Wednesday, June 26, 2024

ಸತ್ಯ | ನ್ಯಾಯ |ಧರ್ಮ

ಇಂದಿರಾಗಾಂಧಿ ರಾಜಕೀಯಕ್ಕೆ ಬರದಿದ್ದರೆ ಏನಾಗುತ್ತಿತ್ತು?

‘ಏನಾಗುತ್ತಿದ್ದರು, ಫಾರಿನ್ನಿನಲ್ಲಿ ಕೂತು ಜುಂ ಅಂತ ಮೆರೆಯುತ್ತಿದ್ದರು, ಐಷಾರಾಮಿ ಜೀವನ ನಡೆಸುತ್ತಿದ್ದರು, ಸಿರಿವಂತಿಕೆ ಕಾಲ ಬುಡದಲಿರುವಾಗ ಇನ್ನೇನು ಮಾಡುತ್ತಿದ್ದರು?’

ವರ್ಣಾಶ್ರಮದ ಭಕ್ತರು ಹೀಗೇ ಊಹಿಸಿಯಾರು, ಉತ್ತರಿಸಿಯಾರು. ಯಾಕೆಂದರೆ, ಅವರು ಸ್ವಲ್ಪ ಹಾಗೆಯೇ. ಅತಿರೇಕಿತನವೆಂಬುದು ಅವರ ರಕ್ತದ ಗುಂಪಿನ ಹೆಸರು. ಅದು ಪ್ರವಹಿಸುವುದಿಲ್ಲ. ದಹಿಸುತ್ತದೆ… ಆದರೆ ಅವರು ದೂಷಿಸುವ ‘ಸಿರಿವಂತಿಕೆಯ ರಾಣಿ’ ಇದಕ್ಕೆ ಏನಂತ ಉತ್ತರಿಸಿದ್ದರು ಗೊತ್ತೆ?

‘ಏನಿಲ್ಲ, ಸನ್ಯಾಸಿನಿಯಾಗಿರುತ್ತಿದ್ದೆ. ನನಗಿದ್ದ ಆಸಕ್ತಿ ಅಭಿರುಚಿ ಅದಷ್ಟೇ ಆಗಿತ್ತು..’!

ಹೀಗಂದಿದ್ದರು ಇಂದಿರಾಗಾಂಧಿ. ದೇಶದ ಮೊದಲ ಪ್ರಧಾನಿಯ ಮಗಳು ಸನ್ಯಾಸಿನಿಯಾಗುವ ಬಗ್ಗೆ ಆಲೋಚಿಸಿದ್ದರಂತೆ!

ನಂಬಲು ಅಸಾಧ್ಯವೆನಿಸಿದರೂ ಇದು ಕಟುಸತ್ಯ. ನಂಬಲೇಬೇಕು. ಯಾಕೆಂದರೆ ಇಂದಿರಮ್ಮ ಇದ್ದದ್ದೇ ಹಾಗೆ, ದಂಗುಬಡಿಸುವ ಹಾಗೆ.

ಚಿಕ್ಕ ವಯಸ್ಸಿನಿಂದಲೂ ಇಂದಿರಾಗಾಂಧಿಯ ಮನಸ್ಸು ಅಧ್ಯಾತ್ಮದೆಡೆಗೆ ತುಡಿಯುತ್ತಿತ್ತು, ಮನೆಯೊಳಗಿದ್ದ ಆಡಂಬರವನ್ನು ಆಕೆ ಮನಸ್ಸಿನೊಳಕ್ಕೆ ಬಿಟ್ಟುಕೊಂಡೇ ಇರಲಿಲ್ಲ. ಆಕೆಯ ಹುಡುಕಾಟವೇ ಬೇರೆ ಇತ್ತು ಎಂಬುದು ಆಕೆಯನ್ನು ಹತ್ತಿರದಿಂದ ಬಲ್ಲ ಎಲ್ಲರಿಗೂ ಗೊತ್ತಿತ್ತು. ಹಾಗೆ ಬೆಳೆದ ಹುಡುಗಿ ಇಂದಿರಾ ಗಾಂಧಿ

ಅಲಹಾಬಾದಿನ ಶ್ರೀಮಂತ ಪಂಡಿತರ ಮನೆಯ ಹುಡುಗಿಯ ಬಾಲ್ಯ ನಾವು ನೀವು ಎಣಿಸಿದಷ್ಟು ಸರಳವಾಗಿರಲಿಲ್ಲ. ರೋಚಕವೂ ಆಗಿರಲಿಲ್ಲ. ಬಾಲ ಇಂದಿರೆ ಜನ್ಮದಾರಭ್ಯ ತನ್ನದೇ ಆದ ಆದರ್ಶಗಳೊಂದಿಗೆ ಬೆಳೆದವಳು. ಕುಟುಂಬದ ವರ್ಚಸ್ಸು, ಪ್ರಭಾವ, ಶ್ರೀಮಂತಿಕೆ ಇದ್ಯಾವುದೂ ಇಂದಿರಾಗಾಂಧಿಯ ವ್ಯಕ್ತಿತ್ವ ರೂಪಿಸಲಿಲ್ಲ. ತನ್ನ ವ್ಯಕ್ತಿತ್ವವನ್ನು ತಾನೇ ಹುಡುಕಿಕೊಂಡವರು ಇಂದಿರಾ. ಹೊಳೆದ ಕಾಂತಿಯೆಲ್ಲ ಇಂದಿರೆಯೆಂಬ ವಜ್ರ ತನ್ನನ್ನೇ ತಾನೇ ಉಜ್ಜಿಕೊಂಡದ್ದರ ಪ್ರತಿಫಲ.

ಮನೆ ದೊಡ್ಡದಾಗಿತ್ತು. ಮನೆ ತುಂಬಾ ಆಳುಕಾಳುಗಳಿದ್ದರು. ಆದರೆ ಇಂದಿರೆ ಎಂಬ ಪುಟ್ಟಕ್ಕ ಏಕಾಂಗಿಯಾಗಿಯೇ ಉಳಿದುಹೋದಳು. ಕಾರಣ ಸ್ಪಷ್ಟವಿತ್ತು. ತಂದೆ ಜವಾಹರ್ ಲಾಲ್ ನೆಹರು ಸ್ವಾತಂತ್ರ್ಯದ ಕಾವು ಹೆಚ್ಚಿಸಿಕೊಂಡು ಹೋರಾಟಕ್ಕೆ ಧುಮುಕಿದ್ದರು. ಚಳವಳಿ, ಸಭೆ, ಜೈಲುವಾಸ, ಹೋರಾಟ ಎನ್ನುತ್ತಾ ಅವರು ಮಗಳಿಗೆ ಸಿಕ್ಕುತ್ತಿದ್ದದ್ದೇ ಅಪರೂಪ. ತಾಯಿಯೊಬ್ಬಳೇ ಬಾಲ ಇಂದಿರೆಗೆ ಸಾಥಿ-ಗೆಳತಿ ಒಡನಾಡಿ. ಆದರೆ ವಿಧಿ ಎಷ್ಟು ಕ್ರೂರವೆಂದರೆ, ಕಮಲಾ ನೆಹರೂರ ಆರೋಗ್ಯವೂ ಕೈಕೊಡುತ್ತಾಹೋಯ್ತು. ಲಾಲನೆ ಮಾಡಬೇಕಿದ್ದ ತಾಯಿಗೆ ಮಗಳೇ ಪಾಲನೆ ಮಾಡಬೇಕಾದಂಥ ತುರ್ತು ಒದಗುತ್ತಿತ್ತು. ಅಮ್ಮ ಮಲಗಿದರೆ ಇತ್ತ ಇಂದಿರೆ ಮತ್ತೆ ಒಬ್ಬಂಟಿ!

ಹೊರಗಿನಿಂದ ನೋಡುವವರಿಗೆ ನೆಹರು ಬಂಗಲೆ ಅದ್ಭುತವಾಗಿ ಕಾಣಿಸುತ್ತಿತ್ತು. ‘ಏನ್ ಪುಣ್ಯ ಮಾಡಿ ಹುಟ್ಟಿದ್ರೋ ಏನೋ! ಏನು ಸುಖ, ಎಂಥಾ ವೈಭೋಗ!!’ ಎಂದು ಕರುಬುವಂತಿತ್ತು ಆ ಮನೆ. ಆದರೆ ಒಳಗಿದ್ದ ಇಂದಿರೆಯ ಮನಸ್ಥಿತಿ- ಪರಿಸ್ಥಿತಿಯೇ ಬೇರೆಯೇ ಇತ್ತು. ಕಿಟಕಿಯ ಸರಳುಗಳನ್ನು ಹಿಡಿದು ಹೊರಗಡೆ ನೋಡುತ್ತಾ ನಿಲ್ಲುತ್ತಿದ್ದ ಹುಡುಗಿಗೆ ಬೆನ್ನು ಹಿಂದಿದ್ದ ವೈಭವವಲ್ಲ; ಕಣ್ಣ ಮುಂದಿದ್ದ ವಾಸ್ತವ ಕಾಣುತ್ತಿತ್ತು.

ಗೇಟಿನಾಚೆಗೆ ನಿರ್ಗತಿಕರು, ಕೂಲಿಕಾರರು ಮಧ್ಯಮವರ್ಗದವರು ಕಾಣಸಿಗುತ್ತಿದ್ದರು. ಅವರ ಬದುಕು ಬವಣೆಗಳು, ರೋಗರುಜಿನಗಳು ಕಾಣಿಸುತ್ತಿದ್ದವು. ಎತ್ತರದಲ್ಲಿ ನಿಂತು ನೋಡುವವರಿಗಷ್ಟೇ ಕೆಳಗಿನ ಬಾಗು ಬಳುಕು, ಓರೆಕೋರೆಗಳು ಕಾಣಿಸುವುದು ಪ್ರಕೃತಿ ಸಹಜ. ಇಂದಿರೆಯ ವಿಷಯದಲ್ಲೂ ಅದೇ ಆಗಿತ್ತು. ಬಡಜನರ ಒದ್ದಾಟ- ಸಂಕಟ- ಅವರ ದೈನಂದಿನ ಹೋರಾಟ ಎಲ್ಲವೂ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಇಂಥ ಹಂತದಲ್ಲೇ ಇಂದಿರೆ ವೈರಾಗ್ಯದ ಕಡೆ ಆಲೋಚಿಸಿರಲಿಕ್ಕೆ ಸಾಕು..

ಬಾಲೆಯಾಗಿದ್ದರೂ ಇಂದಿರಾರ ಮಿದುಳಿನ ಬೆಳವಣಿಗೆ ಉಚ್ಛ ಮಟ್ಟದಲ್ಲಿತ್ತು. ಯಾಕೆಂದರೆ ಮನೆಯೊಳಗಿನ ವಾತಾವರಣ, ದಕ್ಕಿದ ಶಿಕ್ಷಣ ಉನ್ನತ ಮಟ್ಟದ್ದಾಗಿತ್ತು. ಹಾಗಾಗಿಯೇ ಇಂದಿರೆಗೆ ಬದುಕಿನ ಸೋಗಲಾಡಿತನ ಬೇಗನೆ ಅರ್ಥವಾಯ್ತು. ಉಳ್ಳವರ ದರ್ಪ, ಇಲ್ಲದವರ ಹತಾಶೆ, ಅದರಿಂದ ಸಮಾಜದ ಮೇಲಾಗಬಹುದಾದ ಪರಿಣಾಮಗಳು ಎಲ್ಲವೂ ಬಾಲ ಇಂದಿರೆಗೆ ಮನದಟ್ಟಾಯ್ತು. ಸಿದ್ಧಾರ್ಥನೆಂಬ ರಾಜಕುವರ ಹೀಗೇ ತಾನೆ ಹೊರಟುಹೋದದ್ದು, ಬುದ್ಧನಾದದ್ದು.

ಬಾಲ ಇಂದಿರೆಯ ಮನಸ್ಸಲ್ಲಿಯೂ ಇಂಥವೇ ಕನವರಿಕೆಗಳು ಶುರುವಾದವು. ಆಗ ಆಕೆ ಮೊರೆ ಹೋದದ್ದೇ ಜಪಮಾಲೆ, ಮಂತ್ರಪಠಣ, ಶಿವನಾಮ ಸ್ಮರಣೆಗೆ. ಅರಳುವಿಕೆಗೆ ಹಾತೊರೆಯುತ್ತಿದ್ದ ಆಕೆಯ ಮನಸ್ಸಿಗೆ, ಸುಖಜೀವನದ ಲೋಲುಪತೆಯಿಂದ ಬಿಡಿಸಿಕೊಳ್ಳುವ ದಾರಿ ಬೇಕಿತ್ತು. ಅಂಥ ಹಂತದಲ್ಲೇ ಇಂದಿರೆ ಎಲ್ಲಾ ಮತಪಂಥಗಳ ಅಧ್ಯಾತ್ಮವನ್ನೂ ಓದಿಕೊಂಡದ್ದು, ಅದನ್ನೇ ದಾರಿದೀಪವಾಗಿಸಿಕೊಂಡದ್ದು. ಮನೆಯ ದೇವರಕೋಣೆಯೇ ಬಾಲ ಇಂದಿರೆಗೆ ಬೋಧಿವೃಕ್ಷವಾದದ್ದು ಸೋಜಿಗ.

ಹೊರಗಡೆ ಸ್ವಾತಂತ್ರ್ಯದ ಹೋರಾಟದ ಕೂಗು ಕೇಳಿಸುತ್ತಿತ್ತು. ದೇಶಕ್ಕೆ ಮಾರ್ಗದರ್ಶಿಯಾಗಿದ್ದ ಗಾಂಧೀಜಿ ಸುಲಭಕ್ಕೆ ಸಿಗುತ್ತಿದ್ದರಾದರೂ, ಅವರ ಬಳಿಯೂ ತನ್ನ ತುಮುಲಗಳನ್ನು ಹೇಳಿಕೊಳ್ಳುವಂತಿಲ್ಲ. ಯಾಕೆಂದರೆ ಅವರ ಕಣ್ಣಿಗೆ ಈಕೆ ಇನ್ನೂ ಚಿಕ್ಕ ಹುಡುಗಿ. ಮಹಾತ್ಮರು ಬಾಲಕಿಯ ಮೈದಡವಿ ನಡೆದುಹೋಗುತ್ತಿದ್ದರು. ಜೈಲಿಂದ ಅಪ್ಪ ಬರೆಯುತ್ತಿದ್ದ ಪತ್ರಗಳಲ್ಲೇನೋ ಘನಂದಾರಿ ವಿಷಯಗಳಿರುತ್ತಿದ್ದವು. ಆದರೆ ಓದಿಕೊಂಡ ಮೇಲೆ ಉದ್ಭವಿಸುತ್ತಿದ್ದ ಪ್ರಶ್ನೆಗಳಿಗೆ ತಕ್ಷಣಕ್ಕೆ ಉತ್ತರ ಕೊಡುವವರಿರಲಿಲ್ಲ. ಹಾಗಾಗಿ ತನ್ನೊಳಗೆ ತಾನೇ ಪ್ರಶ್ನೆಯು, ಉತ್ತರವೂ ಆಗಿ ಬೆಳೆದವರು ಇಂದಿರ. ತನ್ನೊಳಗೇ ತಾನು ಮಂಥನ ಮಾಡಿಕೊಂಡು, ವ್ಯಕ್ತಿತ್ವವನ್ನು ಪ್ರತಿಷ್ಠಾಪನೆ ಮಾಡಿಕೊಂಡ ಗಟ್ಟಿಗಿತ್ತಿಯಾಕೆ.

ಓರ್ವ ಸಾಮಾನ್ಯ ಬಾಲಕಿ, ಮುಂದೆ ಇಡೀ ದೇಶವೇ ದುರ್ಗಾ ಮಾತೆಯ ಅಪರಾವತಾರ ಎಂಬಂತೆ ಮೆಚ್ಚಿ ಕೊಂಡಾಡುವಷ್ಟರ ಮಟ್ಟಿಗೆ ಬೆಳೆದು ನಿಂತರಲ್ಲ.. ಅದರ ಹಿಂದಿನ ಹೋರಾಟ ಹೀಗಿತ್ತು. ಇಂಥ ಹಿನ್ನೆಲೆಯ ಹೆಣ್ಣುಮಗಳನ್ನು ‘ವಂಶಪಾರಂಪರ್ಯ ರಾಜಕಾರಣ ಹೆತ್ತ ಶಿಶು’ ಎಂದು ಆಡಿಕೊಳ್ಳುವವರಿದ್ದಾರಲ್ಲ..
ಎಲುಬಿಲ್ಲದ ನಾಲಿಗೆಗೆ ಎಷ್ಟೊಂದು ಠೇಂಕಾರವಲ್ಲವೇ? ನೀಚತನ ಎಂಬುದು ತುಂಬಾ ಸಲೀಸು ಅನ್ನಿಸುವುದೇ ಇಂಥ ಹೊತ್ತಿನಲ್ಲಿ.

ನೆಹರೂ ಕಾಲದಲ್ಲಿ ಬೂದಿ ಮುಚ್ಚಿದ ಕೆಂಡದಂತಿದ್ದ ಸಂವಿಧಾನ ಪರ ಮತ್ತು ವಿರೋಧಿಗಳ ಹೋರಾಟ ಶಾಸ್ತ್ರಿಯವರ ಕಾಲಕ್ಕೆ ಎಲ್ಲೆ ಮೀರಿ ಇಂದಿರಾ ಗಾಂಧಿ ಬರುವ ವೇಳೆಗೆ ದೇಶದ ವಾತಾವರಣವನ್ನೆ ಹದಗೆಡಿಸಿತ್ತು. ಸಂವಿಧಾನದ ಆಶಯಗಳನ್ನು ಒಪ್ಪಲು ತಯಾರಿಲ್ಲದ ಗುಂಪು ಪದೇ ಪದೇ ಹಗೆ ಸಾಧಿಸಿ ಅಧಿಕಾರ ಹಿಡಿಯಲು ಪ್ರಯತ್ನ ನಡೆಸುತ್ತಲೇ ಇತ್ತು. ಇಂಥಹದೇ ಕಾಲ ಘಟ್ಟದಲ್ಲಿ ಅಧಿಕಾರಕ್ಕೆ ಬಂದ ಇಂದಿರಾ ಗಾಂಧಿಯವರಿಗೆ ಏಕಾಂಗಿಯಾಗಿ ಹೋರಾಡುವ ಪರಿಸ್ಥಿತಿ ಎದುರಾಗಿತ್ತು. ದೇಶ ಕಟ್ಟುವ ಮಹಾನ್ ಕಾರ್ಯಕ್ಕೆ ಹೆಗಲಿಗೆ ಹೆಗಲು ಕೊಡಬಹುದಾಗಿದ್ದ , ಮಾರ್ಗ ತೋರಿಸಬಹುದಾಗಿದ್ದ ಸ್ವಾತಂತ್ರ್ಯದ ಹೋರಾಟದ ಮಹನೀಯರೆಲ್ಲರು ಕಾಲನ ಕರೆಗೆ ಸರಿದು ಹೋಗಿದ್ದರು, ಪುರೋಹಿತಶಾಹಿ, ಸಂವಿಧಾನ ವಿರೋಧಿ ಅಶಯಗಳು ಬಲಗೊಳ್ಳುತ್ತಿದ್ದುದರಿಂದ ಮತ್ತೆ ತನ್ನ ಅತ್ಮವಿಶ್ವಾಸವೊಂದೆ ಅವರನ್ನು ಕೈಹಿಡಿದ ಅಸ್ತಿ.

ಇಂದಿರಾ ಗಾಂಧಿಯವರಿಗೆ ಏಕಾಂಗಿತನ ಮತ್ತು ಹೋರಾಟ ಜನ್ಮಗಥ ಆಸ್ತಿ. ತಾಯಿಯ ದೇಖಾರೇಖಿ ಮಾಡುತ್ತಿದ್ದ ಸುರಸುಂದರ ಪಾರ್ಸಿ ಯುವಕ ಫಿರೋಜ್ ಗಾಂಧಿಗೆ ಮನಸು ಕೊಟ್ಟು ಮದುವೆಯಾದರಾದರು ಅದು ಬಹು ದಿನಗಳು ಉಳಿಯಲೇ ಇಲ್ಲಾ , ರಾಜೀವ್ , ಸಂಜಯರ ಬಾಲ್ಯದ ದಿನಗಳ ಜವಾಬ್ಧಾರಿಯೂ ದೇಶದ ಜವಾಬ್ಧಾರಿಯೊಂದಿಗೆ ಹೆಗಲೇರಿದಾಗ ಸಮರ್ಥವಾಗಿ ಮತ್ತು ಏಕಾಂಗಿಯಾಗಿ ನಿರ್ವಹಿಸದವರು ಇಂದಿರಾ ಗಾಂಧಿ.

ಅಸಹಕಾರ ಚಳುವಳಿಯನ್ನು ಗಾಂಧೀಜಿ ಚೌರೀಚೌರಾ ಘಟನೆಯ ನಂತರ ಕೈಬಿಟ್ಟರು ಆದ್ರೆ ಕೇವಲ ಹದಿಮೂರರ ವಯಸ್ಸಿನ ಇಂದಿರಾ ಗಾಂಧಿ ಅದೆಷ್ಟು ಅಸಹಕಾರ ಚಳುವಳಿಯಿಂದ ಪ್ರೇರಣೆಗೊಂಡಿದ್ದರೆಂದರೆ ಜೀವನ ಪೂರ್ತಿ ಎಂದಿಗೂ ಸ್ವದೇಶಿ ವಸ್ತುಗಳಿಗೆ ಪರಮ ‌ಪ್ರಾಧಾನ್ಯತೆ ನೀಡಿದವರು. ಪ್ಯಾರೀಸ್ ನಿಂದ ತನ್ನ ಚಿಕ್ಕಮ್ಮ ತಂದಿದ್ದ ಚಂದದ ಗೊಂಬೆಯನ್ನು ಬೆಂಕಿಗಿಟ್ಟು ಆರಂಬಿಸಿದ ಅಸಹಕಾರ ಚಳುವಳಿಯನ್ನು ಜೀವನದ ಉಸಿರು ನಿಲ್ಲುವವರೆಗೂ ಕಾಪಾಡಿಕೊಂಡು ಬಂದರು , ಅದಕ್ಕಾಗಿ ತನ್ನ ಬದುಕನ್ನು ಸರಳಾತೀ ಸರಳ ಗೊಳಿಸಿಕೊಂಡವರು ಇಂದಿರಾ ಗಾಂಧಿ.

ಇಂದಿರಾ ಗಾಂಧಿ ಪ್ರದಾನಿಯಾಗಿ ದೇಶಕ್ಕೆ ಹೊಸ ಶಕ್ತಿಯಾಗಿ ಉದಯಿಸಿ ಏಳು ಬೀಳುಗಳ ಸರಮಾಲೆಯನ್ನೆ ಕಂಡರು ಎಲ್ಲವನ್ನು ಏಕಾಂಗಿಯಾಗಿಯೇ ಎದುರಿಸಿ ಗೆದ್ದವರು. ಬಾಂಗ್ಲಾ ವಿಮೋಚನೆಯ ಯುದ್ದದಲ್ಲಿ ಇಡೀ ವಿಶ್ವವೇ ಪಾಕಿಸ್ತಾನದ ಕ್ರೌರ್ಯಕ್ಕೆ‌ ಕಣ್ಣು ಮುಚ್ಚಿ ಕೂತು ಬೆಂಬಲಿಸುತ್ತಿದ್ದರು, ಏಕಾಂಗಿಯಾಗಿಯೇ ಅದರ ವಿರುದ್ದ ಗುಡುಗಿದವರು. ಹತ್ತು ಲಕ್ಷ ಬಾಂಗ್ಲಾ ನಿರ್ವಸಿತರನ್ನು ತನ್ನ ದೇಶದೊಳಗೆ ಬಿಟ್ಟುಕೊಂಡು , ಅಮೇರಿಕಾ ದೇಶದ ಅಧ್ಯಕ್ಷ ನಿಕ್ಸನ್ ರನ್ನು ತನ್ನ ದೇಶಕ್ಕೆ ಕರೆಸಿ ಪಾಕಿಸ್ತಾನದ ಕ್ರೌರ್ಯವನ್ನು ಇಂಚಿಂಚು ತೆರೆದಿಟ್ಟವರು, ಪಾಕಿಸ್ತಾನದ ಬಲವನ್ನು ಮುರಿದು ಹೊಸದೇಶ ಕಟ್ಟಿ , ಹತ್ತು ಲಕ್ಷ ಬಾಂಗ್ಲಾ ನಿರ್ವಸಿತರನ್ನು ವಾಪಾಸು ಕಳುಹಿಸಿ ಮನುಕುಲದ ಅತ್ಯಂತ ದೊಡ್ಡ ಮಿಲಿಟರಿ‌ ಕಾರ್ಯಾಚರಣೆಯಲ್ಲಿ ಯಶಸ್ಸು ಗಳಿಸಿದವರು. ಇಡೀ ಎದುರಾಳಿ ಪಕ್ಷಗಳೆಲ್ಲಾ ಎದ್ದು ನಿಂತು ನೀವು ಮಾ ದುರ್ಗೆಯ ಅವತಾರ ತಾಯಿ ಎಂದು ತಲೆಬಾಗಿದಾಗ ತಣ್ಣಗೆ ತನ್ನ‌ ಜಪಮಣಿಯ ಜೊತೆ ಶಿವ, ಜಿನ, ಬೌದ್ಧ ದೇವರ ಆಲಯವಾಗಿದ್ದ ತನ್ನ ದೇವರ ಕೋಣೆಗೆ ಸರಿದು ಹೋದವರು.

ಇಂದಿಗೂ ಸಫ್ದರ್ ಜಂಗ್ ನ ಇಂದಿರಾ ಗಾಂಧಿಯವರು ರಾಜಕೀಯ ಜೀವನದ ಪ್ರಮುಖ‌ ಇಪ್ಪತ್ತು ವರ್ಷ ಕಳೆದ ಮನೆ , ತನ್ನದೇ ರಕ್ಷಣಾಪಡೆಯ ಸಿಬ್ಬಂಧಿಯಿಂದ ಹತ್ಯೆ ಯಾದ ಸ್ಥಳ ಎಲ್ಲವು ಸಾರ್ವಜನಿಕರಿಗೆ ಪ್ರವೇಶ ನೀಡಲಾಗಿದೆ. ಉಡುತ್ತಿದ್ದ ಸರಳ ಸಾಧಾರಣ ಕಾಟನ್ ಸೀರೆಗಳು, ದೇವರ ಕೊಣೆ, ಕೋಣೆಯ ಟೇಬಲ್‌ ಮೇಲಿರುವ ಶಿವ, ಜಿನ ತೀರ್ಥಂಕರ, ವೇದ ಮಂತ್ರ ಪಠಣದ ಪುಸ್ತಕ, ಮಹನೀಯರು ಬಂದರೆ ಕೂರುತ್ತಿದ್ದ ವಿಶಾಲವಾದ ಹಾಲ್, ಪುಸ್ತಕಗಳಿಂದಲೇ ತುಂಬಿ ಹೋಗಿರುವ ಕೋಣೆಯಲ್ಲಿ‌ಎದ್ದು‌ ಕಾಣುವ ಕಾರ್ಲ್ ಮಾರ್ಕ್ಸ್ ನ ಪುಸ್ತಕ, ಐನಸ್ಟೀನ್ ಜೀವನ ಚರೀತ್ರೆ, ಸಾಧಾರಣ ಬೆಡ್ ರೂಮ್‌, ತೆಳುವಾದ ಜಮಖಾನ್ ಹಾಸಿರುವ ಕಾಟ್, ಎರಡು ಸಣ್ಣ ಸೋಫಾ , ಮಕ್ಕಳು ಮೊಮ್ಮಕ್ಕಳೊಂದಿಗೆ ಊಟ ಮಾಡುತ್ತಿದ್ದ ಡೈನಿಂಗ್ ಹಾಲ್ ಎಲ್ಲವು ಸರಳವೇ. ದೇಶವನ್ನು ವಿಶ್ವದ ಭೂಪಟದಲ್ಲಿ ಶಕ್ತಿಯುತ ದೇಶವಾಗಿಸಿದ ಮಹಿಳಾ ಪ್ರದಾನಿಯ ಮನೆ ಎಂದರೇ ಯಾರು ನಂಬಲಾರರು ಎನಿಸುವಷ್ಟು ಸರಳಾತೀ ಸರಳ.

ಮನೆಯಿಂದ ನೂರಡಿ ಕಾಲು ದಾರಿಯಾಚೆ ಇಂದಿರಾ ಗಾಂಧಿಯವರು ಹತ್ಯೆಯಾದ ಸ್ಥಳವೀಗ ಜನರ ಕಣ್ಣಂಚಲ್ಲಿ ನೀರು ತುಂಬಿಸಿಕೊಂಡು ನಿಲ್ಲುವ ತ್ಯಾಗದ ಪುಣ್ಯನೆಲ. ಅದನ್ನೀಗ ಕ್ರಿಸ್ಟಲ್ ಗ್ಲಾಸ್ ಗಳಿಂದ ಮುಚ್ಚಿ ಗೌರವಸೂಚಿಸಲಾಗಿದೆ. ದೇಶದ ಬಡವರಿಗೆ ,ಮಧ್ಯಮವರ್ಗದವರಿಗೆ, ರೈತರಿಗೆ, ದೇಶದ ಅರಣ್ಯ ಸಂಪತ್ತಿಗೆ ಗೋವುಗಳಿಗೆ, ಸೈನಿಕರಿಗೆ ಗಟ್ಟಿ ದ್ವನಿಯ ಹಕ್ಕುಗಳನ್ನು ಕೊಟ್ಟ ಮಹಾನ್ ತಾಯಿ ದೇಶಕ್ಕಾಗಿಯೇ ಉಳ್ಳವರ ಷಡ್ಯಂತ್ರದ ಭಾಗವಾಗಿ ಅಂತ್ಯವಾಗಿದ್ದು ಘೋರ ದುರಂತ.

ಜೀವಿತಾವಧಿಯಲ್ಲಿ ಏಕಾಂಗಿ ದುರ್ಗೆಯಾಗಿ ಬದುಕಿದ ಜೀವವೊಂದು ಈಗ ವಿರಮಿಸಿರುವ ಸಮಾಧಿ ಅಕ್ಕಪಕ್ಕದಲ್ಲಿ ಮಹಾತ್ಮ ಗಾಂಧೀಜಿ, ಪ್ರೀತಿಯ ಅಪ್ಪ ಜವಾಹರ್ ಲಾಲ್ ನೆಹರು, ಮಗ ರಾಜೀವ್ ಗಾಂಧಿ, ಅಧಿಕಾರವಧಿಯುದ್ದಕ್ಕೂ ಬೆಂಬಲ ನೀಡಿದ ಬೆಂಬಲಿಗ ಚರಣ್ ಸಿಂಗ್ ಅಕ್ಕಪಕ್ಕದಲ್ಲೆ ಸಮಾಧಿಯಾಗಿ ವಿರಮಿಸಿರುವುದು ಆತ್ಮಕ್ಕೆ ಶಾಂತಿ ನೀಡಿರಬಹುದು.

ದೇಶದ ಬಡವನಿಗೆ ಅನ್ನದ ಹಕ್ಕು, ರೈತನಿಗ ಭೂಮಿಯ ಹಕ್ಕು, ಸೈನಿಕನಿಗೆ ಆರ್ಥಿಕ ಹಕ್ಕು, ಮಧ್ಯಮವರ್ಗಕ್ಕೆ ಕೆಲಸದ ಹಕ್ಕು, ಗೋವಿಗೆ ಬದುಕುವ ಹಕ್ಕು , ಅರಣ್ಯಕ್ಕೆ ಸಂರಕ್ಷಣೆಯ ಹಕ್ಕು ನೀಡಿದ ಮೇಲು ದೇಶಕ್ಕಾಗೇ ಷಡ್ಯಂತ್ರಗಳಿಗೆ ಬಲಿಯಾದ ತಾಯಿ‌ ಇಂದಿರಾ ಗಾಂಧಿ ಅಮರ.

~ ಆದರ್ಶ್ ಹುಂಚದಕಟ್ಟೆ, ಚಿಂತಕರು

Related Articles

ಇತ್ತೀಚಿನ ಸುದ್ದಿಗಳು