ಪುಣೆ: ಹಿರಿಯ ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವ್ಹಾಣ್, ಡಿಸೆಂಬರ್ 19ರಂದು ಅಮೇರಿಕಾದ ವಿವಾದಾತ್ಮಕ ಜೆಫ್ರಿ ಎಪ್‌ಸ್ಟೀನ್ ಫೈಲ್ ಬಿಡುಗಡೆಯನ್ನು ಉಲ್ಲೇಖಿಸಿ, ಭಾರತಕ್ಕೆ ಶೀಘ್ರದಲ್ಲೇ ಹೊಸ ಪ್ರಧಾನ ಮಂತ್ರಿ ಸಿಗಬಹುದು ಎಂದು ಹೇಳಿದ್ದಾರೆ.
ಮಹಾರಾಷ್ಟ್ರದಿಂದಲೇ ದೇಶದ ಹೊಸ ಪಿಎಂ ಹೊರಹೊಮ್ಮಬಹುದು ಎಂದೂ ಅವರು ಹೇಳಿದ್ದಾರೆ.
“ಮರಾಠಿ ಮಾಣೂಸ್” (ಮರಾಠಿ ವ್ಯಕ್ತಿ) ಒಬ್ಬರು ಒಂದು ತಿಂಗಳೊಳಗೆ ಭಾರತದ ಪ್ರಧಾನಿಯಾಗಬಹುದು ಎಂದು ಇತ್ತೀಚೆಗೆ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಸುಳಿವು ನೀಡಿದ ನಂತರ, ಶನಿವಾರ ಪಿಂಪ್ರಿ ಚಿಂಚವಾಡ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಚವ್ಹಾಣ್, ಈ ಹೇಳಿಕೆಯ ಕುರಿತು ಸ್ಪಷ್ಟೀಕರಣ ಕೇಳಲು ಹಲವಾರು ಜನರು ತಮ್ಮನ್ನು ಸಂಪರ್ಕಿಸಿದ್ದಾರೆ ಎಂದು ಹೇಳಿದರು.
“ಜಾಗತಿಕ ಮಟ್ಟದಲ್ಲಿ ಹಲವು ಬೆಳವಣಿಗೆಗಳು ನಡೆಯುತ್ತಿವೆ. ನಾನು ಆ ಪೋಸ್ಟ್ ಮಾಡಿದಾಗ, ನಾನು ಏನನ್ನು ಹೇಳಲು ಬಯಸಿದ್ದೇನೆ ಎಂದು ಅನೇಕರು ಕೇಳಿದರು. ನನ್ನ ಹೇಳಿಕೆ ಊಹಾತ್ಮಕ ರಾಜಕೀಯ ಸಾಧ್ಯತೆಯನ್ನು ಆಧರಿಸಿದೆ. ಒಂದು ವೇಳೆ ಮಹಾರಾಷ್ಟ್ರದ ಯಾರಾದರೂ ಪ್ರಧಾನಿಯಾಗಬೇಕಿದ್ದರೆ, ಹಾಲಿ ಪ್ರಧಾನಿ ರಾಜೀನಾಮೆ ನೀಡಬೇಕಾಗುತ್ತದೆ. ನಾನು ಕೇವಲ ಬದಲಾವಣೆಯ ಸಾಧ್ಯತೆಯನ್ನು ಒತ್ತಿ ಹೇಳಿದ್ದೇನೆ” ಎಂದು ಚವ್ಹಾಣ್ ವಿವರಿಸಿದರು.
ಮಾಜಿ ಕೇಂದ್ರ ಸಚಿವರು ತಮ್ಮ ಹೇಳಿಕೆಗಳು ಡಿಸೆಂಬರ್ 19ಕ್ಕೆ ಸಂಬಂಧಿಸಿವೆ ಎಂದು ಹೇಳಿದರು. ಆ ದಿನದಂದು ಯುಎಸ್ ಕಾಂಗ್ರೆಸ್ ಎಪ್‌ಸ್ಟೀನ್ ಫೈಲ್‌ಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ, ಅದು ವ್ಯಾಪಕ ಜಾಗತಿಕ ಪರಿಣಾಮಗಳನ್ನು ಬೀರಬಹುದು ಎಂದು ಅವರು ಹೇಳಿದ್ದಾರೆ.
“ಈ ಫೈಲ್‌ಗಳಲ್ಲಿ ಹಲವಾರು ದೊಡ್ಡ ನಾಯಕರನ್ನು ಒಳಗೊಂಡ ಕುಟುಕು ಕಾರ್ಯಾಚರಣೆಗೆ ಸಂಬಂಧಿಸಿದ ವಿಷಯವಿದೆ ಎಂದು ಹೇಳಲಾಗಿದೆ. ಕೆಲವು ಹೆಸರುಗಳು ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ” ಎಂದು ಅವರು ಹೇಳಿದರು.
ವರದಿಗಾರರೊಂದಿಗೆ ಮಾತನಾಡಿದ ಚವ್ಹಾಣ್, ಕೆಲವು ಮಾಹಿತಿ, ಅಂದರೆ ಫೋಟೋಗಳ ರೂಪದಲ್ಲಿ ಈಗಾಗಲೇ ಬಿಡುಗಡೆಯಾಗಿದೆ ಎಂದು ಹೇಳಿದರು.
