Wednesday, June 19, 2024

ಸತ್ಯ | ನ್ಯಾಯ |ಧರ್ಮ

ಸಾಮಾಜಿಕ ನ್ಯಾಯಕ್ಕಾಗಿ ಒಳಮೀಸಲಾತಿ ಪಾದಯಾತ್ರೆ : ಡಿ.11 ಕ್ಕೆ ಬೃಹತ್‌ ಸಮಾವೇಶ

ಬೆಂಗಳೂರು : ಮಾದಿಗರು ಬಿಜೆಜೆ ಪಕ್ಷದ ವೋಟ್‌ ಬ್ಯಾಂಕ್‌ಗಳಲ್ಲ. ಒಳ ಮೀಸಲಾತಿ ಬಿಕ್ಷೆಯಲ್ಲ ಇದನ್ನು ಅಧಿವೇಶನದಲ್ಲಿ ಮಂಡಿಸಿ ಕೇಂದ್ರ ಸರ್ಕಾರದಿಂದ ಅನುಮೋದನರ ಪಡೆಯಬೇಕು ಎಂದು ಪರಿಶಿಷ್ಟ ಜಾತಿಯ ಒಳಮೀಸಲಾತಿ ಹೋರಾಟ ಸಮಿತಿಯ ಮುಖಂಡರಾದ ಅಂಬಣ್ಣ ಅರೋಲಿಕರ್‌ ಹೇಳಿದ್ದಾರೆ.

ಮಾದಿಗ ಸಮುದಾಯದ ಸಂವಿಧಾನಬದ್ಧ ಸಾಮಾಜಿಕ ನ್ಯಾಯಕ್ಕಾಗಿ ನವೆಂಬರ್‌ 28ರಿಂದ ಪರಿಶಿಷ್ಟ ಜಾತಿಯ ಒಳಮೀಸಲಾತಿಗಾಗಿ ಆಗ್ರಿಹಿಸಿ ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಪಾದಾಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಯಾತ್ರೆಯು ದಸಂಸ ಸಂಸ್ಥಾಪಕರಾದ ಪ್ರೊಫೆಸರ್‌ ಬಿ.ಕೃಷ್ಣಪ್ಪರವರ ಚೈತನ್ಯ ಭೂಮಿಯಿಂದ ಪ್ರಾರಂಭವಾಗಿ ತುಮಕೂರಿನ ಟೌನ್‌ ಹಾಲ್‌ ಬಾಲಗಂಗಾಧರನಾಥ ಸ್ವಾಮಿ ಸರ್ಕಲ್‌ ನಲ್ಲಿ ಗುರುವಾರದಂದು ಸ್ವಾಗತಿಸಲಾಗಿದೆ.

ಈ ಯಾತ್ರೆಯ ಉದ್ಧೇಶಿಸಿ ಮಾತನಾಡಿದ ಅಂಬಣ್ಣ ಅರೋಲಿಕರ್‌, ʼತುಮಕೂರಿನ ನಗರದಲ್ಲಿ ದಲಿತ ಸಂಘಟನೆಗಳು, ಮಾದಿಗ ಸಂಘಟನೆಗಳ ಮುಖಂಡರು ಮತ್ತು ಸ್ಲಂ ಜನಾಂದೋಲನ ಕಾರ್ಯಕರ್ತರು ಪಾದಾಯಾತ್ರೆಯನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ ಎಂದು ಹೇಳಿದ್ದಾರೆ.

ಹರಿಹರದಿಂದ ಕಳೆದ 11 ದಿನಗಳಿಂದ ಯಾತ್ರೆಯಲ್ಲಿ 280 ಕಿ.ಲೋ ಮೀಟರ್ ನಡೆದಿದ್ದು, 2 ಕೋಟಿ 64 ಲಕ್ಷದ 28 ಸಾವಿರ ಹೆಜ್ಜೆಗಳನ್ನು ಹಾಕಲಾಗಿದೆ. ರಾಜ್ಯದ ಮಾದಿಗ ಮತ್ತು ಹೊಲಯ ಸಂಬಂಧಿ ಜಾತಿಯ ಜನರು, ಡಿಸೆಂಬರ್‌ 11ರಂದು ಫ್ರೀಡಂ ಪಾರ್ಕ್‌ನಲ್ಲಿ ಸೇರಿ ಈ ಬಗ್ಗೆ ಚರ್ಚಿಸಿ, ಎ.ಜೆ ಸದಾಶಿವ ಆಯೋಗದ ವರದಿಯನ್ನು ಡಿಸೆಂಬರ್‌ 19ರಂದು ಬೆಳಗಾಂನಲ್ಲಿ ಪ್ರಾರಂಭವಾಗುವ ಅಧಿವೇಶನದಲ್ಲಿ ಮಂಡಿಸಿ ಕೇಂದ್ರ ಸರ್ಕಾರದಿಂದ ಅನುಮೋದನೆ ಪಡೆದು ಅದನ್ನು ರಾಜ್ಯದಲ್ಲಿ ಜಾರಿಗೊಳಿಸಬೇಕು.

ಈ ಕುರಿತು ವಿಧಾನಸಭೆಯಲ್ಲಿ ಮಂಡಿಸಿ 2023ರ ಚುನಾವಣೆಗೆ ಬಂಡವಾಳ ಮಾಡಿಕೊಂಡಲ್ಲಿ, ಮಾದಿಗರು ಹಿಂದಿನ ಕಾಂಗ್ರೆಸ್‌ ಸರ್ಕಾರಕ್ಕೆ ಬುದ್ದಿ ಕಲಿಸಿದಂತೆ ಈ ಬಾರಿ ಬಿಜೆಪಿ ಸರ್ಕಾರವನ್ನು ಮನೆಗೆ ಕಳುಹಿಸಬೇಕಾಗುತ್ತದೆ. ರಾಜ್ಯದ ಮಾದಿಗರು ಬಿಜೆಪಿಯ ವೋಟ್‌ ಬ್ಯಾಂಕ್‌ಗಳಲ್ಲ ಎಂಬುದನ್ನು ನೆನಪಿರಲಿ. ನಮ್ಮ ಈ ಎಚ್ಚರಿಕೆಯನ್ನು ಮುಖ್ಯಮಂತ್ರಿ ಬೊಮ್ಮಾಯಿಯವರು ಗಂಭೀರವಾಗಿ ಪರಿಗಣಿಸಬೇಕು ಎಂದು ಎಚ್ಚರಿಕೆ ನೀಡಿದ ಎಚ್ಚರಿಕೆ ನೀಡಿದ್ದಾರೆ.

2011ರಲ್ಲಿ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಇದ್ದ ಸಂದರ್ಭದಲ್ಲಿ ಡಿಸೆಂಬರ್ 11 ರಂದು ಬೆಳಗಾವಿಯ ಸುವರ್ಣ ಸೌಧದ ಮುಂದೆ ಮಾದಿಗ ಮೀಸಲಾತಿ ಹೋರಾಟ ಸಮಿತಿ ಮತ್ತು ಮಾದಿಗ ದಂಡೋರದ ಸಾವಿರಾರು ಕಾರ್ಯಕರ್ತರ ಮೇಲೆ ಲಾಟಿ ಚಾರ್ಜ್ ಮಾಡಿಸಿದರು. ನಂತರ ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶದಲ್ಲಿ ಭಾಗವಹಿಸಿದ 8 ಮಾದಿಗ ಕಾರ್ಯಕರ್ತರು ಪ್ರಾಣ ತ್ಯಾಗ ಮಾಡಿದರು ಒಳಮೀಸಲಾತಿ ಜಾರಿಗೊಂಡಿರುವುದಿಲ್ಲ. ಸಂವಿಧಾನಬದ್ದ ಒಳಮೀಸಲಾತಿ ಬಿಕ್ಷೆಯಲ್ಲ ಸಮಾನತೆಯನ್ನು ಸಾಧಿಸುವುದಕ್ಕೆ ಒಳಮೀಸಲಾತಿ ಜಾರಿಯಾಗುವುದು ಅನಿವಾರ್ಯವಾಗಿದೆ ಆದ್ದರಿಂದ ಡಿಸೆಂಬರ್ 11 ರಂದು  ಬೆಂಗಳೂರಿನಲ್ಲಿ ನಡೆಯುವ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಭಾರತದ ಸುಧೀರ್ಘ ಹೋರಾಟದ ಇತಿಹಾಸ ಒಳಮೀಸಲಾತಿ ಹೋರಾಟ -ಕೆ.ದೊರೈರಾಜ್

ಇತ್ತೀಚೆಗೆ ದೇಶದಲ್ಲಿ ನಡೆದ ರೈತರ ಹೋರಾಟ ಒಂದು ವರ್ಷಗಳ ಇತಿಹಾಸ ಹೊಂದಿದ್ದರೆ ಒಳಮೀಸಲಾತಿಯ ಹೋರಾಟ ಭಾರತದ ಇತಿಹಾಸದಲ್ಲಿ 3 ದಶಕಗಳನ್ನು ಒಳಗೊಂಡಿದೆ. ಹಾಗಾಗಿ ಭಾರತದ ಸುದೀರ್ಘ ಹೋರಾಟದ ಇತಿಹಾಸವನ್ನು ಒಳಮೀಸಲಾತಿ ಹೋರಾಟ ಹೊಂದಿದೆ ಎಂದು ದಸಂಸದ ಹಿರಿಯರಾದ ಪ್ರೋ.ಕೆ ದೊರೈರಾಜ್ ಹೇಳಿದ್ದಾರೆ.

ಅಸ್ಪೃಶ್ಯತೆ ಮತ್ತು ಅಸಮಾನತೆಯನ್ನು ಅಂಬೇಡ್ಕರ್ ದೃಷ್ಠಿಯಲ್ಲಿ ನೋಡಬೇಕು, ಒಳಮೀಸಲಾತಿ ಹೋರಾಟ ಬರೀ ಮಾದಿಗ ಸಮುದಾಯದ ಹೋರಾಟವಲ್ಲ. ಎಲ್ಲಾ ಅಸ್ಪೃಶ್ಯ ಜಾತಿಗಳ ಹೋರಾಟವಾಗಿದೆ. ಎಲ್ಲಾ ರಾಜಕೀಯ ಪಕ್ಷಗಳಿಗೆ ಒಳಮೀಸಲಾತಿ ಎನ್ನುವುದು ಚುನಾವಣೆಯ ಸರಕಾಗಿದೆ ಆದ್ದರಿಂದ ಹೋರಾಟಗಾರರು ಎಚ್ಚರವಹಿಸಿ ಹೆಜ್ಜೆ ಇಡಬೇಕು. ಈಗಾಗಲೇ ಸುಪ್ರೀಂ ಕೋರ್ಟ್ ನ ಸಂವಿಧಾನಿಕ ಪೀಠದಲ್ಲಿ ಒಳಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿದಂತೆ ಪಿಯುಸಿಎಲ್ ಸಹಕಾರದಿಂದ ಕಾನೂನು ಹೋರಾಟ ಮಾಡಲಾಗುತ್ತಿದೆ ಎಂದರು.

ಸ್ಲಂ ಜನಾಂದೋಲನ ಕರ್ನಾಟಕದ ಎ.ನರಸಿಂಹಮೂರ್ತಿ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರ 4% ಇರುವ ಸಮುದಾಯಕ್ಕೆ 10ರಷ್ಟು ಮೀಸಲಾತಿಯನ್ನು ಮೂರೇ ದಿನದಲ್ಲಿ ಜಾರಿಮಾಡಿದ್ದು, 30 ವರ್ಷ ಕಳೆದರು ಒಳಮೀಸಲಾತಿ ಜಾರಿಗೊಳಿಸುತ್ತಿಲ್ಲವೇಕೆ ಇಂತಹ ವಚನ ಭ್ರಷ್ಟ ಸರ್ಕಾರಗಳ  ಬಗ್ಗೆ ಎಚ್ಚರವಹಿಸಬೇಕು ಎಂದರು.

ಮುಖಂಡರಾದ ಕೊಟ್ಟಶಂಕರ್ ಪಾದಯಾತ್ರಿಗಳಾದ ಕರಿಯಪ್ಪಗುಡಿಮನಿ, ಎಂ,ಆರ್ ಬೇರಿ, ಮಧುಗಿರಿ ರಂಗಯ್ಯ ಮತ್ತು ಭೀಮಾ ಸೈನಿಕರಿಗೆ ಸ್ವಾಗತಿಸಿದರು. ಮಾದಿಗ ಸಮುದಾಯದ ಮುಖಂಡರಾದ ವಾಲೇಚಂದ್ರಯ್ಯ, ಪಾವಗಡ ಶ್ರೀರಾಮ್, ನರಸಿಂಹಯ್ಯ, ಜಿ.ವಿ ವೆಂಕಟೇಶ್, ಲಕ್ಷ್ಮೀದೇವಮ್ಮ, ಮರಳೂರು ಕೃಷ್ಣ, ಆಟೋ ಶಿವರಾಜು, ಡಾ.ಮುರುಳೀಧರ್, ಕೇಬಲ್‌ ರಘು, ಕೊಡಿಯಲಾ ಮಹಾದೇವ, ಎಂ.ವಿ ರಾಘವೇಂದ್ರ, ಪಿ.ಎನ್ ರಾಮಯ್ಯ, ಜೆಸಿಬಿ ವೆಂಕಟೇಶ್, ರಂಗಧಾಮಯ್ಯ, ಬಂಡೇಕುಮಾರ್, ಟಿ,ಸಿ ರಾಮಯ್ಯ, ಎ.ನಾಗೇಶ್, ಗಾಂಧಿರಾಜ್ ಮತ್ತು ಕೊಳಗೇರಿ ಸಮಿತಿಯ ಅರುಣ್, ಶಂಕರಯ್ಯ, ತಿರುಮಲಯ್ಯ, ಕೆಂಪರಾಜು, ನಿರ್ಮಲ,ಹನುಮಕ್ಕ, ಧನಂಜಯ್, ರಂಗನಾಥ್ ನೇತೃತ್ವ ವಹಿಸಿದ್ದರು. ನೂರಾರು ಕಾರ್ಯಕರ್ತರು ಟೌನ್‌ಹಾಲ್‌ನಿಂದ ನಂದಿಹಳ್ಳಿ ಗೇಟ್‌ವರೆಗೂ ಪಾದಯಾತ್ರೆಯಲ್ಲಿ  ತೆರಳಿ ಬೀಳ್ಕೊಟ್ಟರು.

Related Articles

ಇತ್ತೀಚಿನ ಸುದ್ದಿಗಳು