Sunday, June 23, 2024

ಸತ್ಯ | ನ್ಯಾಯ |ಧರ್ಮ

ಮಾಧ್ಯಮ ಭ್ರಷ್ಟಾಚಾರ: ಉಡುಗೊರೆ ತಿರಸ್ಕರಿಸಿದ್ದೂ ʼಪ್ರಾಮಾಣಿಕತೆʼಯ ನಾಟಕವೇ?

ಮಾಧ್ಯಮಗಳು ಭ್ರಷ್ಟಗೊಳ್ಳುವುದು, ಪತ್ರಕರ್ತರನ್ನು ಭ್ರಷ್ಟಗೊಳಿಸುವುದು ಯಾವುದೂ ಹೊಸತಲ್ಲ. ಮೊದಲೂ ಇತ್ತು, ಈಗಲೂ ಇದೆ. ಕಾಲ ಕಾಲಕ್ಕೆ ಎಲ್ಲ ಪಕ್ಷಗಳ ಎಲ್ಲ ರಾಜಕೀಯ ನಾಯಕರೂ ಅಧಿಕಾರಕ್ಕಾಗಿ ಪತ್ರಕರ್ತರನ್ನು ತಮ್ಮ ಶಕ್ತ್ಯಾನುಸಾರ ಭ್ರಷ್ಟಗೊಳಿಸಿದ್ದಾರೆ. ಸದ್ಯದ ದೀಪಾವಳಿ ಗಿಫ್ಟ್ ರೂಪದಲ್ಲಿ ಹಣ ಕಳುಹಿಸಿದ್ದು, ಇವತ್ತಿಗೆ ಹೊಸದು ಅಷ್ಟೆ. ಮಾಧ್ಯಮಗಳೇ  ಮುಂದೆ ನಿಂತು ಅಧಿಕಾರದಲ್ಲಿರುವವರ ಪರ ವಕಾಲತ್ತು ವಹಿಸುತ್ತಿರುವ ಕಾಲದಲ್ಲಿ, ಆಯ್ದ ಪತ್ರಕರ್ತರಿಗೆ ಗಿಫ್ಟ್ ರೂಪದಲ್ಲಿ ಹಣ ಕಳುಹಿಸಿದ್ದಾರೆಂದರೆ, ಇದರ ಹಿಂದೆ ಎರಡು ಕಾರಣಗಳಿರಬಹುದು. ಒಂದು, ಅಧಿಕಾರಸ್ಥರ ವಿರುದ್ಧ ಕೊಂಚ ಕಟುವಾಗಿ ಬರೆಯುತ್ತಿರುವವರು ಹಣ ಪಡೆದರೆ, ಪಡೆದದ್ದನ್ನೆ ಮಹಾಪರಾಧವೆಂದು ಬಿಂಬಿಸಿ, ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿಸಿ, ಆತ ಈ ಹಿಂದೆ ಬರೆದದ್ದೆಲ್ಲ ʻಇಷ್ಟೆʼ ಎಂದು ಆತನ ಚಾರಿತ್ರ್ಯಹರಣ ಮಾಡುವುದು. ಎರಡು, ಹಣ ತಿರಸ್ಕರಿಸಿದರೆ, ತಿಪ್ಪೇ ಸಾರಿಸಿ ಸುಮ್ಮನಾಗುವುದು.

ಇನ್ನು, ದಿನ ಬೆಳಗಾದರೆ, ಅಧಿಕಾರದಲ್ಲಿರುವ ಪಕ್ಷದ ಪರವಾಗಿ ತುತ್ತೂರಿ ಊದುತ್ತಿರುವವರೂ ಕೂಡ ಗಿಫ್ಟ್ ತಿರಸ್ಕರಿಸಿರುವುದು. ಇದರ ಹಿಂದೆಯೂ ಎರಡು ಕಾರಣಗಳಿರಬಹುದು. ಒಂದು, ನಿಮಗಾಗಿ ನಾವು ಹಗಲು ರಾತ್ರಿ ತಲೆಕೆಡಿಸಿಕೊಂಡು ದುಡಿಯುತ್ತಿದ್ದೇನೆ, ಆ ಶ್ರಮಕ್ಕೆ ಈ ಚಿಲ್ಲರೆ ಕಾಸೇ ಎಂದು ತಿರಸ್ಕರಿಸಿರಬಹುದು. ಎರಡು, ಕಂಠಮಟ್ಟ ತಿನ್ನುತ್ತಿರುವುದನ್ನು ಮುಚ್ಚಿಕೊಳ್ಳಲು ʻಪ್ರಾಮಾಣಿಕತೆʼಯ ನಾಟಕವಾಡಿರಬಹುದು. 

ಇವುಗಳ ನಡುವೆಯೇ, ಜನಪರವಾಗಿ, ಅಸಹಾಯಕರ ದನಿಯಾಗಿ, ಸಮಾಜಮುಖಿಯಾಗಿ ಯೋಚಿಸುವ, ಬರೆಯುವ ಪತ್ರಕರ್ತರೂ ಇದ್ದಾರೆ. ಅವರ ಸಂಖ್ಯೆ ಕಡಿಮೆ ಇರಬಹುದು. ಅವರು ಇವತ್ತಿನ ಆಸೆಬುರುಕ ಸಮಾಜಕ್ಕೆ ನಿಷ್ಪ್ಜಯೋಜಕರಂತೆ ಕಾಣಬಹುದು. ಆದರೆ ಅವರ ನಿಷ್ಠೆ, ನಿಯತ್ತು ಮತ್ತು ಪ್ರಾಮಾಣಿಕೆತೆ ಪತ್ರಿಕೋದ್ಯಮವನ್ನು ಉಳಿಸಿದೆ. ಇದು ಜನಕ್ಕೂ ತಿಳಿದಿದೆ. ತಿಳಿದೂ ಸುಮ್ಮನಿರುವುದು ಭ್ರಷ್ಟರು ಬೆಳೆಯಲು ಕಾರಣವಾಗಿದೆ.

(ಬಸವರಾಜು ಮೇಗಲಕೇರಿ ಅವರು ಹಿರಿಯ ಅನುಭವಿ ಪತ್ರಕರ್ತರು, ಲೇಖಕರು)

Related Articles

ಇತ್ತೀಚಿನ ಸುದ್ದಿಗಳು