Home ವಿದೇಶ ಅಮೇರಿಕಾದ ಯುದ್ಧ ದಾಹಕ್ಕೆ 193 ಮಕ್ಕಳು ಬಲಿ, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತಲ್ಲಣ

ಅಮೇರಿಕಾದ ಯುದ್ಧ ದಾಹಕ್ಕೆ 193 ಮಕ್ಕಳು ಬಲಿ, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತಲ್ಲಣ

0

ಅಮೆರಿಕ ಮತ್ತು ಇಸ್ರೇಲ್ ಸೇನೆಗಳು ಇರಾನ್ ಮೇಲೆ ನಡೆಸುತ್ತಿರುವ ಸರಣಿ ದಾಳಿಗಳು ಭೀಕರ ಸ್ವರೂಪ ಪಡೆದುಕೊಂಡಿವೆ. ಇರಾನ್ ಸರ್ಕಾರದ ಅಧಿಕೃತ ಮಾಹಿತಿಯ ಪ್ರಕಾರ, ಈ ಯುದ್ಧೋನ್ಮಾದಕ್ಕೆ ಇದುವರೆಗೆ 193 ಮಕ್ಕಳು ಬಲಿಯಾಗಿದ್ದಾರೆ.

ಇವರಲ್ಲಿ ಎಂಟು ತಿಂಗಳ ಕಂದಮ್ಮ ಕೂಡ ಸೇರಿರುವುದು ದುರಂತದ ತೀವ್ರತೆಯನ್ನು ಎತ್ತಿ ತೋರಿಸುತ್ತಿದೆ. ಕೇವಲ ನಾಗರಿಕರಲ್ಲದೆ, 11 ಆರೋಗ್ಯ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ. ದಾಳಿಯಲ್ಲಿ 52 ಆರೋಗ್ಯ ಘಟಕಗಳು, 29 ವೈದ್ಯಕೀಯ ಕೇಂದ್ರಗಳು ಮತ್ತು 52 ಶಾಲೆಗಳು ಧ್ವಂಸಗೊಂಡಿದ್ದು, ಇರಾನ್‌ನ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ.

ಹಾರ್ಮುಜ್ ಜಲಸಂಧಿಯಲ್ಲಿ ತೈಲ ನೌಕೆಗಳನ್ನು ತಡೆದರೆ ಇರಾನ್ ಮೇಲೆ 20 ಪಟ್ಟು ಹೆಚ್ಚು ಶಕ್ತಿಯೊಂದಿಗೆ ದಾಳಿ ಮಾಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಇರಾನ್, ದಾಳಿಗಳು ಮುಂದುವರಿದರೆ ಮಧ್ಯಪ್ರಾಚ್ಯದಿಂದ ಒಂದು ಲೀಟರ್ ತೈಲವೂ ಹೊರಹೋಗದಂತೆ ತಡೆಯುವುದಾಗಿ ಎಚ್ಚರಿಸಿದೆ.

ತನ್ನ ಕ್ಷಿಪಣಿ ವ್ಯವಸ್ಥೆ ನಾಶವಾಗಿದೆ ಎಂಬ ಅಮೆರಿಕದ ವಾದವನ್ನು ತಳ್ಳಿಹಾಕಿರುವ ಇರಾನ್, ಟನ್‌ಗಿಂತಲೂ ಹೆಚ್ಚು ತೂಕದ ಯುದ್ಧದ ಸಿಡಿತಲೆ ಹೊಂದಿರುವ ಶಕ್ತಿಶಾಲಿ ಕ್ಷಿಪಣಿಗಳನ್ನು ಸನ್ನದ್ಧಗೊಳಿಸಿರುವುದಾಗಿ ಘೋಷಿಸಿದೆ.

ಹಾರ್ಮುಜ್ ಜಲಸಂಧಿಯಲ್ಲಿ ಸಂಚಾರ ಸ್ಥಗಿತಗೊಂಡರೆ ಜಾಗತಿಕ ತೈಲ ಮಾರುಕಟ್ಟೆ ಕುಸಿಯಲಿದೆ ಎಂದು ವಿಶ್ವದ ಅತಿದೊಡ್ಡ ತೈಲ ರಫ್ತುದಾರ ಸಂಸ್ಥೆ ಸೌದಿ ಅರಾಮ್ಕೋ ಎಚ್ಚರಿಸಿದೆ. ಈ ಪ್ರದೇಶವು ಜಗತ್ತಿನ ತೈಲ ಪೂರೈಕೆಗೆ ಅತ್ಯಂತ ನಿರ್ಣಾಯಕವಾಗಿದೆ.

ಇದೇ ವೇಳೆ, ಇರಾನ್ ತನ್ನ ಶತ್ರು ರಾಷ್ಟ್ರಗಳಾದ ಇಸ್ರೇಲ್, ಯುಎಇ ಮತ್ತು ಸೌದಿ ಅರೇಬಿಯಾದ ತೈಲ ಸಂಸ್ಕರಣಾ ಕೇಂದ್ರಗಳ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸುವ ಮೂಲಕ ಪ್ರತಿರೋಧ ತೋರುತ್ತಿದೆ.

ಅಮೆರಿಕದೊಂದಿಗೆ ಸದ್ಯಕ್ಕೆ ಯಾವುದೇ ಚರ್ಚೆ ನಡೆಸುವ ಉದ್ದೇಶವಿಲ್ಲ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಸ್ಪಷ್ಟಪಡಿಸಿದ್ದಾರೆ. ದಾಳಿಗಳನ್ನು ಸಂಪೂರ್ಣವಾಗಿ ನಿಲ್ಲಿಸಿ, ಅವುಗಳು ಮರುಕಳಿಸದಂತೆ ಭರವಸೆ ನೀಡಿದರೆ ಮಾತ್ರ ದೌತ್ಯ ಮಾತುಕತೆಗೆ ಸಿದ್ಧವಿರುವುದಾಗಿ ಇರಾನ್ ತಿಳಿಸಿದೆ. ಮತ್ತೊಂದೆಡೆ, ಇರಾನ್ ಮೇಲಿನ ದಾಳಿಗಳಿಗೆ ತನ್ನ ನೆಲವನ್ನು ಬಳಸದಂತೆ ಇರಾಕ್ ಸರ್ಕಾರ ಅಮೆರಿಕಕ್ಕೆ ಖಡಕ್ ಸೂಚನೆ ನೀಡಿದೆ.

ಯುದ್ಧದ ಈ ಉಲ್ಬಣವು ಕೇವಲ ಪಶ್ಚಿಮ ಏಷ್ಯಾದ ದೇಶಗಳಿಗಷ್ಟೇ ಅಲ್ಲದೆ, ಇಡೀ ಜಗತ್ತಿನ ಆರ್ಥಿಕತೆ ಮತ್ತು ಶಾಂತಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

You cannot copy content of this page

Exit mobile version