Wednesday, September 25, 2024

ಸತ್ಯ | ನ್ಯಾಯ |ಧರ್ಮ

ಡಬ್ಬದಲ್ಲೇ ಉಳಿದ ಎಮರ್ಜೆನ್ಸಿ: ತನ್ನದೇ ಪಕ್ಷದ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾರೆಯೇ ಕಂಗನಾ?

ದೆಹಲಿ: ಸದಾ ವಿವಾದಾಸ್ಪದ ಹೇಳಿಕೆಯ ಮೂಲಕವೇ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡು ಬಂದಿರುವ ಸಂಸದೆ ಹಾಗೂ ನಟಿ ಕಂಗನಾ ರಣಾವತ್‌ ಕೃಷಿ ಮಸೂದೆಗಳನ್ನು ಮತ್ತೆ ಜಾರಿಗೆ ತರಬೇಕು ಎಂದು ಹೇಳುವ ಮೂಲಕ ಈಗ ಮತ್ತೆ ತನ್ನದೇ ಪಕ್ಷಕ್ಕೆ ಬಿಸಿತುಪ್ಪವಾಗಿ ಪರಿಣಮಿಸಿದ್ದಾರೆ.

ಹರಿಯಾಣ ವಿಧಾನಸಭೆಗೆ ಚುನಾವಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಕಂಗನಾ ಹೇಳಿಕೆ ಬಿಜೆಪಿ ಪಾಲಿಗೆ ಇನ್ನಷ್ಟು ದುಬಾರಿಯಾಗುವ ಎಲ್ಲಾ ಸಾಧ್ಯತೆಯೂ ಎದ್ದು ಕಾಣುತ್ತಿದೆ. ಪಕ್ಷ ಈಗಾಗಲೇ ಡ್ಯಾಮೇಜ್‌ ಕಂಟ್ರೋಲ್‌ಗೆ ಪ್ರಯತ್ನಿಸುತ್ತಿದೆಯಾದರೂ ಅದು ನಿರೀಕ್ಷಿತ ಮಟ್ಟದಲ್ಲಿ ಫಲ ಕೊಡುತ್ತಿಲ್ಲ.

ಹಾಗಿದ್ದರೆ ತನ್ನ ಹೇಳಿಕೆ ಹರಿಯಾಣ ಚುನಾವಣೆಯಲ್ಲಿ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಗೊತ್ತಿದ್ದೂ ಕಂಗನಾ ಈ ಹೇಳಿಕೆ ಯಾಕೆ ಕೊಟ್ಟರು? ಇದರ ಹಿಂದೆ ಏನಾದರೂ ತಂತ್ರವಿದೆಯೇ? ಅಥವಾ ಹತಾಶೆ ಇರಬಹುದೆ?

ಇತ್ತೀಚಿನ ಸರಣಿ ಘಟನೆಗಳನ್ನು ನೋಡಿದಾಗ ಇದರ ಹಿಂದೆ ಕಂಗನಾ ಅವರ ಹತಾಶೆಯೇ ಹೆಚ್ಚು ಎದ್ದು ಕಾಣುತ್ತದೆ. ಅವರಿಗೆ ಇತ್ತೀಚೆಗೆ ಸರಣಿ ಹಿನ್ನೆಡೆಯಾಗಿದೆ. ಅವರದೇ ಪಕ್ಷ ಅವರಿಗೆ ನಿರೀಕ್ಷಿತ ಬೆಂಬಲ ನೀಡುತ್ತಿಲ್ಲ. ಅವರ ಹೇಳಿಕೆಗಳಿಂದ ಬಿಜೆಪಿ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಕಂಗನಾ ಅವರಿಗೆ ಪಕ್ಷ ಎಚ್ಚರಿಕೆಗಳನ್ನು ಸಹ ನೀಡುತ್ತಿದೆ. ಏಕೆಂದರೆ ಬಹಳ ಕಷ್ಟಪಟ್ಟು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿಗೆ ಈಗ ವಿವಾದಗಳನ್ನು ಮೈಮೇಲೆ ಎಳೆದುಕೊಂಡು ಅದನ್ನು ಭರಿಸುವಷ್ಟು ಶಕ್ತಿ ಉಳಿದಿಲ್ಲ. ಅದಕ್ಕೆ ಈಗ ತನ್ನದೇ ಆದ ತಲೆನೋವುಗಳಿವೆ. ಮಿತ್ರಪಕ್ಷದ ನಾಯಕರಾದ ಚಂದ್ರಬಾಬು ನಾಯ್ಡು ಹಾಗೂ ನಿತೀಶ್‌ ಅವರಂತಹ ನಾಯಕರ ಮರ್ಜಿಗೆ ತಕ್ಕಂತೆ ಸರ್ಕಾರ ನಡೆಸಬೇಕಾದ ಅನಿವಾರ್ಯತೆಯಲ್ಲಿ ಅದು ಸಿಕ್ಕಿದೆ.

ಹೀಗಿರುವಾಗ ಕಂಗನಾ ಅವರಂತಹ ನಾಯಕರು ನೀಡುವ ಹೇಳಿಕೆಗಳು ಬಿಜೆಪಿಯ ಮಿತ್ರಪಕ್ಷಗಳಿಗೆ ಮುಜುಗರ ತರುವ ಸಾಧ್ಯತೆಯೇ ಹೆಚ್ಚು, ಏಕೆಂದರೆ ನಾಯ್ಡು, ನಿತೀಶ್‌ ಇವರೆಲ್ಲ ಕೇವಲ ಹಿಂದುತ್ವದ ಮತಗಳನ್ನು ನಂಬಿ ರಾಜಕೀಯ ಮಾಡುತ್ತಿರುವ ನಾಯಕರಲ್ಲ. ಅವರಿಗೆ ಮುಸ್ಲಿಂ ಹಾಗೂ ರೈತ ಜನರ ಮತವೂ ಬಹಳ ಮುಖ್ಯ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ನಾಯಕರು ನೀಡುವ ಹೇಳಿಕೆಗಳು ಅದರ ಮಿತ್ರಪಕ್ಷಗಳ ಮೇಲೂ ಪರಿಣಾಮ ಬೀರುತ್ತವೆ.

ಇನ್ನು ಕಂಗನಾ ಇರುವ ಪರಿಸ್ಥಿತಿ ಇನ್ನೊಂದು ಬಗೆಯದು. ಅವರು ಸಂಸದೆಯಾದ ಕೆಲವೇ ದಿನಗಳ ನಂತರ ಓರ್ವ ಸಿಖ್‌ ಸಮುದಾಯದ ಮಹಿಳೆಯಿಂದ ಕಪಾಳಕ್ಕೆ ಹೊಡೆತ ತಿಂದು ಮುಜುಗರ ಅನುಭವಿಸಿದರು. ಹಾಗೆ ಅವರ ಕಪಾಳಕ್ಕೆ ಹೊಡೆದ ಮಹಿಳೆ ಓರ್ವ ರಕ್ಷಣಾ ಸಿಬ್ಬಂದಿ, ಎಂದರೆ ಸರ್ಕಾರಿ ಯಂತ್ರದ ಭಾಗ. ಆಕೆಯ ವಿರುದ್ಧ ಸರ್ಕಾರ ಕ್ರಮವನ್ನೇನೋ ಕೈಗೊಂಡಿತು ಆದರೆ ಬಿಜೆಪಿ ಒಂದು ಪಕ್ಷವಾಗಿ ತನ್ನ ಸಂಸದೆಯ ಬೆನ್ನಿಗೆ ನಿಲ್ಲಬೇಕಾದಷ್ಟು ಬಲವಾಗಿ ನಿಲ್ಲಲಿಲ್ಲ.

ಇದಾದ ನಂತರ ಕಂಗನಾ ರೈತ ಚಳುವಳಿಯ ಕುರಿತು ಇನ್ನೊಂದು ಹೇಳಿಕೆ ನೀಡಿದರು. “ಕೇಂದ್ರದಲ್ಲಿ ಬಲಾಢ್ಯ ಸರ್ಕಾರ ಇಲ್ಲದೆ ಹೋಗಿದ್ದರೆ ಬಾಂಗ್ಲಾದಂತೆ ಇಲ್ಲಿಯೂ ದಂಗೆಯಾಗುತ್ತಿತ್ತು” ಎನ್ನುವ ಅವರ ಹೇಳಿಕೆ ದೇಶದ ರೈತರ ಎದೆಯಲ್ಲಿ ಮತ್ತೆ ಕಿಚ್ಚು ಹೊತ್ತಿಸಿತ್ತು. ಬಹಳ ಶಾಂತ ರೀತಿಯಲ್ಲಿ ನಡೆದಿದ್ದ ಈ ಹೋರಾಟವನ್ನು ಸರ್ಕಾರ ಹೇಗೆ ತನ್ನ ಬಲ ಪ್ರಯೋಗಿಸಿ ಹತ್ತಿಕ್ಕಿತ್ತು ಎನ್ನುವುದನ್ನು ದೇಶವೇ ನೋಡಿತ್ತು.

ಅವರ ಈ ಹೇಳಿಕೆಗೆ ವಿಪಕ್ಷಗಳು ಹಾಗೂ ರೈತ ಸಂಘಟನೆಗಳು ತಿರುಗಿಬಿದ್ದ ರೀತಿಗೆ ಬೆಚ್ಚಿಬಿದ್ದ ಬಿಜೆಪಿ ತನ್ನ ನಾಯಕಿಯನ್ನು ನಡುನೀರಿನಲ್ಲಿ ಕೈಬಿಟ್ಟಿತು. ಹಾಗೆ ಮಾಡಿದ್ದಲ್ಲದೆ, ಇನ್ನು ಮುಂದೆ ಇಂತಹ ಹೇಳಿಕೆಗಳಿಂದ ದೂರವಿರಿ. ನಿಮಗೆ ಇಂತಹ ಹೇಳಿಕೆ ನೀಡಲು ಅಧಿಕಾರವಿಲ್ಲ ಎಂದೂ ಪಕ್ಷ ಎಚ್ಚರಿಕೆ ಕೊಟ್ಟಿತ್ತು. ಇದು ಖಂಡಿತವಾಗಿಯೂ ಕಂಗನಾ ಅವರ ಈಗೊಗೆ ದೊಡ್ಡ ಮಟ್ಟದ ಪೆಟ್ಟನ್ನು ಕೊಟ್ಟಿತ್ತು.

ಆದರೆ ಅವರನ್ನು ಕೇವಲ ಅವಮಾನಗಳಷ್ಟೇ ಅಲ್ಲ, ಆರ್ಥಿಕ ಸಮಸ್ಯೆಯೂ ಕಾಡುತ್ತಿದೆ. ಅವರು ಇತ್ತೀಚೆಗೆ ಮುಂಬೈಯಲ್ಲಿನ ಬಂಗಲೆಯೊಂದನ್ನು ಮಾರಿದರು. ಅವರು ಈ ಬಂಗಲೆಯ ಸಲುವಾಗಿ ಈ ಹಿಂದೆ ಉದ್ಧವ್‌ ಠಾಕ್ರೆ ಸರ್ಕಾರದೊಂದಿಗೆ ಬಡಿದಾಡಿದ್ದನ್ನು ಸಹ ಇಲ್ಲಿ ನೆನಪಿಸಿಕೊಳ್ಳಬಹುದು.

ಅವರ ಈ ಆರ್ಥಿಕ ಸಮಸ್ಯೆಗೂ ಒಂದರ್ಥದಲ್ಲಿ ಬಿಜೆಪಿಯೇ ಕಾರಣ ಎನ್ನಬಹುದು. ಅವರು ಇತ್ತೀಚೆಗೆ ಎಮರ್ಜೆನ್ಸಿ ಎನ್ನುವ ಸಿನೆಮಾವನ್ನು ನಿರ್ದೇಶಿಸಿ, ಅದರಲ್ಲಿ ಮುಖ್ಯಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ಈ ಚಿತ್ರ ವಿವಾದದಲ್ಲಿದೆ. ಅವರ ಈ ಚಿತ್ರದ ಮುಖ್ಯ ಭೂಮಿಕೆ ಮಾಜಿ ಪ್ರಧಾನಿ ಇಂದಿರಾ ಗಾಂಧೀಯವರ ಬದುಕಿನ ಕತೆ. ಮೊದಲಿಗೆ ಕಾಂಗ್ರೆಸ್‌ ಒಂದಷ್ಟು ಈ ಕುರಿತು ಅಸಹನೆ ವ್ಯಕ್ತಪಡಿಸಿ ಸುಮ್ಮನಾಗಿತ್ತು. ಆದರೆ ಈ ಚಿತ್ರದಲ್ಲಿ ಸಿಖ್‌ ಸಮುದಾಯವನ್ನು ಅಪಮಾನಿಸಲಾಗಿದೆ ಎಂದು ಆ ಸಮುದಾಯ ಕಂಗನಾ ವಿರುದ್ಧ ತಿರುಗಿಬಿದ್ದು ಕೋರ್ಟ್‌ ಮೆಟ್ಟಿಲು ಹತ್ತಿದೆ. ಕೋರ್ಟ್‌ ಕಂಗನಾ ಅವರಿಗೆ ನೋಟಿಸ್‌ ಕೂಡಾ ಕೊಟ್ಟಿದೆ.

ಇದು ಒಂದೆಡೆಯಾದರೆ ಈ ಸಿನೆಮಾಕ್ಕೆ ಸೆನ್ಸಾರ್‌ ಸರ್ಟಿಫಿಕೇಟ್‌ ಕೊಡದೆ ಸೆನ್ಸಾರ್‌ ಮಂಡಳಿ ಕೂಡಾ ಸಾಕಷ್ಟು ಸತಾಯಿಸಿತ್ತು. ನಂತರ ಮುಂಬಯಿ ಹೈಕೋರ್ಟ್‌ ಸೆನ್ಸಾರ್‌ ಸರ್ಟಿಫಿಕೇಟ್‌ ಕೊಡುವಂತೆ ಮಂಡಳಿಗೆ ತಾಕೀತು ಮಾಡಿತು. ಆದರೂ ಚಿತ್ರ ಪ್ರಕರಣದ ಕಾರಣಕ್ಕೆ ಈಗಲೂ ಡಬ್ಬದಲ್ಲೇ ಉಳಿದಿದೆ.

ಈ ಪ್ರಕರಣದ ವಿಚಾರಣೆಯ ಸಮಯದಲ್ಲಿ ನಿರ್ಮಾಣದಲ್ಲಿ ಸಹಭಾಗಿತ್ವ ಹೊಂದಿರುವ ಜೀ ಪಿಚ್ಚರ್‌ ಹರಿಯಾಣ ಚುನಾವಣೆಯ ಕಾರಣಕ್ಕಾಗಿ ನಮ್ಮ ಚಿತ್ರವನ್ನು ಬಿಜೆಪಿ ಸರ್ಕಾರ ಹಿಡಿದಿಟ್ಟಿದೆ ಎಂದು ದೂರಿತ್ತು. ಚಿತ್ರದ ಬಿಡುಗಡೆ ಮುಂದಕ್ಕೆ ಹೋಗುತ್ತಿರುವುದರಿಂದಾಗಿ ತನ್ನ ಆರ್ಥಿಕ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ ಎಂದು ಕಂಗನಾ ಕೂಡಾ ಇತ್ತೀಚೆಗೆ ಅಲವತ್ತುಕೊಂಡಿದ್ದರು.

ಇದೆಲ್ಲದರೆ ನಡುವೆಯೇ, ಪಕ್ಷದ ಎಚ್ಚರಿಕೆಯಿದ್ದರೂ, ಕೃಷಿ ಮಸೂದೆಯನ್ನು ಉದ್ದೇಶಿಸಿ ಕಂಗನಾ ಹೇಳಿಕೆ ನೀಡಿರುವುದನ್ನು ಗಮನಿಸಿದರೆ ಅವರು ತನ್ನ ಪಕ್ಷದ ವಿರುದ್ಧ ಉದ್ದೇಶಪೂರ್ವಕವಾಗಿಯೇ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎನ್ನಿಸುತ್ತದೆ.

ಈಗಾಗಲೇ ಈ ಹೇಳಿಕೆಯನ್ನು ವಿರೋಧ ಪಕ್ಷಗಳು ಟೀಕಿಸುತ್ತಿವೆ. ಇತ್ತ ಬಿಜೆಪಿ ಅದು ಕಂಗನಾ ಅವರ ವೈಯಕ್ತಿಕ ಹೇಳಿಕೆ ಪಕ್ಷದ್ದಲ್ಲ ಎಂದು ತಿಪ್ಪೆ ಸಾರಿಸುತ್ತಿದೆ. ಅತ್ತ ಬಿಜೆಪಿಯ ಮಿತ್ರ ಚಿರಾಗ್‌ ಪಾಸ್ವಾನ್‌ ಕೂಡಾ ಕಂಗನಾ ಹೇಳಿಕೆ ನಮ್ಮ ಸರ್ಕಾರ ಅಥವಾ ಎನ್‌ಡಿಎ ಒಕ್ಕೂಟದ ಭಾಗವಲ್ಲ ಎಂದು ಅಂತರ ಕಾಯ್ದುಕೊಂಡಿದ್ದಾರೆ.

ಒಟ್ಟಿನಲ್ಲಿ ಸುಬ್ರಮಣ್ಯ ಸ್ವಾಮಿ, ಕಂಗನಾ ಅವರಂತಹ ಮಾತಿನ ಮೇಲೆ ನಿಯಂತ್ರಣವಿಲ್ಲದ ನಾಯಕರನ್ನು ಸಂಭಾಳಿಸಲಾಗದೆ ಬಿಜೆಪಿ ಒದ್ದಾಡುತ್ತಿರುವುದಂತೂ ಸ್ಪಷ್ಟವಾಗುತ್ತಿದೆ. ಭಾರತದ ಅತಿದೊಡ್ಡ ಪಕ್ಷ ಈಗ ತನ್ನದೇ ನಾಯಕರನ್ನು ನಿಯಂತ್ರಿಸಲಾಗದೆ ಹೊಯ್ದಾಡುವ ಹಡಗಿನಂತಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page