Thursday, March 27, 2025

ಸತ್ಯ | ನ್ಯಾಯ |ಧರ್ಮ

ಉದಾರವಾದ ಹಿಂದಡಿಯಿಡುತ್ತಿರುವ ಕಾಲದ ಭಾರತೀಯ ಫ್ಯಾಸಿಸಂ

“..ಭಾರತದಲ್ಲಿ ಇಂದು ಮುಖ್ಯವಾಹಿನಿಯಲ್ಲಿರುವ ರಾಜಕೀಯ ಪಕ್ಷಗಳು ಚುನಾವಣಾ ದೃಷ್ಟಿಯಿಂದ ಮಾತ್ರವೇ ಬಿಜೆಪಿಯನ್ನು ವಿರೋಧಿಸುತ್ತವೆ. ಭಾರತೀಯ ಫ್ಯಾಸಿಸಂನ ಮೂಲದಲ್ಲಿರುವ ಬ್ರಾಹ್ಮಣ್ಯ ಮತ್ತು ಕಾರ್ಪೊರೇಟ್ ಅಡಿಪಾಯಗಳನ್ನು ಅವು ಪ್ರಶ್ನಿಸುವುದೇ ಇಲ್ಲ..” ಚಿಂತಕರಾದ ಶಿವ ಸುಂದರ್ ಅವರ ‘Wire’ ಅಂಕಣದ ಅನುವಾದ

“ಪ್ರತಿಯೊಂದು ದೇಶವೂ ಅದಕ್ಕೆ ಅರ್ಹವಾದ ಫ್ಯಾಸಿಸಮ್ಮನ್ನು ಪಡೆಯುತ್ತದೆ” ಎಂದು ಪ್ರಸಿದ್ಧ ಮಾರ್ಕ್ಸ್ವಾದಿ ಚಿಂತಕ ಏಜಾಝ್ ಅಹ್ಮದ್ ಬಹಳ ಹಿಂದೆಯೇ ಗಮನಿಸಿದ್ದರು.

ಫ್ಯಾಸಿಸಮ್ಮಿನ ಭಾರತೀಯ ಆವೃತ್ತಿಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಫ್ಯಾಸಿಸ್ಟ್ ಮೂಲಗಳ ಬಗ್ಗೆ ಚರ್ಚೆಗಳು ನಡೆಯುವುದೇ ಇಲ್ಲವೆಂದು ಹೇಳಬಹುದು. ಆದರೆ, ಬಿಜೆಪಿಯ ಆಡಳಿತದಲ್ಲಿ ಭಾರತವನ್ನು ಫ್ಯಾಸಿಸ್ಟ್ ಎಂದು ಕರೆಯಬಹುದೇ ಎಂಬ ಚರ್ಚೆಗಳು ಗಹನವಾಗಿ ನಡೆಯುತ್ತವೆ. 20ನೇ ಶತಮಾನದ ಯುರೋಪಿನ ಅಂತರ್ ಯುದ್ಧದ ಕುಲುಮೆಯಲ್ಲಿ ಮೂಡಿ ಬಂದ ಫ್ಯಾಸಿಸಂ/ನಾಜಿಸಂ ಜೊತೆಗೆ ಸೂಕ್ಷ್ಮವಾಗಿ ತಲುನೆ ಮಾಡುವ ಕಾರ್ಯಗಳೂ ಇಂತಹ ಚರ್ಚೆಗಳ ಸಮಯದಲ್ಲಿ ನಡೆಯುತ್ತವೆ.

ಫ್ಯಾಸಿಸಂ ಅಥವಾ ಅಂತಹ ಯಾವುದೇ ಸಿದ್ಧಾಂತವು ನಿರ್ದಿಷ್ಟ ಸಮಯ ಮತ್ತು ಸ್ಥಳದಲ್ಲಿ ಅದರ ಮೂಲದ ಕೆಲವು ವಿಶೇಷತೆಗಳನ್ನು ಹೊಂದಿರುತ್ತವೆ. ಆದರೆ ಫ್ಯಾಸಿಸ್ಟ್ ಸಿದ್ಧಾಂತಕ್ಕೆ ಜನ್ಮ ನೀಡಿದ ಸಾಮಾಜಿಕ ಆರ್ಥಿಕ ಪರಿಸ್ಥಿತಿಗಳು, ಚಳುವಳಿಗಳು ಮತ್ತು ಅಧಿಕಾರಗಳು ಅಭಿವೃದ್ಧಿ ಹೊಂದುತ್ತಿರುವುದರಿಂದ ಅನೇಕ ಸಾರ್ವತ್ರಿಕತೆಗಳೂ ಇವೆ. 1967ರಲ್ಲಿ ಜೀನ್ ಪಾಲ್ ಸಾರ್ತ್ರೆ ಕೂಡ ಫ್ಯಾಸಿಸಮ್ಮನ್ನು ಸೋಲಿಸಬಹುದೇ ಎಂಬ ಚರ್ಚೆಗೆ ಪ್ರತಿಕ್ರಿಯೆಯಾಗಿ ಇದನ್ನು ಗಮನಿಸಿದ್ದರು.

1925ರಲ್ಲಿ ಹುಟ್ಟಿಕೊಂಡ ಆರ್ಎಸ್ಎಸ್, ಇಂದು ವಿಶ್ವದ ಅತ್ಯಂತ ದೀರ್ಘಾವಧಿಯ ಫ್ಯಾಸಿಸ್ಟ್ ಚಳುವಳಿಗಳಲ್ಲಿ ಒಂದು. ಒಂದು ಫ್ಯಾಸಿಸ್ಟ್ ಪಕ್ಷ ಅಥವಾ ಸಂಘಟನೆಯು ಫ್ಯಾಸಿಸ್ಟ್ ಚಳುವಳಿಯ ಮೂಲಕವೇ ಉಳಿದುಕೊಳ್ಳುತ್ತದೆ ಮತ್ತು ಸಾಮಾಜಿಕ ಹಾಗೂ ರಾಜಕೀಯ ರಂಗದಲ್ಲಿ ಅದು ಗೆಲುವು ಕಾಣುತ್ತದೆ ಅಂದರೆ, ಅದು ನಿರಂತರವಾಗಿ ಸೈದ್ಧಾಂತಿಕ, ರಾಜಕೀಯ ಮತ್ತು ನೇರ ಹಲ್ಲೆಗಳ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮತ್ತು ರಾಜಕಾರಣವನ್ನು ನಾಶಗೊಳಿಸಿದೆ ಎಂದರ್ಥ ಎಂದು ಫ್ಯಾಸಿಸಮ್ಮಿನ ಜಾಗತಿಕ ಇತಿಹಾಸ ನಮಗೆ ತೋರಿಸಿಕೊಡುತ್ತದೆ.

ಬಂಡವಾಳಶಾಹಿ ಬಿಕ್ಕಟ್ಟಿನ ಕಾರಣದಿಂದ ಹುಟ್ಟಿಕೊಳ್ಳುವ ಸಾಮಾಜಿಕ ಬಿಕ್ಕಟ್ಟುಗಳನ್ನು ಮತ್ತು ಸಂಘರ್ಷಗಳನ್ನು ಎದುರಿಸುತ್ತಿದ್ದ ಸಮಾಜಗಳಲ್ಲಿಯೂ ಇದು ಸಾಧ್ಯವಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರವು 2014ರಲ್ಲಿ ತನ್ನದೇ ಬಲದಿಂದ ಅಧಿಕಾರಕ್ಕೆ ಬಂದು, 2019ರಲ್ಲಿ ಮತ್ತಷ್ಟು ವಿಭಜನಕಾರಿ ಕಾರ್ಯಸೂಚಿಯೊಂದಿಗೆ ಇನ್ನೂ ಬಲವಾದ ಜನಾದೇಶವನ್ನು ಪಡೆದು ಗೆದ್ದ ನಂತರ, ಭಾರತದ ಎಡಪಂಥೀಯ ಮತ್ತು ಪ್ರಗತಿಪರ ವಲಯಗಳಲ್ಲಿ ತೀವ್ರವಾದ ಚರ್ಚೆಗಳು ಹುಟ್ಟಿಕೊಂಡವು. ಈ ಚರ್ಚೆಗಳು ಭಾರತದ ಸದ್ಯದ ಪ್ರಭುತ್ವದ ಫ್ಯಾಸಿಸ್ಟ್ ಸ್ವರೂಪ ಮತ್ತು ಅದನ್ನು ಸೋಲಿಸಲು ಅಗತ್ಯವಾದ ತಂತ್ರಗಳ ಮೇಲೆ ಕೇಂದ್ರೀಕರಿಸಿದ್ದವು.

ಮೂಲದಲ್ಲಿ ತೀವ್ರ ಬಲಪಂಥೀಯವಾದ ಮೋದಿ ಆಡಳಿತವನ್ನು, ಶಾಸ್ತ್ರೀಯ ಅರ್ಥದಲ್ಲಿ ಫ್ಯಾಸಿಸ್ಟ್ ಎಂದು ಕರೆಯಬೇಕೇ ಅಥವಾ ಅದು ನವಫ್ಯಾಸಿಸ್ಟ್ ಎಂದಾಗಬೇಕೇ ಅಥವಾ ಇನ್ನೂ ಸರಳವಾಗಿ ಭಾರತೀಯ ಫ್ಯಾಸಿಸ್ಟ್ನ ಹೊಸ ರೂಪವೆಂದು ಕರೆಯಲ್ಪಡಬೇಕೇ ಎಂಬುದರ ಸುತ್ತಲೇ ಈ ಚರ್ಚೆಗಳು ಸುತ್ತು ಹೊಡೆದವು.

ಆದ್ದರಿಂದಲೇ, ಫ್ಯಾಸಿಸಮ್ಮಿನ ಹುಟ್ಟು, ಬೆಳವಣಿಗೆ ಮತ್ತು ಯಶಸ್ಸಿನ ಕಾರಣಗಳನ್ನು ಅದರ ಐತಿಹಾಸಿಕತೆಯೊಂದಿಗೆ ತಿಳಿದುಕೊಳ್ಳುವುದರಿಂದ ಫ್ಯಾಸಿಸಮ್ಮಿನ ಭಾರತೀಯ ರೂಪಾಂತರ, ಅದರ ವಿಶಿಷ್ಟತೆ ಮತ್ತು ಹಳೆಯದರೊಂದಿಗೆ ಅದರ ಸಾಮಾನ್ಯತೆಯನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಾಗುತ್ತದೆ.

ಅನಾಗರಿಕವಾಗಿ ದೌರ್ಜನ್ಯಗಳನ್ನು ಎಸಗುವ, ಸರ್ವಾಧಿಕಾರಿ ಪ್ರವೃತ್ತಿಯನ್ನು ಹೊಂದಿರುವ ಸರ್ಕಾರಗಳನ್ನು ಮತ್ತು ಸಂಘಟನೆಗಳನ್ನು “ಫ್ಯಾಸಿಸ್ಟ್” ಎಂದು ಹಣೆಪಟ್ಟಿ ಹಚ್ಚುವ ಒಂದು ಸಾಮಾನ್ಯ ಪ್ರವೃತ್ತಿ ಇದೆ. ಇದರಿಂದಾಗಿ ಫ್ಯಾಸಿಸಂ ಎಂದರೆ ಪ್ರಭುತ್ವದ ದಬ್ಬಾಳಿಕೆ ಮಾತ್ರವೇ ಎಂಬ ತಪ್ಪು ತಿಳುವಳಿಕೆಯೂ ಸಾಮಾನ್ಯವಾಗಿಬಿಟ್ಟಿದೆ.

ಫ್ಯಾಸಿಸಂ ಅಂದರೆ ಕೇವಲ ಕ್ರೌರ್ಯವಲ್ಲ.
ಫ್ಯಾಸಿಸಂ ಎನ್ನುವುದು ಪ್ರಜಾಪ್ರಭುತ್ವ ಮತ್ತು ಮಾನವ ಸಹಬಾಳ್ವೆಗೆ ಮೂಲಭೂತವಾಗಿ ವಿರುದ್ಧವಾದ ಒಂದು ಸಾಮಾಜಿಕ–ರಾಜಕೀಯ ವ್ಯವಸ್ಥೆ. ಇದು ಸರ್ವಾಧಿಕಾರಿ ಆಳ್ವಿಕೆಯಲ್ಲ. ಇದು “ಜನಪ್ರಿಯ ಬೆಂಬಲ ಮತ್ತು ಓಲೈಕೆ” ಹೊಂದಿರುವ ಆಡಳಿತ. ಒಂದರ್ಥದಲ್ಲಿ ಇದು ಅನಾಗರಿಕತೆ ಮತ್ತು ಹಗೆತನಕ್ಕೆ ಪರ್ಯಾಯ ನಾಗರಿಕತೆಯಾಗಿ ಹೊರಹೊಮ್ಮಿತ್ತು. ಇಲ್ಲಿ ಅತಿರಾಷ್ಟ್ರೀಯತೆಯನ್ನು ಜಾಗತಿಕ ಬಂಡವಾಳಶಾಹಿ ಆರ್ಥಿಕತೆಯೊಳಗೆ ನಿಂತುಕೊಂಡು ಓಲೈಸುವ ವಾಕ್ಚಾತುರ್ಯವಾಗಿ ಬಳಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಬಂಡವಾಳಶಾಹಿ ಪ್ರಜಾಪ್ರಭುತ್ವಗಳಿಗೆ ಪ್ರತಿಕೂಲವಾಗುವ ಬಿಕ್ಕಟ್ಟಿನ ಪರಿಸ್ಥಿತಿಗಳಲ್ಲಿ.

ರೋಜರ್ ಗ್ರಿಫಿನ್ “ದಿ ನೇಚರ್ ಆಫ್ ಫ್ಯಾಸಿಸಂ” ಎಂಬ ತನ್ನ ಮಹಾಕೃತಿಯಲ್ಲಿ ಈ ವಿದ್ಯಮಾನವನ್ನು “ಫ್ಯಾಸಿಸಂ ಒಂದು ರಾಜಕೀಯ ಸಿದ್ಧಾಂತವಾಗಿದ್ದು, ಅದರ ವಿವಿಧ ಆವೃತ್ತಿಗಳಲ್ಲಿ ಪೌರಾಣಿಕತೆಯೇ ಅದರ ಜನಪ್ರಿಯ ಅತಿರಾಷ್ಟ್ರೀಯತೆಯ ಪಾಲಿಂಜೆನೆಟಿಕ್ (ಮರುಹುಟ್ಟು) ರೂಪವಾಗಿದೆ” ಎಂದು ವಿವರಿಸುತ್ತಾರೆ. ಈ ಸಂದರ್ಭದಲ್ಲಿ “ಪಾಲಿಂಜೆನೆಟಿಕ್” ಎಂಬ ಪದವು ರಾಷ್ಟ್ರೀಯ ಪುನರ್ಜನ್ಮದ ಕಲ್ಪನೆಗಳನ್ನು ಸೂಚಿಸುತ್ತದೆ.

ಹೀಗಾಗಿ, ಫ್ಯಾಸಿಸಂ ಅನ್ನು ಒಂದು ಪಕ್ಷಕ್ಕೆ, ಒಂದು ಸಂಘಟನೆಗೆ ಅಥವಾ ಒಂದು ನಿರ್ದಿಷ್ಟ ಹಿಂಸಾತ್ಮಕ ಘಟನೆಗೆ ಸೀಮಿತಗೊಳಿಸುವುದರಿಂದ ಅದರ ನಿಜವಾದ ಅಪಾಯವನ್ನು ಗ್ರಹಿಸುವಲ್ಲಿ ವಿಫಲವಾಗುತ್ತದೆ. ಅದರ ವಿರುದ್ಧ ಬಲವಾದ ಮತ್ತು ಸಂಘಟಿತ ಪ್ರತಿರೋಧದ ಪ್ರಯತ್ನಗಳನ್ನು ಕೂಡ ಇದು ದುರ್ಬಲಗೊಳಿಸುತ್ತದೆ.

ಭಿನ್ನ ದೇಶಕಾಲಗಳಲ್ಲಿ ಫ್ಯಾಸಿಸಂ
ಐತಿಹಾಸಿಕವಾಗಿ, ಮುಸೊಲಿನಿಯ ನಾಯಕತ್ವದ ಅಂತರ್ಯುದ್ಧದ ಅವಧಿಯಲ್ಲಿ ಫ್ಯಾಸಿಸಮ್ಮಿನ ಬೆದರಿಕೆಯನ್ನು ಮಾನವೀಯತೆಯು ಮೊದಲ ಬಾರಿಗೆ ಎದುರಿಸಿತ್ತು. ಅದು ಮತ್ತು ಜರ್ಮನಿಯಲ್ಲಿ ಹಿಟ್ಲರನ ನಾಜಿ ಆಡಳಿತಗಳು ಫ್ಯಾಸಿಸಮ್ಮಿಗೆ ಉತ್ತಮ ಉದಾಹರಣೆಗಳು.

ಇವುಗಳಲ್ಲದೆ, ಫ್ಯಾಸಿಸ್ಟ್ ಚಳುವಳಿಗಳು ಸ್ಪೇನ್ (1939ರಿಂದ 1975ರವರೆಗೆ ಫ್ರಾಂಕೊ ಆಡಳಿತದಲ್ಲಿ), ಪೋರ್ಚುಗಲ್ ಮತ್ತು ಇತರ ಹಲವು ಲ್ಯಾಟಿನ್ ಅಮೇರಿಕನ್ ಮತ್ತು ಯುರೋಪಿಯನ್ ದೇಶಗಳಲ್ಲಿ ನೆಲೆ ಕಂಡುಕೊಂಡವು. ಮೊದಲನೆಯ ಮಹಾಯುದ್ಧದ ನಂತರದ ಅತಿಕೆಟ್ಟ ಆರ್ಥಿಕ ಪರಿಸ್ಥಿತಿಗಳು, ಉದಾರವಾದಿ ಬಂಡವಾಳಶಾಹಿ ಸರ್ಕಾರಗಳೆಲ್ಲ ಬೆರೆತು, ಫ್ಯಾಸಿಸ್ಟ್ ಶಕ್ತಿಗಳಿಗೆ ಅನುಕೂಲಕರ ವಾತಾವರಣವನ್ನು ಒದಗಿಸಿದವು.

ಫ್ಯಾಸಿಸ್ಟ್ ಆಡಳಿತಗಳು, ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿಹಿಡಿಯುವ ಬದಲು, ತಮ್ಮ ರಾಷ್ಟ್ರೀಯತಾವಾದಿ ಮತ್ತು ಜನಾಂಗೀಯ ಸಿದ್ಧಾಂತಗಳನ್ನು ಸಮಾಜವಾದಿ ವಾಕ್ಚಾತುರ್ಯದೊಂದಿಗೆ ಕಲಸುಮೇಲೋಗರಗೊಳಿಸಿದವು. ಉದಾಹರಣೆಗೆ, ನಾಜಿ ಪಕ್ಷವನ್ನು ಔಪಚಾರಿಕವಾಗಿ “ರಾಷ್ಟ್ರೀಯ ಸಮಾಜವಾದ” (ನಾಜಿಸಂ) ಎಂದು ಕರೆಯಲಾಗುತ್ತಿತ್ತು. ಕಮ್ಯುನಿಸ್ಟರು ಮತ್ತು ಅರಾಜಕತಾವಾದಿಗಳು ಸೇರಿದಂತೆ ಸಮಾಜವಾದಿ ಚಳುವಳಿಗಳು ಕಾರ್ಮಿಕ ವರ್ಗದಲ್ಲಿ ಗಮನಾರ್ಹ ಮೇಲುಗೈಯನ್ನು ಪಡೆಯುತ್ತಿವೆ ಮತ್ತು ಪ್ರಜಾತಾಂತ್ರಿಕ ಚುನಾವಣೆಗಳ ಮೂಲಕ ಅಧಿಕಾರವನ್ನು ಪಡೆಯುವ ಸಾಮರ್ಥ್ಯವನ್ನು ಹೊಂದುವ ಹಂತಕ್ಕೆ ಬರುತ್ತಿವೆ ಎಂಬುದಕ್ಕೆ ಇದೊಂದು ಪ್ರತಿಕ್ರಿಯೆಯಾಗಿತ್ತು.

1917ರ ರಷ್ಯಾ ಕ್ರಾಂತಿಯ ಗೆಲುವಿನೊಂದಿಗೆ, ಅಂತರರಾಷ್ಟ್ರೀಯ ಸಮಾಜವಾದಿ ಮತ್ತು ಕಮ್ಯುನಿಸ್ಟ್ ಚಳುವಳಿಗಳು ಬಂಡವಾಳಶಾಹಿಗೆ ಪ್ರಮುಖ ಬೆದರಿಕೆಗಳಾಗಿ ಮಾರ್ಪಟ್ಟವು. ಇದನ್ನು ಎದುರಿಸಿದ ಇಟಲಿ ಮತ್ತು ಜರ್ಮನಿಯ ಆಳುವ ಬಂಡವಾಳಶಾಹಿ ವರ್ಗಗಳು ಫ್ಯಾಸಿಸ್ಟ್ ಶಕ್ತಿಗಳನ್ನು ಸಕ್ರಿಯವಾಗಿ ಬೆಂಬಲಿಸಿದವು. ಸಮಾಜವಾದದ ಬೆದರಿಕೆಯನ್ನು ಎದುರಿಸಲು ಅವರಿಗೆ ಉದಾರವಾದಿ ಪ್ರಜಾಪ್ರಭುತ್ವವನ್ನು ಅವಲಂಬಿಸುವುದು ಸಾಧ್ಯವಾಗಲಿಲ್ಲ.

ಈ ಫ್ಯಾಸಿಸ್ಟರು ಒಮ್ಮೆ ಅಧಿಕಾರಕ್ಕೆ ಬಂದ ನಂತರ, ತೀವ್ರ ಹಿಂಸಾಚಾರದ ಮೂಲಕ ಕಮ್ಯುನಿಸ್ಟರು ಮತ್ತು ಸಮಾಜವಾದಿಗಳನ್ನು ಹತ್ತಿಕ್ಕಿದರು. ನಂತರ ಅವರು ತಮ್ಮದೇ ಗುಂಪಿನೊಳಗಿನ ಬಂಡವಾಳಶಾಹಿ ವಿರೋಧಿ ಬಣಗಳನ್ನು ಸಹ ನಿರ್ಮೂಲನೆ ಮಾಡಿದರು. ಆ ಮೂಲಕ ಬಂಡವಾಳಶಾಹಿಯು ತಮ್ಮ ಆಳ್ವಿಕೆಯಲ್ಲಿ ಪ್ರಗತಿ ಕಾಣುವುದನ್ನು ಖಚಿತಪಡಿಸಿಕೊಂಡರು. ಉದಾಹರಣೆಗೆ, ಹಿಟ್ಲರ್ ಯಹೂದೀ ವಿರೋಧಿ, ಕಮ್ಯುನಿಸ್ಟ್ ವಿರೋಧಿ ಮತ್ತು ಬೌದ್ಧಿಕ ವಿರೋಧಿ ಸಿದ್ಧಾಂತಗಳನ್ನು ಪ್ರಮುಖ ರಾಷ್ಟ್ರೀಯ ಮೌಲ್ಯಗಳಾಗಿ ಜನಪ್ರಿಯಗೊಳಿಸಿದನು. ಆ ಮೂಲಕ ಅತ್ಯಂತ ಭಯಾನಕ ಹತ್ಯಾಕಾಂಡ ಮತ್ತು ಎರಡನೇ ಮಹಾಯುದ್ಧಕ್ಕೆ ದಾರಿ ಮಾಡಿಕೊಟ್ಟ.

ಫ್ಯಾಸಿಸಮ್ಮಿನಲ್ಲಿ ಉದಾರವಾದಿ ಪ್ರಜಾಪ್ರಭುತ್ವದ ಸಹಭಾಗಿತ್ವ
ಹಿಟ್ಲರ್ ತಮ್ಮ ಮೇಲೆ ನೇರ ಬೆದರಿಕೆ ಹಾಕುವವರೆಗೂ, ಅಮೆರಿಕ, ಬ್ರಿಟನ್ ಮತ್ತು ಫ್ರಾನ್ಸ್ನ “ಉದಾರವಾದಿ ಪ್ರಜಾಪ್ರಭುತ್ವ” ಸರ್ಕಾರಗಳು ಆತನ ಫ್ಯಾಸಿಸ್ಟ್ ಆಡಳಿತವನ್ನು ಬೆಂಬಲಿಸಿದ್ದವು. ಕೊನೆಗೆ, ಪೂರ್ವ ಯುರೋಪಿನ ಫ್ಯಾಸಿಸ್ಟ್ ವಿರೋಧಿ ಕ್ರಾಂತಿಕಾರಿ ಶಕ್ತಿಗಳ ಜೊತೆಗೆ ಸೇರಿಕೊಂಡು ಸೋವಿಯತ್ ಕೆಂಪು ಸೇನೆಯು ಫ್ಯಾಸಿಸಮ್ಮನ್ನು ನಿರ್ಣಾಯಕವಾಗಿ ಸೋಲಿಸುವುದು.

ನಾಜಿ ಜರ್ಮನಿಯ ಸೋಲಿನ ಹೊರತಾಗಿಯೂ, ಸಾವಿರಾರು ಫ್ಯಾಸಿಸ್ಟ್ ಯುದ್ಧ ಅಪರಾಧಿಗಳನ್ನು “ಉದಾರ ಪ್ರಜಾಪ್ರಭುತ್ವವಾದಿ” ಪಾಶ್ಚಿಮಾತ್ಯ ರಾಷ್ಟ್ರಗಳು ಮತ್ತು ಅರ್ಜೆಂಟೀನಾ ರಕ್ಷಿಸಿ ಪುನರ್ವಸತಿ ಕಲ್ಪಿಸಿದವು. ಬಂಡವಾಳಶಾಹಿ ಆಡಳಿತ ವರ್ಗಗಳು, ಸಮಾಜವಾದಿ ಬೆದರಿಕೆಗಳನ್ನು ಎದುರಿಸಲು ಫ್ಯಾಸಿಸಮ್ಮನ್ನು “ಮೀಸಲು ರಾಜಕೀಯ ಆಯುಧ”ವಾಗಿ ಉಳಿಸಿಕೊಂಡಿವೆ ಎಂಬುದನ್ನು ಇದು ತೋರಿಸುತ್ತದೆ.

ಇಂದಿನ ಫ್ಯಾಸಿಸಂ: ಭಾರತದ ವಿಶಿಷ್ಟ ಆವೃತ್ತಿ
ಭಾರತ ಸೇರಿದಂತೆ ಜಗತ್ತು ಮತ್ತೊಮ್ಮೆ ಭೀಕರವಾದ ಫ್ಯಾಸಿಸ್ಟ್ ಬೆದರಿಕೆಯನ್ನು ಎದುರಿಸುತ್ತಿದೆ. ಇತಿಹಾಸವು ನಮಗೆ ಅನೇಕ ಪಾಠಗಳನ್ನು ಕಲಿಸುತ್ತದೆಯಾದರೂ, ಇಂದಿನ ಭಾರತದ ಫ್ಯಾಸಿಸಂನ ನಿರ್ದಿಷ್ಟ ಗುಣಲಕ್ಷಣಗಳನ್ನು ಸಹ ನಾವು ಗುರುತಿಸಬೇಕು.

ಫ್ಯಾಸಿಸಮ್ಮಿನ ಮೂಲ ಸಾರ – ಪ್ರಜಾಪ್ರಭುತ್ವ ಸಮಾಜದ ನಾಶ ಮತ್ತು ಕಾರ್ಪೊರೇಟ್ ಬಂಡವಾಳದ ಸೇವೆಯಲ್ಲಿ ಜನಪ್ರಿಯ ಬೆಂಬಲದೊಂದಿಗೆ ದಮನಕಾರಿ, ಸರ್ವಾಧಿಕಾರಿ ಆಡಳಿತದ ಸ್ಥಾಪನೆ – ಎಂಬುದು ಈಗಲೂ ಬದಲಾಗದೆ ಉಳಿದಿದೆ. ಆದರೂ ಕೂಡ, ಅದರ ಬಾಹ್ಯ ಚಹರೆಯು ಒಂದು ದೇಶಕಾಲದಿಂದ ಮತ್ತೊಂದು ದೇಶಕಾಲಕ್ಕೆ ಬದಲಾಗುತ್ತದೆ.

ಆದ್ದರಿಂದ, ಒಂದು ದೇಶವು ಫ್ಯಾಸಿಸ್ಟ್ ಆಗಿದೆಯೇ ಎಂದು ನಿರ್ಧರಿಸಲು, ನಾವು ಅದರ ಸ್ವರೂಪದ ಮೇಲೆ ಮಾತ್ರವಲ್ಲ, ಅದರ ಸಾರದ ಮೇಲೆಯೂ ಗಮನ ಹರಿಸಬೇಕು.

ಭಾರತದ ಫ್ಯಾಸಿಸಂ ಮೂಲ ಫ್ಯಾಸಿಸಮ್ಮಿಗಿಂತ ಹೇಗೆ ಭಿನ್ನವಾಗಿದೆ
ಇಂದು ಭಾರತವು ತೀವ್ರ ಬಲಪಂಥೀಯ ಸರಕಾರದಿಂದ ಆಳಲ್ಪಡುವಾಗ, ಅದು ಪ್ರಜಾಪ್ರಭುತ್ವ ರಚನೆಗಳನ್ನು ಬಳಸಿಕೊಂಡೇ ಪ್ರಜಾಪ್ರಭುತ್ವದ ಸಾರ ಮತ್ತು ಮೌಲ್ಯಗಳನ್ನು ನಾಶಮಾಡುತ್ತಿದೆ. ಇಂದಿನ ಜಗತ್ತು 20ನೇ ಶತಮಾನದ ಆರಂಭದ ಯುರೋಪಿನಂತಲ್ಲದೆ, ಬಂಡವಾಳಶಾಹಿ ಬಹುಪಕ್ಷೀಯ ಪ್ರಜಾಪ್ರಭುತ್ವಗಳ ಪ್ರಾಬಲ್ಯ ಹೊಂದಿದೆ. ಆದರೆ, ಭಾರತದಲ್ಲಿ ಪ್ರಜಾಪ್ರಭುತ್ವವು ಹಿಂದಿನಿಂದಲೂ ಆಳವಾಗಿ ಬೇರೂರಿರುವ ಬ್ರಾಹ್ಮಣ್ಯ ಜಾತಿ ಶ್ರೇಣೀಕರಣದ ಮೇಲಿನ ಹೊದಿಕೆ ಮಾತ್ರವಾಗಿದೆ.

ತೀವ್ರ ಸಾಮಾಜಿಕ ದಬ್ಬಾಳಿಕೆ ಮತ್ತು ಹಿಂಸೆಯನ್ನು ಎತ್ತಿ ಹಿಡಿಯುವ ಜಾತಿ ವ್ಯವಸ್ಥೆಯು ಈಗ “ಹಿಂದೂ ನಾಗರಿಕತೆ ಮತ್ತು ಸಮ್ಮತಿಯ ರಚನಾತ್ಮಕ ಹಿಂಸೆ”ಯ ಅವಿಭಾಜ್ಯ ಅಂಗವಾಗಿದೆ.

ಇದರ ಜೊತೆಗೆ, 1991ರಿಂದ, ಭಾರತದ ಆಡಳಿತ ವರ್ಗವು ನವ ಉದಾರವಾದಿ ಆರ್ಥಿಕ ನೀತಿಗಳನ್ನು ಅಳವಡಿಸಿಕೊಂಡಿದೆ. ಇದು ವ್ಯಾಪಕ ಸಾಮಾಜಿಕ ಮತ್ತು ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿದೆ. ಇದೇ ಬಿಕ್ಕಟ್ಟು ಫ್ಯಾಸಿಸ್ಟ್ ಶಕ್ತಿಗಳು ಅಧಿಕಾರಕ್ಕೆ ಬರುವಲ್ಲಿ ದೊಡ್ಡ ಪಾತ್ರ ವಹಿಸಿದೆ. ಆದರೆ ಇದು ಕೇವಲ ಭಾರತೀಯ ವಿದ್ಯಮಾನವಲ್ಲ. ಆರ್ಥಿಕ ಅಸ್ಥಿರತೆಯಿಂದಾಗಿ ಪ್ರಪಂಚದಾದ್ಯಂತ ಹಲವಾರು ಬಂಡವಾಳಶಾಹಿ ಪ್ರಜಾಪ್ರಭುತ್ವಗಳು ಸರ್ವಾಧಿಕಾರದತ್ತ ಚಲಿಸುತ್ತಿವೆ.

ಹೀಗಾಗಿ, ಭಾರತವು ಇದೇ ರೀತಿಯ ಫ್ಯಾಸಿಸ್ಟ್ ಬೆದರಿಕೆಯನ್ನು ಎದುರಿಸುತ್ತಿದ್ದರೂ, ಭಾರತ ಇನ್ನೂ ಸಂಪೂರ್ಣವಾಗಿ ಫ್ಯಾಸಿಸ್ಟ್ ಆಗಿಲ್ಲ ಎಂದು ಕೆಲವರು ವಾದಿಸುತ್ತಾರೆ. ಏಕೆಂದರೆ:
ಇಲ್ಲಿ ಪ್ರಜಾಪ್ರಭುತ್ವವು ಸಂಪೂರ್ಣವಾಗಿ ನಾಶವಾಗಿಲ್ಲ.
ಕೆಲವು ಫ್ಯಾಸಿಸ್ಟ್ ಅಲ್ಲದ ಪಕ್ಷಗಳು ಮತ್ತು ಸಂಸ್ಥೆಗಳು ಇನ್ನೂ ವಿರೋಧಿಸುತ್ತಿವೆ.

ಫ್ಯಾಸಿಸ್ಟ್ ಶಕ್ತಿಗಳು ಅಧಿಕಾರವನ್ನು ಸಂಪೂರ್ಣವಾಗಿ ಕ್ರೋಢೀಕರಿಸಿಲ್ಲ.
ಆದರೆ ಭಾರತೀಯ ಫ್ಯಾಸಿಸಂ ಅತಿ ರಾಷ್ಟ್ರೀಯತೆಗೆ ನೀಡುತ್ತಿರುವ ಒತ್ತು ಹಾಗೂ ರಾಜಕಾರಣ ಮತ್ತು ಸಮಾಜವನ್ನು ಭೇದಿಸುವಲ್ಲಿ ಅದರ ಯಶಸ್ಸು ಅದನ್ನು ಸಮಕಾಲೀನ ಜಗತ್ತಿನಲ್ಲಿ ಅತ್ಯಂತ ಯಶಸ್ವಿ ಫ್ಯಾಸಿಸ್ಟ್ ಶಕ್ತಿಯನ್ನಾಗಿ ರೂಪಿಸಿದೆ.

ಆದರೆ, ಆಡಳಿತವು ಫ್ಯಾಸಿಸ್ಟ್ ಆಗಿದೆಯೇ? ಆಡಳಿತವನ್ನು ಯಾವಾಗ ಸಂಪೂರ್ಣವಾಗಿ ಫ್ಯಾಸಿಸ್ಟ್ ಆಗಿದೆ ಎಂದು ಹೇಳಬಹುದು? 1933ರಲ್ಲಿ ಅಧಿಕಾರಕ್ಕೆ ಬಂದ ಹಿಟ್ಲರ್ ಕೂಡ ಪ್ರಜಾಪ್ರಭುತ್ವ ವಿರೋಧಿ ಮತ್ತು ಫ್ಯಾಸಿಸ್ಟ್ ನೀತಿಗಳನ್ನು ಹಂತ ಹಂತವಾಗಿ ಜಾರಿಗೆ ತಂದಿದ್ದ.

ಜೇಸನ್ ಸ್ಟಾನ್ಲಿ ತನ್ನ ಪ್ರಸಿದ್ಧ ಕೃತಿ “ಹೌ ಫ್ಯಾಸಿಸಂ ವರ್ಕ್ಸ್”ನಲ್ಲಿ ವಿವರಿಸಿದಂತೆ, ಹಿಟ್ಲರನು ಪೌರಾಣಿಕ ಭೂತಕಾಲ, ಅವಾಸ್ತವಿಕತೆ, ಬೌದ್ಧಿಕ ವಿರೋಧಿತನ, ಶ್ರೇಣೀಕರಣ ಮತ್ತು ಬಲಿಪಶುತನ ಮೊದಲಾದದವುಗಳನ್ನು ಸಾಂಸ್ಥಿಕ ಪ್ರಚಾರದ ಮೂಲಕ ಬಳಸಿಕೊಂಡು ಜರ್ಮನ್ ಸಮಾಜವನ್ನು ಅತಿ ಫ್ಯಾಸಿಸ್ಟ್ ಹಂತಕ್ಕೆ ಸಿದ್ಧಪಡಿಸಿದ್ದ.

1938ರಲ್ಲೇ ಮಡಗಾಸ್ಕರ್ಗೆ ಸಾಮೂಹಿಕ ಗಡೀಪಾರು ಮಾಡುವ ಮೂಲಕ “ಯಹೂದಿ ಸಮಸ್ಯೆ”ಯನ್ನು ಪರಿಹರಿಸಬಹುದೆಂದು ಅಂದಾಜಿಸಿದ್ದರೂ, ಹೋಲೋಕಾಸ್ಟ್ ಎಂಬ ಮಹಾ ಕ್ರೂರತೆಯನ್ನು 1943ರ ಹೊತ್ತಿಗೆ, ಅಂದರೆ, ಯುದ್ಧದ ನಡುವಿನಲ್ಲಿ ಯೋಜಿಸಲಾಗುತ್ತದೆ.

ಹಾಗಾಗಿ, ಸಮಾಜ ಮತ್ತು ರಾಜಕಾರಣದ ಫ್ಯಾಸಿಫಿಕೇಶನ್ ಎಂಬುದು ಅಧಿಕಾರವನ್ನು ಪಡೆದ ನಂತರ ವಿಕಸನಗೊಳ್ಳುವ ಪ್ರಕ್ರಿಯೆ. ಹಾಗಾಗಿ, ಫ್ಯಾಸಿಸಂ ತನ್ನ ಹಿಡಿತವನ್ನು ಸಂಪೂರ್ಣಗೊಳಿಸಿತು ಎಂದು ಹೇಳಬಹುದಾದ ಯಾವುದೇ ಒಂದು ಹಂತ ಇಲ್ಲ. ಆದರೂ, ರಾಜ್ಯಾಡಳಿತದ ಮೇಲಿನ ಅದರ ನಿಯಂತ್ರಣವೇ ಫ್ಯಾಸಿಸ್ಟ್ ಶಕ್ತಿಯ ಆರಂಭಿಕ ಹಂತ.

ಫ್ಯಾಸಿಸ್ಟ್ ಸರ್ಕಾರವೋ ಅಥವಾ ಫ್ಯಾಸಿಸ್ಟ್ ಪ್ರಭುತ್ವವೋ?
ಈ ನಡುವೆ, ಈ ಚರ್ಚೆಯಲ್ಲಿ ಕೇಳಲೇಬೇಕಾದ ರಾಜಕೀಯ ಪ್ರಶ್ನೆಯೆಂದರೆ, ಇಂದು ಭಾರತೀಯ ಪ್ರಜಾಪ್ರಭುತ್ವವಾದಿ ರಾಜಕಾರಣವು ಫ್ಯಾಸಿಸಮ್ಮನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿದೆಯೇ? ಬಿಜೆಪಿಯೇತರ “ಜಾತ್ಯತೀತ” ಪಕ್ಷಗಳು ತಮ್ಮ ರಾಜಕಾರಣದಲ್ಲಿ “ಫ್ಯಾಸಿಸ್ಟ್ ವಿರೋಧಿ”ಯಾಗಿಯೇ ಮುಂದುವರಿಯುತ್ತವೆಯೇ? ಮತ್ತು ಭಾರತೀಯ ರಾಜಕೀಯ ವ್ಯವಸ್ಥೆಯು ಇನ್ನೂ ದೊಡ್ಡದಾದ ಫ್ಯಾಸಿಸ್ಟ್ ವಿರೋಧಿ ರಾಜಕೀಯ ಮೈತ್ರಿಕೂಟದ ಸಾಮರ್ಥ್ಯವನ್ನು ಹೊಂದಿದೆಯೇ?

21ನೇ ಶತಮಾನದ ಫ್ಯಾಸಿಸಂ ಅಥವಾ ನವಫ್ಯಾಸಿಸಂ ಎಂಬುದು ಬಂಡವಾಳಶಾಹಿ ಬಿಕ್ಕಟ್ಟಿನ ಮತ್ತು ಪ್ರಜಾಪ್ರಭುತ್ವದ ಹಿಮ್ಮೆಟ್ಟುವಿಕೆಯ ವಾಸ್ತವತೆಯಲ್ಲಿ ಕೆಲಸ ಮಾಡುತ್ತದೆ ಮತ್ತು ಪ್ರಗತಿ ಸಾಧಿಸುತ್ತದೆ. 20ನೇ ಶತಮಾನದ ಅಂತರ್ಯುದ್ಧದ ಕಾಲದಲ್ಲಿ ಫ್ಯಾಸಿಸ್ಟ್ ಸ್ವಾಧೀನವನ್ನು ವಿರೋಧಿಸಿದ ಎಡ ಮತ್ತು ಎಡ-ಮಧ್ಯಮ ರಾಜಕೀಯ ರಚನೆಗಳು ಇದ್ದವು. ಆದರೆ, 91ರ ನಂತರದ ನವ ಉದಾರವಾದಿ ಆರರ್ಥಿಕತೆಯ ಹಿನ್ನೆಲೆಯಲ್ಲಿ, ಮಧ್ಯಮವು ಬಲಕ್ಕೆ ಹೊರಳಿಕೊಂಡಿದೆ. ಹೀಗಾಗಿ ಭಾರತೀಯ ಫ್ಯಾಸಿಸ್ಟರಿಗೆ ಉದಾರವಾದಿ ಸಂವಿಧಾನ ಅಥವಾ ಉದಾರವಾದಿ ಪಕ್ಷಗಳನ್ನು ಶುದ್ಧೀಕರಿಸುವ ಅಥವಾ ಕಿತ್ತು ಹಾಕುವ ಅಗತ್ಯತೆ ಇಲ್ಲ. ಇದು 21ನೇ ಶತಮಾನದ ನವಫ್ಯಾಸಿಸ್ಟ್ ರಾಜಕೀಯ ಸಂದರ್ಭ. ಫ್ಯಾಸಿಸಂ ಚುನಾವಣಾ ಪ್ರಜಾಪ್ರಭುತ್ವದೊಂದಿಗೆ ಜೊತೆಯಾಗಿಯೇ ಇದ್ದುಕೊಂಡು ಅದರ ಸಾರವನ್ನು ಮೂಲಭೂತವಾಗಿ ಬದಲಾಯಿಸುತ್ತದೆ. ಕಾರ್ಪೊರೇಟ್ ಬಂಡವಾಳ ಮತ್ತು ಬ್ರಾಹ್ಮಣಿಕಲ್ ಆದ ಸಾಮಾಜಿಕ ಸಂರಚನೆಗಳ ಹಿನ್ನೆಲೆಯಲ್ಲಿ ಕೆಲಸ ಮಾಡುವ ಬಿಜೆಪಿ, ಪ್ರಜಾಪ್ರಭುತ್ವದ ಬಾಹ್ಯ ರಚನೆಯನ್ನು ಯಶಸ್ವಿಯಾಗಿ ಉಳಿಸಿಕೊಂಡಿದೆ ಮತ್ತು ಅದರ ಮೂಲತತ್ವವನ್ನು ನಾಶಪಡಿಸುತ್ತಿದೆ.

ಐತಿಹಾಸಿಕವಾಗಿ, ಬಿಕ್ಕಟ್ಟಿನ ಸಮಯದಲ್ಲಿ ಉದಾರವಾದಿ ಪ್ರಜಾಪ್ರಭುತ್ವವಾದಿಗಳೆಂದು ಕರೆಯಲ್ಪಡುವವರು ಸಹ ಫ್ಯಾಸಿಸಮ್ಮಿನೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಭಾರತದ ಇಂದಿನ ಮುಖ್ಯವಾಹಿನಿಯ ರಾಜಕೀಯ ಪಕ್ಷಗಳು ಬಿಜೆಪಿಯನ್ನು ಚುನಾವಣಾ ರಾಜಕಾರಣದಲ್ಲಿ ವಿರೋಧಿಸಬಹುದೇ ಹೊರತು, ಅವರು ಭಾರತೀಯ ಫ್ಯಾಸಿಸಮ್ಮಿನ ಬ್ರಾಹ್ಮಣಿಕಲ್ ಮತ್ತು ಕಾರ್ಪೊರೇಟ್ ಅಡಿಪಾಯಗಳನ್ನು ಪ್ರಶ್ನಿಸುವುದೇ ಇಲ್ಲ.

ಆದ್ದರಿಂದ, ಸದ್ಯದ ವಿರೋಧ ಪಕ್ಷಗಳು ಫ್ಯಾಸಿಸಂ ವಿರುದ್ಧದ ಹೋರಾಟವನ್ನು ಮುನ್ನಡೆಸಬಹುದು ಎಂಬ ಯಾವುದೇ ಭರವಸೆಯು ರಾಜಕೀಯವಾಗಿ ಮುಗ್ಧವಾಗಿದೆ. “ಉದಾರವಾದಿ ವಿರೋಧ” ಅಥವಾ ಪ್ರತಿರೋಧವೆಂಬುದು ಬಿಜೆಪಿಯೊಂದಿಗೆ ಇದೆಯೇ ಹೊರತು ನವ ಉದಾರವಾದೀ ಬ್ರಾಹ್ಮಣಿಕಲ್ ಹಿಂದುತ್ವದ ಫ್ಯಾಸಿಸಂನೊಂದಿಗೆ ಅಲ್ಲವೇ ಅಲ್ಲ. ಮತ್ತೊಂದೆಡೆ, ಉದಾರವಾದಿ ಪಕ್ಷಗಳೆಂದು ಗುರುತಿಸಿಕೊಳ್ಳುವವರು ಕೂಡ ತಮ್ಮ ರಾಜ್ಯಗಳಲ್ಲಿ ತಾವೇ ಮುಂದೆ ನಿಂತುಕೊಂಡು ಫ್ಯಾಸಿಸ್ಟರ ಸಾಮಾಜಿಕ ಮತ್ತು ಆರ್ಥಿಕ ಕ್ರಮಗಳನ್ನು ಜಾರಿಗೆ ತಂದಿರುವ ಅಥವಾ ಫ್ಯಾಸಿಸ್ಟ್ ಕಾನೂನುಗಳನ್ನು ತರುವಲ್ಲಿ ಸಂಸತ್ತಿನಲ್ಲಿ ಬಿಜೆಪಿಯನ್ನು ಬೆಂಬಲಿಸಿರುವ ನೂರಾರು ಉದಾಹರಣೆಗಳನ್ನು ಇಲ್ಲಿ ಕೊಡಬಹುದು.

ಹೀಗಾಗಿ ಬಿಜೆಪಿಯನ್ನು ಚುನಾವಣೆಯಲ್ಲಿ ಸೋಲಿಸಬಹುದೇ ಹೊರತು, ಫ್ಯಾಸಿಸ್ಟ್ ಪ್ರಭುತ್ವವನ್ನಲ್ಲ. ಪರ್ಯಾಯ ರಾಜಕೀಯ ಶಕ್ತಿಗಳು ಮೂಡಿಬಾರದಿದ್ದರೆ ಪ್ರಭುತ್ವವು ಫ್ಯಾಸಿಸ್ಟ್ ಆಗಿಯೇ ಮುಂದುವರಿಯುತ್ತದೆ.

ಆದ್ದರಿಂದ, ಭಾರತದ ಫ್ಯಾಸಿಸ್ಟ್ ವಿರೋಧಿ ಹೋರಾಟ ಹೀಗಿರಬೇಕು:
ಬ್ರಾಹ್ಮಣ್ಯ ವಿರೋಧಿ – ಹಿಂದೂ ರಾಷ್ಟ್ರೀಯತೆಯ ಮೂಲ ಇಂಧನವಾಗಿರುವ ಜಾತಿ ದಬ್ಬಾಳಿಕೆಯನ್ನು ಗುರಿಯಾಗಿಸಿಕೊಳ್ಳುವುದು.

ಕಾರ್ಪೊರೇಟ್ ಬಂಡವಾಳಶಾಹಿ ವಿರೋಧಿ – ಫ್ಯಾಸಿಸಮ್ಮನ್ನು ಪೋಷಿಸುತ್ತಿರುವ ಆರ್ಥಿಕ ರಚನೆಗಳನ್ನು ವಿರೋಧಿಸುವುದು.

ದಮನಿತರ ನಾಯಕತ್ವ – ದಲಿತರು, ಆದಿವಾಸಿಗಳು, ಮುಸ್ಲಿಮರು ಮತ್ತು ಕಾರ್ಮಿಕ ವರ್ಗಗಳು ಮುಂಚೂಣಿಯಲ್ಲಿರಬೇಕು.

ಹೋಲೋಕಾಸ್ಟ್ ಎಂಬುದು ಒಂದು ಅತಿ ಫ್ಯಾಸಿಸ್ಟ್ ಕ್ರಮವಾಗಿದ್ದರೂ, ಅಮೇರಿಕನ್ ನರಮೇಧ ವಿದ್ವಾಂಸ ಗ್ರೆಗೊರಿ ಸ್ಟಾಂಟನ್ ಭಾರತವು “ನರಮೇಧ ತುರ್ತು ಪರಿಸ್ಥಿತಿ”ಯನ್ನು ಎದುರಿಸುತ್ತಿದೆಯೆಂದು ಎಚ್ಚರಿಸುತ್ತಾರೆ. ಸಾಮೂಹಿಕ ಹತ್ಯಾಕಾಂಡದ ಹಂತ ತಲುಪುವ ಮೊದಲು ಒಂದು ಸಮಾಜದಲ್ಲಿ ಘಟಿಸುವ ಹತ್ತು ಹಂತಗಳನ್ನು ಪ್ರೊ. ಸ್ಟಾಂಟನ್ ವಿವರಿಸುತ್ತಾರೆ. ಅವುಗಳು ಹೀಗಿವೆ:
ವರ್ಗೀಕರಣ – “ಅನ್ಯ”ತೆಯನ್ನು ಸ್ಪಷ್ಟಗೊಳಿಸವುದು
ಸಾಂಕೇತಿಕೀಕರಣ – ಗುಂಪುಗಳನ್ನು ಗುರುತಿಸುವುದು
ತಾರತಮ್ಯ – ವ್ಯವಸ್ಥಿತ ಹೊರಗಿಡುವಿಕೆ ಮತ್ತು ಅಂಚಿನಲ್ಲಿಡುವಿಕೆ
ಅಮಾನವೀಕರಣ – ಘನತೆ ಮತ್ತು ಹಕ್ಕುಗಳನ್ನು ಕಸಿದುಕೊಳ್ಳುವುದು
ಸಂಘಟನೆ – ಈ ತಾರತಮ್ಯವನ್ನು ನೀತಿಗಳಾಗಿ ರೂಪಿಸುವುದು
ಧ್ರುವೀಕರಣ – ಸಾಮಾಜಿಕ ವಿಭಜನೆಗಳನ್ನು ಆಳಗೊಳಿಸುವುದು
ತಯಾರಿ – ಹಿಂಸೆಗೆ ವ್ಯವಸ್ಥಿತ ಅಡಿಪಾಯ ಕಟ್ಟಿಕೊಳ್ಳುವುದು
ಕಿರುಕುಳ – ಕಾನೂನಿನ ದಬ್ಬಾಳಿಕೆ ಮತ್ತು ಪ್ರಭುತ್ವದ ಹಿಂಸೆ
ನಿರ್ಮೂಲನೆ– ಸಾಮೂಹಿಕ ಹತ್ಯಾಕಾಂಡಗಳು
ನಿರಾಕರಣೆ – ಸಾಕ್ಷಿ ನಾಶ ಮತ್ತು ಹೊಣೆಗಾರಿಕೆಯನ್ನು ತೊಡೆದು ಹಾಕುವುದು

ಮೋದಿಯವರ ಆಳ್ವಿಕೆಯಲ್ಲಿ ಭಾರತವು ಈ ಎಲ್ಲಾ ಹತ್ತು ಹಂತಗಳ ಮೂಲಕ ವೇಗವಾಗಿ ಸಾಗುತ್ತಿದೆ. ಪೂರ್ಣ ಪ್ರಮಾಣದ ನರಮೇಧ ಇನ್ನೂ ಸಂಭವಿಸಿಲ್ಲವಾದರೂ, ಸಮಾಜವನ್ನು ಆಳವಾಗಿ ಫ್ಯಾಸಿಸ್ಟ್ ರೂಪಾಂತರಗೊಳಿಸುವ ಕ್ರಿಯೆ ಜಾರಿಯಲ್ಲಿದೆ. ಮುಸ್ಲಿಮರನ್ನು ಅಮಾನವೀಯಗೊಳಿಸುವುದು, ದಲಿತರು ಮತ್ತು ಶೂದ್ರರನ್ನು ಅಂಚಿನಲ್ಲಿಡುವುದು ಮತ್ತು ಪ್ರಜಾಪ್ರಭುತ್ವ ಸಂಸ್ಥೆಗಳನ್ನು ನಾಶಗೊಳಿಸುವುದು ಇವಕ್ಕೆ ಕೆಲವು ಉದಾಹರಣೆಗಳು.

ಭಾರತೀಯ ಫ್ಯಾಸಿಸಂ ಮತ್ತು ಮುಂದಿನ ದಾರಿ
ಭಾರತವು ಸುಸ್ಥಿರವಾದ ಫ್ಯಾಸಿಸಮ್ಮಿಗೆ ಸಾಕ್ಷಿಯಾಗುತ್ತಿದೆ. ಅದು ಸಮಾಜದಲ್ಲಿ ಈಗಾಗಲೇ ಆಳವಾಗಿ ನುಸುಳಿಕೊಂಡಿದೆ. ಜಾತಿ ವ್ಯವಸ್ಥೆ ಮತ್ತು ಔಪಚಾರಿಕ ಪ್ರಜಾಪ್ರಭುತ್ವದ ಮೂಲಕ ಫ್ಯಾಸಿಸ್ಟ್ ಮೌಲ್ಯಗಳನ್ನು ತನ್ನದಾಗಿಸಿಕೊಂಡಿದೆ. ಅದನ್ನು ಸೋಲಿಸಬೇಕೆಂದರೆ, ಅದಕ್ಕೆ ಸಮಾನವಾಗಿ ನಿಲ್ಲಬಲ್ಲ, ನಿರಂತರವಾದ ಕ್ರಾಂತಿಕಾರಿ ಸಮಾಜವಾದಿ ಹೋರಾಟ ಅತ್ಯಗತ್ಯವಿದೆ.

ಈ ಹೋರಾಟವನ್ನು ನಮ್ಮ ವಿರೋಧ ಪಕ್ಷಗಳು ಮುನ್ನಡೆಸಲು ಸಾಧ್ಯವಿಲ್ಲ. ಅಂದರೆ, ಬ್ರಾಹ್ಮಣ್ಯದ ಶ್ರೇಷ್ಠತೆ ಮತ್ತು ಕಾರ್ಪೊರೇಟ್ ಬಂಡವಾಳಶಾಹಿ ಎರಡರ ವಿರುದ್ಧವೂ ಜನಸಾಮಾನ್ಯರ ಚಳುವಳಿ ನಡೆಯಬೇಕು. ಆಗ ಮಾತ್ರ ಭಾರತ ತುಳಿಯುತ್ತಿರುವ ಫ್ಯಾಸಿಸ್ಟ್ ಪಥದಿಂದ ಅದನ್ನು ಹಿಮ್ಮೆಟ್ಟಿಸಬಹುದು. ಭ್ರಮಾತ್ಮಕ ಬಿಜೆಪಿ ವಿರೋಧಿ ಮೈತ್ರಿಕೂಟದಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವ ಬದಲು, ನಿಜವಾದ ಫ್ಯಾಸಿಸ್ಟ್ ವಿರೋಧಿ ಜನ ಚಳುವಳಿಯನ್ನು ಕಟ್ಟುವಲ್ಲಿ ನಮ್ಮ ಫ್ಯಾಸಿಸ್ಟ್ ವಿರೋಧೀ ರಾಜಕಾರಣವನ್ನು ತೊಡಗಿಸಿಕೊಳ್ಳಬೇಕು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page