರೆ ಕೊರಿಯಾದ ರಕ್ಷಣಾ ಪಡೆಗಳನ್ನು ಭೇದಿಸುವುದು ಅಷ್ಟು ಸುಲಭವಾಗಿರಲಿಲ್ಲ. ಈ ಕಾರಣದಿಂದಾಗಿ ಮೂರನೇ ಗೋಲು ಬರಲು ಸಾಕಷ್ಟು ಸಮಯ ಹಿಡಿಯಿತು. ಆದರೆ 45 ನೇ ನಿಮಿಷದಲ್ಲಿ ದಿಲ್‌ಪ್ರೀತ್ ಸಿಂಗ್ ವೈಯಕ್ತಿಕವಾಗಿ ಎರಡನೇ ಗೋಲು ಬಾರಿಸಿ ಅಂತರವನ್ನು 3-0 ಗೇರಿಸಿದರು. ಆದರೆ ದಕ್ಷಿಣ ಕೊರಿಯಾ ಪಂದ್ಯದ 57 ನೇ ನಿಮಿಷದಲ್ಲಿ ಗೋಲು ಗಳಿಸಿ ಅಂತರವನ್ನು ಕೊಂಚ ತಗ್ಗಿಸುವ ಕೆಲಸ ಮಾಡಿತು.
ಈ ಟೂರ್ನಿಯಲ್ಲಿ ಅತ್ಯಂತ ಯಶಸ್ವಿ ತಂಡವಾಗಿರುವ ದಕ್ಷಿಣ ಕೊರಿಯಾ 5 ಬಾರಿ ಟ್ರೋಫಿ ಎತ್ತಿ ಹಿಡಿದಿದೆ. ಇದಕ್ಕೂ ಮೊದಲು, ಉಭಯ ದೇಶಗಳ ನಡುವೆ 3 ಫೈನಲ್‌ಗಳು ನಡೆದಿದ್ದು, ಅದರಲ್ಲಿ 2 ರಲ್ಲಿ ದಕ್ಷಿಣ ಕೊರಿಯಾ ಮತ್ತು ಒಂದು ಪಂದ್ಯದಲ್ಲಿ ಭಾರತ ಜಯಗಳಿಸಿದೆ. ಅಷ್ಟೇ ಅಲ್ಲ, ಈ ಪ್ರಶಸ್ತಿ ಗೆಲುವಿನೊಂದಿಗೆ, ಟೀಂ ಇಂಡಿಯಾ ಬೆಲ್ಜಿಯಂ ಮತ್ತು ನೆದರ್‌ಲ್ಯಾಂಡ್ಸ್‌ನಲ್ಲಿ ನಡೆಯಲಿರುವ 2026 ರ ವಿಶ್ವಕಪ್‌ಗೆ ನೇರವಾಗಿ ಅರ್ಹತೆ ಪಡೆದಿದೆ.