Wednesday, June 19, 2024

ಸತ್ಯ | ನ್ಯಾಯ |ಧರ್ಮ

ಇರುಳಿಗ ಸಮುದಾಯದ ನೋವಿಗೆ  ಕೊನೆ ಯಾವಾಗ?

ದೇಶಕ್ಕೆ ಸ್ವಾತಂತ್ರ್ಯ ಬಂದು 76 ವರ್ಷಗಳು ಸಂದರೂ ನಾಗರಿಕತೆಯ ಸೋಂಕಿನಿಂದ ಹೊರಗಿರುವ ಇರುಳಿಗ ಬುಡಕಟ್ಟು ಜನಾಂಗವು ತಮ್ಮ ಬದುಕಿಗೆ ಸುಭದ್ರ ನೆಲೆಯಿಲ್ಲದೆ, ಇಂದಿಗೂ ಹೊತ್ತಿನ ಊಟಕ್ಕೆ ಹಾಗೂ ಒಂದಡಿ ಸೂರಿಗಾಗಿ ಪರಿತಪಿಸುತ್ತಿದೆ. ಆಳುವ ಸರ್ಕಾರಗಳು ನಿಜ ಅರ್ಥದ ಸ್ವಾತಂತ್ರ್ಯವನ್ನು ಈ ಬುಡಕಟ್ಟುಗಳಿಗೆ ಕಲ್ಪಿಸಿಕೊಡುವುದೇ ಅಭಿವೃದ್ಧಿಯ ಆದ್ಯತೆಯಾಗಬೇಕಿದೆ. ಇರುಳಿಗ ಸಮುದಾಯದ ಮೊದಲ ಸಂಶೋಧಕ ಡಾ. ಕೃಷ್ಣಮೂರ್ತಿ ಕೆ.ವಿ. ಇವರು 76 ನೇ ಸ್ವಾತಂತ್ರ್ಯೋತ್ಸವದ ಹೊಸ್ತಿಲಲ್ಲಿ ನಿಂತು,  ಇರುಳಿಗರ ಬದುಕು ಬವಣೆಗಳ ಮೇಲೆ ಬೆಳಕು ಚೆಲ್ಲಿದ್ದಾರೆ.

ಭಾರತದ ಅತ್ಯಂತ ಪ್ರಾಚೀನ ಬುಡಕಟ್ಟುಗಳಲ್ಲಿ  ಇರುಳಿಗರು ಪ್ರಮುಖರು. ದಕ್ಷಿಣ ಭಾರತದಲ್ಲಿ ಅತೀ ಹೆಚ್ಚಾಗಿ ಕಂಡುಬರುವ ಇರುಳಿಗರು ಕರ್ನಾಟಕ ಸೇರಿದಂತೆ ಕೇರಳ ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಕೆಲವು ಭಾಗಗಳಲ್ಲಿ ಕಂಡುಬರುತ್ತಾರೆ. ಇವರು ಸಿಂಧೂ ಬಯಲಿನ ನಾಗರಿಕತೆಗಿಂತಲೂ ಹಿಂದಿನವರಾಗಿದ್ದಾರೆ ಎಂದು ಅನೇಕ ಸಾಕ್ಷ್ಯಾಧಾರಗಳಿಂದ ವಿದ್ವಾಂಸರುಗಳು ಅಭಿಪ್ರಾಯಿಸುತ್ತಾರೆ. ವಿಶೇಷವಾಗಿ ಕರ್ನಾಟಕದ ರಾಮನಗರ ಜಿಲ್ಲೆಯಲ್ಲಿ  ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುವ ಇವರು, ಕಾವೇರಿ ನದಿಯ ತಪ್ಪಲಿನಲ್ಲಿ ಪಾರಂಪರಿಕವಾಗಿ ಜೀವಿಸಿಕೊಂಡು ಬರುತ್ತಿದ್ದಾರೆ. ಸಿಂಧೂ ಕಣಿವೆಯ ಜನಕ್ಕೆ ಹೇಗೆ ಸಿಂಧೂ ನದಿ ಆಧಾರವೋ ಅದೇ ತೆರನಾಗಿ ಇರುಳಿಗರಿಗೆ ಕಾವೇರಿ ನದಿ ಆಧಾರ. ನದಿಯೊಂದಿಗೆ ಇವರ ಬದುಕು ಬೆಸೆದುಕೊಂಡು ಇಂದಿಗೂ ಇವರ ನಂಬಿಕೆ ಐತಿಹ್ಯ-ಪುರಾಣಗಳಲ್ಲೂ ಕಾವೇರಿ ನದಿಯೊಂದಿಗಿನ ಉಲ್ಲೇಖಗಳು ಸಿಗುವುದನ್ನು ಕಾಣಬಹುದು. ಕರ್ಣಾಟಕ ಮಾತ್ರವಲ್ಲದೆ ತಮಿಳುನಾಡು, ಆಂಧ್ರ ಹಾಗೂ ಕೇರಳದ ಕಾವೇರಿ ನದಿಯ ಆಸುಪಾಸಿನ ಭಾಗದಲ್ಲೂ ಕಂಡುಬರುವ ಇರುಳಿಗರು ಸಾಮಾನ್ಯವಾಗಿ ಇರುಳ, ಇರುಳಾಸ್, ಇಲ್ಲಿಗರು, ಕಾಡು ಪೂಜಾರಿ, ಕಾಡ್ ಚೆನ್ಸು ಎಂಬ ಅನೇಕ ಹೆಸರುಗಳಿಂದ ಕರೆಸಿಕೊಳ್ಳುತ್ತಾರೆ. ಇವರು ಬೇರೆ ಬೇರೆ ರಾಜಕೀಯ ವಿಭಾಗಿತ ಪ್ರದೇಶದಲ್ಲಿ ಕಂಡು ಬಂದರೂ ಇವರೆಲ್ಲರು ಒಂದಿಲ್ಲೊಂದು ರೀತಿಯಲ್ಲಿ ರಕ್ತ ಸಂಬಂಧವನ್ನು ಹೊಂದಿದವರೆ ಆಗಿದ್ದಾರೆ. ಜೊತೆಗೆ ಕರ್ನಾಟಕದ ಇತರೇ ಭಾಗಕ್ಕೂ ಈ ಕಾವೇರಿ ನದಿ ಭಾಗದಿಂದಲೇ ಹೋಗಿ ನೆಲೆಸಿದ್ದಾರೆ ಎಂದು ಇರುಳಿಗ ಸಮುದಾಯದ ಹಿರಿಯರು ಹೇಳುತ್ತಾರೆ.

ಹೀಗೆ, ತನ್ನದೇ ಆದ ಪಾರಂಪರಿಕ ಇತಿಹಾಸವನ್ನು ಹೊಂದಿರುವ ಇರುಳಿಗರು ಇಂದು ಇರಲು ಸೂರಿಲ್ಲದೆ ತಿನ್ನಲು ಅನ್ನವಿಲ್ಲದೆ ಎಲ್ಲರಂತೆ ಬದುಕಲು ಒಂದಿಷ್ಟು ಭೂಮಿ ಇಲ್ಲದೆ, ಇತರರಂತೆ ಬದುಕಲು ನಯನಾಜೂಕು ಗೊತ್ತಿಲ್ಲದೆ ನೀರಿನಿಂದ ಹೊರ ತೆಗೆದ  ಮೀನಿನಂತೆ ಒದ್ದಾಡುತ್ತಿದ್ದಾರೆ. ತುತ್ತಿನ ಚೀಲ ತುಂಬಿಸಿಕೊಳ್ಳಲು ಇಟ್ಟಿಗೆ ಫ್ಯಾಕ್ಟರಿ, ರೇಷ್ಮೆಗೂಡು ಬೇಯಿಸುವ ಕಾರ್ಖಾನೆ, ಎಸ್ಟೇಟ್ ಮತ್ತು ಇತರ ಮುಂದುವರಿದ ಸಮುದಾಯದವರ ಮನೆ, ಹೊಲ, ಗದ್ದೆಗಳಲ್ಲಿ ಇಂದಿಗೂ ಜೀತ ಹಾಗೂ ದಿನಗೂಲಿ ಮಾಡುವುದಲ್ಲದೆ ರಸ್ತೆ ಬದಿಯಲ್ಲಿ ಪೇಪರ್ ಆಯ್ದುಕೊಂಡು ಕೂಡ ಬದುಕುತ್ತಿರುವುದನ್ನು ಕಾಣಬಹುದು. ಇಟ್ಟಿಗೆ ಫ್ಯಾಕ್ಟರಿ ಮತ್ತು ರೇಷ್ಮೆಗೂಡು ಬೇಯಿಸುವ ಕಾರ್ಖಾನೆಗಳಲ್ಲಿ ನಿರಂತರವಾಗಿ ದುಡಿಯುವುದರಿಂದ ಈ ಜನಾಂಗದವರಲ್ಲಿ ಅನೇಕ ಮಾರಣಾಂತಿಕ ಕಾಯಿಲೆಗಳು ಹೆಚ್ಚಾಗಿ ಸಾವು ನೋವು ಸಂಭವಿಸಿ ದಿನದಿಂದ ದಿನಕ್ಕೆ ಇರುಳಿಗ ಸಮುದಾಯದವರ ಜನಸಂಖ್ಯೆ ಕಡಿಮೆಯಾಗುತ್ತಾ ಬರುತ್ತಿದೆ. ಇರುಳಿಗರು  ಆರ್ಥಿಕವಾಗಿ ತೀರ ಹಿಂದುಳಿದ ಜನಸಮುದಾಯ. ಇವರು ಇಂದಿಗೂ ತಮ್ಮ ಪಾರಂಪರಿಕ ವೃತ್ತಿಯನ್ನೆ ನಂಬಿಕೊಂಡು ಬದುಕುತ್ತಿದ್ದಾರೆ. ಏಕೆಂದರೆ ಇವರಿಗೆ ಇತರೆ ವ್ಯಾವಹಾರಿಕ ತಿಳುವಳಿಕೆ ಇಲ್ಲ, ಇತ್ತ ಬೇರೆ ವೃತ್ತಿಗೂ ಹೊಂದಿಕೊಳ್ಳಲಾಗದೆ ಡೋಲಾಯಮಾನ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಇತರೆ ಸಮುದಾಯದ ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾದರೆ ಇರುಳಿಗರ ಜನಸಂಖ್ಯೆ ಮಾತ್ರ ಇಳಿಮುಖವಾಗುತ್ತಾ  ಸಾಗುತ್ತಿರುವುದು ಆತಂಕ ಉಂಟುಮಾಡುತ್ತಿದೆ.

ಭಾರತಕ್ಕೆ ಸ್ವಾತಂತ್ರ‍್ಯ ಬಂದು ಇದೀಗ 76 ವರ್ಷಗಳು ಸಂದಿವೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಶ್ರೇಯೋಭಿವೃದ್ಧಿಗಾಗಿ ಸಂವಿಧಾನದಲ್ಲಿ ಅವಕಾಶ ಕಲ್ಪಿಸಿಕೊಡಲಾಗಿದೆ. ಸಂವಿಧಾನದ ಮೂಲಕ ಪರಿಶಿಷ್ಟರ ಪಂಗಡದಲ್ಲಿ ಅನೇಕ ಸೌಲಭ್ಯಗಳನ್ನು ಪಡೆದುಕೊಂಡು ಇಂದು ಈ ಮೀಸಲಾತಿ ಅಗತ್ಯವಿಲ್ಲ ಎಲ್ಲರೂ ಸಮಾನರಾಗಿ ಬಿಟ್ಟಿದ್ದಾರೆ ಎಂದು ಕೂಗುತ್ತಿರುವ ಸಮಯದಲ್ಲಿ ಮೀಸಲಾತಿ ಎಂದರೇನು ಎಂದು ತಿಳುವಳಿಕೆ ಇಲ್ಲದೆ ಈ ಇರುಳಿಗರು ಜೀವಿಸುತ್ತಿರುವುದನ್ನು ಕಾಣಬಹುದು. ಸಂವಿಧಾನ ರಚನೆಯಾಗಿ 76 ವರ್ಷಗಳೇ ಕಳೆದಿದ್ದರೂ ಈ ಸಮುದಾಯದಲ್ಲಿ ಇವತ್ತಿಗೂ ಒಬ್ಬ  ಸರ್ಕಾರಿ ನೌಕರಿಯಲ್ಲಿ ಇಲ್ಲದೆ ಇರುವುದು  ಪ್ರಜಾಪ್ರಭುತ್ವದ ಸೋಲು ಎಂದರೆ ತಪ್ಪಾಗಲಾರದು.

ಈ ಜನಾಂಗದ ಜನಸಂಖ್ಯೆಯ ನಿಖರವಾದ ಮಾಹಿತಿ ಎಲ್ಲಿಯೂ ಲಭ್ಯವಿಲ್ಲ. ಸರ್ಕಾರಿ ದಾಖಲೆಗಳಲ್ಲಿ ಒಂದಾದರೆ ವಾಸ್ತವದ ಜನಸಂಖ್ಯೆಯೇ ಬೇರೆ ಎಂದು ಸಮುದಾಯದವರು ಅಭಿಪ್ರಾಯಿಸುತ್ತಾರೆ. 2001 ರ ಜನಗಣತಿಯಲ್ಲಿ ಒಟ್ಟಾರೆ ಕರ್ನಾಟಕದಲ್ಲಿ ಇರುಳಿಗ ಸಮುದಾಯದ ಜನಸಂಖ್ಯೆ 8,486 ಇದ್ದು ಇದರಲ್ಲಿ 4392 ಪುರುಷರು ಹಾಗೂ 4094 ಮಹಿಳೆಯರು ಇದ್ದಾರೆಂದು ದಾಖಲಾಗಿದೆ. ಹಾಗೆಯೇ ಬೆಂಗಳೂರು ಗ್ರಾಮಾಂತರ(ಈಗಿನ ರಾಮನಗರವನ್ನು ಒಳಗೊಂಡಂತೆ) 5645 (2939 ಗಂಡಸರು, 2706 ಹೆಂಗಸರು) ದಾಖಲಾಗಿದೆ. ಹಾಗೆಯೇ 2011 ರ ಜನಗಣತಿಯಲ್ಲಿ ಇರುಳಿಗರ ಜನಸಂಖ್ಯೆ ಕರ್ನಾಟಕದಲ್ಲಿ 10,259(ಪುರುಷರು-5,267ಮಹಿಳೆಯರು-4,992) 2507 ಕುಟುಂಬಗಳು ಎಂದು ದಾಖಲಾಗಿದೆ. ಆದರೆ ಕರ್ನಾಟಕದಲ್ಲಿ ಇರುಳಿಗರ ಒಟ್ಟು ಜನಸಂಖ್ಯೆ 18 ರಿಂದ 20 ಸಾವಿರದಷ್ಟು ಎಂದು ಇರುಳಿಗರೆ ಹೇಳಿಕೊಳ್ಳುತ್ತಾರೆ. ಇರುಳಿಗರಲ್ಲಿ 40% ರಷ್ಟು ಜನರು ಇಂದಿಗೂ ವಾಸಿಸಲು ಸೂರಿಲ್ಲದೆ  ಮಾವಿನ ತೋಟಗಳು, ಇಟ್ಟಿಗೆ ಫ್ಯಾಕ್ಟರಿಗಳು, ಎಸ್ಟೇಟ್ ಗಳು ಹಾಗೂ ಕೋಳಿ ಫಾರಂಗಳಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದು ಇವರಲ್ಲಿ ಯಾವುದೇ ಮೂಲಭೂತವಾದ ದಾಖಲಾತಿಯು ಇಲ್ಲದೆ ಸರ್ಕಾರಿ ಜನಗಣತಿಯಲ್ಲಿ ಲೆಕ್ಕಕ್ಕೆ ಸಿಗದೆ ಉಳಿದುಬಿಟ್ಟಿರುವುದನ್ನು ಕಾಣಬಹುದು.

ಉಳಿದಂತೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ತುಮಕೂರು, ಕೋಲಾರ ಚಾಮರಾಜನಗರ, ಶಿವಮೊಗ್ಗ, ಕೊಡಗು ಹಾಗೂ ಮಂಡ್ಯದ ಕೆಲವು ಭಾಗದಲ್ಲಿ ಇರುಳಿಗರು ಜೀವಿಸುತ್ತಿದ್ದು ಇವರುಗಳು ಜೇನುಕುರುಬ, ಸೋಲಿಗ, ಕುರುಬ, ಮಲೆಕುಡಿಯ ಎಂಬ ಇತರ ಹೆಸರುಗಳಿಂದ ಕರೆಸಿಕೊಂಡು ಬದುಕುತ್ತಿದ್ದಾರೆ (ಯಾಕೆ ಹೀಗೆ ಎಂದು ಕೇಳಿದರೆ ಇರುಳಿಗ ಎಂದರೆ ನಮಗೆ ಏನೂ ಸೌಲಭ್ಯ ಸಿಗೋದಿಲ್ಲ ಸ್ವಾಮಿ. ಈಗ ನಮಗೆ ಪೌಷ್ಠಿಕ ಆಹಾರ ಹಾಗೂ ಇತರೆ ಸೌಲಭ್ಯಗಳು ಸಿಗುತ್ತಿವೆ. ಅದಕ್ಕೆ ನಾವು ಹೀಗೆ  ಕರೆದು ಕೊಳ್ಳುತ್ತಿದ್ದೇವೆ ಎನ್ನುತ್ತಾರೆ). ಇದು ಇವತ್ತಿನ ಇರುಳಿಗ ಜನಾಂಗದ ಅವನತಿಗೆ ಕಾರಣ ಎಂದರೆ ತಪ್ಪಾಗಲಾರದು. ಹಿಂದೆ ಒಂದು ಮಾತು ಇತ್ತು. ಒಂದು ಸಮುದಾಯದ ಕಟ್ಟ ಕಡೆಯ ವ್ಯಕ್ತಿ ಬದುಕಿರುವವರೆಗೂ ಆ ಸಮುದಾಯದ ಪ್ರತಿನಿಧೀಕರಣ ಇರುತ್ತದೆ  ಎಂದು. ಆದರೆ ಇಂದು ಸರ್ಕಾರಿ ದಾಖಲೆಗಳಲ್ಲಿ ಒಂದು ಸಮುದಾಯದ ಹೆಸರು ಬಿಟ್ಟು ಹೋದರೆ ಆ ಸಮುದಾಯವೇ ಇಲ್ಲವಾಗಿ ಬಿಡುತ್ತದೆ.  ಇಂತಹ ದುಸ್ಥಿತಿ ಈಗ ಇರುಳಿಗರಿಗೆ ಬಂದೊದಗಿದೆ. ಇಷ್ಟೆಲ್ಲಾ ಸಾವು ನೋವುಗಳಿದ್ದರೂ ಸಾಂಸ್ಕೃತಿಕವಾಗಿ ತಮ್ಮ ಪಾರಂಪರಿಕ ನಂಬಿಕೆ ಆಚರಣೆಗಳನ್ನು ಬಿಟ್ಟುಕೊಡದೆ ಇಂದಿಗೂ ಅವರು ಉಳಿಸಿಕೊಂಡು ಬರುತ್ತಿರುವುದನ್ನು ಕಾಣಬಹುದು.

ದಕ್ಷಿಣ ಭಾರತದಲ್ಲಿ ಸಾಂಸ್ಕೃತಿಕ ಮತ್ತು ಧಾರ್ಮಿಕ ಅಲೆ ಹಬ್ಬಿಸಿದ ಶಂಕರ, ರಾಮಾನುಜ, ಮಾಧ್ವರು, ಬುದ್ಧ, ಮಹಾವೀರ, ಬಸವಣ್ಣ, ಮಂಟೆಸ್ವಾಮಿ ಮತ್ತು ಮಾದಪ್ಪನ ಕಾಲದಲ್ಲಿಯೂ ಜೀವಿಸಿ ಅವರ ಅನುಕರಣೆಗಳಿಗೆ ಒಳಗಾಗದೆ ಸೆಡ್ಡು ಹೊಡೆದು ತಮ್ಮದೆ ಆದ ನಂಬಿಕೆ ಮತ್ತು ಆಚರಣೆಗಳನ್ನು ಉಳಿಸಿಕೊಂಡರು. ಅವರುಗಳಿಗೆ ಪರ್ಯಾಯವಾಗಿ ತಮ್ಮದೆ ಆದ ದೇವರು ಧರ್ಮ ಆಚರಣೆ ನಂಬಿಕೆ ಮತ್ತು ರೂಢಿ ಸಂಪ್ರದಾಯಗಳನ್ನು ಉಳಿಸಿಕೊಂಡರು. ಗಂಡು ಹೆಣ್ಣು ಜೀವನ ಸಾಗಿಸಲು ಶಾಸ್ತ್ರ ಮತ್ತು ಸಂಪ್ರದಾಯ ಹಾಗೂ ಪುರೋಹಿತರ ಹಾಜರಾತಿಯ ಮದುವೆಗಳೇ ಬೇಕೆನ್ನುವ ಕಾಲದಲ್ಲಿ, ಜೀವನ ಸಾಗಿಸಲು ಹೆಣ್ಣು ಗಂಡು ಇಬ್ಬರ ಮನಸ್ಸು ಒಂದಾದರೆ ಸಾಕು ಎನ್ನುವ ಇರುಳಿಗರ ನಂಬಿಕೆಯು ಪ್ರಶಂಸನೀಯವಾದುದು. ಇರುಳಿಗರ ಸಾವಿನ ಆಚರಣೆ ಮತ್ತು ನಂಬಿಕೆಗಳು ಪ್ರಪಂಚದ ಎಲ್ಲಾ ಧರ್ಮ ನಂಬಿಕೆಗಳಿಗಿಂತ ಭಿನ್ನವಾಗಿ ಕಂಡುಬರುತ್ತದೆ. ಜೊತೆಗೆ ಆದಿ ಮಾನವನ ರೂಢಿ ಪದ್ಧತಿಗಳು ಇಂದಿಗೂ ಇರುಳಿಗರಲ್ಲಿ ಉಳಿದುಕೊಂಡಿರುವುದನ್ನು ಕಾಣಬಹುದು.

ಒಬ್ಬ ವ್ಯಕ್ಕಿ ಸತ್ತ ಮೇಲೆ ದೆವ್ವ-ಭೂತವಾಗುತ್ತಾನೆ ಅಥವಾ ಸ್ವರ್ಗಕ್ಕೋ-ನರಕಕ್ಕೋ ಹೋಗುವುದಾಗಿ ಪ್ರಚಲಿತ ದಿನಮಾನದ ನಂಬಿಕೆಗಳಿವೆ. ಇದಕ್ಕೆ ಇಂಬು ಎನ್ನುವ ಹಾಗೆ ಪುರಾಣಗಳು, ವೇದ ಉಪನಿಷತ್ ಗಳು ಇವೆ. ಆದರೆ ಇರುಳಿಗರಲ್ಲಿ ಮಾತ್ರ ಸತ್ತ ವ್ಯಕ್ತಿಯನ್ನು ತಮ್ಮ ಬದುಕಿನುದ್ದಕ್ಕೂ ತಮ್ಮೊಂದಿಗೆ ಇರಿಸಿಕೊಂಡು ಕರೆದಾಗಲೆಲ್ಲ ಬಂದು ಕಷ್ಟ ಕಾರ್ಪಣ್ಯಗಳನ್ನು ಬಗೆಹರಿಸುವಂತಹ ಶಕ್ತಿಯಾಗಿಸಿಕೊಂಡು ಸತ್ತ ವ್ಯಕ್ತಿಯ ಕಳೆಬರಹವನ್ನೆ ದೇವರಾಗಿ ಪೂಜಿಸುವುದು ಇಂದಿಗೂ ಜಾರಿಯಲ್ಲಿದೆ. ಆದ್ದರಿಂದಲೇ ಇರುಳಿಗರಲ್ಲಿ ವ್ಯಕ್ತಿ ಸತ್ತ ಮೇಲೆ ಹೂಳುವುದಾಗಲಿ ಅಥವಾ ಸುಡುವುದಾಗಲಿ ಮಾಡದೇ ಕಲ್ಲು ಸೇವೆ ಮಾಡುತ್ತೇವೆ ಎನ್ನುತ್ತಾರೆ. ಮಣ್ಣಿನಲ್ಲಿ ಹೂಳುವುದರಿಂದ ಅಥವಾ ಬೆಂಕಿಯಲ್ಲಿ ಸುಟ್ಟುಬಿಡುವುದರಿಂದ ನಮ್ಮ ಹಿರಿಯರ ಕಳೆಬರಹ ನಾಶವಾಗಿ ಅವರ ನೆನಪುಗಳೇ ನಮಗೆ ಸಿಗದಂತಾಗುತ್ತದೆ. ಅದರ ಬದಲು ಕಲ್ಲು ಸೇವೆ ಮಾಡುವುದರಿಂದ ಅವರ ಮೂಳೆಗಳನ್ನಾದರು ನೋಡಿಕೊಂಡು ನಮ್ಮ ಹಿರಿಯರ ನೆನಪು ಮಾಡಿಕೊಳ್ಳುತ್ತೇವೆ. ಬದುಕಿರುವಾಗಲಂತು ಒಬ್ಬರಿಗೆ ಉಪಕಾರ ಮಾಡಲಿಕ್ಕೆ ಆಗಲಿಲ್ಲ.  ಸತ್ತಮೇಲಾದರು ತನ್ನ ದೇಹ ನಾಲ್ಕು ಪ್ರಾಣಿ ಪಕ್ಷಿಗಳಿಗೆ ಆಹಾರವಾಗಲಿ ಎನ್ನುವ ನಂಬಿಕೆಯಿಂದಲೇ  ಕಲ್ಲುಸೇವೆ ಅಥವಾ ಕಲ್ಲು ಮಲ್ಲಯ್ಯನನ್ನು  ಮಾಡುವುದಾಗಿ ಇರುಳಿಗರು ತಿಳಿಸುತ್ತಾರೆ.

ಹೀಗೆ, ಇರುಳಿಗರು ತಮ್ಮ ಪಾರಂಪರಿಕ ಕಲ್ಲುಸೇವೆಯ ಜೊತೆಗೆ ಅನೇಕ ಪಾರಂಪರಿಕ ನಂಬಿಕೆಯ ಆಚರಣೆ, ಪದ್ಧತಿಯನ್ನು ಇಂದಿಗೂ ಉಳಿಸಿಕೊಂಡು ಬರುತ್ತಿದ್ದಾರೆ. ಆದರೆ ಇತ್ತೀಚಿನ ದಿನದಲ್ಲಿ ಇವರಿಗೆ ತಮ್ಮ ಸಾಂಪ್ರದಾಯಿಕ ಆಚರಣೆಗಳನ್ನು ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ. ಇವರ ಪಾರಂಪರಿಕ ಕಲ್ಲು ಗುಹೆಗಳು ಕಾಡಿನ ಮಧ್ಯಭಾಗದಲ್ಲಿದ್ದು, ಅರಣ್ಯ ಇಲಾಖೆಯವರು ಅರಣ್ಯ ಸಂರಕ್ಷಣೆಯ ಕಾರಣವೊಡ್ಡಿ ಇರುಳಿಗರ ಕಲ್ಲುಸೇವೆಯ ಹತ್ತಿರ ಹೋಗಲು ಬಿಡದಿರುವುದೇ ಕಾರಣವಾಗಿದೆ. ಇರುಳಿಗ ಸಮುದಾಯದವರು ತಮ್ಮ ಪಾರಂಪರಿಕವಾಗಿ ನಂಬಿಕೆ-ಆಚರಣೆಗಳನ್ನು ಮುಂದುವರೆಸಲು ತಮ್ಮ ಹಿರಿಯರ ಕಲ್ಲುಗೋರಿ, ಕಲ್ಲುಗುಹೆಗಳನ್ನು ಉಳಿಸಿಕೊಡುವಂತೆ ಅರಣ್ಯ ಇಲಾಖೆಯ ಮುಂದೆ ಅಂಗಲಾಚುತ್ತಿದ್ದಾರೆ. ಇಂದಿಗೂ ವಯಸ್ಸಾದ ಎಷ್ಟೋ ಇರುಳಿಗರು ತಮ್ಮನ್ನು ಕಲ್ಲುಸೇವೆ ಮಾಡುವಂತೆ ಕೇಳಿಕೊಂಡರೂ ಅವರ ಕೊನೆಯ ಆಸೆಯನ್ನು ಈಡೇರಿಸಲಾಗದ ಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ. ಭಾರತದ ಪ್ರಜಾಪ್ರಭುತ್ವದ ಕಾನೂನು ವ್ಯವಸ್ಥೆಯಲ್ಲಿ ಎಂತಹ ಅಫರಾಧ ಮಾಡಿದ್ದರು  ಸಾಯುವ ಮುನ್ನ ಅವನ ಕೊನೆಯಾಸೆಯನ್ನು ಏಷ್ಟೇ ಕಷ್ಟವಾದರೂ ಈಡೇರಿಸುವ ವ್ಯವಸ್ಥೆ ಇದೆಯಾದರೂ ಇರುಳಿಗರ ಜನಾಂಗದ ಹಿರಿಯರ ಕೊನೆಯಾಸೆಯನ್ನು ಈಡೇರಿಸಲು ಅರಣ್ಯ ಇಲಾ ಯವರು ಬಿಡದೇ ಇರುವುದು ವಿಪರ್ಯಾಸವೇ ಸರಿ. ಇದಕ್ಕೆ ಸಾಕ್ಷಿ ಎಂಬಂತೆ ದಿನಾಂಕ: 28- 5- 2019ರಂದು ಮಾಗಡಿ ತಾಲ್ಲೂಕು ಜೋಡುಗಟ್ಟೆ ಇರುಳಿಗರ ಕಾಲೋನಿಯ ಮೊಟ್ಟುಳ್ಳಯ್ಯ 95) ಎಂಬುವರ ಕೊನೆಯಾಸೆಯಂತೆ ಅರಣ್ಯ ಇಲಾಖೆಯವರ ವಿರೋಧದ ನಡುವೆಯೂ ಇರುಳಿಗರು ತಮ್ಮ ಪಾರಂಪರಿಕ ಸ್ಥಳವಾದ ಸಾವನ ದುರ್ಗಾ ಫಾರೆಸ್ಟ್ ನಲ್ಲಿ ಕಲ್ಲುಸೇವೆಯನ್ನು ಮಾಡಿ ಅರಣ್ಯ ಇಲಾಖೆಯ ಕೆಂಗಣ್ಣಿಗೆ ಗುರಿಯಾಗಿದ್ದರು.

ನಮ್ಮ ಜಾಗಕ್ಕೆ ನಾವೇ ಹೋಗಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಾವುಗಳು ತಲತಲಾಂತರದಿಂದ ಹುಟ್ಟಿ ಬೆಳೆದ ಪ್ರದೇಶವು ನೋಡು ನೋಡುತ್ತಿದ್ದಂತೆ ಅನೇಕ ನಿರ್ಬಂಧಗಳಿಗೆ ಒಳಗಾಗುತ್ತಿದೆ. ನಾವು ನೆಟ್ಟು ಬೆಳೆಸಿದ ಮರ ಗಿಡಗಳ ಮೇಲೆ ನಮಗೆ ಹಕ್ಕುಗಳಿಲ್ಲದಂತಾಗಿದೆ. ಉತ್ತಿ, ಬಿತ್ತಿ ಬೆಳೆ ಬೆಳೆದು ಹೊಟ್ಟೆಹೊರೆದ ಭೂಮಿಗೆ ಬೇಲಿ ಹಾಕಲಾಗಿದೆ. ನಮ್ಮ ಹಿರಿಯರ ಸಮಾಧಿಗಳಿಗೆ, ನಮ್ಮ ದೇವರುಗಳ ಜಾಗಕ್ಕೆ ಹೋಗಲು ಸಾಧ್ಯವಾಗದಂತಾಗಿದೆ. ನಮಗೆ ನಮ್ಮ ಪಾರಂಪರಿಗೆ ವೃತ್ತಿ ಬಿಟ್ಟರೆ ಬೇರೆ ಬದುಕು ಗೊತ್ತಿಲ್ಲ. “ದಯಮಾಡಿ ನಮ್ಮನ್ನು ಕಾಡಿನಿಂದ ಬೇರೆ ಮಾಡಬೇಡಿ. ನಮ್ಮ ಕೊನೆಯಾಸೆಯಂತೆ ನಮ್ಮ ಹೆಣವನ್ನು ನಮ್ಮ ಹಿರಿಯರು ಇರುವ ಜಾಗದಲ್ಲಿ  ಹಾಕಲು ಅವಕಾಶ ಮಾಡಿಕೊಡಿ. ನಮ್ಮನ್ನು ನಮ್ಮ ವಂಶದವರೊಂದಿಗೆ ಸೇರಲು ಅನುವು ಮಾಡಿಕೊಡಿ” ಎಂದು ಇರುಳಿಗರು ಸರಕಾರದ ಮುಂದೆ ಅಂಗಲಾಚುತ್ತಿದ್ದಾರೆ. ಆದರೆ ಈ ಗೋಳಿನ ಕೂಗು ಅರಣ್ಯಕ್ಕೆ ಸೀಮಿತವಾಗಿ ಅರಣ್ಯರೋಧನವಾಗಿದೆ.

ಅರಣ್ಯದಿಂದ ಹೊರದಬ್ಬಲ್ಪಟ್ಟ  ಇರುಳಿಗರು ಜೀವನಕ್ಕಾಗಿ ಊರು ಊರು ಅಲೆಯುತ್ತಿದ್ದಾರೆ. ಇಂದಿಗೂ ರಾಮನಗರ ಜಿಲ್ಲೆಯ ಬೆಟ್ಟ, ಗುಡ್ಡ, ಗವಿ-ಗುಡಾರದಲ್ಲಿ ವಾಸಿಸುತ್ತಿದ್ದಾರೆ. ರಾಮನಗರ ಜಿಲ್ಲೆಯ ಕೈಲಾಂಚ ಹೋಬಳಿಯ ಅವ್ವೇರಹಳ್ಳಿಯ ರೇವಣಸಿದ್ಧೇಶ್ವರ ಬೆಟ್ಟದ ಬುಡದಲ್ಲಿರುವ ಹಾಸು ಬಂಡೆಯ ಮೇಲೆ ಸುಮಾರು ತಿಂಗಳಿನಿಂದ ಇರುಳಿಗ ಕುಟುಂಬಗಳು ಹಸುಗೂಸುಗಳೊಂದಿಗೆ ವಾಸಿಸುತ್ತಿರುವ ದೃಶ್ಯ ಮನಕಲಕುವಂತಿದೆ. ಪ್ರತಿ ದಿನ ಊರ ಜನರ ಜಮೀನಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಬರುವ ಇವರು ರಾತ್ರಿ ಸಮಯಕ್ಕೆ ಸರಿಯಾಗಿ ಈ ಅರೇಕಲ್ಲಿನ ಮೇಲಕ್ಕೆ ಬಂದು ಸೇರುತ್ತಾರೆ. ಅಲ್ಲೆ ಊಟ ತಿಂಡಿ ಮಾಡಿಕೊಂಡು ರಾತ್ರಿ ಕಳೆಯುತ್ತಾರೆ. ಹಾಗೊಮ್ಮೆ ಮಳೆ ಬಂದರೆ ಅಲ್ಲೆ ಹತ್ತಿರ ಇರುವ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಯ ಹೊರಗಡೆ ಮಲಗುವುದಾಗಿ ಹೇಳುತ್ತಾರೆ. ಬೆಳಿಗ್ಗೆ ಎದ್ದು ಎಂದಿನಂತೆ ಕೂಲಿಗೆ ಹೋಗುವುದೇ ಇವರ ಕಾಯಕವಾಗಿದೆ. ಕೂಲಿ ಕೆಲಸ ಮಾಡಿಸಿಕೊಳ್ಳುವ ಧಣಿಗಳೂ ತಮ್ಮ ಹೊಲದ ಹತ್ತಿರ ಇರಲು ಅವಕಾಶ ಮಾಡಿಕೊಟ್ಟರೆ ಜೋಪಡಿಗಳನ್ನು ಕಟ್ಟಿಕೊಂಡು ಬದುಕುತ್ತಾರೆ. ಗುಡಿಸಲು ಹಾಕಿಕೊಳ್ಳಲು ಅವಕಾಶ ಮಾಡಿಕೊಟ್ಟ ಜಮೀನು ಮಾಲೀಕನ ಮನೆ, ಹೊಲ ಗದ್ದೆಯಲ್ಲಿ ಉಚಿತವಾಗಿ ದುಡಿಯುತ್ತಾರೆ. ಇದಕ್ಕೆ ಪ್ರತಿಯಾಗಿ ಅವನು ರಾತ್ರಿಯಲ್ಲಿ ಎಣ್ಣೆ ಕೊಡಿಸುತ್ತಾನೆ. (ನವ ಮಾದರಿಯ ಜೀತಗಾರಿಕೆ).

ಇವರೇ ಹೇಳುವಂತೆ “ಒಂದು ನೆಲೆ ಇಲ್ಲದ ನಮ್ಮ ಜೀವ್ನ ಊರಿಂದ ಊರು ತಿರುಗುವುದೇ ಆಗಿದೆ. ನಮಗೆ ಅಂತ ಒಂದು ನೆಲೆ ಇಲ್ಲಾ. ನಮ್ಮ ಸಂಬಂಧಿಕರು ಕೂಡ ಇಲ್ಲೆ ಪಕ್ಕದ ಹರೆಕಲ್ಲಿನ ಮೇಲೆ ಜೀವ್ನ ಮಾಡುತ್ತಿದ್ದಾರೆ. ನಮ್ಮಂಗೆ ಇನ್ನೂ ಸುಮಾರು ಕುಟುಂಬ ಇಡೀ ನಮ್ಮ ಜಿಲ್ಲೆಯ ಬೆಟ್ಟಗುಡ್ಡಗಳಲ್ಲಿ  ವಾಸ ಮಾಡ್ತವ್ರೆ. ನಮಗ್ಯಾರು ಇದ್ದಾರೆ ಸ್ವಾಮಿ? ಒಂದು ನೆಲೆ ಇಲ್ಲ, ಒಂದು ಗುರುತು ಇಲ್ಲ. ಮಾಗಡಿ ತಾಲ್ಲೂಕು ಮತ್ತದರ ಹತ್ತಿರ ಸ್ವಲ್ಪ ದಿನ ಇದ್ವಿ. ಮಾಲೀಕರು ಅವರ ಕೆಲಸ ಮಾಡಿಸ್ಕೊಂಡ್ರು. ಮುಗಿದ ಮೇಲೆ ನಮ್ಮನ್ನು ಓಡಿಸಿದ್ರೂ. ಈಗ ಇಲ್ಲಿಗೆ ಬಂದಿವಿ. ಇವ್ರು ಓಡಿಸಿದ್ರೆ ಮುಂದೂರು ನೋಡ್ಕೋತೀವಿ. ಇತ್ತೀಚಿಗಂತೂ ನಮ್ಮನ್ನು ಯಾರೂ ಮನೆ, ಮಠ-ದೇವಸ್ಥಾನಗಳ ಹತ್ತಿರ ಬಿಟ್ಟುಕೊಳ್ಳುತ್ತಿಲ್ಲ. ಅದಕ್ಕೆ ಈ ಹುಲಿ ಕರಡಿಗಳು ವಾಸಮಾಡುವ  ಜಾಗದಲ್ಲಿ ಇದೀವಿ. ಬೆಳಿಗ್ಗೆ ಹೇಗೋ ಆಗುತ್ತೆ. ಆದರೆ ಜೀವ ಕೈಲಿ ಹಿಡಿದು ಬದುಕುತ್ತೀವಿ ರಾತ್ರಿ ಸಮಯದಲ್ಲಿ ಕರಡಿ, ಮಟ್ಕಾ(ಹುಲಿ) ನಮ್ಮ ಹತ್ತಿರಕ್ಕೆ ಬತ್ತವೆ, ನಾವು ಶಬ್ದಾಗಿಬ್ದಾ ಮಾಡ್ತಿವಿ, ಇಲ್ಲಾ ಬೆಂಕಿ ಹಚ್ಚಿ ಓಡಿಸ್ತೀವಿ. ಹಿಂಗೆ ಮಾಡ್ಕೊಂಡು  ದಿನ ಕಳಿತಾ ಇದ್ದೀವಿ” ಎಂದು ಮುನಿಯಮ್ಮ ಮಡಿಲಲ್ಲಿ ಐದು ತಿಂಗಳ ಹಸುಗೂಸನ್ನು ಹಿಡಿದುಕೊಂಡು ತನ್ನ ನೋವನ್ನು ತೋಡಿಕೊಳ್ಳುತ್ತಾಳೆ. ಇನ್ನು ಮಾಗಡಿ ತಾಲ್ಲೂಕಿನ ಹೂಜಿಗಲ್ಲು ಬೆಟ್ಟದ ಮೇಲೆ ಸುಮಾರು ಹತ್ತರಿಂದ ಹದಿನೈದು ಕುಟುಂಬಗಳು ಇವತ್ತಿಗೂ ಕುಡಿಯೋ ನೀರು, ವಿದ್ಯುತ್ ದೀಪ ಇತರೆ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದೆ ಹಳ್ಳದ ನೀರು ಕುಡಿದುಕೊಂಡು ಆದಿಮಾನವರಂತೆ ಬದುಕುತ್ತಿದ್ದಾರೆ.

 ಇದು ಕಣ್ಣಿಗೆ ಬಿದ್ದ ಇರುಳಿಗರ   ಕಥೆಗಳಾದರೆ ಇನ್ನೂ ಎಷ್ಟೋ ಇರುಳಿಗರು ಕಬ್ಬಾಳು ಬೆಟ್ಟ ಸಾವನದುರ‍್ಗ ಬೆಟ್ಟ, ರೇವಣಸಿದ್ದೇಶ್ವರ ಬೆಟ್ಟ, ರಾಮದೇವರ ಬೆಟ್ಟ ಹಾಗೂ ಮದುಗಿರಿಯ ಬೆಟ್ಟಗಳಲ್ಲಿ ಅದಿಮಾನವರಂತೆ ಬದುಕುತ್ತಿದ್ದಾರೆ. ಕೆಲವು ಇರುಳಿಗರು ಇಟ್ಟಿಗೆ ಫ್ಯಾಕ್ಟರಿ, ರೇಷ್ಮೆಗೂಡು ಬೇಯಿಸುವ ಕಾರ್ಖಾನೆಗಳಲ್ಲಿ  ಜೀತದಾಳುಗಳಾಗಿ ಬದುಕುತ್ತಿರುವುದನ್ನು ಜಿಲ್ಲೆಯಾದ್ಯಂತ ಕಾಣಬಹುದು. ಮತ್ತೆ ಕೆಲವರು ಖಾಲಿ ಬಾಟಲಿ ಪೇಪರ್ ಆಯ್ದುಕೊಂಡು ಬದುಕುತ್ತಿದ್ದಾರೆ. ವಿಶೇಷ ಎಂದರೆ ರಾಮನಗರ ಜಿಲ್ಲೆಯಲ್ಲೆ ಎಸ್.ಟಿ ಜನಾಂಗದಲ್ಲಿ ಬಹುಸಂಖ್ಯಾತರು ಇರುಳಿಗರೇ ಆಗಿದ್ದರೂ ಇವರಿಗೆ ಯಾವುದೆ ರಾಜಕೀಯ ಮತ್ತು ಸರಕಾರದ ಯೋಜನೆಗಳು ಸಿಗುತ್ತಿಲ್ಲ. ಕಾರಣ ಆಳುವ  ರಾಜಕಾರಣಿಗಳು ಹಾಗೂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ. ಇವತ್ತಿನ  ಡಿಜಿಟಲ್ ಪ್ರಜಾಪ್ರಭುತ್ವದ  ಭಾರತದಲ್ಲಿ ಒಂದು ನೆಲೆ ಇಲ್ಲದೆ  ಊರು ಊರು ಸುತ್ತಿ ಬಂಡೆಕಲ್ಲಿನ ಮೇಲೆ ಆದಿಮಾನವರ ರೀತಿಯಲ್ಲಿ ಜೀವನ ಸಾಗಿಸುತ್ತಿರುವ ಇರುಳಿಗರಿಗೆ ಈ ದೇಶದ ನಾಗರಿಕರು ಎಂದು ಹೇಳಿಕೊಳ್ಳಲು ಬೇಕಾದ ಯಾವುದೆ ಸರ್ಕಾರಿ ದಾಖಲೆಗಳು ಇಲ್ಲ.

ಇಡೀ ವಿಶ್ವವೇ ಭಾರತದತ್ತ ನೋಡುತ್ತಿದೆ, ಗುಡಿಸಲು ಮುಕ್ತ ಭಾರತ, ಗುಡಿಸಲು ಮುಕ್ತ ಕರ್ನಾಟಕ ಎಂದು ಬೊಬ್ಬೆ ಹೊಡೆಯುತ್ತಾ, ನಾವು ಭಾರತವನ್ನು  ಗುಡಿಸಲು ಮುಕ್ತ ದೇಶವಾಗಿಸಿದ್ದೇವೆ ಎಂದು ಸ್ವ ಘೋಷಿಸಿಕೊಂಡ ಆಳುವ ಸರ್ಕಾರಗಳು ಇಂದಿಗೂ ಹೊತ್ತಿನ ಊಟಕ್ಕೆ ಹಾಗೂ ಒಂದಡಿ ಸೂರಿಗಾಗಿ ಪರಿತಪಿಸುತ್ತಿರುವ ಇರುಳಿಗ  ಸಮುದಾಯದಂತ ಶೋಷಿತ ಮತ್ತು ಅಲ್ಪಸಂಖ್ಯಾತರನ್ನು ತಮ್ಮಂತೆ ಮನುಷ್ಯರು ಅಂದುಕೊಳ್ಳದೆ ಇರುವುದೇ ವಿಪರ್ಯಾಸ. ಈ ನಡುವೆ  ಜಿಲ್ಲೆಗಳಲ್ಲಿ  ಇರುಳಿಗರು ಇದ್ದಾರೆಯೇ? ಇವರ ಪರಿಸ್ಥಿತಿ ಹೀಗಿದೆಯಾ? ಎಂದು ಕೇಳಿ ಆಶ್ಚರ್ಯ ಪಡುವ ಅಧಿಕಾರಿಗಳು ನಮ್ಮಲ್ಲಿದ್ದಾರೆ. ಒಂದು ತಲೆಮಾರಿನಿಂದ ನಾವು ಹೀಗೆ ಕಾಲ ಕಳೆಯುತ್ತಿದ್ದೇವೆ.  ನಮ್ಮ ಮಕ್ಕಳನ್ನು ಎಲ್ಲರಂತೆ ಶಾಲೆಗೆ ಕಳುಹಿಸುವ ತವಕ ಇದೆ. ಏನು ಮಾಡೋದು? ನಮ್ಮ ಬದುಕು ಹೀಗೆ ಇದೆ.  ಬೆಳಿಗ್ಗೆ ಹೇಗೋ ಕೂಲಿ ಮಾಡುವ ಜಾಗದಲ್ಲಿ ಜೀವನ ನಡೆಯುತ್ತದೆ. ಆದರೆ ರಾತ್ರಿ ಸಮಯದಲ್ಲಿ ಜೀವ ಕೈಲಿ ಇಟ್ಟುಕೊಂಡು ಬದುಕುತ್ತಿದ್ದೇವೆ.  ನಮ್ಮ ಚಿಕ್ಕ ಮಕ್ಕಳ ಬಗ್ಗೆ ನಮಗೆ ಹೆಚ್ಚು ಭಯ ಇದೆ, ಅವಕ್ಕೆ ಸರಿಯಾಗಿ ಹೊಟ್ಟೆಗೆ ಕೊಡಲು ಆಗುತ್ತಿಲ್ಲ. ನಮ್ಮ ದುಡಿಮೆ ನಮಗೆ ಸಾಕಾಗುತ್ತಿಲ್ಲ, ಏನ್ ಮಾಡೋದು ಗೊತ್ತಿಲ್ಲ. ಇದರ ಮಧ್ಯೆ ಪೊಲೀಸ್ ಇಲಾಖೆ ನಮ್ಮನ್ನು ಇಂದಿಗೂ ಬ್ರಿಟಿಷ್ ಧೋರಣೆಯಿಂದ ನೋಡುತ್ತಾ ಎಲ್ಲೇ  ಅಪರಾಧ ನಡೆದರೂ ನಮ್ಮನ್ನೆ ಹೊಣೆ ಮಾಡುತ್ತಿದ್ದಾರೆ, ಉಳ್ಳವರು ನಮ್ಮ ಮೇಲೆ ಷಡ್ಯಂತ್ರ ಮಾಡಿ ಕೇಸ್ ಹಾಕಿಸಿ ಎಂ.ಒ.ಬಿ .ಲಿಸ್ಟ್ ನಲ್ಲಿ ಇರಿಸುವಂತೆ ಮಾಡಿದ್ದು ಈಗ ಪೊಲೀಸರು ನಮ್ಮನ್ನು ಸದಾ ಅನುಮಾನದ ರೀತಿಯಲ್ಲೆ  ನೋಡುತ್ತಿದ್ದಾರೆ. ನಾವು ನಿಮ್ಮಲ್ಲಿ ಕೈಮುಗಿದು ಕೇಳಿಕೊಳ್ಳುತ್ತೇವೆ, ನಮಗೆ ಒಂದು ಸೂರು ಕೊಡಿ ಜೊತೆಗೆ ಎಲ್ಲರಂತೆ ನಾವು ಬದುಕಲು ಅವಕಾಶ ಮಾಡಿಕೊಡಿ ಎಂದು ಹಂಬಲಿಸುತ್ತಿದ್ದಾರೆ .

ಆದ್ದರಿಂದ, ಸರ್ಕಾರ ಮತ್ತು ಮಾನ್ಯ ಸಚಿವರು ಕೂಡಲೇ ಇದನ್ನು ಗಮನಿಸಿ ಇರುಳಿಗರಿಗೆ ವಿಶೇಷ ಪ್ಯಾಕೆಜ್ ನೀಡಬೇಕು, ಒಂದು ಆಯೋಗ ರಚನೆ ಮಾಡಿ ವರದಿ ಪಡೆದು ಈ ಕುಟುಂಬಗಳಿಗೆ ನ್ಯಾಯ ಒದಗಿಸುವುದರೊಂದಿಗೆ  ರಕ್ಷಣೆ ಮತ್ತು ಮೂಲಭೂತ ಸೌಕರ್ಯಗಳನ್ನು ಕೊಡಿಸಬೇಕೆಂದು ವಿನಂತಿಸಿಕೊಳ್ಳತ್ತೇನೆ.

 ಡಾ. ಕೃಷ್ಣಮೂರ್ತಿ ಕೆ.ವಿ. ಇರುಳಿಗ

 ಇರುಳಿಗ ಸಮುದಾಯದ ಮೊದಲ ಸಂಶೋಧಕ

 ಮೊ : 9731694643

ಇದನ್ನೂ ಓದಿ-ವಿಶ್ವ ಆದಿವಾಸಿ ದಿನಾಚರಣೆ ವಿಶೇಷ | ಆದಿವಾಸಿ ಸಮಾಜದ ಸಾಂಸ್ಕೃತಿಕ ಅನನ್ಯತೆಗಳು

Related Articles

ಇತ್ತೀಚಿನ ಸುದ್ದಿಗಳು