ಭಾರತೀಯ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷೆ ಪಿ.ಟಿ. ಉಷಾ ವಿರುದ್ಧ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಸದಸ್ಯರು ತಿರುಗಿ ಬಿದ್ದಿದ್ದು ಈಗ ಪಿಟಿ ಉಷಾ ತಮ್ಮ ಪದವಿ ಕಳೆದುಕೊಳ್ಳುವ ಮಟ್ಟಕ್ಕೆ ಮುಸುಕಿನ ಗುದ್ದಾಟ ತಾರಕಕ್ಕೇರಿದೆ. ಪಿಟಿ ಉಷಾ ಅವರ ಹಲವು ಏಕಪಕ್ಷೀಯ ನಿರ್ಧಾರಗಳು ಒಲಿಂಪಿಕ್ಸ್ ಸಂಸ್ಥೆ ನಷ್ಟಕ್ಕೆ ಬೀಳಲು ಕಾರಣ ಎಂದು ಭಾವಿಸಿರುವ ಸದಸ್ಯರು ಪಿಟಿ ಉಷಾ ವಿರುದ್ಧ ಅ.25ರಂದು ನಡೆಯಲಿರುವ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವಿಶ್ವಾಸ ನಿರ್ಣಯ ಕೈಗೊಳ್ಳಲು ತೀರ್ಮಾನಿಸಿದ್ದಾರೆ.
ಕಾರ್ಯಕಾರಿ ಸಮಿತಿಯ 26 ಅಜೆಂಡಾಗಳಲ್ಲಿ ಅವಿಶ್ವಾಸ ನಿರ್ಣಯವನ್ನೂ ಸೇರಿಸಲಾಗಿದೆ ಎಂದು ತಿಳಿದು ಬಂದಿದೆ. ಪಿಟಿ ಉಷಾ ಸಂಸ್ಥೆಯೊಳಗಿನ ಸಾಂವಿಧಾನಿಕ ನಿಮಯಗಳ ಉಲ್ಲಂಘಿಸುತ್ತಿದ್ದಾರೆ ಮತ್ತು ಭಾರತೀಯ ಕ್ರೀಡೆ ಮತ್ತು ಕ್ರೀಡಾಪಟುಗಳ ಅಗತ್ಯಗಳ ವಿರುದ್ದ ಇದ್ದು ಕ್ರೀಡೆಗೆ ಹಾನಿಯುಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅಂಶಗಳನ್ನು ಅಜೆಂಡಾದಲ್ಲಿ ಸೇರಿಸಲಾಗಿದೆ.
ಹಲವು ದಿನಗಳಿಂದಲೂ ಸಮಿತಿ ಸದಸ್ಯರು ಹಾಗೂ ಪಿಟಿ ಉಷಾ ನಡುವೆ ಆರೋಪ-ಪ್ರತ್ಯಾರೋಪ ನಡೆಯುತ್ತಿದೆ. ಅಧ್ಯಕ್ಷರಾಗಿ ಆಯ್ಕೆಯಾದ ಆರಂಭದಿಂದಲೂ ಕೂಡ ಉಷಾ ಅವರ ಮೇಲೆ ಸಾಲು ಸಾಲು ಅಪವಾದಗಳು ಕೇಳಿ ಬರುತ್ತಿವೆ. ಪಕ್ಷಪಾತಿ ನಿಲುವು, ಅಸಂವಿಧಾನಿಕ ನಡೆ ವಿರುದ್ದ ಹಲವು ಬಾರಿ ಸಮಿತಿ ಸದಸ್ಯರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಇತ್ತೀಚೆಗೆ ರಿಯಲನ್ಸ್ ಇಂಡಸ್ಟ್ರೀಸ್ ಜತೆ ಮಾಡಿಕೊಂಡ ಪ್ರಾಯೋಜಕತ್ವ ಒಪ್ಪಂದದಿಂದ ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ)ಗೆ 24 ಕೋಟಿ ನಷ್ಟವಾಗಿದೆ ಎಂದು ಸಿಎಜಿ ವರದಿಯಲ್ಲಿ ಸಂಸ್ಥೆಯ ಖಜಾಂಚಿ ಸಹದೇವ್ ಯಾದವ್ ಇತ್ತೀಚೆಗೆ ಆರೋಪ ಮಾಡಿದ್ದರು. ಆದರೆ, ಈ ಆರೋಪವನ್ನು ಅಧ್ಯಕ್ಷೆ ಪಿ.ಟಿ.ಉಷಾ ತಳ್ಳಿಹಾಕಿದ್ದರು. ʼಇದು ತಮ್ಮ ವ್ಯಕ್ತಿತ್ವಕ್ಕೆ ಕಳಂಕ ತರಲು ರೂಪಿಸಿರುವ ಸಂಚು ಆಗಿದೆ. ತಪ್ಪುದಾರಿಗೆಳೆಯುವ ಇಂಥ ಮಾಹಿತಿ ನೀಡಿದ ಯಾರೇ ಆಗಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ’ ಉಷಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದರು.
ಅವಿಶ್ವಾಸ ನಿರ್ಣಯ ಮಂಡಿಸುವ ಸಮಿತಿ ನಿರ್ಧಾರವನ್ನು ಪಿಟಿ ಉಷಾ ವಿರೋಧಿಸಿದ್ದು, ಇದು ಕಾನೂನುಬಾಹಿರ ಹಾಗೂ ಅನಧಿಕೃತ ಎಂದು ಖಂಡಿಸಿದ್ದಾರೆ. ಸಂಸ್ಥೆಗೆ ರಘುರಾಮ್ ಅಯ್ಯರ್ ಸಿಎಒ ಆಗಿದ್ದಾರೆ. ಆ ಹುದ್ದೆಗೆ ಬೇರೆ ಯಾರನ್ನೂ ಈವರೆಗೆ ನೇಮಿಸಿಲ್ಲ. ಈಗ ಕಲ್ಯಾಣ್ ಚೌಬೆ ಸಿಎಒ ಎಂದು ಅವಿಶ್ವಾಸ ನಿರ್ಣಯದ ನೋಟಿಸ್ ನಲ್ಲಿ ತಿಳಿಸಲಾಗಿದೆ. ಇದು ಕಾನೂನುಬಾಹಿರ’ ಎಂದು ಪಿಟಿ ಉಷಾ ಪ್ರತಿಕ್ರಿಯಿಸಿದ್ದಾರೆ.