Friday, January 2, 2026

ಸತ್ಯ | ನ್ಯಾಯ |ಧರ್ಮ

ನ್ಯೂಯಾರ್ಕ್‌ನ ನೂತನ ಮೇಯರ್ ಆಗಿ ಭಾರತೀಯ ಮೂಲದ ಜೋಹ್ರಾನ್ ಮಮ್ದಾನಿ ಪ್ರಮಾಣವಚನ ಸ್ವೀಕಾರ

ನ್ಯೂಯಾರ್ಕ್: ಭಾರತೀಯ ಮೂಲದ 34 ವರ್ಷದ ಜೋಹ್ರಾನ್ ಮಮ್ದಾನಿ ಅವರು ಗುರುವಾರ ನ್ಯೂಯಾರ್ಕ್ ನಗರದ ಮೇಯರ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಅಮೆರಿಕದ ಅತ್ಯಂತ ದೊಡ್ಡ ವಲಸೆ ನಗರವಾದ ನ್ಯೂಯಾರ್ಕ್‌ನ ಮೇಯರ್ ಆಗಿ ಅವರು ಮುಂದಿನ ನಾಲ್ಕು ವರ್ಷಗಳ ಕಾಲ ಅಧಿಕಾರ ನಡೆಸಲಿದ್ದಾರೆ. ಈ ಮೂಲಕ ಅವರು ನ್ಯೂಯಾರ್ಕ್ ನಗರದ ಮೊದಲ ಮುಸ್ಲಿಂ ಮೇಯರ್ ಮತ್ತು ಈ ಹುದ್ದೆಯನ್ನು ಅಲಂಕರಿಸಿದ ಅತಿ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅಪೂರ್ವ ಪ್ರಮಾಣವಚನ ಸಮಾರಂಭ: ಮಮ್ದಾನಿ ಅವರು ಬುಧವಾರ ಮಧ್ಯರಾತ್ರಿ ಮ್ಯಾನ್‌ಹ್ಯಾಟನ್ ಸಿಟಿ ಹಾಲ್ ಅಡಿಯಲ್ಲಿರುವ ಐತಿಹಾಸಿಕ ಸಬ್‌ವೇ ಸ್ಟೇಷನ್‌ನಲ್ಲಿ ಮುಸ್ಲಿಮರ ಪವಿತ್ರ ಗ್ರಂಥವಾದ ಕುರಾನ್ ಮೇಲೆ ಕೈಯಿಟ್ಟು ಪ್ರಮಾಣವಚನ ಸ್ವೀಕರಿಸಿದರು. ನ್ಯೂಯಾರ್ಕ್ ಅಟಾರ್ನಿ ಜನರಲ್ ಲೆಟಿಟಿಯಾ ಜೇಮ್ಸ್ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ನಂತರ ಮಾತನಾಡಿದ ಮಮ್ದಾನಿ, “ಇದು ಜೀವನದಲ್ಲಿ ಸಿಗುವ ಅಪರೂಪದ ಗೌರವ ಮತ್ತು ವಿಶೇಷ ಅವಕಾಶ” ಎಂದು ಭಾವುಕರಾಗಿ ನುಡಿದರು. ಗುರುವಾರ ಮಧ್ಯಾಹ್ನ ಸಿಟಿ ಹಾಲ್‌ನಲ್ಲಿ ನಡೆದ ಮತ್ತೊಂದು ಸಮಾರಂಭದಲ್ಲಿ, ಮಮ್ದಾನಿಯವರ ರಾಜಕೀಯ ಸ್ಫೂರ್ತಿಯಾದ ಅಮೆರಿಕದ ಸೆನೆಟರ್ ಬೆರ್ನಿ ಸ್ಯಾಂಡರ್ಸ್ ಅವರು ಎರಡನೇ ಬಾರಿಗೆ ಮಮ್ದಾನಿ ಅವರಿಂದ ಪ್ರಮಾಣವಚನ ಸ್ವೀಕರಿಸಿದರು.

ಟ್ರಂಪ್ ಅವರೊಂದಿಗೆ ಜಿದ್ದಾಜಿದ್ದಿ: ಡೆಮೋಕ್ರಾಟ್ ಮತ್ತು ಎಡಪಂಥೀಯ ಸಿದ್ಧಾಂತ ಹೊಂದಿರುವ ಮಮ್ದಾನಿ ಅವರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬಲಪಂಥೀಯ ನೀತಿಗಳ ತೀವ್ರ ವಿರೋಧಿಯಾಗಿದ್ದಾರೆ. ಚುನಾವಣೆಯ ವೇಳೆ ಮಮ್ದಾನಿ ಅವರನ್ನು ಸೋಲಿಸಲು ಟ್ರಂಪ್ ಅವರು ನಗರದ ಅನುದಾನ ಸ್ಥಗಿತಗೊಳಿಸುವ ಮತ್ತು ನ್ಯಾಷನಲ್ ಗಾರ್ಡ್ ಪಡೆಗಳನ್ನು ನಿಯೋಜಿಸುವ ಬೆದರಿಕೆ ಹಾಕಿದ್ದರು. ಆದರೆ ಈಗ ಚುನಾವಣೆ ಮುಗಿದ ನಂತರ ಟ್ರಂಪ್ ಅವರು ಅಚ್ಚರಿಯ ರೀತಿಯಲ್ಲಿ ಮಮ್ದಾನಿ ಅವರನ್ನು ಶ್ವೇತಭವನಕ್ಕೆ ಆಹ್ವಾನಿಸಿದ್ದು, “ಅವರು ಉತ್ತಮ ಕೆಲಸಗಳನ್ನು ಮಾಡಲಿ, ನಾನು ಅವರಿಗೆ ಸಹಕರಿಸುತ್ತೇನೆ” ಎಂದು ಭರವಸೆ ನೀಡಿದ್ದಾರೆ.

ಯಾರು ಈ ಮಮ್ದಾನಿ?

  • ಜನ್ಮ: 1991 ಅಕ್ಟೋಬರ್ 18 ರಂದು ಉಗಾಂಡಾದ ಕಂಪಾಲಾದಲ್ಲಿ ಜನಿಸಿದರು.
  • ಕುಟುಂಬ: ಇವರ ತಾಯಿ ಪ್ರಸಿದ್ಧ ಭಾರತೀಯ ಚಲನಚಿತ್ರ ನಿರ್ದೇಶಕಿ ಮೀರಾ ನಾಯರ್ ಹಾಗೂ ತಂದೆ ಶಿಕ್ಷಣತಜ್ಞ ಮತ್ತು ಲೇಖಕ ಮಹಮೂದ್ ಮಮ್ದಾನಿ.
  • ಶಿಕ್ಷಣ: ಕೇಪ್‌ಟೌನ್‌ನಲ್ಲಿ ಬಾಲ್ಯ ಕಳೆದ ಇವರು ತಮ್ಮ 7ನೇ ವಯಸ್ಸಿನಲ್ಲಿ ನ್ಯೂಯಾರ್ಕ್‌ಗೆ ಬಂದರು. 2014ರಲ್ಲಿ ಬೌಡೋಯಿನ್ ಕಾಲೇಜಿನಿಂದ ಆಫ್ರಿಕನ್ ಸ್ಟಡೀಸ್‌ನಲ್ಲಿ ಪದವಿ ಪಡೆದರು.
  • ರಾಜಕೀಯ ಪಯಣ: ಕಾಲೇಜಿನಲ್ಲಿದ್ದಾಗಲೇ ‘ಸ್ಟೂಡೆಂಟ್ಸ್ ಫಾರ್ ಜಸ್ಟಿಸ್ ಇನ್ ಪ್ಯಾಲೆಸ್ಟೈನ್’ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಂತರ ನ್ಯೂಯಾರ್ಕ್‌ನ ಪ್ರಗತಿಪರ ರಾಜಕೀಯ ಚಳವಳಿಗಳಲ್ಲಿ ಸಕ್ರಿಯರಾಗಿದ್ದ ಇವರು, 2019ರಲ್ಲಿ 36ನೇ ಜಿಲ್ಲೆಯಿಂದ ನ್ಯೂಯಾರ್ಕ್ ರಾಜ್ಯ ಅಸೆಂಬ್ಲಿಗೆ ಆಯ್ಕೆಯಾಗಿದ್ದರು.

ಕಾರ್ಪೊರೇಟ್ ಮತ್ತು ಕೋಮುವಾದಿ ನೀತಿಗಳಿಗೆ ವಿರುದ್ಧವಾಗಿ ಜನಪರ ನೀತಿಗಳನ್ನು ಅನುಸರಿಸುವುದಾಗಿ ಮಮ್ದಾನಿ ಅವರು ನ್ಯೂಯಾರ್ಕ್ ನಾಗರಿಕರಿಗೆ ಭರವಸೆ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page