Home ಸಿನಿಮಾ ಚಿತ್ರ ವಿಮರ್ಶೆ: ಊದುಬತ್ತಿಯಲ್ಲೇ ಊರಿಗೆ ಬೆಂಕಿ ಹಚ್ಚುವ ಇಂಡಿಯನ್‌ ತಾತ

ಚಿತ್ರ ವಿಮರ್ಶೆ: ಊದುಬತ್ತಿಯಲ್ಲೇ ಊರಿಗೆ ಬೆಂಕಿ ಹಚ್ಚುವ ಇಂಡಿಯನ್‌ ತಾತ

0

ದಕ್ಷಿಣ ಭಾರತದ ಪ್ರಖ್ಯಾತ ಸಿನಿಮಾ ನಿರ್ದೇಶಕ ಎಸ್‌ ಶಂಕರ್‌ ಅವ್ರ ಇಂಡಿಯನ್‌ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ 50 ಕೋಟಿಯನ್ನ ತನ್ನ ಜೇಬಿಗೆ ಇಳಿಸಿದೆ. ವರ್ಷಗಳಿಂದ ಉಳಗನಾಯಗನ್‌ ಕಮಲ್‌ ಹಾಸನ್‌ ಅವ್ರ ಇಂಡಿಯನ್‌ 2 ಸಿನಿಮಾ ಬಗ್ಗೆ ಕಾತುರದಿಂದ ಕಾಯುತ್ತಿದ್ದಂತಹ ಅಭಿಮಾನಿಗಳಿಗೆ ನಿರ್ದೇಶಕ ಶಂಕರ್‌ ಖುಷಿಯನ್ನ ನೀಡಿದ್ದಾರಾ? ಅಥವಾ ನಿರಾಸೆಗೊಳಿಸಿದ್ದಾರ? ಎಂಬುದನ್ನ ಈಗ ನೋಡೋಣ.

ನೀವು ಇಂಡಿಯನ್‌ 2 ಸಿನಿಮಾ ಬಗ್ಗೆ ತಿಳಿಯುವುದಕ್ಕೂ ಮುನ್ನ ಇಂಡಿಯನ್‌ ಸಿನಿಮಾ ಬಗ್ಗೆ ಒಂಚೂರು ಅರ್ಥ ಮಾಡಿಕೊಳ್ಳುವುದು ಉತ್ತಮ. 1996 ರಲ್ಲಿ ತೆರೆಗೆ ಬಂದ ಇಂಡಿಯನ್‌ ಸಿನಿಮಾ ಶಂಕರ್‌ ಅವ್ರ ನಿರ್ದೇಶನದಲ್ಲಿ ಇಂಡಸ್ಟ್ರೀ ಹಿಟ್‌ ಸಿನಿಮಾ ಆಗಿ ಇಡೀ ದೇಶವೇ ದಕ್ಷಿಣ ರಾಜ್ಯಗಳ ಸನಿಮಾ ಬಗ್ಗೆ ತಿಳಿಯುವಂತೆ ಮಾಡಿತ್ತು. ರಿಟೈರ್ಡ್‌ ಆದ ನಮ್ಮ ಇಂಡಿಯನ್‌ ಆರ್ಮಿಯ ಸೇನಾನಿ ದೇಶ ಕಾಯುವುದರ ನಂತರ ದೇಶದೊಳಗಿನ ಭ್ರಷ್ಟಾಚಾರವನ್ನ ತೊಲಗಿಸುವಲ್ಲಿ ಹೋರಾಡುವಂತಹ ಸಿನಿಮಾ ಅದು. ಭ್ರಷ್ಟಾಚಾರದ ವಿರುದ್ದ ಹೋರಾಟ ಮಾಡುತ್ತಾ ತನ್ನ ಮಗ ಎಂಬುದ್ದನ್ನೂ ಲೆಕ್ಕಿಸದೇ ಕೊಲೆ ಮಾಡುವಂತಹ ಕ್ಯಾರೆಕ್ಟರ್.‌ ಒಬ್ಬ ರಿಟೈರ್ರ್ಡ್ ಆದಂತಹ ವ್ಯಕ್ತಿ ಮತ್ತೆ ಆತನ ವಯಸ್ಸಿಗೆ ತಕ್ಕಂತಹಾ ದೃಷ್ಯಗಳನ್ನ ಇಟ್ಟು ಸಹಜ ರೀತಿಯಲ್ಲಿ ಸಿನಿಮಾ ಕಟ್ಟಿಕೊಟ್ಟು ಎಲ್ಲರ ಮನಸ್ಸಿನಲ್ಲಿ ಉಳಿಯುವಂತೆ ಮಾಡಿದ್ದು ಇದೇ ಶಂಕರ್‌ ಅವರು.

ಈಗ ಇಂಡಿಯನ್‌2 ಸಿನಿಮಾ ನೀಡುವ ಮೂಲಕ ಮತ್ತೊಮ್ಮೆ ಕಮಾಲ್‌ ಮಾಡಲು ಬಂದ ಶಂಕರ್‌ ಮಾಡಿದ್ದೇನು? ಅಂತ ನೋಡಿದ್ರೆ ಊದು ಕಡ್ಡಿಯಲ್ಲಿ ಊರಿಗೇ ಬೆಂಕಿ ಹಚ್ಚಿಸುವಂತಹ ಕೆಲಸ ಮಾಡಿದ್ದಾರೆ. ಸಿನಿಮಾ ಶುರುವಾದ ಮೊದಲ ಹತ್ತು ನಿಮಿಷದಲ್ಲೇ ಪ್ರೇಕ್ಷಕನಿಗೆ ತಾನು ಯಾವ ಸಿನಿಮಾ ನೋಡ್ತಿದೀನಿ ಅನ್ನಿಸುವಂತ ಸೀನ್‌ ಗಳು ಕಾಡುವುದಕ್ಕೆ ಶುರು ಮಾಡುತ್ತವೆ. ಸಿನಿಮಾ ಶುರುವಿನಲ್ಲೇ ಒಂದು ಆತ್ಮಹತ್ಯೆಯ ದೃಷ್ಯ ಎದುರಾಗತ್ತೆ. ಏನ್‌ ನಡೀತಿದೆ ಅನ್ನೋದೇ ಅರ್ಥವಾಗದೆ ಪ್ರೇಕ್ಷಕ ನಿಜಕ್ಕೂ ತಬ್ಬಿಬ್ಬಾಗಬೇಕ.

Corruption kills the Nation ಅಂತ ಟೈಟಲ್‌ ಕಾರ್ಡ್‌ ಅಲ್ಲಿ ತೋರಿಸಿ ಕ್ಷಣ ಮಾತ್ರವೂ ಕೂರದೆ ನೇರವಾಗಿ ಕಥೆಯೊಳಗೆ ಪ್ರೇಕ್ಷಕನನ್ನ ಶಂಕರ್‌ ಕೂರಿಸಿದ್ದಾರೆ. ಸಿದ್ದಾರ್ಥ್‌ ಯಾವ ಕಾರಕ್ಕಾಗಿ ಭ್ರಷ್ಟಾಚಾರದ ವಿರುದ್ದ ಹೋರಾಡೋಕೆ ಮನಸ್ಸು ಮಾಡಿದ್ದ ಅನ್ನೋದನ್ನೇ ತೋರಿಸಲಿಲ್ಲ ಇದರ ಜೊತೆ ಸಿದ್ದಾರ್ಥ್‌ ಅವ್ರೊಂದಿಗೆ ಇನ್ನೂ ಮೂರು ಜನ ಸ್ನೇಹಿತರ ಕಥೆ ಏನು ಅನ್ನುವುದೇ ಅರ್ಥವಾಗಲ್ಲ.ಎಲ್ಲರೂ ಮಾಡೋಕೆ ಏನೂ ಕೆಲಸವಿಲ್ಲದೇ ಈ ಟಾಪಿಕ್‌ ತಗೊಂಡಿದ್ದಾರಾ ಅನ್ನಿಸಿಬಿಡಬೇಕು. ಲಾಜಿಕ್‌ ಅನ್ನೋದನ್ನೇ ಶಂಕರ ಈ ನಾಲ್ಕು ಕ್ಯಾರೆಕ್ಟರ್‌ ಅಲ್ಲಿ ಮರೆತುಬಿಟ್ಟಿದ್ದಾರೆ.

ಇನ್ನು ಹೀರೋಯಿನ್‌ ಆಗಿ ರಕುಲ್‌ ಪ್ರೀತ್‌ ಸಿಂಗ್‌ ಅವ್ರನ್ನ ಕೂರಿಸಿದಾರೆ. ಸಿನಿಮಾಗೆ ಒಬ್ಬ ಹೀರೋಯಿನ್‌ ಇದ್ರೆ ಚೆನ್ನಾಗಿರತ್ತೆ ಅನ್ನೋ ಕಾರಣಕ್ಕಾಗಿ ಈ ರಖುಲ್‌ ಅವ್ರನ್ನ ಇಟ್ಟಿದ್ದಾರೆ ಅನ್ನಿಸಬೇಕು. ಅದೇ ರೀತಿ ಬ್ರಹ್ಮಾನಂದಮ್‌. ಇವ್ರ ಕೊರಳಿಗೆ wwe ಯಲ್ಲಿ ಬರುವಂತಹ ಬೆಲ್ಟ್‌ ತರಹದ ಒಂದು ಲಾಕೆಟ್‌ ಹಾಕಿ ತುಂಬಾ ಶ್ರೀಮಂತನಂತೆ ತೋರಿಸಲಾಗಿದೆ. ಪ್ರೇಕ್ಷಕ ಬ್ರಹ್ಮಾನಂದಮ್‌ ಬಂದ ಕ್ಷಣ ಕಣ್ಣು ಮುಚ್ಚಿದ್ರೆ ಕಂಡಿತಾ ದೊಡ್ಡ ಲಾಸ್‌ ಅಂತಲೇ ಹೇಳ್ಬೋದು. ಯಾಕಂದ್ರೆ ಇಡೀ ಸಿನಿಮಾ ಪೂರ್ತಿನಿ ನಿಮಗೆ ಹಾಸ್ಯ ಬ್ರಹ್ಮ ಬ್ರಹ್ಮಾನಂದಮ್‌ ಸಿಗೋದೇ ಇಲ್ಲ.

ಇನ್ನು ಎಸ್‌ ಜೆ ಸೂರ್ಯ ಅವ್ರನ್ನ ವಿಲನ್‌ ರೀತಿ ತೋರಿಸಲಾಗತ್ತೆ. ಮೊದಲ ಅರ್ಧದಲ್ಲಿ ಎರಡು ನಿಮಿಷ ಬರುವ ಸೂರ್ಯ ಕೊನೆಯ ಕ್ಲೈ,ಮ್ಯಾಕ್ಸ್‌ ಅಲ್ಲಿ ಎರಡು ನಿಮಿಷ ಬಂದು ಹೋಗ್ತಾರೆ. ಸೂರ್ಯ ಅವ್ರಂತಹಾ ನಟನನ್ನ ಯಾವ ರೀತಿ ಬಳಸಿಕೊಳ್ಳಬಾರದು ಅನ್ನೋದನ್ನ ಈ ಸಿನಿಮಾ ಹೇಳತ್ತೆ.

ಇದಿಷ್ಟು ಈ ಕ್ಯಾರೆಕ್ಟರ್‌ ಗಳ ಕಥೆಯಾದ್ರೆ ಇನ್ನು ಇಂಡಿಯನ್‌ ತಾತನ ಕಥೆ ತುಂಬಾ ಡಿಫರೆಂಟ್.‌ 1996 ರಲ್ಲಿ ಕಾಣೆಯಾದ ಇಂಡಿಯನ್‌ ತಾತ ಸಿದ್ದಾರ್ಥ ಮತ್ತವರ ಸ್ಣೇಹಿತರು ಮಾಡುವಂತಹ #comebackindian ಯಾಶ್‌ ಟ್ಯಾಗ್‌ ನಿಂದಾಗಿ ಇಂಡಿಯಾಗೆ ಬರ್ತಾರೆ. ಇಂಡಿಯನ್‌ ತಾತ ಬರೀ ಭ್ರಷ್ಟಾಚಾರ ಮಾತ್ರವಲ್ಲದೇ ಇಡೀ ಊರಿನ ಎಲ್ಲಾ ಸಮಸ್ಯೆಗಳನ್ನ ತನ್ನ ಹೆಗಲಿಗೆ ಹಾಕಿಕೊಂಡು ಹೋರಾಟ ಮಾಡುವುದು ಇಂಡಿಯನ್‌ ತಾತನ ಕೆಲಸ. ಒಂದು ಕಡೆ ಸಿದ್ದಾರ್ಥ್‌ ಮತ್ತವರ ಸ್ನೇಹಿತರು ಭ್ರಷ್ಟಾಚಾರ ಅನ್ನುವುದರ ಬಗ್ಗೆ ಮಾತಾಡ್ತಿದ್ರೆ ಇಂಡಿಯನ್‌ ತಾತ “ಈ ಮ್ಯಾನ್‌” ರೀತಿ ಎಲ್ಲಂದ್ರಲ್ಲಿ ಓಡಾಡ್ತಿರ್ತಾನೆ. ಇಂಡಿಯನದ ತಾತನ್ನ ಎಂಟ್ರಿ ಸೀನ್‌ ಗೆ ಬಿಕಿನಿಯಲ್ಲಿ ನೃತ್ಯ ಮಾಡಿಸಿರುವ ಹಾಡು ಮತ್ತೆ ಇಂಡಿಯಾಗೆ ಬರುವಾಗ ಟಪ್ಪಾಂಗುಚ್ಚಿಯ ಮತ್ತೊಂದು ಹಾಡು ಈ ಎರಡೂ ಹಾಡುಗಳು ಚೆನ್ನಾಗಿದ್ದರೂ ಪ್ರೇಕ್ಷಕನಿಗೆ ರುಚಿ ಅನ್ನಿಸೋದಿಲ್ಲ.

ಇಂಡಿಯನ್‌ ತಾತ ಇಂಡಿಯಾಗೆ ಬಂದ ತಕ್ಷಣ ಫೇಸ್‌ ಬುಕ್‌ ಲೈವ್‌ ಗೆ ಬಂದು ಎಲ್ಲರ ಮನೆಯಲ್ಲೂ ತೂತು ಇದೆ ಅನ್ನುವಂತೆ ಎಲ್ಲರ ಮನೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ಜನರಲ್ಲಿ ಕುತೂಹಲ ಮೂಡಿಸಿ ಎಲ್ಲರನ್ನೂ ಬದಲಾಯಿಸೋಕೆ ಶುರು ಮಾಡಿಬಿಡ್ತಾನೆ. ಇತ್ತಕಡೆ ಎಲ್ಲರೂ ತಮ್ಮ ತಮ್ಮ ಮನೆಯಲ್ಲಿ ಬ್ರಷ್ಟಾಚಾರ ನಡೀತಿದೆ ಅಂತ ಮಾತಾಡೋಕೆ ಶುರು ಮಾಡಿಬಿಡ್ತಾರೆ. ಇಷ್ಟಾಗುವುದರ ಹೊತ್ತಿಗೆ ಪ್ರೇಕ್ಷಕನಿಗೆ ತಲೆ ನೋವು ಬರುವುದಂತೂ ಸತ್ಯ. ಈ ತಲೆ ನೋವಿಗೆ ಸ್ವಲ್ಪ ಬ್ರೇಕ್‌ ನೀಡುವಂತೆ ನಿರ್ದೇಶಕ ಇಂಟರ್ವಲ್‌ ಕೊಟ್ಟಿದಾನೆ.

ಇನ್ನು ಸೆಕೆಂಡ್‌ ಆಫ್‌ ಅಂತೂ ಇಂಡಿಯನ್‌ ತಾತನ ಹಾರಾಟ ಒಂದುಕಡೆಯಾದ್ರೆ ಮತ್ತೊಂದು ಕಡೆ ತಮ್ಮ ತಮ್ಮ ಫ್ಯಾಮಿಲಿಗಳಲ್ಲಿನ ಭ್ರಷ್ಟಾಚಾರದ ಬಗ್ಗೆ ಮಾತಾಡಿದಂತವ್ರ ಗೋಳು ಮತ್ತೊಂದು ಕಡೆ. ಸಿದ್ದಾರ್ಥ್‌ ತನ್ನ ತಂದೆಯನ್ನೇ ಭ್ರಷ್ಟಾಚಾರದ ಕೇಸ್‌ ಅಲ್ಲಿ ಸಿಕ್ಕಿಸಿದ್ದಕ್ಕೆ ತನ್ನ ತಾಹಿ ಆತ್ಮಹತ್ಯೆ ಮಾಡಿಕೊಳ್ಳವ ದೃಶ್ಯಗಳು ಈ ಸಮಯದಲ್ಲಿನ ಸಿದಾರ್ಥ್‌ ಅಳು ಇದೆಲ್ಲವೂ ಒಂದು ಮದರ್‌ ಸೆಂಟಿಮೆಂಟ್‌ ಇದ್ರೆ ಚೆನ್ನಾಗಿರತ್ತೆ ಅಂತ ಅನ್ನಿಸಿ ಶಂಕರ್‌ ಅವ್ರು ಈ ಒಂದು ಸಾಹಸಕ್ಕೆ ಕೈ ಹಾಕಿದ್ರೇನೊ ಅಂತ ಅನ್ನಿಸುತ್ತದೆ. ಇಲ್ಲಿಯವರೆಗೂ ಭೇಟಿಯಾಗದ ಇಂಡಿಯನ್‌ ತಾತ ಮತ್ತು ಸಿದ್ದಾರ್ಥ್‌ ಈಗ ಭೇಟಿ ಆಗ್ತಾರೆ. ಇಲ್ಲಿ ಸಿದ್ದಾರ್ಥ್‌ ಇಂಡಿಯನ್‌ ತಾತನ ವಿರುದ್ದ ಮಾತನಾಡಿ #gobackindian ಅನ್ನುವ ಹ್ಯಾಶ್‌ ಟ್ಯಾಗ್‌ ಬಳಸಿ ಪೋಸ್ಟ್‌ ಮಾಡುತ್ತಾನೆ. ಈ ಪೋಸ್ಟ್‌ ಟ್ರೆಂಡಿಂಗ್‌ ಆಗತ್ತೆ.

ಇಲ್ಲಿಗೇ ಬಂದ ಪೋಲೀಸರಿಂದ ಇಂಡಿಯನ್‌ ತಾತ ತಪ್ಪಿಸಿಕೊಳ್ಳುವ ರೀತಿ ಬಹಳಾ ಮಜಾ ಇದೆ. 1996 ರಲ್ಲೇ ರಿಟೈರ್ಡ್‌ ಆಗಿದ್ದ ಇಂಡಿಯನ್‌ ತಾತ 26 ವರ್ಷದ ಮೇಲೂ ಸಾಹಸಗಳನ್ನ ಮಾಡುತ್ತಾ ಪೋಲೀಸರಿಂದ ತಪ್ಪಿಸಿಕೊಳ್ಳುವುದ್ರಲ್ಲಿ ಪ್ರೇಕ್ಷಕ ಲಾಜಿಕ್‌ ಹುಡುಕಿದ್ರೆ ಅದು ಪ್ರೇಕ್ಷಕನ ತಪ್ಪು ಅಷ್ಟೆ. ಪೋಲೀಸರಿಂದ ತಪ್ಪಿಸಿಕೊಂಡ ಇಂಡಿಯನ್‌ ತಾತ ರೌಡಿಗಳ ಕೈಗೆ ಸಿಕ್ಕಿಕೊಳ್ತಾರೆ ಇಲ್ಲಿ ಇಂಡಿಯನ್‌ ತಾತನಿಗೆ ನಿರ್ದೇಶಕ ಶಂಕರ್‌ ಅವ್ರು 6 ಪ್ಯಾಕ್‌ ಮಾಡಿಸಿರೋದನ್ನ ರಿವೀಲ್‌ ಮಾಡ್ತಾರೆ. ಇವ್ರಿಂದ್ಲೂ ಇಂಡಿಯನ್‌ ತಾತ ಬಚಾವಾಗಿ ಆಚೆ ಬಂದಾಗ ಜನಸಾಮಾನ್ಯರೆಲ್ಲಾ ಇವ್ರನ್ನ ಕೊಲ್ಲುವುದಕ್ಕೆ ಬರ್ತಿರ್ತಾರೆ. ಇಲ್ಲಿ ತಪ್ಪಿಸಿಕೊಳ್ಳೋಕೆ ಆಗದೆ ಪೋಲೀಸರು ಇಂಡಿಯನ್‌ ತಾತನನ್ನ ಅರೆಸ್ಟ್‌ ಮಾಡಿ ನ್ಯಾಯಾದೀಶರ ಬಳಿ ಕರೆದೊಯ್ಯುತ್ತಾರೆ.

ಇದಿಷ್ಟಕ್ಕೇ ಸಿನಿಮಾ ಮುಗಿಯುತ್ತದೆ ಅಂತ ತಿಳಿದ್ರೆ ಅದು ಪ್ರೇಕ್ಷಕನ ಮೂರ್ಖತನ. ಇಂಡಿಯನ್‌ ತಾತ ಪೋಲೀಸ್‌ ಅಧಿಕಾರಿ ಇಬ್ಬನಿಗೆ ತನ್ನ ಫೈಟಿಂಗ್‌ ಸ್ಕಿಲ್‌ ನಿಂದಾಗಿ ಚಪಾತಿ ಹೊಸೆಯುವ ಕೋಲಿನಿಂದ ಬೆನ್ನಿನ ಬಾಗಕ್ಕೆ ಚುಚ್ಚಿದ್ದು ಆ ಅಧಿಕಾರಿ ಆಸ್ಪತ್ರೆಗೆ ಹೋದಾಗ ಡಾಕ್ಟರ್‌ ಗಳಿಗೂ ಟ್ರಿಟ್ಮೆಂಟ್‌ ಮಾಡೋಕೆ ಆಗದೆ ಪೇಷಂಟ್‌ ಅನ್ನ ಸೀದಾ ನ್ಯಾಯಾದೀಶರ ಕೊಠಡಿಗೆ ಕರೆದೊಯ್ಯಲಾಗತ್ತೆ ಇಲ್ಲಿ ಇಂಡಿಯನ್‌ ತಾತನ ವಿಚಾರಣೆ ನಡೀತಿರತ್ತೆ.

ಇಂಡಿಯನ್‌ ತಾತನ ಒಪ್ಪಂದಕ್ಕೆ ಮಣಿದು ಪೇಷಂಟ್‌ ಜೊತೆ ಇಂಡಿಯನ್‌ ತಾತ ಇಲ್ಲಿಂದ ಎಸ್ಕೇಪ್‌ ಆಗ್ತಾನೆ. ಹೊರಡುವಾಗ ನಾ ಮತ್ತೇ ಬರ್ತೀನಿ ಅಂತ ಹೇಳಿ ಮತ್ತೊಂದು ಭಾಗ ಬರುವುದರ ಕುರಿತು ಸುಳಿವು ನೀಡ್ತಾನೆ.

ಒಟ್ಟಾರೆ ಸಿನಿಮಾ ಪ್ರೇಕ್ಷನಿಗೆ ಬಹಳಷ್ಟು ನಿರಾಸೆ ಮಾಡುವಂತೂ ಸತ್ಯ. ಕನಿಷ್ಟ ಚೂರಾದ್ರೂ ಲಾಜಿಕ್‌ ಇರಬೇಕಿತ್ತು ಅಷ್ಟೂ ಸಿನಿಮಾದಲ್ಲಿ ಇಲ್ಲ. ಮ್ಯೂಸಿಕ್‌ ತುಂಬಾ ಚೆಂದ ಬಂದಿದೆ ಅಂತಾನೇ ಹೇಳ್ಬೋದು. ಆದ್ರೆ ಸಿನಿಮಾದಲ್ಲಿ ಕಥೆಯೇ ಇಲ್ಲ. ಹಿಂದಿನ ಕಥೆಯ ಮುಂದುವರಿದ ಭಾಗ ಅಂತಲೂ ಹೇಳೋಕೆ ಆಗದ ರೀತಿ ಶಂಕರ್‌ ಅವ್ರು ತಮ್ಮ ಕೈಚಳಕ ತೋರಿಸಿದ್ದಾರೆ.

ಒಂದೇ ತಿಂಗಳ ಒಳಗಾಗಿ ಈ ಸಿನಿಮಾ ಒಟಿಟಿಗೆ ಬರುವುದರಲ್ಲಿ ಯಾವುದೇ ರೀತಿಯ ಸಂಶಯ ಇಲ್ಲ. ಯಾಕೆ ಅಂದ್ರೆ ಈ ಸನಿಮಾ ಮುಂದಿನ ವಾರ ಬಹುತೇಕ ಎಲ್ಲಾ ಥಿಯೇಟರ್‌ ಗಳಿಂದಲ್ಲೂ ಎತ್ತಂಗಡಿ ಆಗಲಿದೆ.

– ಮುರಳಿ ಮಾಲೂರು

You cannot copy content of this page

Exit mobile version