ದೆಹಲಿ: ಕಳೆದ ಒಂದು ದಶಕದಿಂದ ಪೆಟ್ರೋಲ್‌ನಲ್ಲಿ ಇಥನಾಲ್ ಬೆರೆಸುವುದು ಹಾಗೂ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಮೇಲಿನ ಅವಲಂಬನೆಯನ್ನು ತಗ್ಗಿಸುವುದರ ಮೇಲಷ್ಟೇ ಭಾರತ ಗಮನ ಹರಿಸಿತ್ತು. ಆದರೆ ಇಂದು ನೀತಿ ನಿರೂಪಕರು ಕೇವಲ ವಾಹನಗಳ ಇಂಧನ ಅಗತ್ಯಗಳನ್ನು ಮೀರಿದ ಹೆಜ್ಜೆಯನ್ನಿಡಲು ಆಲೋಚಿಸುತ್ತಿದ್ದಾರೆ.
ಅಡುಗೆ ಇಂಧನವಾಗಿ ಇಥನಾಲ್ ಅನ್ನು ವ್ಯಾಪಕವಾಗಿ ಲಭ್ಯವಾಗುವಂತೆ ಮಾಡಲು ಸರ್ಕಾರ ನಿಯಮಾವಳಿಯೊಂದನ್ನು ರೂಪಿಸುತ್ತಿದೆ ಎಂದು ತಿಳಿದುಬಂದಿದೆ. ಇದರ ಭಾಗವಾಗಿ ಗ್ರಾಹಕರು ವಿಶೇಷ ಇಥನಾಲ್ ಎಟಿಎಂಗಳ ಮೂಲಕ ತಮ್ಮ ಅಡುಗೆ ಸ್ಟವ್‌ಗಳಲ್ಲಿ ಬಳಸಲು ಅನುಕೂಲವಾಗುವಂತೆ ಡಬ್ಬಿಗಳಲ್ಲಿ (ಟಿನ್‌ಗಳಲ್ಲಿ) ಇಥನಾಲ್ ಖರೀದಿಸುವ ವ್ಯವಸ್ಥೆಯನ್ನು ಸರ್ಕಾರ ಪರಿಶೀಲಿಸುತ್ತಿದೆ.
ಗ್ರಾಹಕರು ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾದ ಅಡುಗೆ ಸ್ಟವ್‌ಗಳಿಗಾಗಿ ತಮ್ಮ ಕಂಟೇನರ್‌ಗಳಲ್ಲಿ ಇಥನಾಲ್ ತುಂಬಿಸಿಕೊಳ್ಳಬಹುದಾದ ವಿಶೇಷ ವಿತರಣಾ ಕೇಂದ್ರಗಳು ಅಥವಾ ಇಥನಾಲ್ ಎಟಿಎಂಗಳ ಸ್ಥಾಪನೆಯನ್ನು ನೀತಿ ನಿರೂಪಕರು ಪರಿಶೀಲಿಸುತ್ತಿದ್ದಾರೆ. ಇಂತಹ ವ್ಯವಸ್ಥೆಯು ಇಥನಾಲ್‌ಗಾಗಿ ಸಂಪೂರ್ಣ ಹೊಸ ರಿಟೇಲ್ ವ್ಯವಸ್ಥೆಯನ್ನೇ ಸೃಷ್ಟಿಸಲಿದೆ.
ಗೃಹಬಳಕೆಯ ಅಡುಗೆ ಇಂಧನದ ವಿಷಯದಲ್ಲಿ ಭಾರತ ಇಂದಿಗೂ ಎಲ್‌ಪಿಜಿ (LPG) ಮೇಲೆಯೇ ಹೆಚ್ಚಾಗಿ ಅವಲಂಬಿತವಾಗಿದೆ. ದೇಶೀಯ ಉತ್ಪಾದನೆ ಹೆಚ್ಚಿದ್ದರೂ, ಬೇಡಿಕೆಗೆ ತಕ್ಕಂತೆ ಆಮದಿನ ಪ್ರಮಾಣ ಇಂದಿಗೂ ಗಣನೀಯವಾಗಿಯೇ ಮುಂದುವರಿದಿದೆ.
