Sunday, June 16, 2024

ಸತ್ಯ | ನ್ಯಾಯ |ಧರ್ಮ

ಏಕ ಸಂಸ್ಕೃತಿಯ ಚಕ್ರವ್ಯೂಹದೊಳಗೆ ಭಾರತದ ನೈಜ ದುರ್ಬಲ ಬುಡಕಟ್ಟುಗಳು

ನಾಗರೀಕತೆಯ ನಾಗಾಲೋಟದಲ್ಲಿ ಕುಲ ಮೂಲ ಜ್ಞಾನ, ನಂಬಿಕೆ, ವೈವಿಧ್ಯಮಯ ಸಂಸ್ಕೃತಿಗಳು ನಾಶವಾಗುತ್ತಿವೆ. ಜೊತೆಗೆ ವೈವಿಧ್ಯತೆಯಿಂದ ಕೂಡಿದ ನೈಜ ಬುಡಕಟ್ಟುಗಳನ್ನು ಒಳಗೊಂಡಂತೆ ರಾಷ್ಟ್ರೀಯವಾಗಿ ಏಕರೂಪಗೊಳಿಸುವ ಪ್ರಕ್ರಿಯೆ ಬಹಳ ವೇಗವಾಗುತ್ತಿದೆ. ಬುಡಕಟ್ಟುಗಳು ತಮ್ಮ ತಮ್ಮ ವೈವಿಧ್ಯಮಯ ಸಂಸ್ಕೃತಿಯನ್ನು ಬಿಟ್ಟು ಏಕ ಸಂಸ್ಕೃತಿ ಅಡಿಯಲ್ಲಿ ಸಮೀಕರಣಗೊಳ್ಳುತ್ತಿವೆ. ಏಕ ಸಂಸ್ಕೃತಿಯ ಚಕ್ರವ್ಯೂಹದೊಳಗೆ ತೂರಿದ ಬುಡಕಟ್ಟುಗಳು ಅತ್ತ ಏಕ ಸಂಸ್ಕೃತಿಯೊಳಗೂ ಸ್ಥಿರವಾಗದೇ ಇತ್ತ ಹೊರಗೆ ಬರಲೂ ಸಾಧ್ಯವಾಗದೆ ಗೊಂದಲಮಯ ಜೀವನ ಸಾಗಿಸುತ್ತಿದ್ದಾರೆ- ಡಾ.ಸಬಿತಾ ಗುಂಡ್ಮಿ ಸಹಾಯಕ ಪ್ರಾಧ್ಯಾಪಕರು, ಮಂಗಳೂರು ವಿಶ್ವವಿದ್ಯಾನಿಲಯ.

ಭಾರತವು ಸುಮಾರು ಎಂಟೂವರೆ ಶೇಕಡಾದಷ್ಟು ಬುಡಕಟ್ಟು ಸಮುದಾಯಗಳನ್ನು ಒಳಗೊಂಡಿದೆ. ಸುಮಾರು 104 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಭಾರತವು ವಿಶ್ವದಲ್ಲಿ ಅತ್ಯಂತ ಹೆಚ್ಚು ಬುಡಕಟ್ಟು ಸಮುದಾಯವನ್ನು ಹೊಂದಿರುವ ದೇಶವೆಂದು ಪ್ರಸಿದ್ಧಿಯಾಗಿದೆ. 705 ಕ್ಕೂ ಹೆಚ್ಚು ಪಂಗಡಗಳನ್ನು ಹೊಂದಿರುವ ಬುಡಕಟ್ಟು ಸಮುದಾಯವು ಕಲೆ, ಸಂಸ್ಕೃತಿ, ಧರ್ಮ, ಭಾಷೆ, ಉಡುಗೆ ತೊಡುಗೆಯೊಂದಿಗೆ ಪ್ರತಿಯೊಂದು ಬುಡಕಟ್ಟುಗಳು ಪರಸ್ಪರ ಭಿನ್ನತೆಯೊಂದಿಗೆ ವಿಶಿಷ್ಟವಾಗಿವೆ.

ಸ್ವತಂತ್ರ ಭಾರತದ ಪ್ರಜೆಗಳಾದ ನಾವು ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸುವುದಕ್ಕಾಗಿ, ಭಾರತದ ಎಲ್ಲಾ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನೆಯ ಸ್ವಾತಂತ್ರ್ಯವನ್ನು, ಸ್ಥಾನಮಾನ ಮತ್ತು ಅವಕಾಶಗಳ ಸಮತೆಯನ್ನು ದೊರೆಯುವಂತೆ ಮಾಡುವುದಕ್ಕಾಗಿ ವ್ಯಕ್ತಿಗೌರವ, ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲಿ ಭ್ರಾತೃತ್ವ ಭಾವನೆಯನ್ನು ಮೂಡಿಸುವುದಕ್ಕೆ ದೃಢಸಂಕಲ್ಪ ಮಾಡಿ ನಮ್ಮ ಸಂವಿಧಾನ ಸಭೆಯಲ್ಲಿ 1949 ನೆಯ ಇಸವಿಯ ನವೆಂಬರ್ ತಿಂಗಳ 26 ನೇ ದಿನದಂದು ಈ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡು ಅಂಗೀಕರಿಸಿ, ಶಾಸನವಾಗಿ ವಿಧಿಸಿಕೊಂಡಿದ್ದೇವೆ. ಈ ಪಥದಲ್ಲಿ ಸರಕಾರವು ಅಭಿವೃದ್ಧಿ ಕಾರ್ಯಕ್ರಮಗಳನ್ನು ವಿಸ್ತರಿಸುತ್ತಾ ಸಮಾಜದ ಎಲ್ಲಾ ಸಮುದಾಯಗಳನ್ನು ಒಳಗೊಳ್ಳುತ್ತಾ ಒಟ್ಟು ಸಮಾಜವನ್ನು ಐಕ್ಯಗೊಳಿಸುವಲ್ಲಿ ಸರಕಾರ ಮತ್ತು ಸ್ವಯಂ ಸೇವಾ ಸಂಸ್ಥೆಗಳು ಕಾರ್ಯಪ್ರವೃತ್ತರಾಗಿವೆ.

ಸ್ವಾತಂತ್ರ್ಯಾನಂತರದ ಭಾರತವು, ಅಭಿವೃದ್ಧಿಯ ಪಥದಲ್ಲಿ ಮುಂಚೂಣಿಯಲ್ಲಿದ್ದು ಬೇರೆ ಬೇರೆ ಆಯಾಮಗಳಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಂಡಿದೆ. ಅಭಿವೃದ್ಧಿಯ ಭಾಗವಾಗಿ ಜನ ಸಮುದಾಯವು ತಮ್ಮ ತಮ್ಮ ಜೀವನ ಮಟ್ಟವನ್ನು ಸುಧಾರಿಸಿಕೊಂಡಿದೆ. ಹಾಗಾಗಿಯೂ ಭಾರತದ ಕೆಲವು ಜನಸಮುದಾಯಗಳು ಈ ಅಭಿವೃದ್ಧಿಯ ಪ್ರಕ್ರಿಯೆಗೆ ಒಳಗಾಗದೆ ಇರುವುದು ಕಾಣಬಹುದು. ದಿನನಿತ್ಯ ಹಸಿವು, ಬಡತನ, ಅಪೌಷ್ಟಿಕತೆ, ಅನಕ್ಷರತೆ, ನಿರುದ್ಯೋಗ ಇತ್ಯಾದಿ ಸಮಸ್ಯೆಗಳನ್ನು ಅನುಭವಿಸುತ್ತಿದೆ. ಅದರಲ್ಲಿಯೂ ಸುಮಾರು 75 ಕ್ಕೂ ನೈಜ ಬುಡಕಟ್ಟುಗಳು ದಿನನಿತ್ಯದ ಮೂಲಭೂತ ಅವಶ್ಯಕತೆಗಳಿಂದ ವಂಚಿತವಾಗಿವೆ. ಮಾನವ ಆಭಿವೃದ್ಧಿ ಸೂಚ್ಯಂಕಗಳಾದ ಶಿಕ್ಷಣ, ಆರೋಗ್ಯ, ಆದಾಯ ಮತ್ತು ಉದ್ಯೋಗಗಳಿಂದ ಅಸಮಾನವಾಗಿರುವುದನ್ನು ಕಾಣಬಹುದು.

ಅತ್ಯಂತ ಹಿಂದುಳಿದಿರುವ ಸುಮಾರು 28 ಲಕ್ಷಕ್ಕೂ ಹೆಚ್ಚು ಜನರನ್ನು ದುರ್ಬಲ ಪಂಗಡವೆಂದು 1973 ರ ದೆಬರ್ ಸಮಿತಿಯು ಪಿ.ಟಿ.ಜಿ (ಪ್ರಾಚೀನ ದುರ್ಬಲ ಬುಡಕಟ್ಟು- Primitive Tribal Group) ಎಂದು ಕರೆಯಿತು. ತದನಂತರ 2006 ರಲ್ಲಿ ಈ ಸಮುದಾಯಗಳನ್ನು (PVTGs) ನೈಜ ದುರ್ಬಲ ಬುಡಕಟ್ಟುಗಳೆಂದು ಕರೆಯಲಾಯಿತು. 12 ಕ್ಕೂ ಹೆಚ್ಚು ಬುಡಕಟ್ಟುಗಳು ಸುಮಾರು 50,000 ಜನಸಂಖ್ಯೆಯನ್ನು ಹೊಂದಿವೆ. ಉಳಿದಂತೆ ಎಲ್ಲಾ ಸಮುದಾಯಗಳು 1,000 ಕ್ಕೂ ಕಡಿಮೆ ಜನಸಂಖ್ಯೆಯನ್ನು ಹೊಂದಿವೆ. ಅಂಡಮಾನ್ ನಿಕೋಬರ್ ದ್ವೀಪಗಳಲ್ಲಿರುವ ಅಂಡಮಾನಿಸ್ ಮತ್ತು ಸೆಂಚಿಟೀನಾಸ್‌ರು ಕೇವಲ 39 ರಿಂದ 43 ಜನಸಂಖ್ಯೆಯನ್ನು ಹೊಂದಿದ್ದಾರೆ. ಹಾಗಾಗಿ ಈ ನೈಜ ದುರ್ಬಲ ಬುಡಕಟ್ಟು ಸಮುದಾಯಗಳು 18 ರಾಜ್ಯಗಳಲ್ಲಿ ಹಾಗೂ ಒಂದು ದ್ವೀಪ ಪ್ರದೇಶದಲ್ಲಿ ವಾಸಿಸುತ್ತಿದ್ದು ಸುಮಾರು28 ಲಕ್ಷ ಜನಸಂಖ್ಯೆಯನ್ನು ಹೊಂದಿದ್ದಾರೆ.

ಪ್ರಮುಖವಾಗಿ ಕೃಷಿ ಪೂರ್ವ ಸ್ಥಿತಿಗತಿಯನ್ನು ಹೊಂದಿದ್ದು ಜನಸಂಖ್ಯೆಯನ್ನು ದಿನದಿಂದ ದಿನಕ್ಕೆ ಕಳೆದುಕೊಳ್ಳುವುದೇ ಈ ಪಂಗಡಗಳ ವಿಶಿಷ್ಟ ಲಕ್ಷಣವಾಗಿದೆ. ತೀವ್ರವಾಗಿ ಶೈಕ್ಷಣಿಕವಾಗಿ ಹಿನ್ನೆಡೆಯನ್ನು ಹೊಂದಿರುವ ನೈಜ ದುರ್ಬಲ ಬುಡಕಟ್ಟುಗಳು ಮುಖ್ಯವಾಹಿನಿಯ ಸಮಾಜದಿಂದ ಪ್ರತ್ಯೇಕವಾದ ಜನವಸತಿಯನ್ನು ಹೊಂದಿದ್ದಾರೆ. ಹಾಗಾಗಿ ಅವರು ಸಾಮಾಜಿಕ ಮತ್ತು ಆರ್ಥಿಕವಾಗಿ ಅತ್ಯಂತ ಹಿಂದುಳಿದ ಕೃಷಿಪೂರ್ವ ಸಮುದಾಯವಾಗಿದೆ. ಭಾರತದ ಒಟ್ಟು 75 ಗುಂಪುಗಳು ಈ ತರಹದ ಲಕ್ಷಣಗಳನ್ನು ಹೊಂದಿದ್ದು ಅವರ ಜೀವನ ಮತ್ತು ಜೀವನಾಧಾರಕ್ಕೆ ಕಾಡನ್ನು ಅವಲಂಬಿಸಿ ಕೊಂಡಿದ್ದಾರೆ. ಆದರೆ ಪ್ರಸ್ತುತ ಕಾಡು ಸಂರಕ್ಷಣಾ ನೀತಿಗಳಿಂದ ಅವರ ಜೀವನ ಮತ್ತು ಆರ್ಥಿಕ ಬದುಕು ಅತಂತ್ರಗೊಂಡಿದ್ದು ಅನಾಭಿವೃದ್ಧಿಯ ಭಾಗವಾಗಿ ಬಿಂಬಿಸಲ್ಪಡುತ್ತಿದ್ದಾರೆ.

ಮುಖ್ಯವಾಗಿ ನೈಜ ದುರ್ಬಲ ಬುಡಕಟ್ಟುಗಳಿಗೆ ಕೃಷಿ ಪೂರ್ವ ಹಿನ್ನಲೆಯಿರುವುದರಿಂದ ಕಾಡು ಉತ್ಪನ್ನಗಳನ್ನು ಸಂಗ್ರಹಿಸುತ್ತ ಕಾಡುಗಳಲ್ಲಿಯೇ ವಾಸಮಾಡಿಕೊಂಡಿದ್ದು ದಿನನಿತ್ಯದ ಆಹಾರಕ್ಕೂ ಅವರು ಕಾಡನ್ನೆ ಅವಲಂಬಿಸಿ ಕೊಂಡಿದ್ದಾರೆ. ಕಾಡಿನ ಎಲೆ, ತೊಗಟೆ, ಹಣ್ಣು ಹಂಪಲುಗಳನ್ನು ಸಂಗ್ರಹಿಸಿ ಸಣ್ಣ ಮಟ್ಟದ ಆರ್ಥಿಕತೆಯೊಂದಿಗೆ ನೆಮ್ಮದಿಯ ಜೀವನ ಸಾಗಿಸುತ್ತಾರೆ. ಅರೆ ಅಲೆಮಾರಿ ಜೀವನ ಪದ್ಧತಿಯನ್ನು ಹೊಂದಿರುವ ಇವರು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವಲಸೆ ಹೋಗುತ್ತಾ ತಮ್ಮ ಜೀವನ ಚಕ್ರವನ್ನು ಕಳೆಯುತ್ತಾರೆ. ಈ ಸಮುದಾಯಗಳು ತಮ್ಮ ಸ್ವಂತ ಪೀಳಿಗೆಗೆ ಯಾವುದೇ ಖಾಸಗಿ ಆಸ್ತಿಗಳನ್ನು ಕ್ರೋಡೀಕರಿಸಿದ ಉದಾಹರಣೆಗಳಿಲ್ಲ. ಬದಲಾಗಿ ಸಮಸ್ತ ಜನ ಸಮುದಾಯಗಳಿಗೆ ಉಪಯೋಗವಾಗಲೆಂದು ಕಾಡು/ಮರ, ಶಿಖರ, ಗಣಿಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಬಿಟ್ಟು ಹೋಗಿರುವ ಉದಾಹರಣೆಗಳೆ ಹೆಚ್ಚು. ಆದಾಗ್ಯೂ ಜೀವ ವೈವಿಧ್ಯತೆಯಲ್ಲಿ ಈ ನೈಜ ದುರ್ಬಲ ಬುಡಕಟ್ಟುಗಳ ಸಂತತಿಗಳು ನಶಿಸುತ್ತಿರುವುದು ವಿನಾಶದ ಸೂಚನೆಯೇ ಆಗಿದೆ.

ಜೀವ ವೈವಿಧ್ಯತೆಯ ಅಸಮತೋಲನ ವಿಪತ್ತಿನ ಒಂದು ಸೂಚ್ಯಂಕ. ಇವತ್ತು ಪರಿಸರ ತಜ್ಞರು, ಒಂದು ಪ್ರಾಣಿ ಪ್ರಭೇದ ನಾಶವಾದಲ್ಲಿ ಹೇಗೆ ಅದು ಭೂಮಿ ಮತ್ತು ಅದನ್ನು ಅವಲಂಬಿಸಿರುವ ಜನರ ಮೇಲೆ ಪರಿಣಾಮ ಬೀರಬಹುದು ಎಂದು ಆತಂಕವನ್ನು ವ್ಯಕ್ತಪಡಿಸುತ್ತಾರೋ ಅದೇ ರೀತಿ ಸಮಾಜಶಾಸ್ತ್ರಜ್ಞರು ಮತ್ತು ಮಾನವಶಾಸ್ತ್ರಜ್ಞರು ಮಾನವ ಸಂತತಿಯ ನಾಶ ಮತ್ತು ಅದರ ಅನಾಭಿವೃದ್ಧಿಯ ಬಗ್ಗೆ ಆತಂಕವನ್ನು ಹೊಂದಿದ್ದಾರೆ. ಏಕೆಂದರೆ ಈ ಭೂಮಂಡಲದ ಸಂರಚನೆ ಕೇವಲ ಒಂದು ಪ್ರಭೇದದಿಂದ ಸೀಮಿತವಾಗಿಲ್ಲ. ಜಲಚರ ಜೀವಿಯೊಂದಿಗೆ ವೈವಿಧ್ಯತೆಯಲ್ಲಿ ಎಕರೂಪತೆಯನ್ನು ಹೊಂದಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಮಾನವ ಅಭಿವೃದ್ಧಿಯ ಪ್ರಕ್ರಿಯೆಗಳು ಈ ವೈವಿಧ್ಯತೆಯನ್ನು ಅಸಮತೋಲನಗೊಳಸಿ ಎಲ್ಲವನ್ನು ಏಕರೂಪಗೊಳಿಸುವ ಆತುರದಲ್ಲಿದೆ. ಇದು ಮುಂದೊಂದು ದಿನ ಭೂಮಿಯ ನಾಶಕ್ಕೆ ಕಾರಣವಾಗಬಹುದು.

ಭೂಮಿಯು ಇಂದು ಜನಸಂಖ್ಯೆಯ ಭಾರದಿಂದ ನಲುಗಿದೆ. ಈ ತರಹದ ಸಣ್ಣ ಸಣ್ಣ ಸಮುದಾಯಗಳು ನಾಶ ಹೊಂದುವುದರಿಂದ ಭೂಮಿಯ ಭಾರ ಕಡಿಮೆ ಆಗುವುದರ ಬದಲಾಗಿ ಭೂಮಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಉದಾಹರಣೆಗೆ ಒಂದು ದೇಹದಲ್ಲಿ ಪ್ರತಿಯೊಂದು ಅಂಗಗಳು ಎಷ್ಟು ಪ್ರಮುಖವೋ, ಅದೇ ತರಹ ಒಂದು ಅಂಗದ ವೈಕಲ್ಯತೆಯೂ ಪ್ರತಿಯೊಂದು ದೇಹ ಕಾರ್ಯದ ಮೇಲೆ ಪರಿಣಾಮ ಬೀರುವುದು. ಹಾಗಾಗಿ ಈ ಭೂಮಿಯ ಜೀವಸರಪಳಿಯು ಕೂಡ ಪರಸ್ಪರ ಅನ್ಯೋನ್ಯವಾಗಿದೆ. ಒಂದರ ನಾಶ ಇನ್ನೊಂದರ ಮೇಲೆ ಪ್ರಭಾವಿಸುವುದಂತು ನೂರರಷ್ಟು ಸತ್ಯ. ಉದಾ: ಕೋವಿಡ್-19 ರ ಸಂದರ್ಭದಲ್ಲಿ ಪ್ರತಿಯೊಬ್ಬ ಮನುಷ್ಯನಿಗೂ ಅದರ ಅರಿವಾಗಿರುವುದನ್ನು ನಾವು ನೋಡಬಹುದು. ಪ್ರತಿಯೊಬ್ಬ ವ್ಯಕ್ತಿಯೂ ಸಾಮಾಜಿಕ ವ್ಯವಸ್ಥೆಯಲ್ಲಿ ಪರಸ್ಪರ ಬೆಸೆದುಕೊಂಡಿದ್ದು ವ್ಯಕ್ತಿ ಒಂಟಿಯಾಗಿ ಜೀವನ ನಡೆಸಲಾರ, ಇದು ಎಲ್ಲಾ ಜೀವ ವೈವಿಧ್ಯತೆಗಳಿಗು ಅನ್ವಯಿಸುತ್ತದೆ.

ನಾಗರೀಕತೆಯ ನಾಗಾಲೋಟದಲ್ಲಿ ಕುಲ ಮೂಲ ಜ್ಞಾನ, ನಂಬಿಕೆ, ವೈವಿಧ್ಯಮಯ ಸಂಸ್ಕೃತಿಗಳು ನಾಶವಾಗುತ್ತಿವೆ. ಜೊತೆಗೆ ವೈವಿಧ್ಯತೆಯಿಂದ ಕೂಡಿದ ನೈಜ ಬುಡಕಟ್ಟುಗಳನ್ನು ಒಳಗೊಂಡಂತೆ ರಾಷ್ಟ್ರೀಯವಾಗಿ ಏಕರೂಪಗೊಳಿಸುವ ಪ್ರಕ್ರಿಯೆ ಬಹಳ ವೇಗವಾಗುತ್ತಿದೆ. ಬುಡಕಟ್ಟುಗಳು ತಮ್ಮ ತಮ್ಮ ವೈವಿಧ್ಯಮಯ ಸಂಸ್ಕೃತಿಯನ್ನು ಬಿಟ್ಟು ಏಕ ಸಂಸ್ಕೃತಿ ಅಡಿಯಲ್ಲಿ ಸಮೀಕರಣಗೊಳ್ಳುತ್ತಿವೆ. ಏಕ ಸಂಸ್ಕೃತಿಯ ಚಕ್ರವ್ಯೂಹದೊಳಗೆ ತೂರಿದ ಬುಡಕಟ್ಟುಗಳು ಅತ್ತ ಏಕ ಸಂಸ್ಕೃತಿಯೊಳಗೂ ಸ್ಥಿರವಾಗದೇ ಇತ್ತ ಹೊರಗೆ ಬರಲೂ ಸಾಧ್ಯವಾಗದೆ ಗೊಂದಲಮಯ ಜೀವನ ಸಾಗಿಸುತ್ತಿದ್ದಾರೆ. ಇದು ಕೇವಲ ಅವರ ಸಾಂಸ್ಕೃತಿಕವಾದ ಹಿನ್ನಡೆ ಮಾತ್ರವಲ್ಲದೆ ಒಟ್ಟು ರಾಷ್ಟ್ರದ ಅಭಿವೃದ್ಧಿಯ ಹಿನ್ನಡೆಯೂ ಆಗಿದೆ.

‘ಗಾಡ್ ಮಸ್ಟ್ ಬಿ ಕ್ರೇಜಿ’ ಎನ್ನುವ ಒಂದು ಸಿನಿಕತೆಯಲ್ಲಿ ಅತ್ಯಂತ ಕೃಷಿ ಪೂರ್ವ ಬುಡಕಟ್ಟು ಸಮಾಜದ ಜನರು ಆಧುನಿಕತೆಯನ್ನು ಮುಖಾಮುಖಿಯಾಗುವ ದೃಶ್ಯಾವಳಿಯಿದೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಆಧುನಿಕ ಜನ ಒಂದು ಗಾಜಿನ ಬಾಟಲಿಯನ್ನು ತಮ್ಮ ವಿಮಾನದಿಂದ ಹೊರಗೆಸೆದು ಅದು ಆ ಕೃಷಿಪೂರ್ವ ಬುಡಕಟ್ಟು ಸಮಾಜವನ್ನು ಆಕರ್ಷಿಸಿ ಅವರು ಆಶ್ಚರ್ಯ ಚಕಿತರಾಗುವ ಸನ್ನಿವೇಶ ಅದು. ಬದಲಾವಣೆಯು ಜಗದ ನಿಯಮವೆಂಬಂತೆ ಒಂದೇ ವಿದ್ಯಮಾನದಲ್ಲಿ ಎರಡು ಪ್ರಕ್ರಿಯೆಗಳು ನಡೆಯುವಂತದ್ದು ಮತ್ತು ಇಲ್ಲಿ ಆ ಕೃಷಿಪೂರ್ವ ಸಮಾಜವು ತಮಗೆ ಅರಿವಿಲ್ಲದೆ ಈ ಸಾಮಾಜಿಕ ಪ್ರಕ್ರಿಯೆಗೆ ಒಳಗಾಗುವುದು ಮತ್ತು ತಮ್ಮ ಜ್ಞಾನದ ವಿಸ್ತಾರದ ಅನಿವಾರ್ಯತೆಗೆ ಒಳಗಾಗಿ ಗೊಂದಲಕ್ಕೆ ಈಡಾಗುವುದನ್ನು ಈ ಒಂದು ಸನ್ನಿವೇಶವು ತಿಳಿಸುತ್ತದೆ. ಈ ಬದಲಾವಣೆ ಎನ್ನುವುದು ಸಮುದಾಯವನ್ನು ಹಂತ ಹಂತವಾಗಿ ಬದಲಾಯಿಸುತ್ತಾ ಕೃಷಿ ಆಧಾರಿತ, ಜ್ಞಾನ ಆಧಾರಿತ, ಮತ್ತು ತಂತ್ರಜ್ಞಾನ ಆಧಾರಿತ ಸಮಾಜವಾಗಿ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ. ಆದರೆ ಇದರ ಅರಿವಿಲ್ಲದ ಸಮಾಜವು ಈ ಪ್ರಕ್ರಿಯೆಯ ವೇಗಕ್ಕೆ ಹೊಂದಿಕೊಳ್ಳಲಾಗದೆ  ಚಡಪಡಿಸುತ್ತದೆ!

ಡಾ. ಸಬಿತಾ ಗುಂಡ್ಮಿ

ಕೊರಗ ಸಮುದಾಯದ ಮೊದಲ ಡಾಕ್ಟರೇಟ್ ಪದವೀಧರೆಯಾಗಿರುವ ಇವರು ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ( ಮೊ: 9481179633)

 ಇದನ್ನೂ ಓದಿ- ಅಜಲು- ಕೊರಗರ ಜೀವಸಂಕುಲವನ್ನೆ ಹಿಂಡುತ್ತಿದೆ

Related Articles

ಇತ್ತೀಚಿನ ಸುದ್ದಿಗಳು