Monday, June 17, 2024

ಸತ್ಯ | ನ್ಯಾಯ |ಧರ್ಮ

ನಿಜಕ್ಕೂ ಕರ್ನಾಟಕದ ಮೇಲೆ ಬಿಜೆಪಿ ಸೇಡು ತೀರಿಸಿಕೊಳ್ಳುತ್ತಿದೆಯೇ? ಈ ಸ್ಟೋರಿ ಓದಿ

‘ಕರ್ನಾಟಕದ ಬಹುಕಾಲದ ಬೇಡಿಕೆಯಾದ ಏಮ್ಸ್ ಸಂಸ್ಥೆ, ಸಬ್ ಅರ್ಬನ್ ರೈಲು ಈಗಲೂ ಕನ್ನಡಿಗರಿಗೆ ಕನಸಾಗಿಯೇ ಉಳಿದಿದೆ. ಕನ್ನಡಿಗರು ಶ್ರಮವಹಿಸಿ ಕಟ್ಟಿದ ಬ್ಯಾಂಕುಗಳು ವಿಲೀನದ ಹೆಸರಲ್ಲಿ ನಮ್ಮವರ ಪಾಲಿಗೆ ಇಲ್ಲವಾಗಿವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.

ಪ್ರಮುಖ ಗಂಭೀರ ಪ್ರಶ್ನೆಗಳನ್ನು ಎತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕದ ಪಾಲಿಗೆ ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯ ಬಗ್ಗೆ ತಮ್ಮ ‘X’ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಉಲ್ಲೇಖಿಸಿ ವಿಚಾರಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊಟ್ಟ ಭರವಸೆ ಈಡೇರಿಸದೇ ಉಳಿದ ಯೋಜನೆಗಳು, ಕನ್ನಡಿಗರಿಗೆ ಆದ ನಿಜವಾದ ಅನ್ಯಾಯದ ಬಗ್ಗೆ ದನಿ ಎತ್ತಿದ್ದಾರೆ.

ವಿಶೇಷವಾಗಿ ಕನ್ನಡಿಗರೇ ಕಟ್ಟಿ ಬೆಳೆಸಿದ ಕರ್ನಾಟಕ ಮೂಲದ ಬ್ಯಾಂಕ್ ಗಳು ವಿಲೀನದ ಹೆಸರಿನಲ್ಲಿ ಕನ್ನಡಿಗರ ಕೈಯಲ್ಲಿ ಇಲ್ಲದಂತೆ ಮಾಡಿರುವ ಕೇಂದ್ರ ಸರ್ಕಾರದ ನಡೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದಾರೆ. ಇದು ಕೇಂದ್ರ ಸರ್ಕಾರ ಕರ್ನಾಟಕದ ಮೇಲೆ ಸಾಧಿಸುತ್ತಿರುವ ಸೇಡಿನ ರಾಜಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

‘ಬೆಂಗಳೂರು ನಗರದ ಜನರಿಗೆ ಸುಗಮ ಸಂಚಾರ ಸೌಲಭ್ಯ ಕಲ್ಪಿಸುವ ಸಬ್ ಅರ್ಬನ್ ರೈಲು ಯೋಜನೆಯು ಕೇಂದ್ರ ಸರ್ಕಾರದ ಅನುದಾನವಿಲ್ಲದೆ ಇನ್ನೂ ಕನ್ನಡಿಗರ ಕನಸಾಗಿಯೇ ಉಳಿದಿದೆ. ಪ್ರಧಾನಿ ನರೇಂದ್ರ ಮೋದಿಯವರೇ, ಯಾಕೆ ಕನ್ನಡಿಗರಿಗೆ ಭರವಸೆ ನೀಡಿ ಈ ರೀತಿ ಪದೇ ಪದೇ ವಂಚಿಸುತ್ತಿದ್ದೀರಿ? ಎಂದು ಬಿಜೆಪಿ ಸರ್ಕಾರ ಮತ್ತು ನರೇಂದ್ರ ಮೋದಿಯವರನ್ನು ಪ್ರಶ್ನಿಸಿದ್ದಾರೆ.

ನಂತರದ ಟ್ವಿಟ್ ನಲ್ಲಿ ಏಮ್ಸ್ ಸಂಸ್ಥೆ ವಿಚಾರವಾಗಿ ಪ್ರಸ್ತಾಪಿಸಿ, ‘ಹುಬ್ಬಳ್ಳಿ- ಧಾರವಾಡದಲ್ಲಿ ಏಮ್ಸ್ ಸ್ಥಾಪನೆಗೆ ಕೇಂದ್ರ ಸರ್ಕಾರದ ಆರೋಗ್ಯ ಸಚಿವರು ಸಮ್ಮತಿಸಿದ್ದಾರೆ ಎಂದು 2022ರಲ್ಲಿ ರಾಜ್ಯದ ಬಿಜೆಪಿ ಸರ್ಕಾರ ಕನ್ನಡಿಗರ ಕಿವಿಗೆ ಹೂವಿಟ್ಟಿತ್ತು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವೆ ಭಾರತಿ ಪ್ರವೀಣ್ ಅವರು 2023ರ ಆಗಸ್ಟ್ ನಲ್ಲಿ ರಾಜ್ಯಸಭೆಗೆ ನೀಡಿರುವ ಉತ್ತರದಲ್ಲಿ ಕರ್ನಾಟಕದಲ್ಲಿ ಏಮ್ಸ್ ಸ್ಥಾಪನೆಯ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಅಂಗೀಕರಿಸಿಲ್ಲ ಎಂದಿದ್ದಾರೆ’ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

‘ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಒತ್ತಾಯಿಸಿ ಎರಡೆರಡು ಬಾರಿ ನಿಮ್ಮ ಸರ್ಕಾರದ ಸಚಿವರಿಗೆ ಪತ್ರ ಬರೆದಿದ್ದೆ, ಈ ವರೆಗೆ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ. ಬೆಂಗಳೂರಿಗೆ ಮಂಜೂರಾದ ಏಮ್ಸ್ ಸಂಸ್ಥೆ ಕೇಂದ್ರ ಸರ್ಕಾರದ ಅನುದಾನ ಕಾಣದೆ ಘೋಷಣೆಗಷ್ಟೇ ಸೀಮಿತವಾಗಿದೆ. ಕರ್ನಾಟಕಕ್ಕೆ ಮಾತ್ರ ಯಾಕೆ ಈ ಅನ್ಯಾಯ?’ ಎಂದು ತಮ್ಮ ಸರಣಿ ಟ್ವೀಟ್ ಮೂಲಕ ಕೇಂದ್ರ ಬಿಜೆಪಿ ಸರ್ಕಾರ ಮತ್ತು ನರೇಂದ್ರ ಮೋದಿಯವರನ್ನು ಪ್ರಶ್ನಿಸಿದ್ದಾರೆ.

ದಶಕಗಳ ಕಾಲ ಕನ್ನಡಿಗರು ಬೆವರು ಹರಿಸಿ ಕಟ್ಟಿದ ವಿಜಯಾ ಬ್ಯಾಂಕ್‌, ಕಾರ್ಪೊರೇಷನ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಹಾಗೂ ಸಿಂಡಿಕೇಟ್ ಬ್ಯಾಂಕ್ ಗಳನ್ನು ವಿಲೀನದ ಹೆಸರಿನಲ್ಲಿ ಆಪೋಶನ ತೆಗೆದುಕೊಂಡಿದ್ದು ನೀವೇ ಅಲ್ಲವೇ ನರೇಂದ್ರ ಮೋದಿಯವರೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದಾರೆ.

‘ಮೊದಲು ಈ ಬ್ಯಾಂಕುಗಳಲ್ಲಿ ವ್ಯವಹರಿಸುವಾಗ ನಮ್ಮವರು ಕಟ್ಟಿದ ಸಂಸ್ಥೆ ಎಂಬ ಹೆಮ್ಮೆ ಕನ್ನಡಿಗರಿಗಿತ್ತು, ಈಗ ಅವು ಕರುನಾಡೊಂದಿಗಿನ ಸಂಬಂಧ ಕಡಿದುಕೊಂಡು ಸಂಪೂರ್ಣ ಬದಲಾಗಿವೆ. ನಮ್ಮವರಿಗೆ ಮಾತ್ರ ಯಾಕೆ ಈ ಅನ್ಯಾಯ?’ ಎಂದು ಬ್ಯಾಂಕುಗಳ ವಿಲೀನದ ಬಗ್ಗೆ ಪ್ರಸ್ತಾಪಿಸಿ ಕೇಂದ್ರ ಸರ್ಕಾರಕ್ಕೆ ಗಂಭೀರ ಪ್ರಶ್ನೆ ಎತ್ತಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು