ಟೌನ್‌ಶಿಪ್ ಹೆಸರಿನಲ್ಲಿ ಹಣ ಗಳಿಸಲು ರೈತರ ಭೂಮಿ ಬೇಕೇ – ಎಚ್.ಡಿ ಕುಮಾರಸ್ವಾಮಿ

ನವದೆಹಲಿ: ಬಿಡದಿ ಟೌನ್‌ಶಿಪ್ ಯೋಜನೆ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಬಿಡದಿ ಟೌನ್‌ಶಿಪ್‌ಗಾಗಿ ಸರ್ಕಾರ ಏಕೆ ಇಷ್ಟೊಂದು ಹಠ ಮಾಡುತ್ತಿದೆ? ಟೌನ್‌ಶಿಪ್ ಹೆಸರಿನಲ್ಲಿ ಹಣ ಗಳಿಸಲು ರೈತರ ಭೂಮಿ ಬೇಕೇ?” ಎಂದು ಪ್ರಶ್ನಿಸಿದರು. ಬಿಡದಿ ಟೌನ್‌ಶಿಪ್‌ಗೆ ಭೂಮಿ ನೀಡಲು 19 ರೈತರು ಮಾತ್ರ ಒಪ್ಪಿದ್ದಾರೆ ಎಂದು ಹೇಳಿದ ಕುಮಾರಸ್ವಾಮಿ, ಒಪ್ಪಿರುವ ರೈತರ ಜಮೀನಿಗಿಂತ ಒಪ್ಪದ ರೈತರ ಭೂಮಿ ಎಷ್ಟು ಇದೆ ಎಂಬುದನ್ನು ಸರ್ಕಾರ ಗಮನಿಸಬೇಕು ಎಂದರು.

ತಮ್ಮ ವಿರುದ್ಧದ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಅವರು, “ನಾನು ತಪ್ಪು ಮಾಡಿದ್ದರೆ ದೂರಿನಲ್ಲಿ ನನ್ನ ಹೆಸರನ್ನು ಉಲ್ಲೇಖಿಸಬೇಕಿತ್ತು. ಆದರೆ ಪ್ರಚಾರಕ್ಕಾಗಿ ನನ್ನ ಹೆಸರನ್ನು ಬಳಸಲಾಗುತ್ತಿದೆ” ಎಂದು ಆರೋಪಿಸಿದರು.

ರಾಜ್ಯ ಸರ್ಕಾರದ ನಡೆ ಬಗ್ಗೆ ಟೀಕೆ ಮಾಡಿದ ಅವರು, ಜನರು ಸರ್ಕಾರದ ಕ್ರಮಗಳನ್ನು ಗಮನಿಸುತ್ತಿದ್ದಾರೆ ಎಂದರು. “ರೈತರನ್ನು ಸಂಕಷ್ಟಕ್ಕೆ ದೂಡಬೇಡಿ” ಎಂದು ಮನವಿ ಮಾಡಿದರು. ಮಂಡಲಹಳ್ಳಿಯಲ್ಲಿ ನಡೆದ ಪ್ರತಿಭಟನೆ ಕುರಿತು ಮಾತನಾಡಿದ ಅವರು, ಪ್ರತಿಭಟನೆಯಲ್ಲಿ ಮಹಿಳೆಯರೂ ಭಾಗವಹಿಸಿದ್ದರು. ದೂರುದಾರರಿಗೆ ಆ ಮಹಿಳೆಯರ ಹೆಸರುಗಳು ಹೇಗೆ ಗೊತ್ತಾಯಿತು ಎಂದು ಪ್ರಶ್ನಿಸಿದರು. ಇತ್ತೀಚೆಗೆ ದೆಹಲಿಗೆ ಬಂದು ಹೋದವರ ಹೆಸರುಗಳನ್ನು ದೂರಿನಲ್ಲಿ ಸೇರಿಸಲಾಗಿದೆ ಎಂದು ಆರೋಪಿಸಿದರು.

ಬಿಡದಿ ಟೌನ್‌ಶಿಪ್ ವಿರುದ್ಧ ರೈತರು ಶಾಂತಿಯುತ ಹೋರಾಟ ನಡೆಸಬೇಕು. ಅಗತ್ಯವಿದ್ದರೆ ನ್ಯಾಯಾಲಯದ ಮೂಲಕ ಹೋರಾಟ ಮುಂದುವರಿಸೋಣ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು