Friday, June 14, 2024

ಸತ್ಯ | ನ್ಯಾಯ |ಧರ್ಮ

ಥೀಮ್‌ ಪಾರ್ಕಿನಲ್ಲಿ ಪರಶುರಾಮ ಪ್ರತಿಮೆ ಸ್ಥಾಪನೆ-ತುಳುನಾಡಿಗೂ ಪರಶುರಾಮನಿಗೂ ಏನು ಸಂಬಂಧ?

ಕಾರ್ಕಳ ತಾಲೂಕಿನ ಬೈಲೂರಿನ ಉಮಿಕ್ಕಲ್‌ ಬೆಟ್ಟದ ಮೇಲೆ ೩೩ ಅಡಿ ಎತ್ತರದ ಪರಶುರಾಮನ ಕಂಚಿನ ಪ್ರತಿಮೆಯೊಂದಿಗೆ ಪರಶುರಾಮ ಥೀಮ್‌ ಪಾರ್ಕ್‌ ಇಂದು ಮುಖ್ಯಮಂತ್ರಿಗಳಿಂದ ಲೋಕಾರ್ಪಣೆ ಗೊಂಡಿದೆ. ಕಾಲ್ಪನಿಕ ಪೌರಾಣಿಕ ವ್ಯಕ್ತಿ ಪರಶುರಾಮನ ಉಲ್ಲೇಖವು ಕರಾವಳಿಯ ಬಗ್ಗೆ ರಚಿತಗೊಂಡ ಯಾವ ಕೃತಿಗಳಲ್ಲೂ ಇಲ್ಲದಿರುವುದರಿಂದ ತುಳುನಾಡಿಗೂ ಪರಶುರಾಮನಿಗೂ ಯಾವ ಸಂಬಂಧವೂ ಇಲ್ಲವೆಂದು ನಿರೂಪಿಸುತ್ತಾರೆ ಚಿಂತಕ ಪ್ರವೀಣ್‌ ಶೆಟ್ಟಿ. ಈ ಸಕಾಲಿಕ ಲೇಖನ ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ.

ಪ್ರವಾಸೋದ್ಯಮಕ್ಕೆ ಇಂಬು ಕೊಡಲು ಕಾರ್ಕಳ ತಾಲೂಕಿನ ಬೈಲೂರಿನ ಬೆಟ್ಟದ ಮೇಲೆ ೧೦ ಕೋಟಿ ರೂಪಾಯಿ ವೆಚ್ಚದಲ್ಲಿ ಒಂದು ಥೀಮ್ ಪಾರ್ಕ್ ಯೋಜನೆ ಕರ್ನಾಟಕ ಸರಕಾರ ಅನುಷ್ಠಾನ ಮಾಡಿದ್ದು, ಅದು ಇದೆ ತಿಂಗಳ 27-28 ಕ್ಕೆ ಮುಖ್ಯಮಂತ್ರಿ ಬೊಮ್ಮಾಯಿಯವರ ಕೈಯಿಂದ ಉದ್ಘಾಟನೆಗೊಳ್ಳಲಿರುವುದು ಸಂತೋಷದ ವಿಷಯ. ಆದರೆ ಆ ಪಾರ್ಕ್ ನಲ್ಲಿ ಪರಶುರಾಮನ 33 ಅಡಿ ಎತ್ತರದ ಕಂಚಿನ ಪ್ರತಿಮೆ ನಿಲ್ಲಿಸುವ ಯೋಜನೆ ನಿರಾಶೆ ತಂದಿದೆ. ಯಾಕೆಂದರೆ ಪರಶುರಾಮ ಎಂಬವನು ಒಬ್ಬ ಕಾಲ್ಪನಿಕ ಪೌರಾಣಿಕ ವ್ಯಕ್ತಿ. ಮೇಲಾಗಿ ಈ ಕಾಲ್ಪನಿಕ ಕಥೆಯಲ್ಲಿಯೂ ಅವನನ್ನು ಒಬ್ಬ ಅತಿ ಸೇಡು ಭರಿತ ಅಮಾನವೀಯ ಜಾತಿವಾದಿ ವ್ಯಕ್ತಿ ಎಂದು ಬಿಂಬಿಸಲಾಗಿದೆ. ಉಡುಪಿ-ಕಾರ್ಕಳದ ಪಿತೃಪ್ರಧಾನ ವೈದಿಕ ಹಿನ್ನೆಲೆ ಇರುವ ರಾಜಕಾರಣಿಗಳು ತಮ್ಮ ಸಮುದಾಯದ ಮೇಲ್ಮೆ ಸಾಧಿಸಲು ಈ ಕ್ರೂರಿ ಪರಶುರಾಮನ ಕಾಲ್ಪನಿಕ ಕಥೆಯನ್ನು ಜೀವಂತವಾಗಿಡಲು ಬಯಸಿ ಕಾರ್ಕಳದಲ್ಲಿ ತೆರಿಗೆದಾರರ ಹಣದಲ್ಲಿ ಪರಶುರಾಮನ ಮೂರ್ತಿ ಸ್ಥಾಪಿಸಿ ತಮ್ಮ ವೈದಿಕ/ಅರೆ-ವೈದಿಕ ಸಮುದಾಯದ ಪೂರ್ವಜರ ಕಾಲ್ಪನಿಕ ಮೇಲ್ಮೆ ಬಿಂಬಿಸಲು ವ್ಯರ್ಥ ಪ್ರಯತ್ನ ನಡೆಸುತ್ತಿರುವಂತಿದೆ.

500 ವರ್ಷಗಳ ಹಿಂದಿನ ಮುಸ್ಲಿಂ ರಾಜರು, ನವಾಬರು ಸುಲ್ತಾನರು ಮಾಡಿದ ತಪ್ಪಿಗೆ ಅವರ ಜಾತಿ-ಧರ್ಮದ ಇಂದಿನ ಪೀಳಿಗೆಯನ್ನು ಹೊಣೆ ಮಾಡಿ ಹೀನಾಯವಾಗಿ ಪೀಡಿಸುವ ಅತ್ಯಂತ ತುಚ್ಛ ಕಾರ್ಯ ಈಗ ಭಾರತದಲ್ಲಿ ನಡೆಯುತ್ತಿದೆ. ಹಾಗಿರುವಾಗ ಅತ್ಯಂತ ಸೇಡಿನ ಬುದ್ಧಿಯ, ಮಹಾ ಜಾತಿವಾದಿ (ಕಾಲ್ಪನಿಕ) ವ್ಯಕ್ತಿಯ ಪ್ರತಿಮೆ ನಮ್ಮ ಕಾರ್ಕಳಕ್ಕೆ ಬೇಕೆ? ಕಾರ್ಕಳದ ಈ ಪರಶುರಾಮ ಥೀಮ್ ಪಾರ್ಕ್ ಗೆ ಸರಕಾರ ಕೋಟ್ಯಂತರ ಸುರಿದಿರುವುದು ಸಾಮಾನ್ಯ ತೆರಿಗೆದಾರರ ಹಣವೇ ಹೊರತು ಅದು ಯಾವುದೇ ಒಂದು ಮೇಲ್ಜಾತಿಯ ಅಥವಾ ಒಂದು ಪಕ್ಷದ ಹಣ ಅಲ್ಲ! ಎಂಬುದು ನಮ್ಮ ನೆನಪಿನಲ್ಲಿರಲಿ.

ಕಾರ್ಕಳದಲ್ಲಿ ಅತ್ಯಂತ ಸುಂದರ ಕರಿಕಲ್ಲಿನ ಜಗತ್‌ ಪ್ರಸಿದ್ಧ ಗೊಮ್ಮಟೇಶ್ವರ ಮೂರ್ತಿ ಇರುವುದು ನಿಜ. ಅದನ್ನು ಕೆತ್ತಿದ ಶಿಲ್ಪಿ ಯಾರು ಎಂಬುದು ಕಾರ್ಕಳದ ಇತಿಹಾಸದಲ್ಲಿ ಸ್ಪಷ್ಟವಾಗಿ ನಮೂದಾಗಿಲ್ಲ. ಆದರೆ ಈ ಕುರಿತು ಇರುವ ಜಾನಪದ ಕಥೆಗಳ ಪ್ರಕಾರ ಕಲ್ಕುಡ ಎಂಬ ದೈವಿ ಶಕ್ತಿಯುಳ್ಳ ಶಿಲ್ಪಿ ಈ ಮೂರ್ತಿಯನ್ನು ಕೆತ್ತಿದ್ದು. ಆದರೆ ಮೂರ್ತಿ ಕೆತ್ತಿಯಾದ ಮೇಲೆ ಕಲ್ಕುಡನಿಗೆ ಕಾರ್ಕಳದ ಜೈನ ಅರಸ ದೊಡ್ಡ ಅನ್ಯಾಯ ಮಾಡಿದನು ಎಂದು ಕಲ್ಕುಡನ ತಂಗಿ ಕಲ್ಲುರ್ಟಿಯು ಅರಸನ ವಿರುದ್ಧ ಮಾತ್ರ ಸೇಡು ತೀರಿಸಿ ಕೊಳ್ಳುತ್ತಾಳೆ, (ಪರಶುರಾಮನಂತೆ ಕಲ್ಲುರ್ಟಿಯು ಸಮಸ್ತ ಜೈನ ಸಮುದಾಯದ ವಿರುದ್ಧ ಸೇಡು ತೀರಿಸಿಕೊಳ್ಳುವುದಿಲ್ಲ!). ಈ ಕಲ್ಕುಡ ಕಲ್ಲುರ್ಟಿಯನ್ನು ದೈವತ್ವಕ್ಕೆ ಏರಿಸಿ ನಾವು ಈಗ ಪೂಜಿಸುತ್ತೇವೆ. ಹಾಗಾಗಿ ಶಿಲ್ಪಿ ಕಲ್ಕುಡ-ಕಲ್ಲುರ್ಟಿಯ ಮೂರ್ತಿಯನ್ನು ಕಾರ್ಕಳದ ಆ ಹೊಸ ಪಾರ್ಕಿನಲ್ಲಿ ಸ್ಥಾಪಿಸಬೇಕಿತ್ತು. ಹೇಗೂ ಪರಶುರಾಮನದ್ದು ಕಾಲ್ಪನಿಕ ರೂಪವೇ ತಾನೇ? ಅಂತೆಯೇ ತುಳುವ ಸಂಪ್ರದಾಯದ ಪ್ರಕಾರ ಕಲ್ಕುಡ-ಕಲ್ಲುರ್ಟಿಯ ರೂಪವೂ ಕಾಲ್ಪನಿಕವಿದ್ದರೂ ಯಾರದೂ ಅಭ್ಯಂತರ ಇರಲಾರದು. ಹೇಗಿದ್ದರೂ ತುಳುವರೆಲ್ಲಾ ಕಲ್ಕುಡನ ತಂಗಿ ಕಲ್ಲುರ್ಟಿಯನ್ನು ಅತಿ ಕಾರಣಿಕ ದೈವದ ರೂಪದಲ್ಲಿ ಎಲ್ಲೆಡೆಯೂ ಈಗಲೂ ಆರಾಧಿಸುತ್ತಿದ್ದಾರೆ ಅಲ್ಲವೇ! ಅದಿಲ್ಲದಿದ್ದರೆ ವೀರ ಕೋಟಿ ಚೆನ್ನಯರ ಮೂರ್ತಿಗಳನ್ನು ಈ ಕಾರ್ಕಳದ ಥೀಮ್ ಪಾರ್ಕಿನಲ್ಲಿ ಸ್ಥಾಪಿಸಲಿ!

ತುಳುನಾಡಿಗರದು ಮಾತೃ ಪ್ರಧಾನ ಕುಟುಂಬ ವ್ಯವಸ್ಥೆಯಾದರೆ ವೈದಿಕ ಪರಶುರಾಮನದು ಅಪ್ಪಟ ಪಿತೃಪ್ರಧಾನ ಸಮಾಜವಾಗಿತ್ತು. ಅದಕ್ಕಾಗಿ ತನ್ನ ತಂದೆ ಜಮದಗ್ನಿ ಹೇಳಿದನೆಂದು ಪರಶುರಾಮ ತನ್ನ ಅಮಾಯಕ ತಾಯಿಯನ್ನೇ ಕಾರಣವಿಲ್ಲದೆ ಕೊಲ್ಲುತ್ತಾನೆ, (ಮತ್ತೆ ಜೀವಂತ ಮಾಡುತ್ತಾನೆ ಎಂಬುದು ಒಂದು ಸಬೂಬು ಅಷ್ಟೇ). ಇಂತಹಾ ಮಾತೃ ಹಂತಕನ ಗೌರವಾರ್ಥ ಕಾರ್ಕಳದಲ್ಲಿ ಆತನ ಬೃಹತ್ ಪ್ರತಿಮೆ ಸ್ಥಾಪಿಸಬೇಕೆ? ನಮ್ಮ ವಿಧಾನ ಸಭಾ ಚುನಾವಣೆ ಹತ್ತಿರ ಬರುತ್ತಿರುವ ಸಮಯದಲ್ಲಿ ಕ್ರೂರ ಜಾತಿವಾದಿ ವೈದಿಕ ಪರಶುರಾಮನ ಹೆಸರಲ್ಲಿ ಮೇಲ್ಜಾತಿ ವೋಟ್ ಬ್ಯಾಂಕ್ ಪಾಲಿಟಿಕ್ಸ್ ಆಗುತ್ತಿದೆಯೇ?

ಯಾವ ಕೃತಿಯಲ್ಲೂ ಪರಶುರಾಮ ಸೃಷ್ಟಿಯ ಉಲ್ಲೇಖವಿಲ್ಲ!
ಸುಮಾರು 750 ವರ್ಷಗಳ ಹಿಂದೆ ನಮ್ಮ ಕರಾವಳಿಯ ಉಡುಪಿಯಲ್ಲಿ ಮಾಧ್ವ ವೈಷ್ಣವ ಪರಂಪರೆ ಸ್ಥಾಪಿಸಿದ ಶ್ರೀಮಧ್ವಾಚಾರ್ಯರು ತಮ್ಮ ಯಾವುದೇ ಕೃತಿಯಲ್ಲೂ ಪರಶುರಾಮ ಸೃಷ್ಟಿಯ ಕಥೆಯನ್ನು ಉಲ್ಲೇಖಿಸಿಲ್ಲ. ಆನಂತರ ಮಾಧ್ವ ಪರಂಪರೆಯನ್ನು ದಕ್ಷಿಣ ಭಾರತದೆಲ್ಲೆಡೆ ಪಸರಿಸಿದ ಶ್ರೀವಾದಿರಾಜ ಸ್ವಾಮಿಗಳೂ ಸಂಸ್ಕೃತ, ಕನ್ನಡ, ತುಳು ಭಾಷೆಗಳಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಆದರೆ ಎಲ್ಲಿಯೂ ಅವರು ಪರಶುರಾಮ ಸೃಷ್ಟಿಯ ಕಥೆಯನ್ನು ಉಲ್ಲೇಖಿಸಿಲ್ಲ! ನಮ್ಮ ಕರಾವಳಿಯನ್ನು ಆಳಿದ ಕದಂಬ ರಾಜರ ಕಾಲದಲ್ಲಾಗಲಿ, ಶೈವರಾಗಿದ್ದ ಅಳೂಪ ರಾಜರ ಕಾಲದಲ್ಲಾಗಲಿ, ಅಥವಾ ಜೈನರಾಗಿದ್ದ ಹೊಯ್ಸಳರು, ರಾಣಿ ಅಬ್ಬಕ್ಕ, ಲಿಂಗಾಯತ ಇಕ್ಕೇರಿ ಅರಸರ ಆಡಳಿತ ಕಾಲದಲ್ಲಾಗಲಿ, ವಿಜಯನಗರದ ಆಳ್ವಿಕೆಯ ಕಾಲದಲ್ಲಾಗಲಿ ಈ ಪರಶುರಾಮ ಸೃಷ್ಟಿ ಎಂಬ ಕಾಲ್ಪನಿಕ ಕಥೆ ಪ್ರಚಲಿತವಾಗಿರಲೇ ಇಲ್ಲ. 19-20 ನೇ ಶತಮಾನದಲ್ಲಿ ಕೇರಳದಲ್ಲಿ ಮಹತ್ತರ ಸಾಮಾಜಿಕ ಕ್ರಾಂತಿ ಮಾಡಿ ಈಡಿಗ/ಬಿಲ್ಲವ ಸಮುದಾಯಕ್ಕೆ ಆತ್ಮಸಮ್ಮಾನ ಕಲಿಸಿಕೊಟ್ಟ ಬ್ರಹ್ಮಶ್ರೀ ನಾರಾಯಣ ಗುರುಗಳು ಎಂದೂ ಈ ಪರಶುರಾಮನ ಬಾಲಿಶ ಕಥೆಯನ್ನು ಉಲ್ಲೇಖಿಸಲೇ ಇಲ್ಲ. ಕೇರಳ ಮೂಲದ ಆದಿಶಂಕರರು 1200 ವರ್ಷಗಳ ಹಿಂದೆ ಕೊಲ್ಲೂರಿಗೆ ಸ್ವತಃ ಬಂದು ಮೂಕಾಂಬಿಕೆಯ ಕ್ಷೇತ್ರವನ್ನು ಸ್ಥಾಪಿಸಿದರು ಎಂಬ ಐತಿಹ್ಯ ಇದೆ. ಕರಾಚಾರ್ಯರೂ ತಮ್ಮ ಯಾವುದೇ ಕೃತಿಯಲ್ಲೂ ತಮ್ಮ ಹುಟ್ಟೂರು ಕೇರಳ ಅಥವಾ ಮೂಕಾಂಬಿಕಾ ಕ್ಷೇತ್ರ ಇರುವ ತುಳುಗನ್ನಡ ಪ್ರದೇಶವು ʼಪರಶುರಾಮ ಸೃಷ್ಟಿʼ ಎಂದು ಎಲ್ಲಿಯೂ ಹೇಳಿಲ್ಲ. ನಮ್ಮ ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ನೆಲೆಸಿರುವಳೆಂದು ಐತಿಹ್ಯವಿರುವ ಪರಶುರಾಮನ ತಾಯಿ ರೇಣುಕಾ ಎಲ್ಲಮ್ಮನ ಕ್ಷೇತ್ರ ಣದಲ್ಲಿಯೂ ಪರಶುರಾಮ ಸೃಷ್ಟಿಯ ಉಲ್ಲೇಖ ಇಲ್ಲ. ನಮ್ಮ ತುಳುನಾಡಿನ ಸಮಗ್ರ ಇತಿಹಾಸದ ಸಂಶೋಧಕ ಡಾ. ಪಾದೂರು ಗುರುರಾಜ ಭಟ್ಟರೂ ಈ ಪರಶುರಾಮ ಸೃಷ್ಟಿಯ ಕಥೆ ಒಂದು ಕಾಲ್ಪನಿಕ ಕಥೆ ಎಂದು ತಮಗೆ ಡಾಕ್ಟರೇಟ್ ತಂದು ಕೊಟ್ಟ “ತುಳುನಾಡು” ಎಂಬ ತಮ್ಮ ಘನ ಕೃತಿಯಲ್ಲಿ ಸ್ಪಷ್ಟವಾಗಿ ಬರೆದಿದ್ದಾರೆ.

ಉತ್ತರ ಭಾರತದಲ್ಲಿ ಒಂದೇ ಒಂದು ಪರಶುರಾಮನ ಪುರಾತನ ಕ್ಷೇತ್ರವಿಲ್ಲ!
ರಾಮಾಯಣ ಮತ್ತು ಮಹಾಭಾರತ ಈ ಎರಡೂ ಮಹಾಕಾವ್ಯಗಳಲ್ಲಿ ಉಲ್ಲೇಖಿತವಾಗಿರುವ ಪರಶುರಾಮ ಎಂಬ ಬ್ರಾಹ್ಮಣ ಋಷಿ ಇದ್ದಿದ್ದು ಉತ್ತರ ಭಾರತದಲ್ಲಿ. ಆದರೆ ಉತ್ತರ ಭಾರತದ ಯಾವುದೇ ಮೂಲ ಗ್ರಂಥದಲ್ಲಿಯೂ ಪರಶುರಾಮ ದಕ್ಷಿಣ ಭಾರತಕ್ಕೆ ಬಂದಿದ್ದ ಹಾಗೂ ಇಲ್ಲಿ ಅವನು ಕೊಡಲಿ ಬೀಸಿ ಸಮುದ್ರದಿಂದ ಭೂಮಿಯನ್ನು ಮೇಲೆತ್ತಿ ಕೊಟ್ಟ ಎಂಬ ಉಲ್ಲೇಖವೇ ಇಲ್ಲ. ಅವನು ಕ್ಷತ್ರಿಯರಿಂದ ಗೆದ್ದ ಎಲ್ಲಾ ಭೂಮಿಯನ್ನು ಬ್ರಾಹ್ಮಣರಿಗೆ ದಾನ ಮಾಡಿ ಹಿಮಾಲಯಕ್ಕೆ ತಪಸ್ಸು ಮಾಡಲು ಹೋದ ಎಂದಷ್ಟೇ ಮೂಲ ಗ್ರಂಥದಲ್ಲಿ ಉಲ್ಲೇಖವಿದೆ. ಪರಶುರಾಮನ ಪೌರಾಣಿಕ ಕಥೆ ಹುಟ್ಟಿದ್ದು ಉತ್ತರ ಭಾರತದಲ್ಲಿ ಆದರೂ ಉತ್ತರದ ಜನರು ಪರಶುರಾಮನನ್ನು ಒಬ್ಬ ಋಷಿ ಎಂದು ಮಾತ್ರ ಪರಿಗಣಿಸುತ್ತಾರೆಯೇ ಹೊರತು ಅವನನ್ನು ದೇವರು ಎಂದು ಯಾರೂ ಪೂಜಿಸುವುದಿಲ್ಲ. ಅವನು ವಿಷ್ಣುವಿನ ಅವತಾರ ಎಂದು ವೈಷ್ಣವರು ಹೇಳಿದರೂ ಅವನನ್ನು ಸ್ವತಃ ವೈಷ್ಣವರೇ ಆರಾಧಿಸುವುದಿಲ್ಲ. ಅದರಲ್ಲೂ ಉತ್ತರ ಭಾರತದ ಠಾಕೂರ್/ ರಜಪೂತ್/ಕುರ್ಮಿ/ ಜಾಟ್/ ಗುಜ್ಜರ್ ಮುಂತಾದ ಕ್ಷತ್ರಿಯ ವರ್ಗದ ಜನರೆಲ್ಲಾ ಮೊದಲಿನಿಂದಲೂ ಪರಶುರಾಮನನ್ನು ಒಬ್ಬ ಸೇಡುಭರಿತ ಕ್ರೂರಿ, ಅಹಂಕಾರಿ, ಹಾಗೂ ತಮ್ಮ ಜಾತಿಯ ಕಡುವೈರಿ ಎಂದು ಪರಿಗಣಿಸುತ್ತಾರೆ. ಯಾಕೆಂದರೆ ಪುರಾಣದ ಪ್ರಕಾರ ಅವನು ಚಿಕ್ಕಚಿಕ್ಕ ಗಂಡು ಮಕ್ಕಳ ಸಹಿತ ಕೋಟ್ಯಂತರ ಅಮಾಯಕ ಕ್ಷತ್ರಿಯ ಗಂಡಸರ ಮಾರಣಹೋಮ ನಡೆಸಿದ ಹೃದಯಹೀನ. ಹಾಗಾಗಿ ಉತ್ತರ ಭಾರತದಲ್ಲಿ ಲಕ್ಷಾಂತರ ಬೇರೆ ಬೇರೆ ದೇವರ ಪುರಾತನ ದೇವಸ್ಥಾನಗಳಿದ್ದರೂ ಒಂದೇ ಒಂದು ಪರಶುರಾಮನ ಪುರಾತನ ಕ್ಷೇತ್ರ ಇಲ್ಲ? ಉತ್ತರ ಪ್ರದೇಶದಲ್ಲಿ 2017 ರಲ್ಲಿ ಯೋಗಿ ಆದಿತ್ಯನಾಥರು ಖ್ಯಮಂತ್ರಿಯಾಗಿ ಆಯ್ಕೆಯಾದ ಮರುದಿನವೇ ತನ್ನ ಚೇಂಬರ್ ನಲ್ಲಿ ಇದ್ದ ಪರಶುರಾಮನ ಫೋಟೋವನ್ನು ತೆಗೆದು ಕಸದ ಬುಟ್ಟಿಗೆ ಹಾಕಿಸಿದರಂತೆ! ಯಾಕೆಂದರೆ ಅವರು ಠಾಕೂರ್ ಎಂಬ ಕ್ಷತ್ರಿಯ ಜಾತಿಯವರು. ಸಾರಾಸಗಟಾಗಿ ತನ್ನ ಕ್ಷತ್ರಿಯ ಜಾತಿಯನ್ನು ಅವಮಾನಿಸುವ ಕ್ರೂರಿ ಪರಶುರಾಮನ ಫೋಟೋ ತನ್ನ ಚೆಂಬರಿನಲ್ಲಿ ಇಡಲು ಅವರ ಮನಸ್ಸು ಒಪ್ಪಲಿಲ್ಲವಂತೆ. ಯೋಗಿ ಆದಿತ್ಯನಾಥರನ್ನು ನೋಡಿಯಾದರೂ ನಾವು ತುಳುನಾಡಿನವರು ಪರಶುರಾಮನ ಗೊಡ್ಡು ಪುರಾಣ ಪಾತ್ರಕ್ಕೆ ಅನಗತ್ಯ ಪಾವಿತ್ರ್ಯ ಮಹತ್ವ ಕಲ್ಪಿಸಿ ಕೊಡುವುದನ್ನು ನಿಲ್ಲಿಸಿದರೆ ಉತ್ತಮ.

ವಿಜ್ಞಾನಿಗಳ ಪ್ರಕಾರ…
ಖಂಡಾಂತರ ಚಲನೆಯ ಕಾಲದಲ್ಲಿ ದಕ್ಷಿಣ ಭಾರತದ ಪ್ರಸ್ಥಭೂಮಿ ಏಳು ಕೋಟಿ ವರ್ಷಗಳ ಹಿಂದೆ ಆಫ್ರಿಕಾ ಖಂಡದಿಂದ ಬೆರ್ಪಟ್ಟು ಇಂಚಿಂಚು ಸರಿಯುತ್ತಾ ಬಂದು ಐದು ಕೋಟಿ ವರ್ಷಗಳ ಹಿಂದೆ ಜಂಬೂ ದ್ವೀಪದ ಉಪಖಂಡಕ್ಕೆ ತಾಗಿ ನಿಂತಿತ್ತು. ಆ ಕಾಲದಲ್ಲಿ ನಮ್ಮ ಪಶ್ಚಿಮ ಕರಾವಳಿ ಮತ್ತು ಸಹ್ಯಾದ್ರಿ ಪರ್ವತ ಶ್ರೇಣಿ ರೂಪುಗೊಂಡಿದ್ದು. (ಶ್ರೀಲಂಕಾ ನಡುವಿನ ರಾಮಸೇತುವಿನ ಪ್ರಾಕೃತಿಕ ರಚನೆಗೂ ಇದೇ ಖಂಡಗಳ ಚಲನೆಯ ಸಿದ್ಧಾಂತ ಅನ್ವಯ!). (ಈ ಕುರಿತು ಗೂಗಲ್‌ ನಲ್ಲಿ “ಕಾಂಟಿನೆಂಟಲ್ ಡ್ರೀಫ್ಟ್” ಎಂಬ ವಿಷಯದ ವಿಕಿಪೀಡಿಯ ಓದಿ.) ಏಳು ಕೋಟಿ ವರ್ಷಗಳ ಹಿಂದೆ ಮಾನವ-ವಾನರ ಜಾತಿಯೇ ಈ ಭೂಮಿ ಮೇಲೆ ಇರಲಿಲ್ಲ. ನಮ್ಮ ಪೃಥ್ವಿ ಗ್ರಹದ ರಚನೆಯಾಗಿದ್ದು ಸುಮಾರು 600 ಕೋಟಿ ವರ್ಷಗಳ ಹಿಂದೆಯಂತೆ. ಆದರೆ ಮಾನವನು ಪೃಥ್ವಿಯ ಮೇಲೆ ಉಗಮವಾಗಿದ್ದು ಕೇವಲ 40 ಲಕ್ಷ ವರ್ಷಗಳ ಹಿಂದೆ, ಅದೂ ಹೊಮೋ-ಎರೆಕ್ಟಸ್ ಎಂಬ ಅರೆಮಾನವ ರೂಪದಲ್ಲಿ. ಹಾಗಾಗಿ ಬಹುಶ ಡೈನೊಸಾರ್ ಗಳು ನಮ್ಮ ಈ ಸೋ-ಕಾಲ್ಡ್ ಪರಶುರಾಮ ಸೃಷ್ಟಿಯಲ್ಲಿ ಐದು ಕೋಟಿ ವರ್ಷಗಳ ಹಿಂದೆ ಮೊಟ್ಟ ಮೊದಲು ನಡೆದಾಡಿರಬಹುದೇ?!

ದ್ವೇಶ ಹರಡುವ ಪುರಾಣ ಕಥೆಗಳು ನಮ್ಮಲ್ಲಿ ಮಾತ್ರ!
ಜಗತ್ತಿನಲ್ಲಿ ಎಲ್ಲಿಯೂ ಇಲ್ಲದ ಅವೈಜ್ಞಾನಿಕ ಜಾತಿ ವ್ಯವಸ್ಥೆ ಭಾರತದಲ್ಲಿ ಮಾತ್ರ ಇರುವುದು. ಅಷ್ಟೇ ಅಲ್ಲ, ಜಾತಿ ಜಾತಿಯ ನಡುವೆ ದ್ವೇಶ ಹರಡುವ ಪುರಾಣ ಕಥೆಗಳು ಹಾಗೂ ಯಾರೋ ಒಬ್ಬ ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನೇ ಹೊಣೆ ಮಾಡಿ ಆ ಸಮುದಾಯವನ್ನು ಸಂಪೂರ್ಣ ನಾಶ ಮಾಡಲಾಯಿತು ಎಂಬ ತುಚ್ಛ ಜಾತಿ ದ್ವೇಶವನ್ನು ಸಮರ್ಥಿಸುವ ಕಥೆ ಕಟ್ಟುವುದು ಕೇವಲ ಭಾರತದಲ್ಲಿ ಮಾತ್ರ. ಕ್ಷತ್ರಿಯ ಮಹಿಳೆಯರ ಶೀಲವನ್ನು ಘೋರವಾಗಿ ಅವಮಾನಿಸುವ “ನಿಯೋಗ” ಎಂಬ ವ್ಯಭಿಚಾರವನ್ನು ಸಮರ್ಥಿಸುವ ಕಥೆ ಸಹಾ ಇರುವುದು ಭಾರತದಲ್ಲಿ ಮಾತ್ರ. ಕೆಲವು ವೈದಿಕ ಪುರಾಣಗಳ ಪ್ರಕಾರ ಕ್ಷತ್ರಿಯರಾಗಿದ್ದ ಶ್ರೀ ರಾಮ ಮತ್ತು ಶ್ರೀ
ಕೃಷ್ಣ ಕೂಡಾ ನಿಯೋಗದಿಂದ ಹುಟ್ಟಿದ್ದಂತೆ!

ಪರಶುರಾಮ ಸೃಷ್ಟಿ ಬಾಲಿಶ ಕಟ್ಟುಕಥೆ
ನಮ್ಮ ಕರಾವಳಿಯನ್ನು ಪರಶುರಾಮನು ಸೃಷ್ಟಿಸಿದ್ದು ಎಂಬ ಕಾಲ್ಪನಿಕ ಕತೆಯೂ ಕೇರಳದಿಂದ ಬಂದ ಬಾಲಿಶ ಕಟ್ಟುಕಥೆ. ಸುಮಾರು 350 ವರ್ಷಗಳ ಹಿಂದೆ ಕೇರಳದ ನಂಬೂದ್ರಿ ಬ್ರಾಹ್ಮಣರು ಬರೆದ “ಕೇರಳೊತ್ಪತ್ತಿ” ಎಂಬ ಕೃತಿಯಲ್ಲಿ ಪರಶುರಾಮ ಸೃಷ್ಟಿಯ ಕಥೆ ಮೊಟ್ಟಮೊದಲ ಬಾರಿ ಉಲ್ಲೇಖವಾಯಿತಂತೆ! ಅದು ಹೇಗೋ ಮುನ್ನೂರು ವರ್ಷಗಳ ಹಿಂದೆ ಧಾರ್ಮಿಕ ಕಾರ್ಯಗಳಿಗೆ ಮತ್ತು ಮಂತ್ರಮಾಟ ಕಲಿಯಲು ಕೇರಳಕ್ಕೆ ಹೋಗಿ ಬರುತ್ತಿದ್ದ ತುಳುನಾಡಿನ ಬ್ರಾಹ್ಮಣರ ಮೂಲಕ ಈ ಕಾಲ್ಪನಿಕ ಕಥೆ ನಮ್ಮ ಕನ್ನಡ ಕರಾವಳಿಯನ್ನು ಹೊಕ್ಕು ಅದು ಈಗ ನಿರಭಿಮಾನಿ ತುಳುವ-ಕನ್ನಡಿಗರ ಎಲ್ಲಾ ಸಭೆ ಸಮಾರಂಭಗಳನ್ನು ಆವರಿಸಿ ಕೂತಿದೆ. ಕೇವಲ
ಬ್ರಾಹ್ಮಣರನ್ನು ವಿಜೃಂಭಿಸುವ ಹಾಗೂ ಕ್ಷತ್ರಿಯ-ಶೂದ್ರರನ್ನು ಕೀಳಾಗಿಸುವ ಪರಶುರಾಮ ಸೃಷ್ಟಿಯ ಕಥೆಯನ್ನು ತಿರಸ್ಕರಿಸುವ ಕಾಲ
ಈಗ ಬಂದಿದೆ.
(ಮುಂದಿನ ಭಾಗವನ್ನು ನಾಳೆ( ೨೮.೦೧.೨೦೨೩) ಪೀಪಲ್‌ ಮೀಡಿಯಾದಲ್ಲಿ ಓದಿ)

ಪ್ರವೀಣ್‌ ಎಸ್‌ ಶೆಟ್ಟಿ
ಚಿಂತಕರು

Related Articles

ಇತ್ತೀಚಿನ ಸುದ್ದಿಗಳು