Home ದೇಶ ಹುಡುಗಿಯರ ಮದುವೆ ವಯಸ್ಸು 21ಕ್ಕೆ ಏರಿಸಲು ಕೇಂದ್ರ ಸರ್ಕಾರದಿಂದ ಚಿಂತನೆ

ಹುಡುಗಿಯರ ಮದುವೆ ವಯಸ್ಸು 21ಕ್ಕೆ ಏರಿಸಲು ಕೇಂದ್ರ ಸರ್ಕಾರದಿಂದ ಚಿಂತನೆ

0

ಭಾರತದಲ್ಲಿ ಮಹಿಳೆಯರ ಸರಾಸರಿ ಮದುವೆ ವಯಸ್ಸು 19.3 ವರ್ಷದಿಂದ 23.1 ವರ್ಷಕ್ಕೆ ಏರಿಕೆಯಾಗಿದೆ ಎಂದು ಸ್ಯಾಂಪಲ್ ರಿಜಿಸ್ಟ್ರೇಷನ್ ಸರ್ವೆ (SRS) ಮತ್ತು ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೆ (NFHS) ವರದಿಗಳು ತಿಳಿಸಿವೆ.

ಪ್ರಸ್ತುತ ದೇಶದ ನಗರ ಪ್ರದೇಶಗಳಲ್ಲಿ ಮಹಿಳೆಯರು ಸರಾಸರಿ 24.4 ರ ಹರೆಯದಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 22.6 ರ ವಯಸ್ಸಿನಲ್ಲಿ ಮದುವೆಯಾಗುತ್ತಿದ್ದಾರೆ ಎಂದು ವರದಿ ಹೇಳಿದೆ. ಮಹಿಳೆಯರ ಕಾನೂನುಬದ್ಧ ಮದುವೆಯ ವಯಸ್ಸನ್ನು 21 ವರ್ಷಕ್ಕೆ ಹೆಚ್ಚಿಸುವ ಸಲುವಾಗಿ ಕೇಂದ್ರ ಸರ್ಕಾರವು 2021 ರಲ್ಲಿಯೇ ಸಂಸತ್ತಿನಲ್ಲಿ ಮಸೂದೆಯೊಂದನ್ನು ಮಂಡಿಸಿತ್ತು. ಆದರೆ ಲೋಕಸಭೆ ವಿಸರ್ಜನೆಯಾದ ಹಿನ್ನೆಲೆಯಲ್ಲಿ ಆ ಮಸೂದೆ ಮುಂದಿನ ಪ್ರಕ್ರಿಯೆಗೆ ಒಳಗಾಗಿರಲಿಲ್ಲ. ಈಗ ಈ ವಿಷಯದ ಕುರಿತು 2027 ರ ಜನಗಣತಿಯ ನಂತರ ಅಂತಿಮ ತೀರ್ಮಾನ ಹೊರಬೀಳುವ ಸಾಧ್ಯತೆಯಿದೆ.

ಮಹಿಳೆಯರ ಮದುವೆ ವಯಸ್ಸು ಹೆಚ್ಚಾಗುತ್ತಿರುವುದರ ಹಿಂದಿನ ಕಾರಣಗಳನ್ನು ಈ ಜನಗಣತಿಯ ಮೂಲಕ ಅಂದಾಜಿಸಲು ಸರ್ಕಾರಕ್ಕೆ ದಾರಿಯಾಗಲಿದೆ. ಉನ್ನತ ಶಿಕ್ಷಣದ ಹಂಬಲ ಮದುವೆಯನ್ನು ವಿಳಂಬ ಮಾಡುತ್ತಿದೆಯೇ, ತಡವಾದ ಮದುವೆಯು ಸಂತಾನೋತ್ಪತ್ತಿ ಸಾಮರ್ಥ್ಯವನ್ನು ಕುಗ್ಗಿಸುತ್ತಿದೆಯೇ, ಮನೆ ವೆಚ್ಚಗಳ ಹೊರೆ, ನಿರುದ್ಯೋಗ ಮತ್ತು ವಲಸೆಯಂತಹ ಅಂಶಗಳು ಇದಕ್ಕೆ ಕಾರಣವಾಗುತ್ತಿವೆಯೇ ಎಂಬ ವಿಷಯಗಳ ಬಗ್ಗೆ ಅಧ್ಯಯನ ನಡೆಸುವುದರಿಂದ ಮಹಿಳೆಯರ ಮದುವೆ ತಡವಾಗಲು ಅಸಲಿ ಕಾರಣಗಳು ತಿಳಿಯಲಿವೆ.

ತಡವಾಗಿ ಮದುವೆಯಾಗುವುದು ಮತ್ತು ಜನನ ಪ್ರಮಾಣ ಕುಸಿಯುತ್ತಿರುವುದು ಸದ್ಯ ಪೂರ್ವ ಏಷ್ಯಾ ದೇಶಗಳ ಮಾದರಿಯಲ್ಲಿದ್ದು, ಭಾರತದಲ್ಲೂ ಈಗ ಇಂತಹದ್ದೇ ಪ್ರವೃತ್ತಿ ಕಂಡುಬರುತ್ತಿದೆ. ಹೀಗಾಗಿ ಜನಸಂಖ್ಯೆ, ಶಿಕ್ಷಣ, ತಾಯಿಯ ಆರೋಗ್ಯ ಮತ್ತು ಉದ್ಯೋಗದಂತಹ ವಿಷಯಗಳಲ್ಲಿ ನೀತಿ ನಿಯಮಗಳ ಬದಲಾವಣೆಯ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮದುವೆ ಮತ್ತು ಸಂತಾನೋತ್ಪತ್ತಿಗೆ ಸಂಬಂಧವಿದೆಯೇ?

ಭಾರತದಲ್ಲಿ ಒಟ್ಟು ಸಂತಾನೋತ್ಪತ್ತಿ ದರವು (TFR) 1.9 ಕ್ಕೆ ಇಳಿಕೆಯಾಗಿದೆ. ಇದರಲ್ಲಿ ನಗರ ಪ್ರದೇಶಗಳಲ್ಲಿ 1.5 ರಷ್ಟಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ 2.1 ರಷ್ಟಿದೆ. ಮಹಿಳೆಯರು ತಡವಾಗಿ ಮದುವೆಯಾಗುವುದರಿಂದ ಅವರ ಸಂತಾನೋತ್ಪತ್ತಿಯ ಅವಧಿ ಕಡಿಮೆಯಾಗಿ, ಆ ಮೂಲಕ ಮಕ್ಕಳ ಜನನ ಪ್ರಮಾಣ ಕುಸಿಯುತ್ತಿದೆ ಎಂದು ತಜ್ಞರು ಹೇಳುತ್ತಿದ್ದಾರೆ.

ದೇಶದಲ್ಲಿ 10ರಿಂದ 14 ವರ್ಷದೊಳಗಿನ ಮಕ್ಕಳ ಜನಸಂಖ್ಯೆಯು ಶೇಕಡಾ 24 ರಷ್ಟು ಕಡಿಮೆಯಾಗಿದೆ. ಆದರೆ ದುಡಿಯುವ ವಯಸ್ಸಿನ ಜನರ (ದುಡಿಯುವ ವರ್ಗ) ಜನಸಂಖ್ಯೆಯು ಶೇಕಡಾ 66.4 ಕ್ಕೆ ಏರಿಕೆಯಾಗಿದೆ. ಪ್ರಸ್ತುತ ದೇಶದ ಒಟ್ಟು ಜನಸಂಖ್ಯೆಯಲ್ಲಿ 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರು ಶೇಕಡಾ 9.7 ರಷ್ಟಿದ್ದಾರೆ.

You cannot copy content of this page

Exit mobile version