Friday, June 21, 2024

ಸತ್ಯ | ನ್ಯಾಯ |ಧರ್ಮ

ಶಾಸಕರಿಗೆ ತಿಳುವಳಿಕೆ ಭಾಷಣ ; ವಿವಾದಾತ್ಮಕ ವ್ಯಕ್ತಿಗಳ ಆಯ್ಕೆ ಬಗ್ಗೆ ಪರಿಶೀಲನೆ

ವಿಧಾನಸಭೆಗೆ ನೂತನವಾಗಿ ಆಯ್ಕೆಯಾದ ಶಾಸಕರಿಗೆ ತರಬೇತಿ ಕೊಡುವ ನಿಟ್ಟಿನಲ್ಲಿ ಸಂಪನ್ಮೂಲ ವ್ಯಕ್ತಿಗಳ ಆಯ್ಕೆ ಮಾಡಲಾಗಿತ್ತು. ವಿಧಾನ ಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರು ಮಾಡಿರುವ ಆಯ್ಕೆಯ ಬಗ್ಗೆ ಆಕ್ಷೇಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸಧ್ಯಕ್ಕೆ ಸಂಪನ್ಮೂಲ ವ್ಯಕ್ತಿಗಳ ಹೆಸರುಗಳು ಇನ್ನೂ ಅಧಿಕೃತವಾಗಿಲ್ಲ ಎಂದು ತಿಳಿದು ಬಂದಿದೆ.

ವಿಧಾನ ಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರು ಆಯ್ಕೆ ಮಾಡಿರುವ ವ್ಯಕ್ತಿಗಳು ಧಾರ್ಮಿಕ ಪ್ರತಿನಿಧಿಗಳು, ವಿವಾದಾಸ್ಪದ ವ್ಯಕ್ತಿಗಳು ಆಗಿರುವ ಹಿನ್ನೆಲೆಯಲ್ಲಿ ಪ್ರವಚನವನ್ನು ಕೈ ಬಿಡಬೇಕು ಎಂದು ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಿಕ ವಲಯ ಒಕ್ಕೊರಲಿನಿಂದ ಆಗ್ರಹಿಸಿದೆ.

‘ಶಿಬಿರಕ್ಕೆ ಆಯ್ಕೆ ಮಾಡಿರುವ ಸಂಪನ್ಮೂಲ ವ್ಯಕ್ತಿಗಳ ಕುರಿತು ಸಾಮಾಜಿಕ ವಲಯಗಳಲ್ಲಿ ಅನೇಕ ಭಿನ್ನಾಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಸಂಸದೀಯ ವ್ಯವಸ್ಥೆಯ ಮೌಲ್ಯಗಳ ರಕ್ಷಣೆಯ ದೃಷ್ಟಿಯಿಂದ ಈ ವಿಚಾರವನ್ನು ಮರು ಪರಿಶೀಲಿಸಬೇಕು’ ಎಂದು ಕೆಪಿಸಿಸಿ ವಕ್ತಾರರಾದ ರಮೇಶ್‌ ಬಾಬು ಅವರು ಖಾದರ್ ಅವರಿಗೆ ಆಗ್ರಹ ಪತ್ರ ಬರೆದಿದ್ದಾರೆ.

ಪತ್ರ ಮಾತ್ರವಲ್ಲದೆ ರಮೇಶ್ ಬಾಬು ಅವರು ಸುಧೀರ್ಘ ಚರ್ಚೆ ನಡೆಸಿದ್ದು, ಸಭಾಧ್ಯಕ್ಷರು ಇನ್ನೂ ಆಯ್ಕೆ ಅಂತಿಮಗೊಳಿಸದ ಹಿನ್ನೆಲೆಯಲ್ಲಿ ಸಂಪನ್ಮೂಲ ವ್ಯಕ್ತಿಗಳ ಹೆಸರು ಇನ್ನೂ ಅಧಿಕೃತ ಅಲ್ಲ ಎಂದು ಪ್ರತಿಕ್ರಯಿಸಿದ್ದಾರೆ‌. ಅಷ್ಟೆ ಅಲ್ಲದೆ ಕರ್ನಾಟಕ ವಿಧಾನಸಭೆಯ ಪರಂಪರೆಗೆ ಅನುಗುಣವಾಗಿ ಮತ್ತು ರಾಜ್ಯದ ಸಂಸ್ಕೃತಿಗೆ ಅನುಗುಣವಾಗಿ ಎಲ್ಲರ ಭಾವನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಪ್ರತಿಕ್ರಿಯಿಸಿದ್ದಾರೆ.

ಕೆಪಿಸಿಸಿ ವಕ್ತಾರ ರಮೇಶ್ ಬಾಬು ಅವರು ಅಲ್ಲದೇ ಖಾದರ್‌ಗೆ ಪತ್ರ ಬರೆದಿರುವ ‘ಜಾಗೃತ ನಾಗರಿಕರು ಕರ್ನಾಟಕ’ದ ಕೆ. ಮರುಳಸಿದ್ದಪ್ಪ, ಜಿ. ರಾಮಕೃಷ್ಣ, ವಿಜಯಾ, ಎಸ್.ಜಿ. ಸಿದ್ದರಾಮಯ್ಯ, ರಾಜೇಂದ್ರ ಚೆನ್ನಿ, ಕೆ.ಎಸ್. ವಿಮಲಾ, ಬಿ. ಶ್ರೀಪಾದ ಭಟ್, ಟಿ. ಸುರೇಂದ್ರ ರಾವ್‌, ಬಂಜಗೆರೆ ಜಯಪ್ರಕಾಶ್, ವಿ.ಪಿ. ನಿರಂಜನಾರಾಧ್ಯ, ಮೀನಾಕ್ಷಿ ಬಾಳಿ, ಎನ್. ಗಾಯತ್ರಿ, ವಸುಂಧರಾ ಭೂಪತಿ, ‘‌ನೀವು ಆಹ್ವಾನಿಸಿರುವವರಲ್ಲಿ ಕೆಲವರು ಕೋಮುವಾದಿ ನೀತಿಗಳ ಸಮರ್ಥಕರು ಹಾಗೂ ಸ್ವಂತದ ವ್ಯವಹಾರಗಳಲ್ಲಿ ವಿವಾದಾಸ್ಪದರು. ಇಂಥವರ ಭಾಷಣಗಳು ಹೊಸ ಶಾಸಕರಿಗೆ ಯಾವ ಬಗೆಯ ಮಾದರಿಗಳನ್ನು ಒದಗಿಸಬಲ್ಲುದು ಎಂಬ ಬಗ್ಗೆ ನಾವು ಆತಂಕಿತರಾಗಿದ್ದೇವೆ. ಈ ಧಾರ್ಮಿಕ ಪ್ರತಿನಿಧಿಗಳ ಉಪನ್ಯಾಸಗಳನ್ನು ರದ್ದು ಮಾಡಬೇಕು’ ಎಂದು ಆಗ್ರಹಿಸಿದ್ದಾರೆ.

ಅಷ್ಟೆ ಅಲ್ಲದೆ ‘ಜಾತ್ಯತೀತತೆ ಮತ್ತು ಮತ ನಿರಪೇಕ್ಷತೆ ಎಂದರೆ ರಾಜಕೀಯದೊಡನೆ ಧರ್ಮವನ್ನು ಬೆರೆಸದೇ ದೂರ ಇಡುವುದು ಎಂಬುದನ್ನು ದಯವಿಟ್ಟು ಮನನ ಮಾಡಿಕೊಳ್ಳಬೇಕು. ಯಾರಾದರೂ ಶಾಸಕರು ವೈಯಕ್ತಿಕವಾಗಿ ಯಾವುದಾದರೊಂದು ಧಾರ್ಮಿಕ ಆಚರಣೆಯಲ್ಲಿ ಪಾಲ್ಗೊಳ್ಳುವುದು ಅವರ ವೈಯಕ್ತಿಕ ಆಯ್ಕೆ. ಆದರೆ, ಶಾಸನ ಸಭೆ ಪ್ರವೇಶಿಸುವ ಮೊದಲು ಅವರೆಲ್ಲ ಧಾರ್ಮಿಕ ಪ್ರೇರೇಪಣೆ ಪಡೆದು ಬರಬೇಕೆಂದು ಭಾವಿಸಿರುವುದು ಸಂವಿಧಾನದ ನಿಯಮಗಳಿಗೆ ವಿರುದ್ಧವಾಗಿದೆ’ ಎಂದು ಖಾದರ್ ಅವರಿಗೆ ಬರೆದ ಪತ್ರದಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.

ತರಬೇತಿ ಶಿಬಿರ ನಡೆಯುತ್ತಿರುವ ಕುರಿತು ಬುಧವಾರ ಮಾಹಿತಿ ನೀಡಿದ್ದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌, ‘ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಜಮಾತೆ ಇಸ್ಲಾಮಿ ಹಿಂದ್‌ನ ಮಹಮ್ಮದ್‌ ಕುಂ, ಗುರುರಾಜ ಕರ್ಜಗಿ, ರಾಜಯೋಗಿನಿ ಬ್ರಹ್ಮಕುಮಾರಿ ಆಶಾ ದೀದಿ, ಆರ್ಟ್‌ ಆಫ್‌ ಲಿವಿಂಗ್‌ನ ರವಿಶಂಕರ್ ಅವರಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ಆಯ್ಕೆಯಾಗಿದ್ದಾರೆ’ ಎಂದು ತಿಳಿಸಿದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸಾರ್ವಜನಿಕ ವಲಯಗಳಲ್ಲಿ ತೀವ್ರ ಆಕ್ಷೇಪ ಬಂದ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Related Articles

ಇತ್ತೀಚಿನ ಸುದ್ದಿಗಳು