Monday, July 28, 2025

ಸತ್ಯ | ನ್ಯಾಯ |ಧರ್ಮ

ಇಂಡಿಯಾ ಮೈತ್ರಿಕೂಟದ ಹೆಸರನ್ನು ʼಔರಂಗಜೇಬ್ ಫ್ಯಾನ್ ಕ್ಲಬ್ʼ ಎಂದು ಬದಲಾಯಿಸಬೇಕು: ಶಿವಸೇನೆ ಸಂಸದ

ದೆಹಲಿ: ಲೋಕಸಭೆಯಲ್ಲಿ ನಿನ್ನೆ ತೀವ್ರ ವಿವಾದವೊಂದಕ್ಕೆ ಸಾಕ್ಷಿಯಾಯಿತು. ಸತ್ತು ಸಮಾಧಿ ಸೇರಿರುವ ಔರಂಗಜೇಬ್‌ ಸಂಸತ್ತನ್ನು ಸುಸೂತ್ರವಾಗಿ ನಡೆಯಲು ಬಿಡುತ್ತಿಲ್ಲ. ಶಿವಸೇನೆಯ ಸಂಸದರು ಔರಂಗಜೇಬನ ಸ್ಮರಣೆಗೆ ತೊಡಗಿದ ಕಾರಣ ಸಂಸತ್‌ ಕೋಲಾಹಲವೆದ್ದ ಕಡಲಾಯಿತು.

ಶಿವಸೇನೆಯ ಸಂಸದ ನರೇಶ್ ಮಾಸ್ಕೆ ವಿರೋಧ ಪಕ್ಷದ ಇಂಡಿಯಾ ಮೈತ್ರಿಕೂಟದ ಸದಸ್ಯರನ್ನು “ಔರಂಗಜೇಬನ ಅಭಿಮಾನಿಗಳು” ಎಂದು ಕರೆದ ಕಾರಣ ಈ ಗದ್ದಲ ಶುರುವಾಯಿತು. ತ್ರಿಭುವನ ಸಹಕಾರಿ ವಿಶ್ವವಿದ್ಯಾಲಯ ಮಸೂದೆ 2025ರ ಬಗ್ಗೆ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಈಕನಾಥ ಶಿಂಧೆ ನೇತೃತ್ವದ ಶಿವಸೇನೆಯ ಪ್ರಮುಖ ನಾಯಕ ಮಾಸ್ಕೆ, ಈ ವಿವಾದಾತ್ಮಕ ಹೇಳಿಕೆ ನೀಡಿದರು.

ಕಾಂಗ್ರೆಸ್ ಮತ್ತು ಶಿವಸೇನೆ (ಯುಬಿಟಿ) ಸೇರಿದಂತೆ ಇಂಡಿಯಾ ಮೈತ್ರಿಕೂಟವು ಔರಂಗಜೇಬನ ಆಡಳಿತದ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ ಎಂದು ಆರೋಪಿಸಿದ ಅವರು, ಮುಘಲ್ ಚಕ್ರವರ್ತಿಯ ಜಿಜಿಯಾ ತೆರಿಗೆಯ ಮೂಲಕ ಹಿಂದೂಗಳನ್ನು ಶೋಷಿಸಿದ ರೀತಿಯನ್ನು ಉಲ್ಲೇಖಿಸಿದರು. ಇದೇ ರೀತಿ ಮಹಾರಾಷ್ಟ್ರದಲ್ಲಿ ಭ್ರಷ್ಟಾಚಾರ ಮತ್ತು ಹಗರಣಗಳ ಮೂಲಕ ರಾಜ್ಯವನ್ನು “ಖಾಲಿ” ಮಾಡಿದ್ದಾರೆ ಎಂದು ಅವರು ಟೀಕಿಸಿದರು.

ಈ ಹೇಳಿಕೆಗೆ ತಕ್ಷಣವೇ ವಿರೋಧ ಪಕ್ಷದ ಸಂಸದರು ಆಕ್ಷೇಪ ವ್ಯಕ್ತಪಡಿಸಿದರು. ಶಿವಸೇನೆ (ಯುಬಿಟಿ) ನಾಯಕ ಅರವಿಂದ್ ಸಾವಂತ್, “ಈ ಚರ್ಚೆಯಲ್ಲಿ ಔರಂಗಜೇಬ್‌ ಹೇಗೆ ಬಂದ?” ಎಂದು ಪ್ರಶ್ನಿಸಿ, ಚರ್ಚೆಯ ವಿಷಯಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಗಮನ ಸೆಳೆದರು.

ಆದರೆ ಮಾಸ್ಕೆ ತಮ್ಮ ನಿಲುವನ್ನು ದೃಢಪಡಿಸಿ, ಇಂಡಿಯಾ ಮೈತ್ರಿಕೂಟವನ್ನು “ಔರಂಗಜೇಬ ಫ್ಯಾನ್ ಕ್ಲಬ್” ಎಂದು ಮರುನಾಮಕರಣ ಮಾಡಬೇಕು ಎಂದು ವ್ಯಂಗ್ಯವಾಡಿದರು. ಮಹಾರಾಷ್ಟ್ರದಲ್ಲಿ ಔರಂಗಜೇಬನೊಂದಿಗಿನ ಐತಿಹಾಸಿಕ ಸಂಘರ್ಷ, ವಿಶೇಷವಾಗಿ ಛತ್ರಪತಿ ಸಂಭಾಜಿ ಮಹಾರಾಜರ ಹತ್ಯೆಗೆ ಸಂಬಂಧಿಸಿದಂತೆ, ವಿರೋಧ ಪಕ್ಷಗಳು ಅವನನ್ನೇ ಆರಾಧಿಸುತ್ತವೆ ಎಂದು ಆರೋಪಿಸಿದರು.

ಮಹಾರಾಷ್ಟ್ರದಲ್ಲಿ ಔರಂಗಜೇಬನನ್ನು ರಾಜಕೀಯವಾಗಿ ಉಪಯೋಗಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಶಿಂಧೆ ನೇತೃತ್ವದ ಶಿವಸೇನೆ ಮತ್ತು ಬಿಜೆಪಿ ಈ ಧೋರಣೆಯನ್ನು ಹಿಂದೂ ರಾಷ್ಟ್ರೀಯತೆಗೆ ಒಲವು ತೋರುವಂತೆ ಬಳಸುತ್ತಿದ್ದರೆ, ವಿರೋಧ ಪಕ್ಷಗಳು ಇದನ್ನು ಧ್ರುವೀಕರಣದ ತಂತ್ರ ಎಂದು ಖಂಡಿಸಿವೆ.

ಮುಂಬರುವ ಸ್ಥಳೀಯ ಚುನಾವಣೆಗಳ ಮುನ್ನೆಲೆಯಲ್ಲಿ ಈ ಘಟನೆ, ಮಹಾಯುತಿ ಒಕ್ಕೂಟ ಮತ್ತು ಇಂಡಿಯಾ ಮೈತ್ರಿಕೂಟದ ನಡುವಿನ ಬಿರುಕನ್ನು ಇನ್ನಷ್ಟು ಆಳಗೊಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page