ಬಹ್ರೇನ್‌ನಲ್ಲಿನ ಅಮೆಜಾನ್ ಡೇಟಾ ಸೆಂಟರ್ ಮೇಲೆ ಕ್ಷಿಪಣಿ ದಾಳಿ ಮಾಡಿದ ಇರಾನ್: ಸ್ಟಾರ್‌ ಲಿಂಕ್‌ ಮೇಲೂ ದಾಳಿ ಮಾಡುವುದಾಗಿ ಎಚ್ಚರಿಕೆ

ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಯುದ್ಧವು ಈಗ ಅಮೆರಿಕದ ತಂತ್ರಜ್ಞಾನ ದೈತ್ಯ ಕಂಪನಿಗಳ ಮೇಲೆ ನೇರ ಪರಿಣಾಮ ಬೀರಿದೆ. ಬುಧವಾರ ಇರಾನ್ ಪಡೆಗಳು ಬಹ್ರೇನ್‌ನ ಹಮಾಲಾದಲ್ಲಿರುವ ‘ಬಾಟೆಲ್ಕೊ’ (Batelco) ಪ್ರಧಾನ ಕಚೇರಿಯ ಮೇಲೆ ಭೀಕರ ಕ್ಷಿಪಣಿ ದಾಳಿ ನಡೆಸಿವೆ. ಈ ಕೇಂದ್ರವು ‘ಅಮೆಜಾನ್ ವೆಬ್ ಸರ್ವಿಸ್’ (AWS) ಗೆ ಆತಿಥ್ಯ ನೀಡುತ್ತಿದ್ದು, ಅಮೆರಿಕದ ಟೆಕ್ ಕಂಪನಿಗಳ ಮೇಲೆ ಇರಾನ್ ನಡೆಸಿದ ಮೊದಲ ದೊಡ್ಡ ದಾಳಿ ಇದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ದಾಳಿಯಿಂದಾಗಿ ಬಹ್ರೇನ್ ಮತ್ತು ಯುಎಇನಲ್ಲಿ ಅಮೆಜಾನ್‌ನ ಕ್ಲೌಡ್ ಸೇವೆಗಳಿಗೆ ತೀವ್ರ ವ್ಯತ್ಯಯ ಉಂಟಾಗಿದೆ. ಕಳೆದ ಒಂದು ತಿಂಗಳಲ್ಲೇ ಅಮೆಜಾನ್ ಕಾರ್ಯಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತಿರುವ ಎರಡನೇ ಘಟನೆ ಇದಾಗಿದೆ. ಡ್ರೋನ್ ದಾಳಿ ಮತ್ತು ವೈಮಾನಿಕ ದಾಳಿಯಿಂದಾಗಿ ಹಲವು ಡೇಟಾ ಸೆಂಟರ್ ಕಟ್ಟಡಗಳಿಗೆ ಹಾನಿಯಾಗಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎಂದು ಅಮೆಜಾನ್ ವಕ್ತಾರರು ಖಚಿತಪಡಿಸಿದ್ದಾರೆ. ಇದರಿಂದಾಗಿ ಜಾಗತಿಕ ಡಿಜಿಟಲ್ ವ್ಯವಹಾರಗಳ ಮೇಲೆ ಆತಂಕದ ಛಾಯೆ ಮೂಡಿದೆ.

ಇನ್ನೊಂದೆಡೆ, ಈ ಯುದ್ಧದ ಜ್ವಾಲೆ ಇಡೀ ಗಲ್ಫ್ ರಾಷ್ಟ್ರಗಳಿಗೆ ಹರಡುತ್ತಿದೆ. ಅಮೆರಿಕ ಮತ್ತು ಇಸ್ರೇಲ್ ಪಡೆಗಳಿಗೆ ಬೆಂಬಲ ನೀಡಲು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ನಿರ್ಧರಿಸಿದ್ದು, ಅಧಿಕೃತವಾಗಿ ಯುದ್ಧರಂಗಕ್ಕೆ ಜಿಗಿಯುವ ಸೂಚನೆ ನೀಡಿದೆ. ಇರಾನ್‌ನಿಂದ ಮುಚ್ಚಲ್ಪಟ್ಟಿರುವ ಆಯಕಟ್ಟಿನ ‘ಹಾರ್ಮುಜ್ ಜಲಸಂಧಿ’ಯನ್ನು (Strait of Hormuz) ಬಲವಂತವಾಗಿ ತೆರೆಯಲು ಅಮೆರಿಕ ನೇತೃತ್ವದ ಮೈತ್ರಿಕೂಟಕ್ಕೆ ಸಹಾಯ ಮಾಡಲು ಯುಎಇ ಸಿದ್ಧವಾಗಿದೆ ಎಂದು ವರದಿಗಳು ತಿಳಿಸಿವೆ.

ತನ್ನ ಭೂಭಾಗದ ಮೇಲೆ ನಡೆಯುತ್ತಿರುವ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಇರಾನ್ ಈಗಾಗಲೇ ಯುಎಇ ಮತ್ತು ಇತರ ಗಲ್ಫ್ ದೇಶಗಳ ಮೇಲೆ ಗುರಿ ಇಟ್ಟಿದೆ. ಈ ಹಿನ್ನೆಲೆಯಲ್ಲಿ ಇರಾನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮೇಲೆ ಯುಎಇ ಒತ್ತಡ ಹೇರುತ್ತಿದೆ. ಅಮೆರಿಕ, ಯುರೋಪ್ ಮತ್ತು ಏಷ್ಯಾದ ಮಿಲಿಟರಿ ಶಕ್ತಿಗಳು ಒಂದಾಗಿ ಪ್ರಬಲ ಒಕ್ಕೂಟ ರಚಿಸಬೇಕೆಂದು ಯುಎಇ ಕರೆ ನೀಡಿದ್ದು, ಗಲ್ಫ್ ಪ್ರದೇಶದಲ್ಲಿ ಮಹಾಯುದ್ಧದ ಮುನ್ಸೂಚನೆ ಸಿಗುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು