Friday, June 14, 2024

ಸತ್ಯ | ನ್ಯಾಯ |ಧರ್ಮ

ಪ್ರತಿಮಾ ಕೊಲೆ ನಿಜಕ್ಕೂ ಪ್ರತೀಕಾರಕ್ಕಾಗಿ ನಡೆಯಿತೇ? ಆರೋಪಿಯ ಮಾತುಗಳಿಂದ ಅನುಮಾನಕ್ಕೀಡಾದ ಪೊಲೀಸರು

ಬೆಂಗಳೂರು: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಪ್ರತಿಮಾ ಹತ್ಯೆ ಪ್ರಕರಣದ ತನಿಖೆಯಲ್ಲಿ ಮಹತ್ವದ ಅಂಶ ಬಯಲಾಗಿದೆ. ಆರೋಪಿ ಕಿರಣ್ ನನ್ನು ವಿಚಾರಣೆಗೆ ಒಳಪಡಿಸಿದಾಗ ಮೃತ ಪ್ರತಿಮಾ ಅವರ ಬಳಿ ಇದ್ದ 5 ಲಕ್ಷ ನಗದು, ಎರಡು ಚಿನ್ನದ ಬಳೆಗಳು ಹಾಗೂ ಬಳೆಗಳನ್ನು ಕದ್ದೊಯ್ದಿರುವುದು ಪತ್ತೆಯಾಗಿದೆ. ಕದ್ದ ಹಣ ಮತ್ತು ಚಿನ್ನವನ್ನು ಕೋಣನಕುಂಟೆಯಲ್ಲಿರುವ ಆತನ ಸ್ನೇಹಿತ ಶಿವು ಮನೆಯಲ್ಲಿ ಇಡಲಾಗಿತ್ತು. ಇದು ಸಾಲ ತೆಗೆದುಕೊಂಡವರು ಕೊಟ್ಟಿರುವ ಹಣವಾಗಿದ್ದು, ನಾನು ಮಲೆ ಮಹದೇಶ್ವರ ಬೆಟ್ಟದಿಂದ ಹಿಂದಿರುಗಿದ ನಂತರ ಅದನ್ನು ವಾಪಸ್ ತೆಗೆದುಕೊಳ್ಳುವುದಾಗಿ ಕಿರಣ್‌ ಶಿವುಗೆ ತಿಳಿಸಿದ್ದ.

ಪ್ರಾಥಮಿಕ ತನಿಖೆಯ ವೇಳೆ ಆರೋಪಿ ಕಿರಣ್ ಪ್ರತಿಮಾ ಅವರನ್ನು ಗುತ್ತಿಗೆ ಕಾರ್ ಡ್ರೈವರ್ ಕೆಲಸದಿಂದ ವಜಾ ಮಾಡಿದ ಕಾರಣಕ್ಕೆ ಕೊಲೆ ಮಾಡಿರುವುದಾಗಿ ಹೇಳಿದ್ದ. ಈ ಕೊಲೆ ಪ್ರತೀಕಾರದ ಕೃತ್ಯವೇ ಅಥವಾ ಲಾಭಕ್ಕಾಗಿ ನಡೆದಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಿರಣ್ ಕಳೆದ ನಾಲ್ಕು ವರ್ಷಗಳಿಂದ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದು, ಪ್ರತಿಮಾ ಕೊಲೆಯಾದ 10 ದಿನಗಳ ಹಿಂದಷ್ಟೇ ಆತನನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಈ ಅನುಮಾನದ ಹಿನ್ನೆಲೆಯಲ್ಲಿ ಕಿರಣ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದರು.

ಪ್ರಸ್ತುತ ಪೊಲೀಸರು ಇದು ನಿಜಕ್ಕೂ ಪ್ರತಿಕಾರಕ್ಕಾಗಿ ನಡೆದ ಕೊಲೆಯೇ ಅಥವಾ ಇದರ ಹಿಂದೆ ಹಣ ದೋಚುವ ಯೋಚನೆಯಿತ್ತೇ ಎನ್ನುವ ಕುರಿತು ತನಿಖೆ ನಡೆಸುತ್ತಿದ್ದಾರೆ.

ನ.4ರಂದು ನಗರದ ಸುಬ್ರಹ್ಮಣ್ಯಪುರದ ಗೋಕುಲ ಅಪಾರ್ಟ್‌ಮೆಂಟ್ ಬಳಿಯ ಮನೆಯಲ್ಲಿ ಹಿರಿಯ ಭೂವಿಜ್ಞಾನಿ ಪ್ರತಿಮಾ ಅವರನ್ನು ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿರುವುದು ಪತ್ತೆಯಾಗಿದ್ದು, ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಸೇಡಿನಿಂದ ಆಕೆಯ ಮಾಜಿ ಕಾರು ಚಾಲಕ ಆಕೆಯನ್ನು ಕೊಂದಿದ್ದಾನೆ ಎಂದು ಪೊಲೀಸರಿಗೆ ತಿಳಿದುಬಂದಿತ್ತು.

ಕೊಲೆ ಆರೋಪಿ ಕಿರಣನೂ ಈ ಕೊಲೆಯನ್ನು ಆ ಕ್ಷಣದ ಸಿಟ್ಟಿನಲ್ಲಿ ಎಸಗಿದ್ದಾಗಿ ಪೊಲೀಸರ ಬಳಿ ಹೇಳಿದ್ದ. ಕೊಲೆಗೈದ ನಂತರ ನಂತರ ಆಕೆಯ ಕೈಚೀಲದಿಂದ 15 ಸಾವಿರ ರೂಪಾಯಿ ತೆಗೆದುಕೊಂಡು ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ.

ಆರೋಪಿ ಕಿರಣ್

ನಾನು ಕ್ಷಮೆ ಕೇಳಲೆಂದು ಅವರ ಮನೆಗೆ ಹೋಗಿದ್ದೆ ಆದರೆ ಅವರು ನನ್ನ ಕ್ಷಮೆಯನ್ನು ಒಪ್ಪಲಿಲ್ಲ. ನಂತರ ನಡೆದ ಜಗಳದಲ್ಲಿ ನಾನು ಅವರನ್ನು ಕೊಂದೆ ಎಂದು ಕಿರಣ್‌ ಪೊಲೀಸರಿಗೆ ತಿಳಿಸಿದ್ದ. ನಂತರ ಬೇರೆ ಬೇರೆ ರೀತಿಯಲ್ಲಿ ಹೇಳಿಕೆ ನೀಡುವ ಮೂಲಕ ಪೊಲೀಸರಲ್ಲಿ ಗೊಂದಲ ಮೂಡಿಸುತ್ತಿದ್ದ.

ಪೊಲೀಸರು ತನಿಖೆ ತೀವ್ರಗೊಳಿಸಿದಾಗ ಆರೋಪಿ ಪೂರ್ವ ಯೋಜಿತ ಕೃತ್ಯ ಎಂದು ಒಪ್ಪಿಕೊಂಡಿದ್ದಾನೆ. ಇನ್ನು ಆರೋಪಿ ಶಿವ ವಿಚಾರಣೆ ವೇಳೆ ತನಗೆ ಹಣದ ಮೂಲ ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ದು, ಕಿರಣ್ ಹಣ ತಂದು ಕೊಟ್ಟಿದ್ದ ಎಂದಿದ್ದ. ಇದೀಗ ಪೊಲೀಸರು ಶಿವನನ್ನು ಸಾಕ್ಷಿ ಎಂದು ಹೆಸರಿಸಿದ್ದು, ಆರೋಪಿಯಿಂದ 5 ಲಕ್ಷ ರೂಪಾಯಿ ನಗದು ಮತ್ತು ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಅವರು ಎಲ್ಲಾ ಕೋನಗಳಿಂದ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು