ಪಶ್ಚಿಮ ಏಷ್ಯಾ ಯುದ್ಧ ತೀವ್ರ: ಅಮೆರಿಕದ ಫೈಟರ್ ಜೆಟ್ ಹೊಡೆದುರುಳಿಸಿದ ಇರಾನ್, ಗಲ್ಫ್ ರಾಷ್ಟ್ರಗಳ ಮೇಲೆ ಕ್ಷಿಪಣಿ ಮಳೆ

ಟೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷವು ಶನಿವಾರ ಭೀಕರ ಸ್ವರೂಪ ಪಡೆದುಕೊಂಡಿದ್ದು, ಇರಾನ್ ತನ್ನ ಶತ್ರು ರಾಷ್ಟ್ರಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ತೀವ್ರಗೊಳಿಸಿದೆ. ಅಮೆರಿಕದ ಅತ್ಯಾಧುನಿಕ ‘ಎಫ್-15ಇ’ (F-15E) ಫೈಟರ್ ಜೆಟ್ ಅನ್ನು ತನ್ನ ವೈಮಾನಿಕ ರಕ್ಷಣಾ ವ್ಯವಸ್ಥೆಯ ಮೂಲಕ ಹೊಡೆದುರುಳಿಸಿರುವುದಾಗಿ ಇರಾನ್ ಘೋಷಿಸಿದೆ. ಈ ಘಟನೆಯಲ್ಲಿ ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳು ಪಾರಾಗಿದ್ದು, ಅವರನ್ನು ಹಿಡಿದುಕೊಟ್ಟವರಿಗೆ ಇರಾನ್ ಸರ್ಕಾರ 60,000 ಡಾಲರ್ ಬಹುಮಾನ ಘೋಷಿಸಿರುವುದು ಸಂಚಲನ ಮೂಡಿಸಿದೆ.

ಅಮೆರಿಕದ ಫೈಟರ್ ಜೆಟ್ ಪತನಗೊಂಡ ಬೆನ್ನಲ್ಲೇ ಪೈಲಟ್‌ಗಳ ರಕ್ಷಣೆಗಾಗಿ ಬಂದಿದ್ದ ಅಮೆರಿಕದ ‘ಯುಎಸ್-60 ಬ್ಲ್ಯಾಕ್ ಹಾಕ್’ ಹೆಲಿಕಾಪ್ಟರ್ ಅನ್ನು ಕೂಡ ತಾನು ಹೊಡೆದುರುಳಿಸಿರುವುದಾಗಿ ಇರಾನ್ ಸೇನೆ ಪ್ರತಿಪಾದಿಸಿದೆ. ಪೈಲಟ್‌ಗಳಲ್ಲಿ ಒಬ್ಬರನ್ನು ಅಮೆರಿಕ ರಕ್ಷಿಸಿದೆ ಎಂದು ಇಸ್ರೇಲ್ ಮಾಧ್ಯಮಗಳು ವರದಿ ಮಾಡಿದರೆ, ಮತ್ತೊಬ್ಬ ಪೈಲಟ್ ಇರಾನ್ ವಶದಲ್ಲಿದ್ದಾರೆ ಎಂಬ ಗೊಂದಲದ ವರದಿಗಳು ಹರಿದಾಡುತ್ತಿವೆ. ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೋಲಿನ್ ಲೀವಿಟ್ ಈ ಕುರಿತು ಪ್ರತಿಕ್ರಿಯಿಸಿ, ಘಟನೆಯ ಬಗ್ಗೆ ಅಧ್ಯಕ್ಷ ಟ್ರಂಪ್ ಅವರಿಗೆ ಮಾಹಿತಿ ನೀಡಲಾಗಿದ್ದು, ಪೈಲಟ್‌ಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಯುದ್ಧದ ತೀವ್ರತೆ ಗಲ್ಫ್ ರಾಷ್ಟ್ರಗಳಿಗೂ ಹರಡಿದ್ದು, ಇರಾನ್ ಪಡೆಯು ಕುವೈತ್‌ನ ‘ಮಿನಾ ಅಲ್ ಅಹ್ಮದಿ’ ತೈಲ ಸಂಸ್ಕರಣಾಗಾರ ಮತ್ತು ನೀರು ಶುದ್ಧೀಕರಣ ಘಟಕದ ಮೇಲೆ ಡ್ರೋನ್ ದಾಳಿ ನಡೆಸಿದೆ. ಈ ದಾಳಿಯಿಂದಾಗಿ ಸಂಸ್ಕರಣಾಗಾರದ ಮೂರು ಘಟಕಗಳು ಬೆಂಕಿಗಾಹುತಿಯಾಗಿವೆ. ಅಷ್ಟೇ ಅಲ್ಲದೆ, ಇಸ್ರೇಲ್‌ನ ಗುಪ್ತಚರ ಸಂಸ್ಥೆ ‘ಮೊಸ್ಸಾದ್’ನ ಪ್ರಧಾನ ಕಚೇರಿಯ ಮೇಲೆ ನಿಖರ ಕ್ಷಿಪಣಿ ದಾಳಿ ನಡೆಸಿ ಅದನ್ನು ಧ್ವಂಸಗೊಳಿಸಿರುವುದಾಗಿ ಇರಾನ್‌ನ ತಸ್ನಿಮ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಆದರೆ ಇಸ್ರೇಲ್ ಈ ಬಗ್ಗೆ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ದಾಳಿಯ ವ್ಯಾಪ್ತಿಯನ್ನು ವಿಸ್ತರಿಸಿರುವ ಇರಾನ್, ದುಬೈನಲ್ಲಿರುವ ‘ಒರಾಕಲ್’ ಡೇಟಾ ಸೆಂಟರ್ ಮತ್ತು ಬಹ್ರೇನ್‌ನಲ್ಲಿರುವ ‘ಅಮೆಜಾನ್’ ಡೇಟಾ ಸೆಂಟರ್‌ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದು ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕ ಮೂಡಿಸಿದೆ. ಅಬುಧಾಬಿಯ ಅಜ್ಬಾನ್ ಪ್ರದೇಶದಲ್ಲಿ ಇರಾನ್‌ನ ಕ್ಷಿಪಣಿಗಳನ್ನು ತಡೆಯುವ ಸಂದರ್ಭದಲ್ಲಿ ಅವುಗಳ ಅವಶೇಷಗಳು ಬಿದ್ದ ಪರಿಣಾಮ ಐವರು ಭಾರತೀಯರು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿರುವುದರಿಂದ ಭಾರತವು ತನ್ನ ಪ್ರಜೆಗಳ ರಕ್ಷಣೆಗಾಗಿ ರಾಜತಾಂತ್ರಿಕ ಪ್ರಯತ್ನಗಳನ್ನು ಚುರುಕುಗೊಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು