Friday, September 20, 2024

ಸತ್ಯ | ನ್ಯಾಯ |ಧರ್ಮ

ಗೋರಿಪಾಳ್ಯವನ್ನು ಪಾಕಿಸ್ತಾನಕ್ಕೆ ಹೋಲಿಸಿದ ನ್ಯಾಯಾಧೀಶರ ಇನ್ನೊಂದು ವಿಡಿಯೋ ವೈರಲ್‌, ನ್ಯಾಯಾಧೀಶರಿಗೆ ಲಿಂಗ ಸೂಕ್ಷ್ಮತೆ ಕಲಿಸಬೇಕಿದೆ ಎಂದ ಹಿರಿಯ ವಕೀಲೆ ಇಂದಿರಾ ಜೈಸಿಂಗ್

ಬೆಂಗಳೂರು: ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರೊಬ್ಬರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ನ್ಯಾಯಾಧೀಶ ವೇದವ್ಯಾಸಾಚಾರ್ ಶ್ರೀಶಾನಂದ್ ಅವರು ಪ್ರಕರಣದ ವಿಚಾರಣೆ ನಡೆಸುತ್ತಿದ್ದಾಗ ಅವರು ಬೆಂಗಳೂರಿನ ಮುಸ್ಲಿಂ ಪ್ರಾಬಲ್ಯದ ಪ್ರದೇಶವೊಂದನ್ನು “ಪಾಕಿಸ್ತಾನ” ಎಂದು ಉಲ್ಲೇಖಿಸಿದ್ದಾರೆ.

ನ್ಯಾಯಾಧೀಶರ ಈ ಹೇಳಿಕೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆದಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ನ್ಯಾಯಾಧೀಶರು ʼಮೈಸೂರು ರಸ್ತೆಯ ಮೇಲ್ಸೇತುವೆ ಬಳಿ ಹೋಗಿ ನೋಡಿ, ಪ್ರತಿ ಆಟೋರಿಕ್ಷಾದಲ್ಲಿ 10 ಜನರಿದ್ದಾರೆ, ಕಾನೂನು ಇಲ್ಲಿ ಅನ್ವಯಿಸುವುದಿಲ್ಲʼ ಎಂದು ಹೇಳುವುದು ಕೇಳಿಸುತ್ತದೆ. ಮುಸ್ಲಿಂ ಪ್ರಾಬಲ್ಯದ ಪ್ರದೇಶವಾದ ಗೋರಿ ಪಾಳ್ಯವನ್ನು ಉಲ್ಲೇಖಿಸಿದ ಅವರು, ಗೋರಿ ಪಾಳ್ಯದಿಂದ ಮೈಸೂರು ಮೇಲ್ಸೇತುವೆವರೆಗಿನ ಪ್ರದೇಶವು ಪಾಕಿಸ್ತಾನದಲ್ಲಿದೆ, ಭಾರತದಲ್ಲಿಲ್ಲ. ಕಾನೂನು ಇಲ್ಲಿ ಅನ್ವಯಿಸುವುದಿಲ್ಲ ಮತ್ತು ಇದು ಸತ್ಯʼ ಎಂದು ಅವರು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸಾಮಾಜಿಕ ಹೋರಾಟಗಾರ ಹಾಗೂ ಮುನೀರ್‌ ಕಾಟಿಪಳ್ಳ ಅವರು “ನ್ಯಾಯಪೀಠ ದಲ್ಲಿ ಕುಳಿತಿರುವ ಆ ವ್ಯಕ್ತಿಗೆ ನಿಜಕ್ಕೂ ನ್ಯಾಯ ಪ್ರಜ್ಞೆ ಇದ್ದಿದ್ದರೆ ಗೋರಿಪಾಳ್ಯ, ಮಾರ್ಕೆಟ್ ರೋಡ್ ಗಳಿಗೆ ಹೋದಾಗ ಅಲ್ಲಿ “ಪಾಕಿಸ್ತಾನ” ಕಾಣುತ್ತಿರಲಿಲ್ಲ. ಬದಲಿಗೆ ಆ ಸ್ಲಂ ಗಳಲ್ಲಿ ಹೀನಾಯವಾಗಿ ಬದುಕುತ್ತಿರುವ ಮುಸ್ಲಿಮರ ಬಡತನ, ಹಸಿವು, ನಿರುದ್ಯೋಗ, ರೋಗ ರುಜಿನಗಳ ಘೋರ ಸ್ಥಿತಿ ಕಾಣುತ್ತಿತ್ತು. ಅಲ್ಲಿನ ಇಕ್ಕಟ್ಟಾದ ಗಲ್ಲಿಗಳು, ನಾಯಿ ಗೂಡಿನಂತಹ ವಸತಿಗಳು, ತೆರೆದ ಚರಂಡಿ, ಕೆಟ್ಟ ರಸ್ತೆಗಳ ದರ್ಶನ ಆಗುತ್ತಿತ್ತು. ಭಾರತದ ಮುಸ್ಲಿಮರನ್ನು ಇಲ್ಲಿನ ಪ್ರಭುತ್ವ ನಡೆಸಿಕೊಳ್ಳುತ್ತಿರುವ ರೀತಿ, ಮುಸ್ಲಿಮ ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳ ಸ್ಥೂಲ ಚಿತ್ರಣ ದೊರಕುತ್ತಿತ್ತು. ಆದರೇನು ಮಾಡುವುದು, ಈ “ನ್ಯಾಯಾಧೀಶ” ನಿಗೆ ಸಾಮಾಜಿಕ ನ್ಯಾಯದ ಸಾಮಾನ್ಯ ಜ್ಞಾನವೂ ಇಲ್ಲದಂತಿದೆ. ಬಹುಷ ಇವರು ಸಂಘದ ಪ್ರಾಡೆಕ್ಟ್ ಇರಬಹುದು. ಇಂತವರು ನ್ಯಾಯ ಪೀಠದಲ್ಲಿ ಮುಂದುವರಿಯಕೂಡದು‌. ಅದು ಭಾರತದ ನ್ಯಾಯಾಂಗಕ್ಕೆ ದೊಡ್ಡ ಅವಮಾನ. ನ್ಯಾಯ ಪೀಠದಲ್ಲಿ ಕೂತು ಮುಸ್ಲಿಮರ ಕುರಿತಾಗಿ ಆತ ಆಡಿರುವ ಮಾತುಗಳು ಜನಾಂಗ ದ್ವೇಷದಿಂದ ಕೂಡಿದೆ. ಇದು ಅಕ್ಷಮ್ಯ” ಎಂದಿದ್ದಾರೆ.

ಇದೀಗ ಅದೇ ನ್ಯಾಯಾಧೀಶರ ಇನ್ನೊಂದು ಹೇಳಿಕೆಯು ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ಅವರ ಕೆಂಗಣ್ಣಿಗೆ ಗುರಿಯಾಗಿದೆ. ಅವರು ವಿಡಿಯೋ ಒಂದನ್ನು ಹಂಚಿಕೊಂಡು “ಈ ನ್ಯಾಯಾಧೀಶರ ವಿರುದ್ಧ ಸ್ವಯಂಪ್ರೇರಿತ ಕ್ರಮ ಕೈಗೊಳ್ಳಲು ಮತ್ತು ಅವರನ್ನು ಲಿಂಗ ಸೂಕ್ಷ್ಮತೆ ಕುರಿತಾದ ತರಬೇತಿಗೆ ಕಳುಹಿಸಲು ನಾವು ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಆಗ್ರಹಿಸುತ್ತೇವೆ” ಎಂದು ಹೇಳಿದ್ದಾರೆ.

ಅವರು ಶೇರ್‌ ಮಾಡಿಕೊಂಡಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬರ ಬಗ್ಗೆ ಮಹಿಳಾ ವಕೀಲರೊಬ್ಬರು ನೀಡಿದ ಪ್ರತಿಕ್ರಿಯೆಗೆ ಪ್ರತಿಯಾಗಿ ನ್ಯಾಯಾಧೀಶರು, “ನೀವು ಬಿಟ್ಟರೆ ನಾಳೆ ಬೆಳಗ್ಗೆ ಅವರು ಯಾವ ಬಣ್ಣದ ಅಂಡರ್‌ ಗಾರ್ಮೆಂಟ್‌ ಹಾಕಿಕೊಂಡಿದ್ದರು ಎನ್ನುವುದನ್ನು ಕೂಡಾ ಹೇಳುತ್ತೀರಿ, ನಿಮಗೆ ಅವರ ಕುರಿತಾದ ಎಲ್ಲಾ ಮಾಹಿತಿ ಇರುವಂತಿದೆ” ಎಂದಿದ್ದಾರೆ.

ನ್ಯಾಯಾಧೀಶರ್‌ ಹೇಳಿಕೆಯ ವಿಡಿಯೋ ಇರುವ ಇಂದಿರಾ ಜೈಸಿಂಗ್‌ ಅವರ X ಪೋಸ್ಟ್

ಪ್ರಸ್ತುತ ಎರಡೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ನ್ಯಾಯಾಲಯಗಳ ಕಲಾಪಗಳು ಲೈವ್‌ ಸ್ಟ್ರೀಮಿಂಗ್‌ ಶುರುವಾದ ನಂತರ ನ್ಯಾಯಾಧೀಶರ ಮಾತುಗಳು ಆಗಾಗ ವೈರಲ್‌ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವು ಮೆಚ್ಚುಗೆ ಪಡೆದರೆ ಇನ್ನೂ ಕೆಲವು ಟೀಕೆಗೆ ಒಳಗಾಗುತ್ತವೆ.

ಈ ಹಿಂದೆ ಕೊಲ್ಕತ್ತಾದ ಪ್ರಕರಣವೊಂದರ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿಯವರು “ಲೈವ್‌ ನೋಡುತ್ತಿರುವವರನ್ನು ಮೆಚ್ಚಿಸಲು ದೊಡ್ಡ ದನಿಯಲ್ಲ ಮಾತನಾಡುತ್ತಿದ್ದೀರಾ? ನೀವು ನಿಮ್ಮ ವಾದವನ್ನು ಮಂಡಿಸಬೇಕಿರುವುದು ನ್ಯಾಯಪೀಠದ ಎದುರು ಕೆಮೆರಾ ಎದುರಿಗಲ್ಲ” ಎಂಬರ್ಥದಲ್ಲಿ ತರಾಟೆಗೆ ತೆಗೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page