Saturday, October 12, 2024

ಸತ್ಯ | ನ್ಯಾಯ |ಧರ್ಮ

ರಾಜ್ಯಕ್ಕೆ ತೆರಿಗೆ ಪಾಲಿನ ಹಂಚಿಕೆಯಲ್ಲಿ ಮತ್ತೆ ಅನ್ಯಾಯ; ಕೇಂದ್ರದ ವಿರುದ್ದ ಗುಡುಗಿದ ಡಿಸಿಎಂ ಡಿಕೆ ಶಿವಕುಮಾರ್

ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಕಡಿಮೆ ಹಣ ಮಂಜೂರು ಮಾಡುವ ಮೂಲಕ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ ಎಂದು ಆರೋಪಿಸಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಇದರ ವಿರುದ್ಧ ಹೋರಾಡಲಿದೆ ಎಂದು ಶನಿವಾರ ಹೇಳಿದ್ದಾರೆ.

ಅಷ್ಟೇ ಅಲ್ಲದೆ ರಾಜ್ಯ ಬಿಜೆಪಿ ಸಂಸದರು ಮತ್ತು ಕೇಂದ್ರ ಸಚಿವರು ಈ ವಿಷಯದ ಬಗ್ಗೆ ಮೌನ ವಹಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಮತ್ತು ಇದು “ನಾಚಿಕೆಗೇಡಿನ ಸಂಗತಿ” ಎಂದು ಕೇಂದ್ರ ಸಚಿವರು ಮತ್ತು ಬಿಜೆಪಿ ಸಂಸದರ ವಿರುದ್ದ ಕಿಡಿಕಾರಿದ್ದಾರೆ.

ಕೇಂದ್ರದ ತೆರಿಗೆ ನೀತಿಯಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಅತ್ಯಂತ ಕಡಿಮೆ ತೆರಿಗೆ ಪಾವತಿಸುವ ಉತ್ತರ ಪ್ರದೇಶ ಮತ್ತು ಬಿಹಾರಕ್ಕೆ ಹೆಚ್ಚು ಪಾಲು ಹೋಗುತ್ತಿದೆ. ತೆರಿಗೆಯಲ್ಲಿ ಹೆಚ್ಚಿನ ಕೊಡುಗೆ ನೀಡದ ಆಂಧ್ರಪ್ರದೇಶಕ್ಕಿಂತ ಕರ್ನಾಟಕಕ್ಕೆ ಕಡಿಮೆ ಅನುದಾನ ನೀಡಲಾಗಿದೆ. ಇದರ ವಿರುದ್ದ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಬೇಕಾದ ಅನಿವಾರ್ಯ ಇದೆ ಎಂದು ಡಿಕೆ ಶಿವಕುಮಾರ್ ಹೇಳಿದರು.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್ ನಮ್ಮ ತೆರಿಗೆ, ನಮ್ಮ ಹಕ್ಕು- ಹೋರಾಟಕ್ಕೆ ಮತ್ತೆ ಚಾಲನೆ ನೀಡುವ ಬಗ್ಗೆ ಹೇಳಿದ್ದಾರೆ.

ಕಳೆದ ಎರಡು ಅವಧಿಯಿಂದಲೂ ಈ ಅನ್ಯಾಯ ಮುಂದುವರೆಯುತ್ತಿದೆ. ಬಿಜೆಪಿ ಸಂಸದರು ಮತ್ತು ಕೇಂದ್ರ ಸಚಿವರು ಏಕೆ ಧ್ವನಿ ಎತ್ತುತ್ತಿಲ್ಲ? ಕರ್ನಾಟಕದಿಂದಲೇ ಆಯ್ಕೆಯಾದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ರಾಜ್ಯದ ಐವರು ಕೇಂದ್ರ ಸಚಿವರಿದ್ದರೂ ಅವರು ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದರೂ ಮೌನವಾಗಿದ್ದಾರೆ, ಇದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಅಕ್ಟೋಬರ್ 2024ಕ್ಕೆ ಬಾಕಿ ಇರುವ ನಿಯಮಿತ ಕಂತಿಗೆ ಹೆಚ್ಚುವರಿಯಾಗಿ ₹ 89,086.50 ಕೋಟಿಗಳ ಒಂದು ಮುಂಗಡ ಕಂತು ಸೇರಿದಂತೆ ₹ 1,78,173 ಕೋಟಿಗಳ ತೆರಿಗೆ ಹಂಚಿಕೆಯನ್ನು ಕೇಂದ್ರ ಸರ್ಕಾರ ಗುರುವಾರ ರಾಜ್ಯ ಸರ್ಕಾರಗಳಿಗೆ ಬಿಡುಗಡೆ ಮಾಡಿದೆ. ಅಕ್ಟೋಬರ್ 2024 ರ ಒಕ್ಕೂಟದ ತೆರಿಗೆ ಮತ್ತು ಸುಂಕಗಳ ನಿವ್ವಳ ಆದಾಯದ ರಾಜ್ಯವಾರು ವಿತರಣೆಯಲ್ಲಿ ಕರ್ನಾಟಕವು ₹ 6,498 ಕೋಟಿಗಳನ್ನು ಪಡೆದುಕೊಂಡಿದೆ .

Related Articles

ಇತ್ತೀಚಿನ ಸುದ್ದಿಗಳು

You cannot copy content of this page