Friday, June 14, 2024

ಸತ್ಯ | ನ್ಯಾಯ |ಧರ್ಮ

ಇಂದು ದೇಶದ 16 ನೇ ಉಪರಾಷ್ಟ್ರಪತಿ ಚುನಾವಣೆ

ನವದೆಹಲಿ: ಹಾಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಅಧಿಕಾರಾವಧಿ ಮುಕ್ತಾಯವಾಗುವ ಹಿನ್ನೆಲೆಯಲ್ಲಿ ತೆರವಾಗುವ ಉಪರಾಷ್ಟ್ರಪತಿ ಹುದ್ದೆಗೆ ಇಂದು ಚುನಾವಣೆ ನಡೆಯಲಿದೆ. ಬಿಜೆಪಿ ಮತ್ತು ಪ್ರತಿಪಕ್ಷಗಳ ಅಭ್ಯರ್ಥಿಗಳು ತಮ್ಮ ಪ್ರಚಾರ ಕಾರ್ಯ ಮುಗಿಸಿದ್ದಾರೆ. NDA ಅಭ್ಯರ್ಥಿಯಾಗಿ ಜಗದೀಪ್ ಧನಖರ್ ಮತ್ತು UPA ಅಭ್ಯರ್ಥಿಯಾಗಿ ಮಾರ್ಗರೇಟ್ ಆಳ್ವರವರು ಕಣಕ್ಕಿಳಿದಿದ್ದಾರೆ.

ದೇಶದ 16 ನೇ ಉಪರಾಷ್ಟ್ರಪತಿ ಚುನಾವಣೆ ಇದಾಗಿದ್ದು, ಸಂಸತ್ತಿನ ಉಭಯ ಸದನಗಳ ಒಟ್ಟು ಪ್ರತಿನಿಧಿಗಳು ಸೇರಿ 788 ಮಂದಿ ಈ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆದ್ಯತೆಯ ಆಧಾರದಲ್ಲಿ ನಡೆಯುವ ಈ ಮತದಾನ ಗುಪ್ತ ಮತದಾನವೂ ಆಗಿರುತ್ತದೆ. ಸದಸ್ಯರು ತಮ್ಮ ಆದ್ಯತೆಯನ್ನು ಅಂಕಿಗಳಲ್ಲಿ ತಿಳಿಸುತ್ತಾರೆ. ಪದಗಳಲ್ಲಿ ಸೂಚಿಸಿದ ಆದ್ಯತೆಯನ್ನು ಅನೂರ್ಜಿತ ಎಂದು ಪರಿಗಣಿಸಲಾಗಿದೆ. ಬ್ಯಾಲೆಟ್ ಪೇಪರ್ ಮಾನ್ಯವಾಗಿರಲು ಮೊದಲ ಪ್ರಾಶಸ್ತ್ಯದ ಗುರುತು ಕಡ್ಡಾಯವಾಗಿದ್ದರೂ, ಇತರ ಆದ್ಯತೆಗಳು ಐಚ್ಛಿಕವಾಗಿರುತ್ತವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ವಿಶೇಷ ಎಂದರೆ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಯಾವುದೇ ರಾಜಕೀಯ ಪಕ್ಷಗಳು ಮತದಾರರಿಗೆ (ಸಂಸದರಿಗೆ) ಮತದಾನದ ವಿಚಾರಕ್ಕೆ ವಿಪ್ ನೀಡುವಂತಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

*ಜಗದೀಪ್ ಧನಖರ್ V/s ಮಾರ್ಗರೇಟ್ ಆಳ್ವ*
NDA ಒಕ್ಕೂಟದ ಅಭ್ಯರ್ಥಿಯಾಗಿ ಜಗದೀಪ್ ಧನಖರ್ ಕಣಕ್ಕಿಳಿಯಲಿದ್ದು ಒಕ್ಕೂಟ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಸಂಪುಟದಲ್ಲಿ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದವರಾಗಿದ್ದಾರೆ. ಮೂಲತಃ ರಾಜಸ್ಥಾನದವರಾಗಿದ್ದು ಕಳೆದ ಜುಲೈ 17 ರ ರವೆಗೂ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ.

UPA ಒಕ್ಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವ ಮಾರ್ಗರೇಟ್ ಆಳ್ವ ಕಾಂಗ್ರೆಸ್ ಪಕ್ಷದ ಹಿರಿಯ ಸಂಸದೀಯ ಪಟು. ಕಾಂಗ್ರೆಸ್ ಅಧಿಕಾರಾವಧಿಯ ಸಂದರ್ಭದಲ್ಲಿ ವಿವಿಧ ಮಹತ್ವದ ಹುದ್ದೆಗಳನ್ನು ಅವರು ಅಲಂಕರಿಸಿದ್ದಾರೆ. ಮೂಲತಃ ಕರ್ನಾಟಕದ ಕರಾವಳಿ ಭಾಗದವರಾಗಿದ್ದು ಉತ್ತರ ಕನ್ನಡ ಜಿಲ್ಲೆಯಿಂದ ಚುನಾಯಿತರಾಗಿ ರಾಷ್ಟ್ರ ಮಟ್ಟದಲ್ಲಿ ವಿವಿಧ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ಖ್ಯಾತಿ ಇವರಿಗಿದೆ. 60 ರ ದಶಕದಲ್ಲೇ ರಾಜ್ಯಸಭೆಯ ಎರಡನೇ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವವಿದೆ. ಗೋವಾ, ಗುಜರಾತ್, ರಾಜಸ್ಥಾನ, ಉತ್ತರಾಖಂಡ್ ರಾಜ್ಯಗಳಲ್ಲಿ ರಾಜ್ಯಪಾಲರಾಗಿ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ.

ಇನ್ನು ಸಂಖ್ಯಾಬಲದ ಆಧಾರದಲ್ಲಿ ನೋಡಿದರೆ NDA ಅಭ್ಯರ್ಥಿ ಜಗದೀಪ್ ಧನಖರ್ ಗೆಲ್ಲುವ ಅಭ್ಯರ್ಥಿಯಾಗಿದ್ದಾರೆ. ಆದರೆ UPA ಒಕ್ಕೂಟಕ್ಕೆ ತಮ್ಮ ಒಕ್ಕೂಟಕ್ಕೆ ಸೇರದ ಕೆಲವು ಸಂಸದರು ಬೆಂಬಲ ಸೂಚಿಸಿರುವ ಹಿನ್ನೆಲೆಯಲ್ಲಿ ಮತ್ತು ಪಕ್ಷಗಳು ಸಂಸದರಿಗೆ ವಿಪ್ ನೀಡುವ ಪ್ರಕ್ರಿಯೆ ಇಲ್ಲದ ಹಿನ್ನೆಲೆಯಲ್ಲಿ ಮಾರ್ಗರೇಟ್ ಆಳ್ವರ ಗೆಲುವೂ ಸಹ ಅನಿರೀಕ್ಷಿತವೇನೂ ಆಗಿರುವುದಿಲ್ಲ. ಆ ಹಿನ್ನೆಲೆಯಲ್ಲಿ ಸಮಬಲದ ಹೋರಾಟ ಕೂಡಾ ನಡೆಯುವ ಸಾಧ್ಯತೆ ಇದೆ.

‌ಹಾಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುರವರ ಅಧಿಕಾರ ಆಗಸ್ಟ್ 10 ಕ್ಕೆ ಅಂತ್ಯಗೊಳ್ಳಲಿದ್ದು ಇನ್ನು ಕೆಲವೇ ದಿನಗಳಲ್ಲಿ ಜಗದೀಪ್ ಧನಖರ್ ಅಥವಾ ಮಾರ್ಗರೇಟ್ ಆಳ್ವರನ್ನು ಆ ಸ್ಥಾನದಲ್ಲಿ ನೋಡಬಹುದಾಗಿದೆ.

Related Articles

ಇತ್ತೀಚಿನ ಸುದ್ದಿಗಳು