Wednesday, December 18, 2024

ಸತ್ಯ | ನ್ಯಾಯ |ಧರ್ಮ

ಪಾಪ ಮೆಲಾನಿನ್!

“ನೀವು ತುಂಬಾ ಯಂಗ್ ಇದ್ದೀರಿ, ನೀವೊಬ್ಬ ಖ್ಯಾತ ಸಿನಿಮಾ ನಿರ್ಮಾಪಕ, ನಿರ್ದೇಶಕರೂ ಆಗಿದ್ದೀರಿ. ನೀವು ಯಾವುದಾದರೂ ಸ್ಟಾರ್ ಬಳಿ ಹೋದಾಗ ಅವರು Where is Atlee ಅಂತ ಕೇಳಿದ್ದುಂಟಾ?” ಕಪಿಲ್ ಶರ್ಮಾ ಶೋನಲ್ಲಿ ಬೇಬಿ ಜಾನ್ ಸಿನೆಮಾ ಪ್ರೊಮೋಷನ್‌ಗಾಗಿ ಬಂದ ಅಟ್ಲೀಯಲ್ಲಿ ಕಪಿಲ್ ಶರ್ಮಾ ಕೇಳಿದ ಪ್ರಶ್ನೆ ಇದು. ಇದಕ್ಕೆ ಉತ್ತರವಾಗಿ ಅಟ್ಲೀ, “ನನಗೆ ನಿಮ್ಮ ಪ್ರಶ್ನೆ ಏನೆಂದು ತಿಳಿಯಿತು. ನಾನು ಉತ್ತರಿಸಲು ಪ್ರಯತ್ನಿಸುವೆ ಎಂದು ಹೇಳಿ, ಮುರುಗದಾಸ್ ತನ್ನ ಮೊದಲ ಸಿನಿಮಾ ನಿರ್ಮಾಣ ಮಾಡಿದ್ದರು. ಅವರು ನನ್ನ ಸ್ಕ್ರಿಪ್ಟ್ ನೋಡಿದ್ರು, ನಾನು ಹೇಗೆ ಕಾಣ್ತೀನಿ ಎಂಬುದನ್ನು ನೋಡಿಲ್ಲ, ಅವರು ನನ್ನ ನಿರೂಪಣೆಯನ್ನು ಇಷ್ಟಪಟ್ಟರು . ನಾವು ಹೇಗೆ ಇದ್ದೀವಿ ಎಂಬುದನ್ನು ನೋಡಿ ಜಡ್ಜ್ ಮಾಡಬಾರದು, ಹೃದಯದಿಂದ ಜಡ್ಜ್ ಮಾಡಬೇಕು,” ಅಂತಾರೆ.

ಕಪಿಲ್ ಶರ್ಮಾ ಮೊದಲ ವಾಕ್ಯದಲ್ಲಿ ನೀವು ಯಂಗ್ ಇದ್ದೀರಿ ಎಂದು ಹೇಳಿದ್ದರಿಂದ, ನೀವು ನೋಡೋಕೆ ಚಿಕ್ಕ ಹುಡುಗನ ತರ ಕಾಣ್ತಿದ್ದೀರಿ, ನೀವು ಇಷ್ಟು ದೊಡ್ಡ ಡೈರೆಕ್ಟರ್ ಎಂದು ಹೇಳಿದ್ದೂ ಇರಬಹುದು. ಇನ್ನೊಂದು ಅರ್ಥದಲ್ಲಿ ಅಟ್ಲಿ ಮೈ ಬಣ್ಣದ ಬಗ್ಗೆ ಕಾಮೆಂಟ್ ಮಾಡಿದ್ದೂ ಆಗಿರಬಹುದು. ಕಪಿಲ್ ಶರ್ಮಾ ಶೋನಲ್ಲಿ ಬಾಡಿ ಶೇಮಿಂಗ್ ಇರಲ್ಲ ಅಂತ ಹೇಳುವುದು ತಪ್ಪಾಗುತ್ತೆ.

ಅಂದಹಾಗೆ, ಕಪ್ಪಗಿರುವವರು ಸಾಮಾನ್ಯರ ಕಣ್ಣಿಗೆ ‘ಕಾಣುವುದೇ’ ಇಲ್ಲ ಎಂಬ ಜೋಕ್‌ಗಳಿಗೇನೂ ಕಮ್ಮಿ ಇಲ್ಲ. ಇತ್ತೀಚಿಗೆ ನೋಡಿದ ಒಂದು ರೀಲ್‌ನಲ್ಲಿ, ಇಬ್ಬರು ಹುಡುಗೀರು ರೆಸ್ಟೋರೆಂಟ್‌ನಲ್ಲಿ ಮೂರು ಕಾಫಿ ಅಂತ ಆರ್ಡರ್ ಮಾಡ್ತಾರೆ. ವೈಟರ್ ಬಂದು ನೀವಿಬ್ಬರೇ ಇರೋದು… ಎರಡು ಕಾಫಿ ಅಲ್ವಾ, ಮೂರು ಯಾಕೆ ಎಂದು ಕೇಳಿದಾಗ ಅವರು ಅವರ ಜತೆ ಬಂದಿದ್ದ ಕಪ್ಪಗಿನ ಹುಡುಗನ ಮೇಲೆ ಮೊಬೈಲ್ ಟಾರ್ಚ್ ಹಾಕಿ ತೋರಿಸುತ್ತಾರೆ. ಬ್ಯಾಕ್ ಗ್ರೌಂಡ್‌ನಲ್ಲಿ ಹ್ಹ ಹ್ಹ ಹ್ಹ ಎಂಬ ನಗು!

ವಿಲನ್‌ಗಳು ಕಪ್ಪಗಿನವರು, ಕಳ್ಳರೂ ಕಪ್ಪಗಿನವರು ಹೀಗೆ ಕಪ್ಪು ಮೈಬಣ್ಣದವರನ್ನು ನೆಗೆಟಿವ್ ಆಗಿ ತೋರಿಸುವ ಪರಿಪಾಠ ನಮ್ಮಲ್ಲುಂಟು. ಕಪ್ಪು ಅಂದ್ರೆ ಸುಂದರವಲ್ಲದ್ದು, ಬಿಳಿ ಅಥವಾ ಗೋದಿ ಬಣ್ಣ ಅಂದ್ರೆ ಮಾತ್ರ ಸುಂದರವಾಗಿರುವುದು ಎಂಬ ನಂಬಿಕೆ ಇನ್ನೂ ನಮ್ಮ ಸಮಾಜದಿಂದ ದೂರ ಹೋಗಿಲ್ಲ. ಮಾಧ್ಯಮಗಳು, ಸಿನಿಮಾ, ಜಾಹೀರಾತು ಎಲ್ಲವೂ ಪ್ರೋತ್ಸಾಹಿಸುವುದೂ ಅದನ್ನೇ ಅಲ್ಲವೇ. ಕಪ್ಪು ಬಣ್ಣದವರಲ್ಲಿ ಕೀಳರಿಮೆ ಉಂಟು ಮಾಡಲು ಇಡೀ ಸಮಾಜವೇ ಮುಂದೆ ನಿಲ್ಲುತ್ತದೆ. ‘ಮಗು ಬೆಳ್ಳಗಿದೆ’, ‘ಹುಡುಗಿ ಕಪ್ಪು’, ಎಂದು ಹೇಳುವ ಜನರೇ ಮತ್ತೊಂದೆಡೆ ಕಪ್ಪಾದರೂ ಲಕ್ಷಣ ಅಂತ ಹೊಗಳುತ್ತಾರೆ. ಸಮಸ್ಯೆ ಇರುವುದು ಈ ‘ಆದರೂ’ ಅಂತ ಸೇರಿಸುವಲ್ಲಿ!

ಬ್ಲಾಕ್ ಈಸ್ ಬ್ಯೂಟಿಫುಲ್ ಎಂದು ಹ್ಯಾಶ್ ಟ್ಯಾಗ್ ಟ್ರೆಂಡ್ ಆದರೂ, ಕಪ್ಪು ಅಂದ್ರೆ ಇಂಥಾ ಜಾತಿ, ಇಂಥಾ ಭಾಷೆ, ಇಂಥಾ ವರ್ಗ ಎಂದು ಗುರುತಿಸುವುದು ಮಾತ್ರ ಮುಂದುವರಿಯುತ್ತಲೇ ಇರುತ್ತದೆ. ಪಾಪ ಮೆಲಾನಿನ್ !

ಲೇಖನ: ರಶ್ಮಿ ಟೆಂಡಲ್ಕರ್

Related Articles

ಇತ್ತೀಚಿನ ಸುದ್ದಿಗಳು

You cannot copy content of this page