Thursday, June 20, 2024

ಸತ್ಯ | ನ್ಯಾಯ |ಧರ್ಮ

ಬ್ರಿಟನ್‌ ಗೆ ಪರಾರಿಯಾಗಿದ್ದ ಮೋದಿ ಭಾರತಕ್ಕೆ ಹಸ್ತಾಂತರವಾಗಲಿದ್ದಾರೆಯೇ?

ಲಂಡನ್:‌ ಭಾರತಕ್ಕೆ ತನ್ನನ್ನು ಹಸ್ತಾಂತರಿಸುವುದರ ವಿರುದ್ಧ ಬ್ರಿಟನ್‌ ನಲ್ಲಿ ತಲೆಮರೆಸಿಕೊಂಡಿರುವ ವಜ್ರದ ವ್ಯಾಪಾರಿ ನೀರವ್‌ ಮೋದಿ ಅರ್ಜಿಯನ್ನು ಲಂಡನ್‌ ಹೈಕೋರ್ಟ್‌ ವಜಾಗೊಳಿಸಿರುವ ಹಿನ್ನೆಲೆಯಲ್ಲಿ ಮೋದಿ ಭಾರತಕ್ಕೆ ಹಸ್ತಾಂತರವಾಗುವುದು ಬಹುತೇಕ ಖಚಿತವಾಗಿದೆ.

ತಮ್ಮ ಮಾನಸಿಕ ಆರೋಗ್ಯದ ಹಿನ್ನೆಲೆಯಲ್ಲಿ ಭಾರತಕ್ಕೆ ಹಸ್ತಾಂತರಿಸುವುದು ದಬ್ಬಾಳಿಕೆಯಾಗುತ್ತದೆ ಮತ್ತು ಅನಿವಾರ್ಯವಾಗಿ ಆತ್ಮಹತ್ಯೆಯ ವರ್ತನೆಗೆ ಕಾರಣವಾಗುತ್ತದೆ ಎಂದು ಮೋದಿ ಲಂಡನ್‌ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಅರ್ಜಿಯನ್ನು ಆಲಿಸಿದ  ಜಸ್ಟೀಸ್ ಜೆರೆಮಿ ಸ್ಟುವರ್ಟ್ ಸ್ಮಿತ್ ಮತ್ತು ನ್ಯಾಯಮೂರ್ತಿ ರಾಬರ್ಟ್ ಜೇ ಅವರನ್ನೊಳಗೊಂಡ ಪೀಠ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಲು ಅನುಮತಿಸುವ ತೀರ್ಪು ನೀಡಿದೆ.

ಲಂಡನ್ ಹೈಕೋರ್ಟಿನ ಆದೇಶದ ವಿರುದ್ಧ 14 ದಿನಗಳಲ್ಲಿ ಬ್ರಿಟನ್‌ ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸುವ ಅವಕಾಶವಿದೆ. ಒಂದುವೇಳೆ ಮೋದಿಯ ಅರ್ಜಿ ಅಲ್ಲೂ ವಜಾಗೊಂಡರೆ ಹಸ್ತಾಂತರದ ಕಾರ್ಯಗಳು ಸುಗಮವಾಗಲಿವೆ.

ಕಳೆದ ವರ್ಷ, ಭಾರತದಲ್ಲಿ ಹಲವು ಪ್ರಕರಣಗಳನ್ನು ಎದುರಿಸುತ್ತಿರುವ ವಜ್ರದ ವ್ಯಾಪಾರಿ ನೀರವ್‌ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸುವ ಆದೇಶಕ್ಕೆ ಇಂಗ್ಲೆಂಡ್ ಸರ್ಕಾರವು ಸಹಿ ಹಾಕಿತ್ತು. ಬ್ರಿಟಿಷ್‌ ಸರ್ಕಾರದ ಈ ನಡೆಯಿಂದಾಗಿ ಪಿಎನ್‌ಬಿ ಹಗರಣದಲ್ಲಿ ಭಾರತದಲ್ಲಿ ಬೇಕಾಗಿರುವ ಮೋದಿಯನ್ನು ದೇಶಕ್ಕೆ ಮರಳಿ ಕರೆತರುವ ಕಾರ್ಯದಲ್ಲಿ ಪ್ರಗತಿ ಸಾಧಿಸಿದಂತಾಗಿತ್ತು. ನಂತರ ಬ್ರಿಟಿಷ್‌ ಸರ್ಕಾರದ ಈ ನಿಲುವಿನ ವಿರುದ್ಧ ಮೋದಿ ಹೈಕೋರ್ಟ್‌ ಮೊರೆಹೋಗಿದ್ದರು. ಮೋದಿ ಮನವಿಯನ್ನು ಹೈಕೋರ್ಟ್‌ ತಳ್ಳಿಹಾಕುವುದರೊಂದಿಗೆ ಆತನ ಹಸ್ತಾಂತರದ ಕಾರ್ಯಗಳು ಚುರುಕು ಪಡೆಯಲಿವೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಗೆ 11,000 ಕೋಟಿ ರುಪಾಯಿ ವಂಚಿಸಿದ ಪ್ರಕರಣದಲ್ಲಿ ನೀರವ್‌ ಮೋದಿ ಆರೋಪಿಯಾಗಿದ್ದು, ಇನ್ನೂ ಹಲವಾರು ಪ್ರಕರಣಗಳಲ್ಲಿ ಭಾರತದ ತನಿಖಾ ಏಜೆನ್ಸಿಗಳಿಗೆ ಬೇಕಾಗಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು