ಜ್ಞಾನೇಶ್ ಕುಮಾರ್ ಅಲ್ಲ.. ವ್ಯಾನಿಶ್ ಕುಮಾರ್!: ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ
ಲಿಂಕ್ ನಕಲಿಸಲಾಗಿದೆ ✓
ಕೋಲ್ಕತ್ತಾ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್ – SIR) ಮತ್ತು ಸಾರ್ವತ್ರಿಕ ಚುನಾವಣಾ ಪ್ರಕ್ರಿಯೆಯಲ್ಲಿನ ಗೊಂದಲಗಳ ಕುರಿತು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ವಿರುದ್ಧ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಧಿನೇತ್ರಿ ಮಮತಾ ಬ್ಯಾನರ್ಜಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಲಕ್ಷಾಂತರ ಮತದಾರರ ಹೆಸರುಗಳನ್ನು ಹಾಗೂ ಜನರ ಹಕ್ಕುಗಳನ್ನು ಪಟ್ಟಿಯಿಂದ ಮಾಯ ಮಾಡುತ್ತಿರುವ ಅವರು “ಜ್ಞಾನೇಶ್ ಕುಮಾರ್ ಅಲ್ಲ, ವ್ಯಾನಿಶ್ ಕುಮಾರ್” (ಕಣ್ಮರೆ ಮಾಡುವ ವ್ಯಕ್ತಿ) ಎಂದು ವ್ಯಂಗ್ಯವಾಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಪ್ರಕ್ರಿಯೆಯ ಮೂಲಕ ಟಿಎಂಸಿ ಬೆಂಬಲಿತ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಮತದಾರರ ಹೆಸರುಗಳನ್ನು ವ್ಯವಸ್ಥಿತವಾಗಿ ಕೈಬಿಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. “ನಾವು ಧ್ವನಿ ಎತ್ತುವವರೆಗೂ ಈ ಅಕ್ರಮದ ಕುರಿತು ಯಾರೂ ಮಾತನಾಡಲಿಲ್ಲ. ಮತ ಕಳೆದುಕೊಂಡ ಸಂತ್ರಸ್ತರೊಂದಿಗೆ ಚುನಾವಣಾ ಆಯೋಗವನ್ನು ಭೇಟಿ ಮಾಡಲು ಹೋದಾಗ ಆಯೋಗವು ನಮ್ಮನ್ನು ಅವಮಾನಿಸಿ ಕಳುಹಿಸಿತು” ಎಂದು ಮಮತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎಸ್‌ಐಆರ್ ಪರಿಷ್ಕರಣೆಯ ನಂತರ ಮತದಾರರ ಪಟ್ಟಿಯಿಂದ ಹೆಸರು ಕಳೆದುಕೊಂಡ ನಾಗರಿಕರಿಗೆ ಪಶ್ಚಿಮ ಬಂಗಾಳದಲ್ಲಿ ಪಡಿತರ ಹಾಗೂ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಸೌಲಭ್ಯಗಳೂ ಸಿಗದಂತಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಇದೇ ವೇಳೆ, ಸಂಸತ್ತಿನಿಂದ 147 ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸಿ ಕೇಂದ್ರ ಸರ್ಕಾರವು ಚುನಾವಣಾ ಆಯುಕ್ತರ ಪದಚ್ಯುತಿಗೆ ರಕ್ಷಣೆ ನೀಡುವ ಮಸೂದೆಯನ್ನು ಅವಸರದಲ್ಲಿ ಅಂಗೀಕರಿಸಿಕೊಂಡಿತ್ತು ಎಂದು ಅವರು ನೆನಪಿಸಿದರು.
ಚುನಾವಣಾ ಪ್ರಕ್ರಿಯೆಯನ್ನು ಆಯೋಗದ ಅಧಿಕಾರಿಗಳು ಸಂಪೂರ್ಣವಾಗಿ ಹೈಜಾಕ್ ಮಾಡಿದ್ದು, ಮತದಾನ ಆರಂಭವಾಗುವ ಮೊದಲೇ ಇವಿಎಂಗಳ ಮೂಲಕ ಗೆಲುವನ್ನು ಪೂರ್ವನಿರ್ಧಾರಿತಗೊಳಿಸುವ ಸಂಚು ನಡೆಸಲಾಗಿದೆ ಎಂದು ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ.
Peepal Media
Peepal Media · ದೇಶ ವಿಭಾಗ