Thursday, June 13, 2024

ಸತ್ಯ | ನ್ಯಾಯ |ಧರ್ಮ

ಶಿವಮೊಗ್ಗದಲ್ಲಿ ಈಡಿಗ, ಲಿಂಗಾಯತರನ್ನು ಮೆಟ್ಟಿ ನಿಲ್ಲಲು ಹೊರಟಿದೆಯಾ RSS ಬ್ರಾಹ್ಮಣ ರಾಜಕಾರಣ!?

ಶಿವಮೊಗ್ಗ : ಮೂಲ ಮತ್ತು ವಲಸಿಗ ಬಿಜೆಪಿಯ ಗುದ್ದಾಟ ಶಿವಮೊಗ್ಗ ಜಿಲ್ಲೆಯ ಸೊರಬ ಕ್ಷೇತ್ರದಲ್ಲಿ ಮತ್ತೆ ಬುಗಿಲೆದ್ದಿದೆ. ಹಾಲಿ ಶಾಸಕ ಕುಮಾರ್ ಬಂಗಾರಪ್ಪ ವಿರುದ್ಧ ಸೊರಬ ಕ್ಷೇತ್ರದ ಮೂಲ ಬಿಜೆಪಿಗರು ನಡೆಸುತ್ತಿದ್ದ ಮುಸುಕಿನ ಗುದ್ದಾಟ ಈಗ ಜಗಜ್ಜಾಹೀರಾಗಿದೆ. ಇತ್ತೀಚೆಗೆ ನಡೆದ ನರೇಂದ್ರ ಮೋದಿ ಜನ್ಮದಿನಾಚರಣೆ ಸಂದರ್ಭದಲ್ಲಿ ಬಿಜೆಪಿ ಎರಡು ಬಣಗಳು ಪ್ರತ್ಯೇಕವಾಗಿ ಸಭೆ ನಡೆಸಿ ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ವಿರುದ್ಧ ತೊಡೆ ತಟ್ಟಿದೆ.

ಮೂಲ ಬಿಜೆಪಿಯ ಪ್ರತ್ಯೇಕ ಸಭೆಯಲ್ಲಿ ಸಭೆಯ ನೇತೃತ್ವ ವಹಿಸಿದ್ದ ಸೊರಬದ ಪದ್ಮನಾಭ ಭಟ್ ಬಹಿರಂಗವಾಗಿ ಶಾಸಕ ಕುಮಾರ್ ಬಂಗಾರಪ್ಪ ವಿರುದ್ಧ ಕಿಡಿಕಾರಿದ್ದಾರೆ. “ತಂದೆ ತಾಯಿಯನ್ನು ಅರ್ಧ ರಾತ್ರಿಯಲ್ಲಿ ಮನೆಯಿಂದ ಆಚೆ ಹಾಕಿದ ವ್ಯಕ್ತಿಯನ್ನು ನಾವು ಆರಿಸಿದ್ದೇ ತಪ್ಪು ನಿರ್ಧಾರ. ಇಂತಹ ವ್ಯಕ್ತಿ ಕ್ಷೇತ್ರದ ಜನರನ್ನ ಹೇಗೆ ನಿಭಾಯಿಸಬಲ್ಲ..” ಎಂದು ಸಭೆಯಲ್ಲೇ ಆಕ್ರೋಶ ಹೊರಹಾಕಿದ್ದರು. ಇದಕ್ಕೆ ಶಾಸಕರ ಬೆಂಬಲಿಗರೂ ಸಹ ಮೂಲ ಬಿಜೆಪಿಗರ ವಿರುದ್ಧ ತಿರುಗಿ ಬಿದ್ದಿದ್ದು ‘ಕುಮಾರ್ ಬಂಗಾರಪ್ಪ ತಮ್ಮ ತಂದೆ ತಾಯಿಯನ್ನು ಹೊರಹಾಕಿದ್ದು ಅದ್ಯಾವಾಗ ನೋಡಿದರು. ಮೊದಲು ಅವರ ಹುಳುಕನ್ನು ಸರಿ ಮಾಡಿಕೊಳ್ಳಲಿ’ ಎಂಬಂತೆ ತಿರುಗಿ ಬಿದ್ದಿದ್ದಾರೆ.

ಸಧ್ಯ ಈ ಆರೋಪ ಪ್ರತ್ಯಾರೋಪ ಬೆದರಿಕೆ ಹಾಕುವ ಮಟ್ಟಕ್ಕೆ ಹೋಗಿದ್ದು ಪೊಲೀಸ್ ಠಾಣೆ ಮೆಟ್ಟಿಲೇರುವ ಹಂತಕ್ಕೂ ತಲುಪಿದೆ. ಹಾಗೆ ನೋಡಿದರೆ ಶಿವಮೊಗ್ಗ ಜಿಲ್ಲೆಗೆ ಮೂಲದಿಂದ ಇದ್ದ ಸಮಾಜವಾದಿ ನೆಲೆಯ ರಾಜಕಾರಣಕ್ಕೆ ಜಾತಿ ರಾಜಕಾರಣದ ಗಂಧಗಾಳಿ ಇರಲಿಲ್ಲ. ಆ ಕಾಲಕ್ಕೆ ಆಗಿನ ಘಟಾನುಘಟಿ ಈಡಿಗ ಸಮುದಾಯದ ನಾಯಕರಾದ ಬಂಗಾರಪ್ಪ, ಕಾಗೋಡು ತಿಮ್ಮಪ್ಪ, ಸ್ವಾಮಿರಾವ್, ಜಿ.ಟಿ.ನಾರಾಯಣಪ್ಪ ಸೇರಿದಂತೆ ಪ್ರಮುಖ ಸಮಾಜವಾದಿ ನೆಲೆಯ ಈಡಿಗ ಸಮುದಾಯದ ರಾಜಕಾರಣಿಗಳು ಜನಮನ್ನಣೆ ಗಳಿಸಿದ್ದರು.

ಆಗ ಮೊದಲು ಬಿಜೆಪಿ ಪಕ್ಷ ಅಥವಾ RSS ಮೊದಲು ತಂದು ಕೂರಿಸಿದ್ದು ಯಡಿಯೂರಪ್ಪ ಎಂಬ ಲಿಂಗಾಯತ ನಾಯಕನನ್ನು. ಆಗ ಮುಂಚೂಣಿಯಲ್ಲಿ ಇದ್ದ ಈಡಿಗರನ್ನು ಒಡೆದು ಆಳುವ ತಂತ್ರಗಾರಿಕೆಗೆ ಬಿಜೆಪಿ ಇಳಿದಿತ್ತು. ಶುರುವಿನಲ್ಲಿ ಸಣ್ಣಪುಟ್ಟ ಈಡಿಗ ಸಮುದಾಯದ ಮುಖಂಡರ ನಡುವೆ ಒಡಕು ಸೃಷ್ಟಿಸಿ ಲಿಂಗಾಯತರನ್ನು ಪ್ರಾಬಲ್ಯಕ್ಕೆ ತರುವ ಕೆಲಸವನ್ನು RSS ಯಡಿಯೂರಪ್ಪ ಕಡೆಯಿಂದ ಮಾಡಿಸಿತ್ತು. ಹೇಳಿಕೇಳಿ ಲಿಂಗಾಯತ ಸಮುದಾಯ ರಾಜ್ಯದ ಪ್ರಮುಖ ಬಲಾಢ್ಯ ಸಮುದಾಯ. ಲಿಂಗಾಯತರಿಗೆ ಜೆ.ಹೆಚ್.ಪಟೇಲರಂತಹ ನಾಯಕರ ನಂತರ ಸಿಕ್ಕ ಪ್ರಬಲ ನಾಯಕರಾಗಿ ಯಡಿಯೂರಪ್ಪ ಬಂದದ್ದು ರಾಜ್ಯ ಮಟ್ಟದಲ್ಲಿಯೂ ಈ ತಂತ್ರಗಾರಿಕೆ ಪ್ರಯೋಗಿಸಲು ಅನುಕೂಲಕರ ವಾತಾವರಣ ಕೂಡಾ ಸೃಷ್ಟಿಯಾಗಿತ್ತು.

ಇದು ಶಿವಮೊಗ್ಗ ರಾಜಕಾರಣಕ್ಕೆ ಬಂದಾಗ ಶಿವಮೊಗ್ಗ, ಶಿವಮೊಗ್ಗ ಗ್ರಾಮಾಂತರ, ಸಾಗರ, ಸೊರಬ, ಹೊಸನಗರ ಕ್ಷೇತ್ರಗಳಲ್ಲಿ ಈಡಿಗರ ಪ್ರಾಬಲ್ಯ ಇರುವ ಕಡೆಯಲ್ಲೇ ಬಿಜೆಪಿ ಪಕ್ಷ ಈಡಿಗ ಸಮುದಾಯದ ನಾಯಕರನ್ನೇ ಎತ್ತಿ ಕಟ್ಟುವ ಕೆಲಸ ಮಾಡಿತ್ತು. ಸಾಗರದಲ್ಲಿ ಬೇಳೂರು ಗೋಪಾಲಕೃಷ್ಣ, ಸೊರಬದಲ್ಲಿ ಹರತಾಳು ಹಾಲಪ್ಪ, ಶಿವಮೊಗ್ಗದಲ್ಲಿ ಬಂಗಾರಪ್ಪರಿಗೆ ಪರ್ಯಾಯವಾಗಿ ಲಿಂಗಾಯತ ರಾಜಕಾರಣ ಸೃಷ್ಟಿ ಮಾಡಿ ಯಡಿಯೂರಪ್ಪರನ್ನು ಎತ್ತಿ ಕಟ್ಟಿತ್ತು. ಮುಂದಿನ ದಿನಗಳಲ್ಲಿ ಬಿಜೆಪಿಯ ಲೆಕ್ಕಾಚಾರ ಕೂಡಾ ಅದು ಎಣಿಸಿದಂತೆಯೇ ನಡೆಯಿತು. ಆದರೆ ಇತ್ತೀಚಿನ ಬೆಳವಣಿಗೆ ನೋಡಿದರೆ ಲಿಂಗಾಯತರನ್ನೂ ಬದಿಗಿರಿಸಿ RSS ಅಣತಿಯಂತೆ ಬ್ರಾಹ್ಮಣರು ತಮ್ಮ ಪ್ರಾಬಲ್ಯ ತೋರಿಸುತ್ತಿರುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ.

ಯಾವಾಗ RSS ರಾಜಕಾರಣವನ್ನೂ ಮೀರುವಂತೆ ಲಿಂಗಾಯತ ರಾಜಕಾರಣ ತನ್ನ ಪ್ರಾಬಲ್ಯ ಮೆರೆಯಿತೋ ಇದು ನಿಧಾನಕ್ಕೆ RSS ಮುಖಂಡರ ಕೆಂಗಣ್ಣಿಗೆ ಗುರಿಯಾಯಿತು. RSS ಗೆ ಈಗ ಯಡಿಯೂರಪ್ಪರನ್ನು ಬದಿಗಿರಿಸಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಇದಕ್ಕಾಗಿ ಯಡಿಯೂರಪ್ಪ ಕುಟುಂಬದ ಮೇಲೆ ಭ್ರಷ್ಟಾಚಾರದ ಆರೋಪದ ಮೇಲೆ ಲೋಕಾಯುಕ್ತರನ್ನು ಮುಂದೆ ಬಿಟ್ಟು RSS ಮುಂದಿನ ಬೆಳವಣಿಗೆ ಕಾದು ನೋಡುತ್ತಿದೆ. ಇಲ್ಲಿಯವರೆಗೆ ಲಿಂಗಾಯತ ಮತ್ತು ಈಡಿಗರ ಬಂಡಾಯ ನಾಯಕರನ್ನು ಮುಂದೆ ಬಿಟ್ಟು ಈಡಿಗ ಸಮುದಾಯದ ಪ್ರಮುಖ ನಾಯಕರನ್ನು ಹಿಂದೆ ಸರಿಸಿದ RSS ಗೆ ಲಿಂಗಾಯತರನ್ನೂ ಸಹ ಅದೇ ಮಾದರಿಯಲ್ಲಿ ಬದಿಗೆ ಸರಿಸಿ ಬ್ರಾಹ್ಮಣರ ಮೇಲೆ ತರಲು ತೆರೆಮರೆಯ ಕಸರತ್ತು ನಡೆಸಿದೆ.

ಮುಂದಿನ ದಿನಗಳಲ್ಲಿ ಸೊರಬ ಕ್ಷೇತ್ರದಲ್ಲಿ ಕುಮಾರ್ ಬಂಗಾರಪ್ಪರ ಕೈತಪ್ಪುವಂತೆ ಮಾಡಿ RSS ತಾಳಕ್ಕೆ ಕುಣಿಯುವ ಹರತಾಳು ಹಾಲಪ್ಪರನ್ನು ಕೂರಿಸುವ ಕೆಲಸ ನಡೆಯುತ್ತಿದೆ. ಆ ಬೆಳವಣಿಗೆಗೆ ಪೂರಕ ಎಂಬಂತೆ ಮಾಜಿ MADB ಅಧ್ಯಕ್ಷ ಪದ್ಮನಾಭ ಭಟ್ ಅವರನ್ನು ಮುಂದೆ ಬಿಟ್ಟು ವಲಸಿಗ ಮತ್ತು ಮೂಲ ಬಿಜೆಪಿ ಎಂಬ ಹಣೆಪಟ್ಟಿ ಕೊಟ್ಟು ಕುಮಾರ್ ಬಂಗಾರಪ್ಪರನ್ನು ಟಾರ್ಗೆಟ್ ಮಾಡಲಾಗಿದೆ. ಈ ಮೂಲಕ ಮಧು ಬಂಗಾರಪ್ಪ ಮತ್ತು ಕುಮಾರ್ ಬಂಗಾರಪ್ಪ ಇಬ್ಬರೂ ಅಣ್ಣತಮ್ಮರನ್ನು ರಾಜಕೀಯವಾಗಿ ಬಡಿದಾಡುವಂತೆ ಮಾಡಿ ಹರತಾಳು ಹಾಲಪ್ಪರನ್ನು ತಂದರೆ RSS ಗೆ ಈಡಿಗರ ಪ್ರಾಬಲ್ಯ ಕುಸಿಯುವಂತೆ ಮಾಡುವ ಒಂದು ದೊಡ್ಡ ಕೆಲಸ ತಪ್ಪಿದಂತಾಗುವುದು.

ಹರತಾಳು ಹಾಲಪ್ಪರನ್ನು ಸಾಗರದಿಂದ ಸೊರಬಕ್ಕೆ ಕರೆತಂದು ಸಾಗರದಲ್ಲಿ ತೆರವಾಗುವ ಬಿಜೆಪಿ ಸ್ಥಾನಕ್ಕೆ ಗುರುಮೂರ್ತಿ ಎಂಬ RSS ಮೂಲದ ಬ್ರಾಹ್ಮಣ ಸಮುದಾಯದವರನ್ನು ತಂದು ಕೂರಿಸುವ ಲೆಕ್ಕಾಚಾರ ನಡೆಯುತ್ತಿದೆ. ಸಾಗರದಲ್ಲಿ ಈಡಿಗರ ನಂತರದ ದೊಡ್ಡ ಸಮುದಾಯವಾಗಿರುವ ಬ್ರಾಹ್ಮಣರಿಗೆ ಪ್ರಾಶಸ್ತ್ಯ ನೀಡುವುದು RSS ಮೂಲ ಉದ್ದೇಶವಾಗಿದೆ.

ಸಧ್ಯ MADB ಅಧ್ಯಕ್ಷರೂ ಆಗಿರುವ ಕೆ.ಎಸ್.ಗುರುಮೂರ್ತಿ ಭಾವಚಿತ್ರ ಹೊಂದಿರುವ ಫ್ಲೆಕ್ಸ್ ಗಳು ಸಾಗರದ ಗಲ್ಲಿ ಗಲ್ಲಿಗಳಲ್ಲಿ ರಾರಾಜಿಸುತ್ತಿವೆ. ಇದು ಮುಂದಿನ ದಿನಗಳಲ್ಲಿ ಸಾಗರದಲ್ಲಿ ಶಾಸಕ ಸ್ಥಾನಕ್ಕೆ ಅರ್ಹತೆ ಗಿಟ್ಟಿಸಲು RSS ನ ರಣತಂತ್ರ ಎಂಬುದು ಸಾಗರ ಭಾಗದಲ್ಲಿ ಸಾಮಾನ್ಯವಾಗಿ ಕೇಳಿ ಬರುತ್ತಿರುವ ಮಾತು. ಆ ಮೂಲಕ ಈ ಬಾರಿ ಶಿವಮೊಗ್ಗ ಜಿಲ್ಲೆಯಲ್ಲಿ ಶತಾಯಗತಾಯ ಒಬ್ಬ ಬ್ರಾಹ್ಮಣ ಶಾಸಕನಾದರೂ ತಲೆ ಎತ್ತಬೇಕು ಎಂಬುದು RSS ಲೆಕ್ಕಾಚಾರವಾಗಿದೆ. ಈಗಾಗಲೇ ಉತ್ತರ ಕನ್ನಡ RSS ಬ್ರಾಹ್ಮಣರ ಹಿಡಿತಕ್ಕೆ ಬಂದಾಗಿದೆ. ಹುಬ್ಬಳ್ಳಿ ಕೂಡ ಪ್ರಹ್ಲಾದ್ ಜೋಷಿಯಂತಹ RSS ಬ್ರಾಹ್ಮಣರ ಹಿಡಿತಕ್ಕೆ ಬಂದಿದೆ. ಈಗ ಶಿವಮೊಗ್ಗವನ್ನು ಕೂಡಾ ಅದೇ ಹಾದಿಗೆ ಎಳೆಯಲಾಗುತ್ತಿದೆ.

ಕೆ.ಎಸ್ ಗುರುಮೂರ್ತಿ, ಹಾಲಿ MADB ಅಧ್ಯಕ್ಷ

ಸಧ್ಯ ಸೊರಬದಿಂದ ಶುರುವಾಗಿರುವ ಈ ವ್ಯಾಜ್ಯ ಮುಂದೆ ಶಿವಮೊಗ್ಗ ಜಿಲ್ಲೆಯಲ್ಲಿ ಲಿಂಗಾಯತ, ಈಡಿಗ ಮತ್ತು ಒಕ್ಕಲಿಗ ಪ್ರಾಬಲ್ಯವನ್ನು ಹಿಂದಿಕ್ಕಿ ಬ್ರಾಹ್ಮಣರು ಅಧಿಕಾರ ಹಿಡಿಯುವ ದಾರಿಯಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಸಾಭೀತಾಗುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು