Monday, June 17, 2024

ಸತ್ಯ | ನ್ಯಾಯ |ಧರ್ಮ

ಸೂರ್ಯನ ಮೇಲೆ ಇಳಿಯಲಿದ್ದಾನೆಯೇ ಆದಿತ್ಯ-L1?

ಯಶಸ್ವಿ ಚಂದ್ರಯಾನ-3 ರ ನಂತರ ಈಗ ಇಸ್ರೋ (Indian Space Research Organisation – ISRO) ಸೂರ್ಯನ ಮೇಲೆ ತನ್ನ ಕಣ್ಣಿಟ್ಟಿದೆ. ತನ್ನ ಮೊದಲ ಸೌರ ಮಿಷನ್ ಆದಿತ್ಯ-ಎಲ್ 1 (Aditya-L1) ಅನ್ನು ಉಡಾವಣೆ ಮಾಡಿದೆ. ಈ ಸಂದರ್ಭದಲ್ಲಿ ಈ ಬಾಹ್ಯಾಕಾಶ ನೌಕೆ ಸೂರ್ಯನ (sun) ಮೇಲೆ “ಇಳಿಯುತ್ತದೆಯೇ” ಎಂಬ ಪ್ರಶ್ನೆಯನ್ನು ಹೆಚ್ಚು ಜನ ಕೇಳಿದ್ದಾರೆ.

ಸೂರ್ಯನ ಬಗ್ಗೆ ಅಧ್ಯಯನ ನಡೆಸಲು ಆದಿತ್ಯ-ಎಲ್1 ಅನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ದೇಶದ ಪ್ರಮುಖ ಬಾಹ್ಯಾಕಾಶ ನಿಲ್ದಾಣದಿಂದ ಬೆಳಿಗ್ಗೆ 11:50 ಕ್ಕೆ ಉಡಾವಣೆ ಮಾಡಲಾಗಿದೆ.

ದೂರದಿಂದಲೇ ಸೂರ್ಯನ ಕರೋನದ (Solar Corona) ಬಗ್ಗೆ ಮತ್ತು ಸೂರ್ಯನ ಮೇಲೆ ಬೀಸುವ ಸೌರ ಗಾಳಿಯ ಬಗ್ಗೆ ಸಂಶೋಧನೆ ನಡೆಸಲು ಈ ಮಿಷನನ್ನು ವಿನ್ಯಾಸಗೊಳಿಸಲಾಗಿದೆ. ವಿಸಿಬಲ್ ಎಮಿಷನ್ ಲೈನ್ ಕರೋನಾಗ್ರಾಫ್ (Visible Emission Line Coronagraph – VELC) ಆದಿತ್ಯ L1 ನ ಪ್ರಾಥಮಿಕ ಪೇಲೋಡ್ ನಿಗದಿಪಡಿಸಿದ ಕಕ್ಷೆಯನ್ನು ತಲುಪಿದ ನಂತರ ಪ್ರತಿ ದಿನ 1,440 ಚಿತ್ರಗಳನ್ನು ಭೂಮಿಗೆ ಕಳುಹಿಸಲಿದೆ.

ಆದಿತ್ಯ-ಎಲ್1 ಸೂರ್ಯನ ಮೇಲೆ ಲ್ಯಾಂಡ್‌ ಆಗಲಿದೆಯೇ?

ಆದಿತ್ಯ-L1 ಮಿಷನ್ ಸೂರ್ಯನ ಮೇಲೆ ಲ್ಯಾಂಡ್‌ ಆಗುವುದಿಲ್ಲ. ಉರಿಯುತ್ತಿರುವ ಸೂರ್ಯನ ತಾಪಮಾನಕ್ಕೆ ಇದು ಸಾಧ್ಯವಿಲ್ಲದ ಕೆಲಸ. ಹಾಗಾಗಿ ಇದನ್ನು ಸೂರ್ಯ-ಭೂಮಿ ವ್ಯವಸ್ಥೆಯ (Sun-Earth system) ಕಕ್ಷೆಯಲ್ಲಿ ಇರಿಸಲಾಗುತ್ತದೆ. ವಿದ್ಯುತ್ಕಾಂತೀಯ ಕಣ (electromagnetic particle) ಮತ್ತು ಕಾಂತೀಯ ಕ್ಷೇತ್ರ ಶೋಧಕಗಳನ್ನು (magnetic field detectors) ಬಳಸಿಕೊಂಡು ದ್ಯುತಿಗೋಳ (photosphere), ವರ್ಣಗೋಳ (chromosphere) ಮತ್ತು ಸೂರ್ಯನ ಹೊರಗಿನ ಪದರಗಳನ್ನು (ಕರೋನಾ) ವೀಕ್ಷಿಸಲು ಬಾಹ್ಯಾಕಾಶ ನೌಕೆಯು ಭೂಮಿಗೆ ಸೂರ್ಯನ ಮಾಹಿತಿಗಳನ್ನು ಕಳಿಸುವ ಏಳು ಪೇಲೋಡ್‌ಗಳನ್ನು ಒಯ್ಯುತ್ತದೆ.

ಆದಿತ್ಯ-L1 ಅನ್ನು ಲಗ್ರಾಂಜಿಯನ್ ಪಾಯಿಂಟ್ 1 (L1) (Lagrangian Point 1 -L1) ಸುತ್ತ ಹಾಲೋ ಕಕ್ಷೆಯಲ್ಲಿ (halo orbit) ಇರಿಸಲಾಗುವುದು. ಇದು ಸೂರ್ಯನ ದಿಕ್ಕಿನಲ್ಲಿ ಭೂಮಿಯಿಂದ 1.5 ಮಿಲಿಯನ್ ಕಿ.ಮೀ ದೂರ ಇದೆ. ಉಪಗ್ರಹ ಮತ್ತು ಪೇಲೋಡ್‌ಗಳು ಅದೇ ಸಾಪೇಕ್ಷ ಸ್ಥಾನದೊಂದಿಗೆ (relative position) ಸೂರ್ಯನ ಸುತ್ತ ಸುತ್ತುತ್ತಾ, ಯಾವುದೇ ಗ್ರಹಣಗಳಿಲ್ಲದೆ ಸೂರ್ಯನನ್ನು ನಿರಂತರವಾಗಿ ಗಮನಿಸಲಿದೆ. ಇದು ಸೂರ್ಯನಲ್ಲಿ ನಡೆಯುವ ಕ್ರಿಯೆಗಳು ಹಾಗೂ ಬಾಹ್ಯಾಕಾಶ ಹವಾಮಾನದ ಮೇಲೆ ಅವುಗಳ ಪರಿಣಾಮವನ್ನು ತಿಳಿಯಲು ಸಹಾಯ ಮಾಡಲಿದೆ.

Related Articles

ಇತ್ತೀಚಿನ ಸುದ್ದಿಗಳು