Friday, June 14, 2024

ಸತ್ಯ | ನ್ಯಾಯ |ಧರ್ಮ

ಥೀಮ್‌ ಪಾರ್ಕಿನಲ್ಲಿ ಪರಶುರಾಮ ಪ್ರತಿಮೆ ಸ್ಥಾಪನೆ-ತುಳುನಾಡಿಗೂ ಪರಶುರಾಮನಿಗೂ ಏನು ಸಂಬಂಧ? ಭಾಗ ೨

ಕಾರ್ಕಳ ತಾಲೂಕಿನ ಬೈಲೂರಿನ ಉಮಿಕ್ಕಲ್‌ ಬೆಟ್ಟದ ಮೇಲೆ ೩೩ ಅಡಿ ಎತ್ತರದ ಪರಶುರಾಮನ ಕಂಚಿನ ಪ್ರತಿಮೆಯೊಂದಿಗೆ ಪರಶುರಾಮ ಥೀಮ್‌ ಪಾರ್ಕ್‌ ಇಂದು ಮುಖ್ಯಮಂತ್ರಿಗಳಿಂದ ಲೋಕಾರ್ಪಣೆ ಗೊಂಡಿದೆ. ಕಾಲ್ಪನಿಕ ಪೌರಾಣಿಕ ವ್ಯಕ್ತಿ ಪರಶುರಾಮನ ಉಲ್ಲೇಖವು ಕರಾವಳಿಯ ಬಗ್ಗೆ ರಚಿತಗೊಂಡ ಯಾವ ಕೃತಿಗಳಲ್ಲೂ ಇಲ್ಲದಿರುವುದರಿಂದ ತುಳುನಾಡಿಗೂ ಪರಶುರಾಮನಿಗೂ ಯಾವ ಸಂಬಂಧವೂ ಇಲ್ಲವೆಂದು ನಿರೂಪಿಸುತ್ತಾರೆ ಚಿಂತಕ ಪ್ರವೀಣ್‌ ಶೆಟ್ಟಿ. ಈ ಸಕಾಲಿಕ ಲೇಖನದ ಎರಡನೇ ಭಾಗ ಇಲ್ಲಿದೆ.

ಪರಶುರಾಮ ಥೀಮ್ ಪಾರ್ಕ್

ತನ್ನ ತಂದೆಗೆ ಯಾವನೋ ಒಬ್ಬ ರಾಜ ಅನ್ಯಾಯ ಮಾಡಿದನು ಎಂದು ಪರಶುರಾಮ ಕೇವಲ ಆ ರಾಜನ ಕುಟುಂಬದ ಮೇಲೆ ಸೇಡು ತೀರಿಸಿಕೊಳ್ಳುವ ಬದಲು ಸಂಪೂರ್ಣ ಕ್ಷತ್ರಿಯ ಜಾತಿಯ ಮೇಲೆ ಸೇಡು ತೀರಿಸಿ ಎಲ್ಲಾ ಕ್ಷತ್ರಿಯ ಗಂಡಸರನ್ನು ಕೊಲ್ಲುತ್ತಾನಂತೆ! ಗರ್ಭಿಣಿ ಮಹಿಳೆಯರ ಹೊಟ್ಟೆಯಲ್ಲಿ ಇರುವ ಗಂಡು ಭ್ರೂಣವನ್ನೂ ನಾಶ ಮಾಡಿದನಂತೆ! ಈ ಭೂಮಿಗೆ 21 ಸಾರಿ ಸುತ್ತಿ ಏಳೂ ಖಂಡಗಳಲ್ಲಿಯ ಸಮಸ್ತ ಕ್ಷತ್ರಿಯ ಗಂಡಸರನ್ನು ಕೊಂದನಂತೆ. ಆನಂತರ ಬದುಕಿ ಉಳಿದವರು ಕೇವಲ ಕ್ಷತ್ರಿಯ ಹೆಂಗಸರು ಮಾತ್ರವಂತೆ! (ಭೂಲೋಕವೆಂದರೆ ಅದು ಒಂದು ಹಳ್ಳಿಯೇ? ಅಥವಾ ಆಫ್ರಿಕಾ, ಅಮೆರಿಕಾ, ಆಸ್ಟ್ರೇಲಿಯಾ, ಯುರೋಪ್ ಖಂಡಗಳಿಗೂ ಪರಶುರಾಮ ಹೋಗಿದ್ದನೆ? ಚೀನಾ, ಜಪಾನ್, ಕೋರಿಯಾಕ್ಕೂ ಹೋಗಿದ್ದನೆ? ಧ್ರುವ ಪ್ರದೇಶಕ್ಕೂ ಹೋಗಿದ್ದನೆ? ಅಲ್ಲಿಯೂ ಕ್ಷತ್ರಿಯರು ಇದ್ದರೆ?)

ನಮ್ಮ ಅನೇಕ ಪೌರಾಣಿಕ ಕಥೆಗಳಲ್ಲಿರುವ ಇಂತಹಾ ಅಸಂಗತ ಅಂಶಗಳನ್ನು ವಿಶ್ಲೇಷಿಸಲು ಈಗ ಕಾಲ ಪಕ್ವವಾಗಿದೆ. ಒಂದೆಡೆ ಪರಶುರಾಮನು ಕ್ಷತ್ರಿಯರನ್ನು ಸಂಪೂರ್ಣ ನಾಶ ಮಾಡಿದ ಎಂದು ಪುರಾಣ ಹೇಳುತ್ತದೆ. ಆದರೆ ಭಾರತದ ಎಲ್ಲಾ ರಾಜ್ಯಗಳಲ್ಲಿ ಇಂದಿಗೂ ಶೇ.20 ರಷ್ಟು ಹಿಂದೂಗಳು ಕ್ಷತ್ರಿಯ ವರ್ಗದಲ್ಲಿ ಬರುತ್ತಾರೆ. ಪರಶುರಾಮನ ದಾಳಿಯಿಂದ ಕ್ಷತ್ರಿಯ ಗಂಡಸರೆಲ್ಲಾ ಸತ್ತಿದ್ದರೂ ಬದುಕಿ ಉಳಿದಿದ್ದ ಕ್ಷತ್ರಿಯ ಹೆಂಗಸರಿಗೆ ಮುಂದಿನ ಪೀಳಿಗೆಯ ಮಕ್ಕಳಾಗಿದ್ದು “ನಿಯೋಗ” ಎಂಬ ವಿಧಾನದಿಂದಂತೆ ! (ನಿಯೋಗ ಅಂದರೆ ಬ್ರಾಹ್ಮಣ ಗಂಡಸರ ಜತೆ ಅನೈತಿಕ ಸಂಬಂಧದಿಂದಾಗಿ ಕ್ಷತ್ರಿಯ ಹೆಂಗಸರಿಗೆ ಮುಂದಿನ ಪೀಳಿಗೆಯ ಮಕ್ಕಳಾಗಿ ಅವರ ಕ್ಷತ್ರಿಯ ಸಂತತಿ ಮುಂದುವರಿಯುವುದು!) ಈ ಅನೈತಿಕ ಕಟ್ಟುಕಥೆಯ ಮೂಲಕ ಈಗಿನ ಕ್ಷತ್ರಿಯರ ಹುಟ್ಟನ್ನೇ ವೈದಿಕರು ನೇರವಾಗಿ ಅವಮಾನಿಸಿದ್ದಾರೆ! ಪರಶುರಾಮನ ಇಂತಹಾ ಬಾಲಿಶ ಕಥೆಯನ್ನು ನಾವು ಪ್ಪಿಕೊಳ್ಳುವುದರಿಂದ ಇಂದಿನ ಎಲ್ಲಾ ಕ್ಷತ್ರಿಯರೂ ಬ್ರಾಹ್ಮಣರಿಗೆ ಅನೈತಿಕವಾಗಿ ಹುಟ್ಟಿದವರು ಎಂದು ಸ್ವತಃ ಈಗಿನ ಕ್ಷತ್ರಿಯ ಜಾತಿಯವರೆ ಒಪ್ಪಿಕೊಂಡಂತಾಯಿತು ತಾನೇ? ಇಷ್ಟೊಂದು ಅವಮಾನಕರ ಕಥೆಯನ್ನು ಈಗಿನ ಕ್ಷತ್ರಿಯ ವರ್ಗದವರು ಸಭೆ ಸಮಾರಂಭಗಳಲ್ಲಿ ಹೆಮ್ಮೆಯಿಂದ ಹೇಳಿಕೊಳ್ಳುವುದೆಂದರೆ ತಮ್ಮ ಪೂರ್ವಜರ ಶೀಲವನ್ನು ತಾವೇ ಅವಮಾನಿಸಿದಂತೆ ಅಲ್ಲವೇ! ವೈದಿಕರ ಕಾಲ್ಪನಿಕ ಪೌರಾಣಿಕ ಕಥೆಗಳು ಯಾವ ಮಟ್ಟಕ್ಕೆ ಶೂದ್ರರನ್ನು ಮಾನಸಿಕ ಗುಲಾಮಗಿರಿಗೆ ದೂಡಿವೆ ಎಂದರೆ ಶೂದ್ರರು ಇಂತಹಾ ಅವಮಾನಕರ ಕಥೆಯನ್ನು ತಾವೇ ಸ್ವತಃ ಪ್ರಚಾರ ಮಾಡುವ ಮೂಲಕ ತಮ್ಮ ಇಡೀ ಸಮುದಾಯದ ಪೂರ್ವಜರು ಅನೈತಿಕವಾಗಿ ಹುಟ್ಟಿದವರು ಎಂದು ಪರೋಕ್ಷವಾಗಿ ಒಪ್ಪಿಕೊಳ್ಳುತ್ತಿದ್ದಾರೆ!

ನಮ್ಮ ಕರಾವಳಿ ಜಿಲ್ಲೆಗಳಲ್ಲಿ ಯಾವುದೇ ಸಭೆ ಸಮಾರಂಭಗಳಿಗೆ ಹೋದರೂ ಅಲ್ಲಿ ಭಾಷಣಕಾರ ಮೊಟ್ಟಮೊದಲು ಹೇಳುವುದು ತಮ್ಮದು “ಪರಶುರಾಮ ಸೃಷ್ಟಿ” ಎಂದು. ಯಾರೋ ಒಬ್ಬ ಬ್ರಾಹ್ಮಣ ಸನ್ಯಾಸಿ ಉತ್ತರ ಭಾರತದಿಂದ ದಕ್ಷಿಣಕ್ಕೆ ಬಂದು ತನ್ನ ಕೊಡಲಿ ಸಮುದ್ರಕ್ಕೆ ಬೀಸಿ ಇಲ್ಲಿ ಸಾವಿರಾರು ಚದರು ಮೈಲಿ ಭೂಮಿಯನ್ನು ಸಮುದ್ರದಿಂದ ಮೇಲೆತ್ತಿದ ಮತ್ತು ಈ ಹೊಸ ಭೂಮಿಯನ್ನೆಲ್ಲಾ ಬ್ರಾಹ್ಮಣರಿಗೆ ದಾನ ಮಾಡಿದ, ಹಾಗೂ ನಂತರ ಅದೇ ಬ್ರಾಹ್ಮಣರು ಬೇರೆ ಕಡೆಯಿಂದ ಕ್ಷತ್ರಿಯ ವಿಧವೆಯರನ್ನು ಹಾಗೂ ಶೂದ್ರರನ್ನೂ ಕರೆತಂದು ಇಲ್ಲಿ ನೆಲೆಗೊಳಿಸಿ ಅವರಿಗೆ ಮಕ್ಕಳನ್ನು ಹುಟ್ಟಿಸಿಕೊಟ್ಟರು ಎಂದು ತಮ್ಮದೇ ಪೂರ್ವಜರನ್ನು ನೇರವಾಗಿ ಅವಮಾನಿಸುವ ಕಟ್ಟುಕಥೆಯನ್ನು ಈ ಆಧುನಿಕ ಯುಗದಲ್ಲೂ ನಾವು ಶೂದ್ರರೇ ಪ್ರಚಾರ ಮಾಡುತ್ತಿರುವುದು ವಿಪರ್ಯಾಸ!

ಇಲ್ಲಿಯ ಇತಿಹಾಸದ ಸಂಶೋಧಕರ ಪ್ರಕಾರ ತುಳುನಾಡಿನಲ್ಲಿ ಮೊದಲು ಬ್ರಾಹ್ಮಣರೇ ಇರಲಿಲ್ಲವಂತೆ. ಬ್ರಾಹ್ಮಣರು ತುಳುನಾಡಿಗೆ ಉತ್ತರ ಭಾರತದ ಅಹಿಚ್ಛತ್ರದಿಂದ ವಲಸೆ ಬಂದಿದ್ದು ಬನವಾಸಿ ಕದಂಬ ರಾಜರ ಕಾಲದಲ್ಲಿ, ಅಂದರೆ ಸುಮಾರು 1500 ವರ್ಷಗಳ ಹಿಂದೆ. ಇದರ ಅರ್ಥ ಶೂದ್ರರೇ ತುಳುನಾಡಿನ ಮೂಲ ನಿವಾಸಿಗಳು ಹಾಗೂ ಬ್ರಾಹ್ಮಣರು ತದನಂತರ ವಲಸೆ ಬಂದವರು. ಇದು ಬ್ರಾಹ್ಮಣ ಪರಶುರಾಮ ನಮ್ಮ ತುಳುನಾಡನ್ನು ಮೊದಲು ಸೃಷ್ಟಿಸಿ ನಂತರ ಅವನೇ ಬ್ರಾಹ್ಮಣರನ್ನು ಹಾಗೂ ಶೂದ್ರ ಪ್ರಜೆಗಳನ್ನು ಕರೆತಂದಿದ್ದು ಎಂಬ ಸಿದ್ಧಾಂತ ಶುದ್ಧ ಸುಳ್ಳು ಎಂಬುದನ್ನು ಸಾಬೀತುಗೊಳಿಸುತ್ತದೆ.

ಆದಿಮ ಸಂಸ್ಕೃತಿಯನ್ನು ಅನುಸರಿಸುತ್ತಿದ್ದ ತುಳುನಾಡಿನಲ್ಲಿ ಪ್ರಕೃತಿ ಪೂಜೆಯ ಪ್ರತೀಕವಾಗಿ ನಾಗಪೂಜೆ ಮತ್ತು ಭೂತಪೂಜೆ ಅನಾದಿ ಕಾಲದಿಂದಲೂ ನಡೆಯುತ್ತಿದೆ. ನಾಗಪೂಜೆಗೂ ವೈದಿಕ ಪರಶುರಾಮನಿಗೂ ಯಾವುದೇ ಸಂಬಂಧ ಇಲ್ಲ. ಪರಶುರಾಮನ ಕಾಲ್ಪನಿಕ ಕಥೆ ತುಳುನಾಡಿಗೆ ಆಮದಾಗುವುದಕ್ಕಿಂತ ನೂರಾರು ವರ್ಷಗಳ ಮೊದಲೇ ನಮ್ಮಲ್ಲಿ ನಾಗಪೂಜೆ ಇತ್ತು. ಪರಶುರಾಮನಿಂದ ತುಳುನಾಡಿನಲ್ಲಿ ನಾಗಪೂಜೆ ಸುರುವಾಗಿದ್ದು ಎಂದು ಕರಾವಳಿಯ ಇತಿಹಾಸವನ್ನೇ ವೈದಿಕರು ತಿರುಚಿ ಈಗ ಇಲ್ಲಿಯ ಮೂಲನಿವಾಸಿಗಳನ್ನು ಮೋಸ ಮಾಡುತ್ತಿದ್ದಾರೆ! ಈಗಲೂ ಪ್ರತಿ ಪೂಜೆಯಲ್ಲೂ ಪರಶುರಾಮನ ಹೆಸರು ಉಲ್ಲೇಖಿಸಿಯೇ ಶೂದ್ರರ ಮನೆಯಲ್ಲಿ ಪೂಜೆ ಸಂಪನ್ನ ಮಾಡುವುದು ಕರಾವಳಿಯ ತುಳುವ ಪುರೋಹಿತರ ಅನಿಷ್ಟ ಪದ್ಧತಿ. ಈ ಆಧುನಿಕ ಕಾಲದಲ್ಲೂ ಇಂತಹಾ ಶುದ್ಧ ಕಾಲ್ಪನಿಕ ಕಥೆಯನ್ನು ಅಡಿಗಡಿಗೆ ಉದ್ಧರಿಸುವ ಮೂಲಕ ಪುರೋಹಿತರು ನಮ್ಮ ಪೂರ್ವಜರ ಶೀಲವನ್ನೇ ಅವಮಾನಿಸುತ್ತಿದ್ದಾರೆ ಎಂಬುದನ್ನು ಮರೆಯಬಾರದು. ಆದರೂ ಕರಾವಳಿಯ ಕ್ಷತ್ರಿಯ-ಶೂದ್ರ ವರ್ಗದವರೇ ಪರಶುರಾಮನ ಈ ಬಾಲಿಶ ಕಥೆಯನ್ನು ಈಗಲೂ ನಂಬುವುದು ಮತ್ತು ಪ್ರತಿಯೊಂದು ಸಭೆಯಲ್ಲೂ “ನಮ್ಮದು ಪರಶುರಾಮ ಸೃಷ್ಟಿ” ಎಂದು ಹೆಮ್ಮೆಯಿಂದ (ನಿರ್ಲಜ್ಜವಾಗಿ) ಹೇಳಿಕೊಳ್ಳುವುದು ತುಂಬಾ ದುರಾದೃಷ್ಟಕರ.

ಅಂತೆಯೇ ನಮ್ಮ ಕರಾವಳಿಯಲ್ಲಿಯೂ ಬಿಲ್ಲವ ಬಂಟ ಮೊಗವೀರ ಅರೆಭಾಷೆ ಗೌಡರು ರಾಮಕ್ಷತ್ರಿಯ, ಮುಂತಾದ ಒಟ್ಟು ಶೇ.60 ಕ್ಕೂ ಹೆಚ್ಚು ಜನಸಂಖ್ಯೆ ಇರುವ ಸಮುದಾಯದವರು ತಾವು ಕ್ಷತ್ರಿಯರು ಎಂದು ಹೆಮ್ಮೆ ಪಡುತ್ತಾರೆ, (ಆದರೆ ಮಿಲಿಟರಿ ಸೇರಲು ಹೆದರುತ್ತಾರೆ ಎಂಬುದು ಬೇರೆ ವಿಷಯ!). ಹಾಗಿರುವಾಗ ಈ 60% ಕರಾವಳಿಗರ ಪೂರ್ವಜರೆಲ್ಲಾ ನಿಯೋಗ ಎಂಬ ಬಲಾತ್ಕಾರದ ಕೂಡುವಿಕೆಯಿಂದ ಹುಟ್ಟಿದವರು ಎಂದು ಅವಮಾನಿಸುವ ಪರಶುರಾಮನ ಕುತ್ಸಿತ ಪುರಾಣ ಕಥೆಯನ್ನು ನಮ್ಮ ಕರಾವಳಿಯವರ ಹೊರತು ಬೇರೆ ಯಾವುದೇ ಪ್ರದೇಶದ ಮೂಲನಿವಾಸಿಗಳೂ ಪೆದ್ದುಪೆದ್ದಾಗಿ ಹೇಳಿಕೊಂಡು ತಿರುಗುವುದಿಲ್ಲ!

ಅಷ್ಟೇ ಅಲ್ಲ ಭಾರತದ ಯಾವುದೇ ರಾಜ್ಯಕ್ಕೆ ಹೋದರೂ ಪ್ರತಿ ರಾಜ್ಯದಲ್ಲಿಯೂ ಕ್ಷತ್ರಿಯ ವರ್ಗದಲ್ಲಿ ಬರುವ ಜಾತಿಗಳವರು ಕನಿಷ್ಠ 20% ಆದರೂ ಇದ್ದಾರೆ. ಇವರ ಪೂರ್ವಿಕ ಗಂಡಸರನ್ನು ಪರಶುರಾಮ ಸಾರಾಸಗಟಾಗಿ ಕೊಂದಿದ್ದರೆ ಅವರ ಈಗಿನ ಪೀಳಿಗೆ ನಿಯೋಗದಿಂದ ಹುಟ್ಟಿದ್ದು ಎಂದು ಒಪ್ಪಿದಂತೆ ಆಯಿತಲ್ಲವೇ? ಸ್ವಾಮಿ ವಿವೇಕಾನಂದ, ಸುಭಾಷ್ ಚಂದ್ರ ಬೋಸ್, ಜಗದೀಶ್ ಚಂದ್ರ ಬೋಸ್, ಲಾಲ್ ಬಹದ್ದೂರ್ ಶಾಸ್ತ್ರಿ, ಬಾಬು ರಾಜೇಂದ್ರ ಪ್ರಸಾದ್, ಜಯಪ್ರಕಾಶ್ ನಾರಾಯಣ್, ಜ್ಯೋತಿ ಬಸು, ಮುಂತಾದವರೆಲ್ಲಾ “ಕಾಯಸ್ಥ” ಎಂಬ ಕ್ಷತ್ರಿಯ ಜಾತಿಯವರು. ಪ್ರಧಾನಿಗಳಾಗಿದ್ದ ಚರಣ್ ಸಿಂಗ್, ಚಂದ್ರಶೇಖರ್, ವಿ ಪಿ ಸಿಂಗ್, ದೇವೇಗೌಡ, ಡಾ.ಮನಮೋಹನ್ ಸಿಂಗ್ ಇವರ ಜಾತಿಗಳೂ ಕ್ಷತ್ರಿಯ ವರ್ಗದಲ್ಲಿ ಬರುತ್ತವೆ. ಹಾಗಾದರೆ ಇವರ ಪೂರ್ವಜರೆಲ್ಲಾ ಬ್ರಾಹ್ಮಣರಿಗೆ ಅನೈತಿಕವಾಗಿ ಹುಟ್ಟಿದವರೇ?

ಒಂದು ವೇಳೆ ಪರಶುರಾಮನೂ ಏಕಲವ್ಯ, ಕರ್ಣ, ಶಂಭೂಕರಂತೆ ಕೆಳ ಜಾತಿಯವನಾಗಿದ್ದರೆ ಹಾಗೂ ಅವನು ಕ್ಷತ್ರಿಯ ಗಂಡಸರನ್ನೆಲ್ಲಾ ಏಕಾಂಗಿಯಾಗಿ ನಾಶ ಮಾಡಿ ಅವರ ಹೆಂಗಸರನ್ನು ತನ್ನ ಕೆಳಜಾತಿಯ ಗಂಡಸರೊಂದಿಗೆ ‘ನಿಯೋಗ’ (ಬಲಾತ್ಕಾರದ ಕೂಡುವಿಕೆ) ಮಾಡಿ ಇಂದಿನ ಕ್ಷತ್ರಿಯ ಜನಾಂಗವನ್ನು (ಅನೈತಿಕವಾಗಿ) ಹುಟ್ಟಿಸಿದನು ಎಂಬ ಪುರಾಣ ಕಥೆ ಪ್ರಚಲಿತವಾಗಿದ್ದರೆ ಇಂದು ನಮ್ಮ ಕರಾವಳಿಯವರು ಮಾತು ಮಾತಿಗೆ ನಮ್ಮದು “ಶೂದ್ರ ಭಾರ್ಗವ ಪರಶುರಾಮನ ಸೃಷ್ಟಿ” ಎಂದು ಹೆಮ್ಮೆ ಪಡುತ್ತಿದ್ದರೆ? ಡಾ.ಅಂಬೇಡ್ಕರರು ನಮ್ಮ ಸಂವಿಧಾನ ಬರೆದಿದ್ದಾರೆ ಎಂಬುದನ್ನೇ ಒಪ್ಪಿಕೊಳ್ಳಲು ಹಿಂಜರಿಯುತ್ತಿರುವ ಮೇಲ್ಜಾತಿಯವರು ಶೂದ್ರ ಪರಶುರಾಮನ ಪುರಾಣ ಕಥೆಯನ್ನು ಒಪ್ಪಿಕೊಳ್ಳುತ್ತಿದ್ದರೇ? ಅಷ್ಟೇ ಅಲ್ಲ ವೈದಿಕರಂತೂ ಇಂತಹಾ ಪೊಳ್ಳು ಪುರಾಣ ಕಥೆ ಬರೆದಾತನನ್ನೇ ಹಿಗ್ಗಾಮುಗ್ಗಾ ಹೀಯಾಳಿಸುತ್ತಿದ್ದರು. ಅಷ್ಟೇ ಅಲ್ಲ ಮೇಲ್ಜಾತಿಯವರು ಆ ಶೂದ್ರ ಪರಶುರಾಮನ ಕುರಿತು ಮತ್ತೊಂದು ಕಾಲ್ಪನಿಕ ಕಥೆ ಕಟ್ಟಿ ಅವನು ಅಸುರ ಕುಲದವನಾಗಿದ್ದ ಹಾಗೂ ಮಹಾನೀಚನಾಗಿದ್ದ ಎಂಬ ದಂತಕಥೆ ಹೆಣೆದು, ಕೊನೆಗೆ ತಮ್ಮ ವೈದಿಕ ದೇವರು ಚಿತ್ರವಿಚಿತ್ರ ರೂಪ ಧರಿಸಿ ಬಂದು ಆ ‘ಪರಶಾಸುರ’ ನನ್ನು ವಧಿಸಿದ ಅಜ್ಜಿಕಥೆ ಕಟ್ಟಿ ಕೃತಾರ್ಥರಾಗುತ್ತಿದ್ದರು.

ಈಗಿರುವ ಅಸುರ-ದಾನವ-ರಾಕ್ಷಸರ ಪುರಾಣ ಕತೆಗಳೆಲ್ಲಾ ಇಂತಹವೇ ಕಟ್ಟುಕಥೆ ತಾನೇ? “ರಾಕ್ಷಸ” ಎಂಬ ನೂರು ಅಡಿ ಎತ್ತರದ ಮಾಯಾವಿ ಜೀವಿಗಳು ಈ ಜಗತ್ತಿನಲ್ಲಿ ಎಂದೂ ಇರಲಿಲ್ಲವೆಂದು ಜೀವಶಾಸ್ತ್ರಜ್ಞರೇ ಹೇಳುತ್ತಾರೆ. ಹಾಗಾಗಿ ರಾಕ್ಷಸರೇ ಇಲ್ಲದಿರುವಾಗ ರಾಕ್ಷಸರನ್ನು ಕೊಲ್ಲಲು ದೇವರು ಬೇರೆ ಬೇರೆ ವಿಚಿತ್ರ ರೂಪದಲ್ಲಿ ಅವತಾರ ತಾಳುವ ಪ್ರಸಂಗವೇ ಉದ್ಭವಿಸುವುದಿಲ್ಲ! ಮಹಾತ್ಮಾ ಜ್ಯೋತಿಬಾ ಫುಲೇ ಹೇಳಿರುವಂತೆ “ಒಳ್ಳೆಯವರನ್ನು ಕೆಟ್ಟವರೆಂದೂ, ಕೆಟ್ಟವರನ್ನು ಒಳ್ಳೆಯವರೆಂದೂ” ತಿರುಚಿ ಬರೆದಿರುವುದೇ ಈಗ ನಾವೆಲ್ಲಾ ಭಯಭಕ್ತಿಯಿಂದ ಪಠಿಸುವ ವೈದಿಕ ದೇವರ ಅವತಾರದ ಪವಿತ್ರ ಪುರಾಣಗಳು! ಹೀಗೆ ಧಾರ್ಮಿಕ ವಿಷಯದಲ್ಲಿ ಜನರನ್ನು ಹೊಸ ದಿಕ್ಕಿನತ್ತ ಆಲೋಚಿಸುವಂತೆ ಮಾಡಿದ ಮಹಾತ್ಮ ಜ್ಯೋತಿಬಾ ಫುಲೆ ಮತ್ತು ಡಾ. ಅಂಬೇಡ್ಕರರಿಗೆ ಧನ್ಯವಾದಗಳು. ಕೊರೋನಾದ ನಂತರ ಜನರ ಬದಲಾದ ಮಾನಸಿಕತೆಯನ್ನು ಬಳಸಿಕೊಂಡು ನಮ್ಮ ಹೆಚ್ಚಿನ ಪೌರಾಣಿಕ ಕಥೆಗಳಲ್ಲಿರುವ ಅಸಂಗತ ಅಂಶಗಳನ್ನು ಹೊಸ ದೃಷ್ಟಿಕೋನದಿಂದ ವಿಶ್ಲೇಷಿಸಲು ಈಗ ಕಾಲ ಪಕ್ವವಾಗಿದೆ!

ಪ್ರವೀಣ್ ಎಸ್ ಶೆಟ್ಟಿ

ಚಿಂತಕರು

Related Articles

ಇತ್ತೀಚಿನ ಸುದ್ದಿಗಳು