Sunday, June 16, 2024

ಸತ್ಯ | ನ್ಯಾಯ |ಧರ್ಮ

ನಿಂಗ್ ಹುಡಿದೆ ಬಾಜು ಮನ್ಯಾಕಿಗಿ ಹುಡಿಲಿಕ್ಕೆ ಆಗತ್ತಾದೆನೂ…?

“ಮೊಡಮ್ಮೊರೆ ರಾತ್ರಿ ಕೊಂಡ (ಕುಡಿದು) ಬರ್ತಾರ, ಕೊಂಡ ಬಂದಾಗ ಹೊಡಿತ್ತಾರ ರೀ, ಮತ್ ಮುಂಜಾನೆ ಪ್ರೀತಿಂದ ಮಾತಾಡ್ತಾರೆ. ನಮಗೂ ಅದು ರೂಡಿಯಾಗ್ಯಾದ ಅವರಿಗಿ ಬಿಟ್ಟು ಹೋಗಲಿಕ್ಕೆ ಅಂತೂ ಬರಲ್ಲ “ ಅಂತ ಹೇಳತ್ತಾರೆ… ಯುವ ಲೇಖಕಿ ಪ್ರಿಯಾಂಕಾ ಮಾವಿನಕರ್ ಕೌಟುಂಬಿಕ ದೌರ್ಜನ್ಯದ ಕರಾಳ ಮುಖವೊಂದರ ಕುರಿತು ಬರೆಯುತ್ತಾರೆ.

ಗಂಡ ಹೆಂಡತಿ ಜಗಳ ಅಂದರೆ ಉಂಡು ಮಲಗುವವರೆಗೆ ಅನ್ನೋ ಗಾದೆ ನಮ್ಮ ಕಡೆ ಬಹಳ ಹೆಚ್ಚು ಬಳಕೆಯಲ್ಲಿದೆ. ಇನ್ನು ಹಳ್ಳಿಗಳಿಗೆ ಬಂದರೆ ವಯಸ್ಸಾದ  ಆಯಿಯಂದಿರು ( ಹೆಣ್ಣುಮಕ್ಕಳು)  ಹೇಳುವುದು  ಬೇರೆನೆ‌,  ಗಂಡ ಹೆಂಡ್ತಿ ಜಗಳ ಮಾಡ್ಕೊಂಡರೆ, ಗಂಡ ಆದವನು ಕುಡಿದು ಬಂದು ಹೆಂಡ್ತಿನ ಹೊಡಿದ್ರೆ  “ಐ ತಂಗಿ ಗಂಡ ಹನಯವ್ವ ಹುಡಿತ್ತಾನ, ನಿಂಗ್ ಹುಡಿದೆ ಬಾಜು ಮನ್ಯಾಕಿಗಿ ಹುಡಿಲಿಕ್ಕೆ ಆಗತ್ತಾದೆನೂ…? ಹುಡದ್ರೂ ಎಟು ಹುಡಿತ್ತಾನವ್ವ.. ಎರಡು ಹುಡಿತ್ತಾನ..  ಜೀವ ಅಂತೂ ತೆಗ್ಯಾಲ ಅಲ್ಲ.? ನೋಡ ತಂಗಿ ಎಟೆಯಾಗಲಿ ಅವನು ಗಂಡ ಹನಾ, ಗಂಡ ಇದ್ದುದ್ದೆ ಹೆಣ್ಣಿಗಿ ಸಿರಿ” ಅಂತ ಹೇಳಿ ಹೇಳಿನೇ ಹೆಣ್ಣುಮಕ್ಕಳು ಅಂದರೆ ಹಿಂಗೆ ಇರಬೇಕು ಹೊಡಿಸ್ಕೊಂಡು ಬಡಿಸ್ಕೊಂಡು ಬದುಕಬೇಕು ಅಂತಿದೆ. ಇದು ಈಗಿಂದಲ್ಲ ಹಿಂದಿನಿಂದಲೂ ಹೇಳಕೊಂಡು ಬಂದ‌ ಪದ್ಧತಿ. ಹೆಣ್ಣುಮಕ್ಕಳಿಗೂ ಕೂಡ  ಬದುಕ ಅಂದರೆ ಹಿಂಗೆ ಇರ್ತಾದ ಅಂತ ತಲೆಯಲ್ಲಿ ತುಂಬಿ ಬಿಟ್ಟಾರ.

ಆದರೆ ಎಷ್ಟು ದಿನ ಅಂತ ಹಿಂಗೆ ಹೊಡಿಸ್ಕೊಂಡು ಬಡಿಸ್ಕೊಂಡು ಹೆಣ್ಣುಮಕ್ಕಳು ಬದುಕುವುದು ಹೇಳ್ರಿ? ಗಂಡ ಹೆಂಡ್ತಿ ಜಗಳ ಮಕ್ಕಳ ಮೇಲೆ ಬೇರೆ ರೀತಿಯ ಪರಿಣಾಮ ಬೀರುತ್ತದೆ.  ಯಾಕೆಂದರೆ ಮಕ್ಕಳು ಏನ್ ನೋಡ್ತಾರೊ ಅದನ್ನೆ  ಅನುಕರಣೆ ಮಾಡ್ತಾರೆ. 

ಅಪ್ಪ ಕುಡಿದು ಬಂದು ಅವ್ವನ ಹೊಡಿತ್ತಿದ್ರಾ ಗಂಡು ಮಗು  ಅದನ್ನೆ ಕಲಿತಾನೆ. ಮತ್ತೆ  ನಾನು ಗಂಡು ಅನ್ನೊ ಅಹ್ಮ್ ಬೆಳಿಸ್ಕೊಳತ್ತಾನೆ.  ಹೊಡಿಯುವುದೆ ಗಂಡಸ್ತನ ಅನ್ನೊ ಬಿತ್ತಿದ ಬೀಜ ಮುಂದೆ ಮುಂದೆ ಹೆಮ್ಮರವಾಗಿ ಬೆಳೆಯುತ್ತದೆ, ಇನ್ನೂ ಹೆಣ್ಣು ಮಗು ಇದ್ದರೆ ಆ ಮಗು, ತಾಯಿ ಹೆಂಗ್ ಅಪ್ಪನ ಕೈಯಿಂದ ಹೊಡಿಸ್ಕೊಂಡು ಬಡಿಸ್ಕೊಂಡು ಬದುಕತ್ತಿದ್ದಳೊ.. ಇವಳು ಕೂಡ ಅದನ್ನೆ ಕಲಿಯುತ್ತಾಳೆ. ಗಂಡು ದೌರ್ಜನ್ಯ ಮಾಡಬೇಕು ಹೆಣ್ಣಾದವಳು ಸಹಿಸಿಕೊಂಡು ‌ಹೋಗಬೇಕು ಅನ್ನೊ ಈ ಪುರುಷ ಪ್ರಧಾನ ವ್ಯವಸ್ಥೆಯನ್ನ  ನಾವೆಲ್ಲರೂ ಮೊದಲು ಕಲಿಯುವುದೇ ನಮ್ಮ ನಮ್ಮ ಮನೆಗಳಿಂದ.

ಮೊದಲು ನಮ್ಮ ನಮ್ಮ ಮನೆಗಳಿಂದಲೇ‌  ಗಂಡು, ಹೆಣ್ಣು ಇಬ್ಬರೂ ಸಮಾನರು, ಇಬ್ಬರಿಗೂ ಒಂದೇ ರೀತಿಯ ಸ್ವಾತಂತ್ರ್ಯ ಇದೆ, ಶಿಕ್ಷಣದಲ್ಲಿ ಕೆಲಸದಲ್ಲಿ, ಸಾಮಾಜಿಕ ವ್ಯವಸ್ಥೆಯಲ್ಲಿ‌ ಹಾಗೂ ಮುಖ್ಯವಾಗಿ ಮನೆಯಲ್ಲಿ  ಅನ್ನುವುದನ್ನ ನಾವೆಲ್ಲರೂ ಅರ್ಥ ಮಾಡ್ಕೊಳ್ಳಬೇಕಿದೆ. ಯಾವ ಹುಡುಗ ತನ್ನ ತಾಯಿ, ಅಕ್ಕ, ತಂಗಿನ ಗೌರವಿಸುತ್ತಾನೊ, ಪ್ರೀತಿಸ್ತಾನೊ ಆ ಹುಡಗ ಸಮಾಜದಲ್ಲಿರುವ ಪ್ರತಿಯೊಂದು ಹೆಣ್ಣು ಮಗಳನ್ನು ಅಷ್ಟೇ ಗೌರವಿಸುತ್ತಾನೆ ಮತ್ತು ಪ್ರೀತಿಸುತ್ತಾನೆ. ಆಗ ಯಾವ ಹೆಣ್ಣುಮಗಳೂ ಕಣ್ಣೀರು ಹಾಕುವ ಪ್ರಮೇಯವೇ ಬರುವುದಿಲ್ಲ. 

ಈ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯರು ನಾನಾ ರೀತಿಯ  ದೌರ್ಜನ್ಯಕ್ಕೆ ಒಳಗಾಗುತ್ತಲೆ ಬಂದಿದ್ದಾರೆ. ಅದರಲ್ಲಿ ಮುಖ್ಯವಾಗಿ ಹೇಳಬೇಕೆಂದರೆ  ಕೌಟುಂಬಿಕ ದೌರ್ಜನ್ಯ. ಈ ಕೌಟುಂಬಿಕ ದೌರ್ಜನ್ಯವನ್ನು ತಡೆಗಟ್ಟುವ ಸಲುವಾಗಿ 2005 ರಲ್ಲಿ “ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಜಾರಿಯಾದರೂ ಕೂಡ ಇಲ್ಲಿಯವರೆಗೂ  ಜೀವಂತವಾಗಿದ್ದು ದುರಂತವೆ ಸರಿ.  

ಎಷ್ಟೇ ಓದಿ ಕೊಂಡು ದೊಡ್ಡ ದೊಡ್ಡ ಪದವಿ ಪಡೆದುಕೊಂಡು, ಉನ್ನತ ಹುದ್ದೆಯಲ್ಲಿದ್ದರೂ ಕೂಡ ಗಂಡಸು ಅನ್ನಿಸಿಕೊಂಡವನು ತನ್ನ  ಹೆಂಡ್ತಿಗೆ ಹೊಡೆಯುವುದೆ ನಿಜವಾದ ಗಂಡನ ಲಕ್ಷಣ ಅನ್ನಕೊಂಡವರು ಇದ್ದಾರೆ.  ಇನ್ನು ಹಳ್ಳಿಗಳಲ್ಲಿ‌ ಹೇಳುವ ಮಾತಿದು ” ಹೆಂಡ್ತಿನ ಹದ್ದಬಸ್ತಿನಲ್ಲಿ ಇಟ್ಟಕೊಳಬೇಕು” ಅಂತ.  ಈ  ಮೂಲಕ  ಮತ್ತೆ ಪುರುಷ ಪ್ರಧಾನ ವ್ಯವಸ್ಥೆಯನ್ನು ಜೀವಂತವಾಗಿಟ್ಟಿದ್ದಾರೆಂದು ಹೇಳಿದ್ರೂ ತಪ್ಪಾಗಲಾರದು.  

ನಾನು ಬೀದರ್ ಜಿಲ್ಲೆಯ ಮಹಿಳೆಯರ ಜತೆ ಮಾತನಾಡುವಾಗ ಅವರು ಹೇಳಿದ್ದರು “ಮೊಡಮ್ಮೊರೆ ರಾತ್ರಿ ಕೊಂಡ (ಕುಡಿದು) ಬರ್ತಾರ, ಕೊಂಡ ಬಂದಾಗ ಹೊಡಿತ್ತಾರ ರೀ, ಮತ್ ಮುಂಜಾನೆ ಪ್ರೀತಿಂದ ಮಾತಾಡ್ತಾರೆ. ನಮಗೂ ಅದು ರೂಡಿಯಾಗ್ಯಾದ ಅವರಿಗಿ ಬಿಟ್ಟು ಹೋಗಲಿಕ್ಕೆ ಅಂತೂ ಬರಲ್ಲ ”  ಅಂತ ಹೇಳತ್ತಾರೆ. ಈ ಪುರುಷರ‌ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣಿಗೆ ಕಟ್ಟಿಕೊಟ್ಟ ಕಣ್ಣಪಟ್ಟಿ ತೆಗೆಯುವುದು ಹೇಗೆ.?

ಅನ್ಯಾಯಕ್ಕೆ ಒಳಗಾದ  ನೊಂದ  ಮಹಿಳೆಯರಿಗಾಗಿ ಗ್ರೂಪೊಂದು ಬೀದರ್ ಜಿಲ್ಲೆಯ ಸುತ್ತ ಹತ್ತು ಹದಿನೈದು ಹಳ್ಳಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ.‌ ಈ ಗುಂಪಿನ ಮುಖ್ಯ ಉದ್ದೇಶ ಕೌಟುಂಬಿಕ ದೌರ್ಜನ್ಯವನ್ನು ತಡೆಗಟ್ಟಬೇಕು ಎಂಬುದು.   ವಿಶೇಷ ಅಂದ್ರೆ ಈ ಗುಂಪಿನಲ್ಲಿ‌ ಗಂಡು ಮಕ್ಕಳು ಇದ್ದಾರೆ.  ಇವರು ಆಸಕ್ತಿಯಿಂದ ಮತ್ತು ಕಾಳಜಿ‌ಯಿಂದ ಮಹಿಳೆಯರ ಜೊತೆಗೆ ನಿಂತಿದ್ದಾರೆ.‌

ಹಳ್ಳಿಗಳಲ್ಲಿ ಗಂಡ ಹೆಂಡತಿ ಜಗಳ ಮಾಡ್ಕೊಂಡರೆ  ತಕ್ಷಣಕ್ಕೆ ಈ ಗುಂಪು ಆ ಸ್ಥಳಕ್ಕೆ ಭೇಟಿ ನೀಡಿ ಜಗಳವನ್ನು ನಿಲ್ಲಿಸುತ್ತದೆ.  ಹೆಣ್ಣುಮಕ್ಕಳ ರಕ್ಷಣೆಯ ಜೊತೆಗೆ ‌ಅವರ ಗಂಡಂದಿರೊಂದಿಗೂ ಮಾತಾಡಿ‌ ಆ ಕ್ಷಣಕ್ಕೆ ಜಗಳವನ್ನು  ನಿಲ್ಲಿಸಿ, ಹೆಣ್ಣುಮಕ್ಕಳಿಗೆ ರಕ್ಷಣೆ ನೀಡಲು ‌ಈ ಗುಂಪು ಬಹಳ ಸಹಕಾರಿಯಾಗಿದೆ. ಗ್ರೂಪ್‌ ನಲ್ಲಿರುವ  ಹೆಣ್ಣುಮಕ್ಕಳು  ‌ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ರಕ್ಷಣೆ ನೀಡಿದರೆ ಪುರುಷರು ದೌರ್ಜನ್ಯ ಮಾಡ್ತಿರುವ  ಪುರುಷರೊಂದಿಗೆ  ಮಾತು, ಚರ್ಚೆ ಮಾಡಿ. ಆದಷ್ಟೂ ಕಲಹವನ್ನ ಅಲ್ಲಿಯೆ ಸರಿ ಮಾಡುವಂತೆ ನೋಡಿಕೊಳ್ಳುತ್ತಾರೆ.  ಇದಕ್ಕೂ ಕೈ ಮೀರಿದರೆ ಕಾನೂನು ಹೋರಾಟಕ್ಕೆ ದೌರ್ಜನ್ಯಕ್ಕೆ ಒಳಗಾದ ಮಹಿಳೆಗೆ  ಕೇಸ್ ದಾಖಲಿಸಲು‌ ಸಹಕರಿಸುತ್ತಾರೆ. ನಿಜಕ್ಕೂ ಇವರು ಮಾಡುತ್ತಿರುವ  ಕೆಲಸ ‌ಅನೇಕ ಹೆಣ್ಣುಮಕ್ಕಳಿಗೆ ರಕ್ಷಣೆ ನೀಡುವುದರ ಜತೆ ಅವರಿಗೆ ಧೈರ್ಯ ತುಂಬುವುದಾಗಿದೆ; ಅವರಿಗೆ ಧ್ವನಿಯೂ ಆಗಿದ್ದಾರೆ.

ಈ ಗ್ರೂಪಿನಲ್ಲಿಯ ಅನೇಕ ಮಹಿಳೆಯರು ದೌರ್ಜನ್ಯಕ್ಕೆ ಒಳಗಾದವರಿದ್ದಾರೆ. ಕಾನೂನಾತ್ಮಕವಾಗಿ ಹೋರಾಡಿ ಗೆದ್ದು‌ ಬದುಕು ಕಟ್ಟಿಕೊಂಡವರಿದ್ದಾರೆ. ರಟ್ಟಿಯಲ್ಲಿ ಶಕ್ತಿ ಇರುವ ತನಕ ಘನತೆಯಿಂದ ಬದುಕತ್ತಿವಿ ಅಂತ ಒಂದು ಹೆಜ್ಜೆ ಮುಂದೆ‌ ಬಂದವರಿದ್ದಾರೆ

ನಾನು ನೀನು ಅವಳು ಇವಳು ಹೆಣ್ಣಾಗಿ ನೊಂದವರು,

ಕೈಗೆ ಕೈ ಕೂಡಿಸವ್ವ ಹೊಸ ಜಗತ್ತು ನಮ್ಮದು ಎಂಬ ವಿಜಯಾ ದಬ್ಬೆಯವರ ಹಾಡು ನೆನಪಿಗೆ ಬಂತು.‌ ಕೈಗೆ ಕೈ ಕೂಡಿಸಿದ್ರೆ ಅಲ್ವಾ ಹೊಸ ಜಗತ್ತು ನಮ್ಮದಾಗಲಿಕ್ಕೆ ಸಾಧ್ಯ? 

ಪ್ರಿಯಾಂಕಾ ಮಾವಿನಕರ್

ಹವ್ಯಾಸಿ ಬರಹಗಾರ್ತಿ, ಕಲಬುರುಗಿ.

Related Articles

ಇತ್ತೀಚಿನ ಸುದ್ದಿಗಳು